ಮಂಗಳೂರು (ನ.20) : ಭಾರತೀಯ ಶಿಕ್ಷಣ ಪದ್ಧತಿ ಮಕ್ಕಳಿಗೆ ಸಿಗಬೇಕೆಂಬ ನೆಲೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲಾಗಿದೆ. ಇದರಿಂದ ಪ್ರಾದೇಶಿಕ ಭಾಷೆಗಳಿಗೆ ಆದ್ಯತೆ ದೊರೆಯುವುದರೊಂದಿಗೆ ಭಾರತೀಯ ಸಂಸ್ಕೃತಿ, ಪರಂಪರೆಯನ್ನು ಅರಿಯಲು ಸಾಧ್ಯವಾಗುತ್ತದೆ. ಮಾತ್ರವಲ್ಲದೆ, ದೇಶದ ನೈಜ ಇತಿಹಾಸವನ್ನು ಮಕ್ಕಳಿಗೆ ತಿಳಿಸಲಿದೆ. 3ರಿಂದ 8ನೇ ವಯಸ್ಸಿನವರೆಗೆ ಮಾತೃಭಾಷೆಯಲ್ಲಿಯೇ ಶಿಕ್ಷಣ ದೊರೆಯಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.
ಕೇಶವ ಸ್ಮ ೃತಿ ಸಂವರ್ಧನ ಸಮಿತಿ ವತಿಯಿಂದ ನಗರದ ಸಂಘನಿಕೇತನದಲ್ಲಿ ಆಯೋಜಿಸಿದ ಎರಡು ದಿನಗಳ ಕನ್ನಡ ಶಾಲಾ ಮಕ್ಕಳ ಹಬ್ಬ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣದಲ್ಲಿ ಭಾರತೀಯತೆ ತರಲು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ: ಶಿಕ್ಷಣ ಸಚಿವ ನಾಗೇಶ್
ಇದುವರೆಗಿನ ಪಠ್ಯಗಳಲ್ಲಿ ಇತಿಹಾಸದ ಬಗೆಗೆ ಸುಳ್ಳು ಮಾಹಿತಿಗಳೇ ತುಂಬಿದ್ದವು. ಎನ್‌ಇಪಿ ಮೂಲಕ ಇದೆಲ್ಲವನ್ನು ದೂರ ಮಾಡಿ, ಈ ದೇಶದ ನಿಜವಾದ ಇತಿಹಾಸ ತಿಳಿಸುವ ಪ್ರಯತ್ನ ನಡೆಯಲಿದೆ ಎಂದು ಸಚಿವ ನಾಗೇಶ್ ಹೇಳಿದರು.
ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಆರಂಭಿಕ ಶಿಕ್ಷಣದಲ್ಲಿ ಪರಿಚಯಿಸಲು ಸರ್ಕಾರ ಸಜ್ಜಾಗಿದ್ದು, ಅಂತಿಮ ಕರಡು ಸಿದ್ಧವಾಗಿದೆ. ಶೀಘ್ರದಲ್ಲೇ ಅದನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದ ಸಚಿವ ನಾಗೇಶ್, ಹೊಸ ಶಿಕ್ಷಣ ನೀತಿಯು ‘ಮೆಕಾಲೆಯಿಸಂ’ನ್ನು ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿದೆ ಎಂದರು.
