Mysuru: ಶುಲ್ಕ ನೀಡದ ಮಕ್ಕಳನ್ನು ಹೊರಗೆ ಕೂರಿಸಿದ ಶಾಲೆ..!

By Girish Goudar  |  First Published Mar 15, 2022, 11:06 AM IST

*  ಮೈಸೂರು ಜಿಲ್ಲೆಯ ಕೆ.ಆರ್‌.ನಗರ ಪಟ್ಟಣದ ವಾಸವಿ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಘಟನೆ
*  16 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡದ ಖಾಸಗಿ ಶಾಲೆ
*  ಶುಲ್ಕ ಕಟ್ಟದ್ದಕ್ಕೆ ಪರೀಕ್ಷೆ ಇಲ್ಲ: ಶಾಲೆ ವಿರುದ್ಧ ಆಕ್ರೋಶ


ಕೆ.ಆರ್‌.ನಗರ(ಮಾ.15):  ಕಾನ್ವೆಂಟ್‌ ಶುಲ್ಕ(Fees) ನೀಡಿದ್ದರೂ ಕಟ್ಟಡ ನಿಧಿ ಪಾವತಿ ಮಾಡಿಲ್ಲ ಎಂಬ ಕಾರಣದಿಂದ 1 ರಿಂದ 7ನೇ ತರಗತಿವರೆಗಿನ 16 ವಿದ್ಯಾರ್ಥಿಗಳಿಗೆ(Students) ಪರೀಕ್ಷೆ ಬರೆಯಲು ಅವಕಾಶ ನೀಡದೆ ಅವರನ್ನು ತರಗತಿ ಹೊರಗೆ ಕೂರಿಸಿದ ಘಟನೆ ವಾಸವಿ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ನಡೆದಿದೆ. ಮಕ್ಕಳು ಹೊರಗೆ ಕೂತಿರುವ ವಿಷಯ ತಿಳಿದು ಸ್ಥಳಕ್ಕೆ ಬಂದ ಪೋಷಕರಿಗೂ ಶುಲ್ಕ ಪಾವತಿಸಲು ಆಡಳಿತ ಮಂಡಳಿ ಸೂಚಿಸಿತು. ನಂತರ ಇಸಿಒ ಜಗದೀಶ್‌ ಅವರು ನಡೆಸಿದ ಮಾತುಕತೆಗೂ ಶಾಲೆ ಬಗ್ಗಲಿಲ್ಲ. ಈ ಸಂಬಂಧ ಬಿಇಒ ಕಚೇರಿಗೆ ಪೋಷಕರು ದೂರು ನೀಡಿದ್ದಾರೆ.

ಸೋಮವಾರ ಬೆಳಗ್ಗೆ ಪರೀಕ್ಷೆ(Exam) ಬರೆಯಲು ತೆರಳಿದ ಈ ವಿದ್ಯಾರ್ಥಿಗಳಿಗೆ ಕಾನ್ವೆಂಟ್‌ ಹೊರಗೆ ಕೂರಿಸಿದ್ದು, ಇದರಿಂದ ಕೆಲ ಮಕ್ಕಳು ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೋಷಕರ ಮನವಿಗೂ ಗೌರವ ನೀಡದ ಆಡಳಿತ ಮಂಡಳಿಯವರು ಕೆಲ ಹೊತ್ತು ಅವರನ್ನು ಒಳಕ್ಕೆ ಬಿಡದೆ ತಡೆದು ನಿಲ್ಲಿಸಿದ್ದರು.

Tap to resize

Latest Videos

undefined

ಶುಲ್ಕ ಕಿರುಕುಳ, ಖಾಸಗಿ ಶಾಲೆಗಳಿಗೆ ಬಿಸಿ ಮುಟ್ಟಿಸಲು ಮುಂದಾದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ

ನಂತರ ಸ್ಥಳಕ್ಕೆ ತೆರಳಿದ ಇಸಿಒ ಜಗದೀಶ್‌ ಅವರು ಆಡಳಿತ ಮಂಡಳಿ ಮತ್ತು ಪೋಷಕರ ಜತೆ ಮಾತುಕತೆ ನಡೆಸಿದರು. ಆದರೂ ಆಡ​ಳಿತ ಮಂಡ​ಳಿ​ಯ​ವ​ರು ಕಟ್ಟಡ ನಿಧಿ ಹಣ ಅಥವಾ ಅದರ ಬದಲಾಗಿ ಚೆಕ್‌ ನೀಡಬೇಕು, ಇಲ್ಲವಾದಲ್ಲಿ ಪರೀಕ್ಷೆಗೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು. ಈ ಸಂಬಂಧ ಪೋಷಕರು ಬಿಇಒ ಕಚೇರಿಗೆ ತೆರಳಿ ಲಿಖಿತ ದೂರು ನೀಡಿದ್ದು, ಆಡಳಿತ ಮಂಡಳಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಶುಲ್ಕ ಕಟ್ಟದ್ದಕ್ಕೆ ಪರೀಕ್ಷೆ ಇಲ್ಲ: ಶಾಲೆ ವಿರುದ್ಧ ಆಕ್ರೋಶ

ಬೆಂಗಳೂರು(Bengaluru): ಪರೀಕ್ಷಾ ದಿನಗಳು ಆರಂಭವಾಗುತ್ತಿದ್ದಂತೆ ಬಾಕಿ ಶುಲ್ಕ ವಸೂಲಿ ಹೆಸರಲ್ಲಿ ನಗರದ ಖಾಸಗಿ ಶಾಲೆಗಳು(Private Schools) ಮಕ್ಕಳಿಗೆ(Children) ಪರೀಕ್ಷೆ ನಿರಾಕರಿಸುವ ಹಳೆಯ ಚಾಳಿ ಶುರುಮಾಡಿವೆ. ಇಂದಿರಾ ನಗರದ ಕಾವೇರಿ ಶಾಲಾ ಆಡಳಿತ ಮಂಡಳಿ ಶುಲ್ಕ ಪಾವತಿಸಿದ ಮಕ್ಕಳಿಗೆ ಸೋಮವಾರ ಪರೀಕ್ಷೆಗೆ ಅವಕಾಶ ನೀಡಿಲ್ಲ ಎಂಬ ಆರೋಪ ಕೇಳಿಬಂದಿದೆ.

