
ಮಂಗಳೂರು (ಏ.09): ವಿಜ್ಞಾನ ವಿಭಾಗದ ಟಾಪರ್ ಎಕ್ಸ್‌ಪರ್ಟ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಅಮೂಲ್ಯ ಕಾಮತ್ ಅವರ ತಂದೆ- ತಾಯಿ ಇಬ್ಬರೂ ವೈದ್ಯರು. ಅಮೂಲ್ಯಗೆ ಮಾತ್ರ ಎಂಜಿನಿಯರ್ ಆಗುವಾಸೆ. ಪಿಸಿಎಂಸಿ ಅಧ್ಯಯನ ಮಾಡಿದ್ದು, ಮುಂದೆ ಎಂಜಿನಿಯರ್ ಆಗುವಾಸೆ. ರ್‍ಯಾಂಕ್ ಸಿಗುತ್ತದೆ ಎಂಬ ನಿರೀಕ್ಷೆ ಇತ್ತು. ಕಾಲೇಜಿನ ಉಪನ್ಯಾಸಕರೂ ಇದನ್ನೇ ಹೇಳಿದ್ದರು. ಅದೀಗ ಸಾಕಾರಗೊಂಡಿದೆ ಎಂದು ಅಮೂಲ್ಯ ಹರ್ಷ ವ್ಯಕ್ತಪಡಿಸಿದರು. ಅಮೂಲ್ಯ ಕಾಮತ್ ಅವರ ತಂದೆ ಡಾ. ದಿನೇಶ್ ಕಾಮತ್ ವೆನ್‌ಲಾಕ್ ಆಸ್ಪತ್ರೆಯಲ್ಲಿ ಡರ್ಮಟಾಲಜಿಸ್ಟ್ ಆಗಿದ್ದರೆ, ತಾಯಿ ಡಾ. ಅನುರಾಧ ಕಾಮತ್ ಬಿಸಿರೋಡ್‌ನಲ್ಲಿ ಖಾಸಗಿ ಕ್ಲಿನಿಕ್ ಹೊಂದಿದ್ದಾರೆ.
ಮೂಲತಃ ಬಂಟ್ವಾಳದವರಾದ ಡಾ. ದಿನೇಶ್ ಕಾಮತ್ ಅವರ ಹಿರಿಯ ಪುತ್ರಿ ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಶಿಕ್ಷಣ ಪಡೆಯುತ್ತಿದ್ದು, ಅದೇ ಹಾದಿಯಲ್ಲಿ ಅಮೂಲ್ಯ ಉನ್ನತ ಶಿಕ್ಷಣಕ್ಕೆ ಮುಂದಾಗಿದ್ದಾರೆ. ಕಾಲೇಜಿನಲ್ಲಿ ಉಪನ್ಯಾಸಕರು, ಮನೆಯಲ್ಲಿ ತಂದೆ- ತಾಯಿಯ ನಿರಂತರ ಪ್ರೋತ್ಸಾಹದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎನ್ನುವ ಅಮೂಲ್ಯ, ಭರತನಾಟ್ಯದಲ್ಲಿ ಸೀನಿಯರ್ ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಜ್ಯೂನಿಯರ್ ತರಬೇತಿ ಪಡೆದಿದ್ದಾರೆ. ಪುತ್ರಿಯ ಸಾಧನೆಯ ಕುರಿತು ಪ್ರತಿಕ್ರಿಯಿಸಿದ ದಿನೇಶ್ ಕಾಮತ್, ಅಮೂಲ್ಯ ರ್‍ಯಾಂಕ್ ಪಡೆಯುವ ನಿರೀಕ್ಷೆ ಇದ್ದೇ ಇತ್ತು. ಅವಳಿಗೆ ಎಂಜಿನಿಯರಿಂಗ್‌ನಲ್ಲಿ ಆಸಕ್ತಿ ಇರುವುದರಿಂದ ಅದಕ್ಕೆ ಪ್ರೋತ್ಸಾಹ ನೀಡಿದ್ದೇವೆ. ಸ್ವಕಲಿಕೆಯ ಜತೆಗೆ ಆಕೆಯ ಸಾಧನೆಯಲ್ಲಿ ಉಪನ್ಯಾಸಕರ ಪಾತ್ರ ಹೆಚ್ಚಿನ ಪ್ರಮಾಣದಲ್ಲಿದೆ ಎಂದು ಹೇಳಿದರು.
