* ಒಕ್ಕಲಿಗ, ವಿವಿಧ ಸಂಘಟನೆಗಳ ನಿರ್ಧಾರ
* ಪರಿಷ್ಕೃತ ಪಠ್ಯ ಜಾರಿಗೊಳಿಸಬಾರದು
* 2 ಲಕ್ಷ ಮಂದಿ ಸೇರಿಸಿ ಬೃಹತ್ ಪ್ರತಿಭಟನೆ
ಬೆಂಗಳೂರು(ಜೂ.04): ರಾಷ್ಟ್ರಕವಿ ಕುವೆಂಪು ಅವರಿಗೆ ಅವಮಾನ ಮಾಡಿರುವ ರೋಹಿತ್ ಚಕ್ರತೀರ್ಥ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಜತೆಗೆ ಪರಿಷ್ಕೃತ ಪಠ್ಯ ಜಾರಿ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಬಿಡುವವರೆಗೂ ಹೋರಾಟ ಮುಂದುವರೆಯಲಿದೆ ಎಂದು ಒಕ್ಕಲಿಗ ಸಂಘ ಮತ್ತು ವಿವಿಧ ಪ್ರಗತಿಪರ ಸಂಘಟನೆಗಳು ತಿಳಿಸಿವೆ.
ಪಠ್ಯ ಪರಿಷ್ಕರಣೆ ಸಮಿತಿ ವಿಸರ್ಜನೆ ಹಿನ್ನೆಲೆ ಮಾತನಾಡಿದ ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಡಾ.ಟಿ.ಎಚ್.ಆಂಜನಪ್ಪ, ‘ರಾಜ್ಯ ಸರ್ಕಾರವು ಪಠ್ಯಪುಸ್ತಕ ಪರಿಷ್ಕರಣೆ ಮುಗಿದ ಹಿನ್ನೆಲೆ ಆ ಸಮಿತಿಯನ್ನು ವಿಸರ್ಜನೆ ಮಾಡಿದೆ. ಆದರೆ, ಕುವೆಂಪು ಅವಮಾನ ಮಾಡಿದ ರೋಹಿತ್ ಚಕ್ರತೀರ್ಥ ವಿರುದ್ಧ ಯಾವುದೇ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿಲ್ಲ. ಆತನನ್ನು ಬಂಧಿಸಿ, ಕಾನೂನು ಕ್ರಮ ಜಾರಿಗೊಳಿಸಬೇಕು. ಅಲ್ಲದೆ, ರೋಹಿತ್ ಚಕ್ರತೀರ್ಥ ಸಮಿತಿ ಪರಿಷ್ಕರಿಸಿರುವ ಪಠ್ಯವು ಬ್ರಾಹ್ಮಣೀಕರಣವಾಗಿದ್ದು, ಅವುಗಳನ್ನು ರಾಜ್ಯ ಸರ್ಕಾರ ಕೈಬಿಡಬೇಕು. ಅಲ್ಲಿಯವರೆಗೂ ಒಕ್ಕಲಿಗರು, ಪ್ರಗತಿಪರರ ಹೋರಾಟ ಮುಂದುವರೆಯಲಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.
