* ಮೇ. 20ರಿಂದ ಪ್ರಥಮ ಪಿಯು, ಜೂ.1ರಿಂದ ದ್ವಿತೀಯ ಪಿಯು ಪ್ರವೇಶ
* ಜೂ.9ರಿಂದ ತರಗತಿ ಆರಂಭ
* ಪಿಯು ಮಂಡಳಿಯಿಂದ ವೇಳಾಪಟ್ಟಿ ಪ್ರಕಟ
ಬೆಂಗಳೂರು(ಮೇ.18): ರಾಜ್ಯದ ಎಲ್ಲ ಮಾದರಿ ಪದವಿ ಪೂರ್ವ ಕಾಲೇಜುಗಳಲ್ಲಿ 2022-23ನೇ ಸಾಲಿನ ಶೈಕ್ಷಣಿಕ ಸಾಲಿನ ಪ್ರವೇಶ ಪ್ರಕ್ರಿಯೆಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯು ವೇಳಾಪಟ್ಟಿ ಹಾಗೂ ಮಾರ್ಗಸೂಚಿ ಪ್ರಕಟಿಸಿದೆ.
ಅದರಂತೆ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾದ ಮರು ದಿನದಿಂದಲೇ (ಮೇ 20) ಪ್ರಥಮ ಪಿಯುಸಿ ದಾಖಲಾತಿ ಹಾಗೂ ಜೂ.1ರಿಂದ ದ್ವಿತೀಯ ಪಿಯುಸಿ ದಾಖಲಾತಿ ಪ್ರಕ್ರಿಯೆ ಆರಂಭಿಸಲು ಅವಕಾಶ ಕಲ್ಪಿಸಿದೆ. ಎರಡೂ ತರಗತಿ ಮಕ್ಕಳಿಗೆ ಜೂ.9ರಿಂದ ಪಠ್ಯಕ್ರಮ ಬೋಧನಾ ಪ್ರಕ್ರಿಯೆ ಶುರುವಾಗಲಿದೆ.
ಕಳೆದ ವರ್ಷ ರಾಜ್ಯದ ವಿವಿಧ ಪಿಯು ಕಾಲೇಜುಗಳಲ್ಲಿ ಉದ್ಭವಿಸಿದ್ದ ಹಿಜಾಬ್, ಕೇಸರಿ ಶಾಲು ವಿವಾದದ ಹಿನ್ನೆಲೆಯಲ್ಲಿ ಎಚ್ಚೆತ್ತ ಇಲಾಖೆಯು ಈ ಬಾರಿ ಹೈಕೋರ್ಚ್ ಆದೇಶದಂತೆ ಕಾಲೇಜು ಅಭಿವೃದ್ಧಿ ಸಮಿತಿಗಳು ನಿಗದಿಪಡಿಸಿರುವ ಸಮವಸ್ತ್ರ ತೊಟ್ಟು ತರಗತಿಗೆ ಬರಬೇಕು. ಸಮವಸ್ತ್ರ ನಿಗದಿಯಾಗದ ಕಾಲೇಜುಗಳಲ್ಲಿ ಸಮಾನತೆ ಮತ್ತು ಐಕ್ಯತೆಯನ್ನು ಕಾಪಾಡಿಕೊಂಡು ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ಬಾರದಂತಹ ಉಡುಪುಗಳನ್ನು ಧರಿಸಿ ವಿದ್ಯಾರ್ಥಿಗಳು ಕಾಲೇಜಿಗೆ ಹಾಜರಾಗಬೇಕೆಂದು ಸ್ಪಷ್ಟಸೂಚನೆ ನೀಡಿದೆ.
PUC Result ವಾರಾಂತ್ಯದಲ್ಲಿ ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟ!
ಹೊಸ ಶೈಕ್ಷಣಿಕ ವರ್ಷದ ಮೊದಲ ಬೋಧನಾ ಚಟುವಟಿಕೆ ಅವಧಿಯನ್ನು ಜೂ.9 ರಿಂದ ಸೆ. 30ರ ವರೆಗೆ ಹಾಗೂ ಎರಡನೇ ಅವಧಿಯನ್ನು ಅ.13ರಿಂದ 2023ರ ಮಾ.31ರವರೆಗೆ ನಿಗದಿ ಪಡಿಸಿದೆ. ಪ್ರಥಮ ಹಾಗೂ ದ್ವಿತೀಯ ಪಿಯುಸಿಗೆ ಜೂ.30ರವರೆಗೆ ಮಕ್ಕಳ ದಾಖಲಾತಿಗೆ ಅವಕಾಶ ನೀಡಿದೆ. ಎರಡೂ ತರಗತಿಗಳು ಜೂ.9ರಿಂದ ಆರಂಭವಾಗಲಿದೆ. ಅ.1ರಿಂದ 12ರವರೆಗೆ ಮಧ್ಯಂತರ ರಜೆ ಇರಲಿದೆ. 2023 ಮಾ.31 ಕೊನೆಯ ಕಾರ್ಯನಿರತ ದಿನವಾಗಿದೆ. ಏ.1ರಿಂದ ಬೇಸಿಗೆ ರಜೆ ಆರಂಭವಾಗಲಿದೆ.