ದೀಪಶ್ರೀ, ಅಮೂಲ್ಯ ರಾಜ್ಯಕ್ಕೆ ಟಾಪರ್ಸ್: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಶೇ.93.57 ಫಲಿತಾಂಶದೊಂದಿಗೆ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದು, ಮಂಗಳೂರಿನ ಇಬ್ಬರು ವಿದ್ಯಾರ್ಥಿನಿಯರು ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಮಂಗಳೂರು ಎಕ್ಸ್‌ಪರ್ಟ್ ಕಾಲೇಜಿನ ಅಮೂಲ್ಯ ಕಾಮತ್, ವಾಣಿಜ್ಯ ವಿಭಾಗದಲ್ಲಿ ಕೆನರಾ ಕಾಲೇಜಿನ ದೀಪಶ್ರೀ ತಲಾ 599 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದ್ದಾರೆ. ಫಲಿತಾಂಶ ಪ್ರಕಟವಾದ ಕೂಡಲೆ ಇಬ್ಬರೂ ಪ್ರತಿಭಾನ್ವಿತ ವಿದ್ಯಾರ್ಥಿನಿಯರನ್ನು ಕಾಲೇಜಿನ ಆಡಳಿತ ಮಂಡಳಿಯವರು ಸನ್ಮಾನಿಸಿದರು.
ಕಿತ್ತುತಿನ್ನುವ ಬಡತನದಲ್ಲೂ ಪಾರ್ಟ್‌ಟೈಮ್ ಕೆಲಸ ಮಾಡಿ ಪಿಯುಸಿಯಲ್ಲಿ 6ನೇ ರ್ಯಾಂಕ್ ಗಳಿಸಿದ ನಾಗವೇಣಿ!
ದ.ಕ. ದ್ವಿತೀಯ ಸ್ಥಾನಕ್ಕೆ ತೃಪ್ತಿ!: ಕಳೆದ 5 ವರ್ಷಗಳಿಂದ ನಿರಂತರವಾಗಿ ರಾಜ್ಯದಲ್ಲಿ ಪ್ರಥಮ ಸ್ಥಾನಿಯಾಗಿ ಗಮನ ಸೆಳೆಯುತ್ತಿದ್ದ ದ.ಕ. ಜಿಲ್ಲೆ ಈ ಬಾರಿ ಶೇ. 93.57 ಫಲಿತಾಂಶದೊಂದಿಗೆ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಉಡುಪಿ ಜಿಲ್ಲೆ ಶೇ. 93.90 ಫಲಿತಾಂಶದೊಂದಿಗೆ ಪ್ರಥಮ ಸ್ಥಾನ ತನ್ನದಾಗಿಸಿಕೊಂಡಿದೆ. ಕಳೆದ ವರ್ಷ ದಕ್ಷಿಣ ಕನ್ನಡವು ಶೇ.97.37 ಫಲಿತಾಂಶ ದಾಖಲಿಸುವುದರೊಂದಿಗೆ ಪ್ರಥಮ ಸ್ಥಾನದಲ್ಲಿತ್ತು. ಈ ಬಾರಿ ಫಲಿತಾಂಶದಲ್ಲೂ ಕುಸಿತ ಕಂಡಿದೆ. ಈ ಬಾರಿ ಜಿಲ್ಲೆಯಿಂದ ಒಟ್ಟು 36,043 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 32,903 ಮಂದಿ ಉತ್ತೀರ್ಣರಾಗಿದ್ದಾರೆ. ಪ್ರಥಮ ಬಾರಿ ಪರೀಕ್ಷೆ ಬರೆದ 34,186 ವಿದ್ಯಾರ್ಥಿಗಳ ಪೈಕಿ 31,989 ಮಂದಿ ಉತ್ತೀರ್ಣರಾಗಿದ್ದು, ಖಾಸಗಿಯಾಗಿ ಪರೀಕ್ಷೆ ಬರೆದ 1556 ಮಂದಿಯಲ್ಲಿ 833 ಮಂದಿ ಉತ್ತೀರ್ಣರಾಗಿದ್ದಾರೆ. 301 ಪುನರಾವರ್ತಿತ ವಿದ್ಯಾರ್ಥಿಗಳ ಪೈಕಿ 81 ಮಂದಿ ಉತ್ತೀರ್ಣರಾಗಿದ್ದಾರೆ.ಆಂಗ್ಲ ಮಾಧ್ಯಮದಲ್ಲಿ 32,195 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 29,950 ಮಂದಿ ಉತ್ತೀರ್ಣರಾಗಿ ಶೇ. 93.03 ಫಲಿತಾಂಶ ದಾಖಲಾಗಿದ್ದರೆ, ಕನ್ನಡ ಮಾಧ್ಯಮದಲ್ಲಿ 3848 ಮಂದಿ ಪರೀಕ್ಷೆ ಬರೆದಿದ್ದು, ಅವರಲ್ಲಿ 2953 ಮಂದಿ ಉತ್ತೀರ್ಣರಾಗಿ ಶೇ.76.74 ಫಲಿತಾಂಶ ದೊರೆತಿದೆ.