ಪಠ್ಯವಾಪ್ಸಿ ವೈಚಾರಿಕ ಭಯೋತ್ಪಾದನೆ: ಚಕ್ರತೀರ್ಥ
ರಾಜ್ಯ ಒಕ್ಕಲಿಗರ ಒಕ್ಕೂಟದ ಅಧ್ಯಕ್ಷ ಸಿ.ವಿ.ದೇವರಾಜ್ ಮಾತನಾಡಿ, ‘ಸರ್ಕಾರವು ರೋಹಿತ್ ಚಕ್ರತೀರ್ಥ ಪರಿಷ್ಕರಿಸುವ ಪಠ್ಯವನ್ನು ಬಳಸಲು ಮುಂದಾಗಿದೆ. ಜತೆಗೆ ಚಕ್ರತೀರ್ಥ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ. ಸರ್ಕಾರದ ನಡೆಯು ಕುವೆಂಪು ಮತ್ತು ಒಕ್ಕಲಿಗ ಸಮುದಾಯಕ್ಕೆ ನೋವು ಉಂಟುಮಾಡುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ರೋಹಿತ್ ಚಕ್ರತೀರ್ಥನ ವಕ್ರಬುದ್ಧಿ ಸರ್ಕಾರ ಸರಿ ಮಾಡಲಿ: ಬಸವಯೋಗಿಪ್ರಭು ಸ್ವಾಮೀಜಿ
2 ಲಕ್ಷ ಮಂದಿ ಸೇರಿಸಿ ಬೃಹತ್ ಪ್ರತಿಭಟನೆ:
ಸಮಿತಿ ವಿಸರ್ಜನೆಗೂ ಮುನ್ನ ಶುಕ್ರವಾರ ಸಂಜೆ ವಿಜಯನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಒಕ್ಕಲಿಗ, ಪ್ರಗತಿಪರ, ರೈತ ಹಾಗೂ ಕನ್ನಡ ಸಂಘಟನೆಗಳು ಸಭೆ ನಡೆಸಿದ್ದವು.‘ರಾಷ್ಟ್ರಕವಿ ಕುವೆಂಪು ಅವರಿಗೆ ಅವಮಾನ ಮಾಡಿರುವ ರೋಹಿತ್ ಚಕ್ರತೀರ್ಥ ಪರಿಷ್ಕರಣೆ ಮೂಲಕ ಪಠ್ಯಪುಸ್ತಕವನ್ನು ಬ್ರಾಹ್ಮಣೀಕರಣಗೊಳಿಸುತ್ತಿದ್ದಾರೆ. ಆ ಸ್ಥಾನದಲ್ಲಿರಲು ಅವರು ಯೋಗ್ಯರಲ್ಲ. ಸರ್ಕಾರ ಈ ಬಗ್ಗೆ ನಿರ್ಧಾರ ಕೈಗೊಳ್ಳದಿದ್ದರೆ ಎರಡು ವಾರದಲ್ಲಿ ಆದಿಚುಂಚನಗಿರಿ ಶ್ರೀಗಳ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಪ್ರತಿಭಟನಾ ರಾರಯಲಿ, ಅರಮನೆ ಮೈದಾನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದು ಒಮ್ಮತದ ನಿರ್ಣಯ ಕೈಗೊಂಡಿದ್ದವು.
ಒಕ್ಕಲಿಗ ಸಂಘದ ಗೌರವಾಧ್ಯಕ್ಷ ಡಾ.ಟಿ.ಎಚ್.ಆಂಜನಪ್ಪ, ಪ್ರಧಾನ ಕಾರ್ಯದರ್ಶಿ ಕೋನಪ್ಪ ರೆಡ್ಡಿ, ಹೈಕೋರ್ಟ್ ವಕೀಲರ ಸಂಘದ ಮಾಜಿ ಅಧ್ಯಕ್ಷ ರಂಗನಾಥ್, ಹೈಕೋರ್ಚ್ ಹಿರಿಯ ವಕೀಲರು ಸಿ.ಎಚ್ ಹನುಮಂತರಾಯ, ಸಾಹಿತಿ ಕೆ.ಎಲ್ ಮುಕುಂದ ರಾಜು, ಚಿಂತಕಿ ಬಿ.ಟಿ.ಲಲಿತಾ ನಾಯಕ್, ಸಾಹಿತಿ ಕಪ್ಪಣ್ಣ, ಪ್ರಕಾಶ್‌ಮೂರ್ತಿ, ಚಲಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ. ಹರೀಶ್, ರಾಜಕುಮಾರ್ ಅಭಿಮಾನ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದ್, ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ, ಮುಸ್ಲಿಂ ಮುಖಂಡ ಸಯ್ಯದ್, ರಾಜ್ಯ ಒಕ್ಕಲಿಗರ ಒಕ್ಕೂಟದ ಅಧ್ಯಕ್ಷ ಸಿ.ವಿ.ದೇವರಾಜ್, ಸಾಹಿತಿ ಸಿ.ಕೆ.ರಾಮೇಗೌಡ, ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿ ಸೇರಿದಂತೆ ಅನೇಕರು ವಿವಿಧ ಸಂಘಟನೆಗಳ ಮುಖಂಡರು ಭಾಗಿಯಾಗಿದ್ದರು.