ಪ್ರಥಮ ಪಿಯುಗೆ ದಂಡ ಶುಲ್ಕವಿಲ್ಲದೆ ದಾಖಲಾತಿ ಕೊನೆಯ ದಿನಾಂಕ ಜೂ.15 ಆಗಿದೆ. ದ್ವಿತೀಯ ಪಿಯು ಅರ್ಜಿ ಸಲ್ಲಿಕೆಗೆ ಜೂ.1ರಿಂದ 15ರವರೆಗೆ ಅವಕಾಶ ಕಲ್ಪಿಸಿದೆ. ದಂಡ ಶುಲ್ಕದೊಂದಿಗೆ ಜೂ.30ರವರೆಗೆ ಅವಕಾಶ ಕಲ್ಪಿಸಿದೆ. ಪ್ರವೇಶಾತಿಗೆ ಅರ್ಹ ಕಾಲೇಜುಗಳಲ್ಲಿ ಪ್ರತಿ ಸಂಯೋಜನೆಗೆ ಗರಿಷ್ಠ ವಿದ್ಯಾರ್ಥಿಗಳ ಸಂಖ್ಯೆ 80 ನಿಗದಿ ಮಾಡಿದೆ. ಹೆಚ್ಚಿಗೆ ಪ್ರವೇಶ ಕಲ್ಪಿಸಿದರೆ, ದಾಖಲಾತಿ ಅನುಮೋದಿಸುವುದಿಲ್ಲ. ಕಳೆದ ಮೂರು ವರ್ಷಗಳಿಂದ ಶೂನ್ಯ ದಾಖಲಾತಿ ಹೊಂದಿರುವ ಕಾಲೇಜುಗಳು ಮಕ್ಕಳ ದಾಖಲಾತಿ ಮಾಡಿಕೊಳ್ಳಬಾರದು ಎಂದು ತಿಳಿಸಿದೆ.
ಪ್ರಥಮ PUC ಫಲಿತಾಂಶ ಪ್ರಕಟ, ಆನ್‌ಲೈನ್‌ನಲ್ಲಿ ಫಲಿತಾಂಶ ಚೆಕ್ ಮಾಡಲು ಇಲ್ಲಿದೆ ವಿಧಾನ
ಪಿಯು ಪ್ರವೇಶಕ್ಕೆ ಸಲ್ಲಿಸಬೇಕಾದ ದಾಖಲೆಗಳು
- ಎಸ್ಸೆಸ್ಸೆಲ್ಸಿ ಉತ್ತೀರ್ಣದ ಅಂಕಪಟ್ಟಿ
- ಪಾಸ್‌ಪೋರ್ಚ್ ಅಳತೆಯ 6 ಭಾವಚಿತ್ರಗಳು
- ಶುಲ್ಕ ವಿನಾಯಿತಿಗೆ ಸಂಬಂಧಿಸಿದ ಪ್ರಾಧಿಕಾರಗಳಿಂದ ಪಡೆದ ಪ್ರಮಾಣ ಪತ್ರಗಳು
- ರಾಜ್ಯದ ಇತರೆ ಮಂಡಳಿಯಾದಲ್ಲಿ ವಲಸೆ ಪ್ರಮಾಣ ಪ್ರತ್ರ
- ಆಧಾರ್ ಕಾರ್ಡ್ ನಕಲು ಪ್ರತಿ
- ಬ್ಯಾಂಕ್ ಪಾಸ್‌ಬುಕ್ ನಕಲು ಪ್ರತಿ
ಕರ್ನಾಟಕ ರಾಜ್ಯದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ಬರೆದು ಉತ್ತೀರ್ಣರಾಗಿರುವ ವಿದ್ಯಾರ್ಥಿಗಳನ್ನು ಹೊರತುಪಡಿಸಿ ವಿದೇಶಗಳಲ್ಲಿ ವಿವಿಧ ಸಂಸ್ಥೆ, ಮಂಡಳಿಗಳಿಂದ ರಾಜ್ಯದ ಎಸ್ಸೆಸ್ಸೆಲ್ಸಿಗೆ ತತ್ಸಮಾನ ಪರೀಕ್ಷೆ ಬರೆದು ಉತ್ತೀರ್ಣರಾಗಿರುವವರಿಗೆ ಪಿಯು ಇಲಾಖೆಯು ನೀಡುವ ತಾತ್ಕಾಲಿಕ ಅರ್ಹತಾ ಪತ್ರವನ್ನು ಪಡೆದು ದಾಖಲಾತಿ ನೀಡಬೇಕು. ತಾತ್ಕಾಲಿಕ ಅರ್ಹತಾ ಪತ್ರ ಪಡೆಯದವರಿಗೆ ಯಾವುದೇ ಕಾರಣಕ್ಕೂ ದಾಖಲಾತಿ ನೀಡಬಾರದು. ನೀಡಿದರೆ ಆಯಾ ಕಾಲೇಜು ಪ್ರಾಂಶುಪಾಲರೇ ಹೊಣೆ ಎಂದು ಇಲಾಖೆ ಎಚ್ಚರಿಕೆಯನ್ನು ನೀಡಿದೆ.