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ಸಂಯೋಜನೆಗೆ ಒಳಪಡುವ ಈ ಶಾಲೆಯು ವಿವಿಧ ತರಗತಿ ಮಕ್ಕಳಿಗೆ 2021-22ನೇ ಸಾಲಿನ ವಾರ್ಷಿಕ ಪರೀಕ್ಷೆ ನಡೆಸುತ್ತಿದೆ. ಆದರೆ, ಶುಲ್ಕ ಬಾಕಿ ಉಳಿಸಿಕೊಂಡಿರುವ ಪೋಷಕರ ಮಕ್ಕಳಿಗೆ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಿದೆ. ಶಾಲೆಯ ಕ್ರಮದ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ನಾವು ನಮ್ಮ ಮಕ್ಕಳ ಪಾಲಿನ ಪೂರ್ಣ ಶುಲ್ಕ ಪಾವತಿಸಿದ್ದೇವೆ. ಆರ್ಥಿಕ ಸಂಕಷ್ಟ ಇದ್ದರೂ ಹಂತ ಹಂತವಾಗಿ ಶುಲ್ಕ ಪಾವತಿಸಿದ್ದೇವೆ. ಬಾಕಿ ಇದ್ದ ಶುಲ್ಕವನ್ನೂ ಪರೀಕ್ಷೆಗೆ ಮುನ್ನಾದಿನ ಆನ್‌ಲೈನ್‌ನಲ್ಲೇ ಪಾವತಿಸಿದ್ದೇವೆ. ಆದರೂ ಶಾಲೆಯವರು ನಾವು ಶುಲ್ಕ ಬಾಕಿ ಇದೆ ಎಂದು ನಮ್ಮ ಮಕ್ಕಳಿಗೆ ಪರೀಕ್ಷೆ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಶಾಲೆಯವರು ಮಕ್ಕಳಿಗೆ ಪರೀಕ್ಷೆಗೆ ಅವಕಾಶ ನೀಡದೆ ನಮ್ಮನ್ನು ಬ್ಲಾಕ್‌ಮೇಲ್‌ ಮಾಡುತ್ತಿದ್ದಾರೆ. ಇದು ಸರಿಯಲ್ಲ. ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದರು.

ಫೆಲೊಶಿಫ್‌ಗೆ ಕನ್ನಡದಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವಂತೆ ಯುಜಿಸಿಗೆ ನಾಗಾಭರಣ ಪತ್ರ

ಇದು ಪ್ರಸಕ್ತ ಸಾಲಿನ ಅಂತಿಮ ಪರೀಕ್ಷೆ, ಶುಲ್ಕದ ಹೆಸರಲ್ಲಿ ಶಾಲಾ ಆಡಳಿತವು ಮಕ್ಕಳನ್ನು ಈ ರೀತಿ ಶಿಕ್ಷಿಸುವುದು ಮಕ್ಕಳ ಹಕ್ಕುಗಳು ಹಾಗೂ ಶಿಕ್ಷಣ ಹಕ್ಕು ಕಾಯ್ದೆಯ ಉಲ್ಲಂಘನೆಯಾಗುತ್ತದೆ. ಶಾಲೆಯವರು ಇದೇ ಪ್ರವೃತ್ತಿ ಮುಂದುವರೆಸಿದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಅವಕಾಶ ನೀಡಿದ್ದೇವೆ: ಸಮರ್ಥನೆ

ಆದರೆ, ಶಾಲೆಯವರು ಹೇಳುವುದೇ ಬೇರೆ. ತಾಂತ್ರಿಕ ದೋಷದಿಂದ ಹಾಗೂ ಸಂವಹನ ಕೊರತೆಯಿಂದ ಇಂತಹ ತಪ್ಪಾಗಿದೆ ಎಂದು ಶಾಲೆಯ ವಕ್ತಾರರೊಬ್ಬರು ಸಮರ್ಥನೆ ನೀಡಿದ್ದಾರೆ. ಶುಲ್ಕ ಬಾಕಿ ಇರುವ ಮಕ್ಕಳ ಪಟ್ಟಿ ನೀಡುವಾಗ ತರಗತಿ ಶಿಕ್ಷಕರು ತಪ್ಪಾಗಿ ಶುಲ್ಕ ಪಾವತಿಸಿರುವ ಮಕ್ಕಳ ಹೆಸರನ್ನು ಸೇರಿಸಿದ್ದಾರೆ. ಆನ್‌ಲೈನ್‌ನಲ್ಲಿ(Online) ಪೋಷಕರು ಪಾವತಿಸಿರುವ ಶುಲ್ಕದ ಮಾಹಿತಿ ಲಭ್ಯವಾಗದೆ ಹೀಗೆ ಮಾಡಿದ್ದಾರೆ. ಇದು ಗಮನಕ್ಕೆ ಬಂದ ಕೂಡಲೇ ಸಮಸ್ಯೆ ಸರಿಪಡಿಸಿ ಮಕ್ಕಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
 

click me!