ರಾಜ್ಯದಲ್ಲಿಂದು ಬೇರೆ ಬೇರೆ ಕಾರಣಗಳಿಂದ ಕನ್ನಡ ಶಾಲೆಗಳು ಚಿಂತಾಜನಕ ಸ್ಥಿತಿಯಲ್ಲಿವೆ. ಇವೆಲ್ಲದಕ್ಕೆ ಪುನಃಶ್ಚೇತನ ನೀಡುವ ಕಾರ್ಯವನ್ನು ಸರ್ಕಾರ ಮಾಡುತ್ತಿದೆ. ಕನ್ನಡ ಮಾದರಿ ಶಾಲೆಗಳ ರೂಪುರೇಷೆ, ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಅನುಷ್ಠಾನ, ಶಿಕ್ಷಕರ ನೇಮಕಾತಿ ಮುಂತಾದ ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ್ ಆಳ್ವ ಮಾತನಾಡಿ, ಕನ್ನಡ ಶಾಲೆಗಳಲ್ಲಿ ಓದಿದ ಹಲವು ಮಕ್ಕಳ ಸಾಧನೆ ಜಗತ್ೊ್ರಸಿದ್ಧಿ ಪಡೆದಿದೆ. ಸರ್ಕಾರವೂ ಕನ್ನಡ ಶಾಲೆಗಳನ್ನು ಉಳಿಸುವ ಕೆಲಸ ಮಾಡುತ್ತಿದೆ. ಆದರೆ ಕಾಲ ಬದಲಾಗುತ್ತಾ ಹೋದಾಗ ಕನ್ನಡ ಶಾಲೆಗಳನ್ನು ಮೇಲ್ದರ್ಜೆಗೆ ಕೊಂಡೊಯ್ಯುವ ಕೆಲಸದಲ್ಲಿ ನಾವು ಸೋತಿದ್ದೇವೆ. ಆದ್ದರಿಂದ ಆದರ್ಶವಾದ ಕನ್ನಡ ಶಾಲೆಗಳನ್ನು ಖಾಸಗಿಯಾಗಿಯೂ ಕಟ್ಟುವ ಅನಿವಾರ್ಯತೆ ಪ್ರಸ್ತುತ ಇದೆ ಎಂದು ನುಡಿದರು.
ಇಂಗ್ಲಿಷ್ ದಾಳಿ ನಮ್ಮ ಮೇಲೆ ಮಾತ್ರ ಆದುದಲ್ಲ. ಜಗತ್ತಿನ ಉಳಿದ ರಾಷ್ಟ್ರಗಳ ಮೇಲೂ ಆಗಿದೆ. ಆದರೆ ಅವರೆಲ್ಲರೂ ತಮ್ಮ ನೆಲದ ಭಾಷೆಯನ್ನೇ ಪ್ರಮುಖ ಭಾಷೆಯನ್ನಾಗಿಸಿದ ಕಾರಣ ಆಯಾ ದೇಶಗಳಲ್ಲಿ ಪ್ರಾದೇಶಿಕ ಭಾಷೆಗಳೇ ಮಹತ್ವವನ್ನು ಪಡೆದಿವೆ. ನಮ್ಮ ರಾಷ್ಟ್ರದಲ್ಲಿ ನಾವು ಪ್ರಾದೇಶಿಕ ಭಾಷೆಗೆ ಮಹತ್ವ ನೀಡದ ಕಾರಣ ನಮ್ಮಲ್ಲಿ ಹಲವು ಗೊಂದಲಗಳಾಗುತ್ತಿವೆ ಎಂದು ಅಭಿಪ್ರಾಯಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಮಹೇಶ್ ಜೋಶಿ ಮಾತನಾಡಿ, ಕನ್ನಡ ಪರಿಪೂರ್ಣ, ವೈಜ್ಞಾನಿಕ ಮತ್ತು ಮನೋಜ್ಞವಾದ ಭಾಷೆ. ಅಂತಹ ಭಾಷೆಯ ಮೂಲಕ ಭಕ್ತಿಯ ಶಕ್ತಿ ಅನಾವರಣಗೊಂಡ ನಾಡಿನಲ್ಲಿ ಕನ್ನಡವನ್ನು ಉಸಿರಾಗಿಸುವ ಕಾರ್ಯಕ್ರಮ ನಡೆಯುತ್ತಿರುವುದು ಶ್ಲಾಘನೀಯ. ಇಂತಹ ಕಾರ್ಯಕ್ರಮಗಳ ಮೂಲಕ ನಮ್ಮ ಶಕ್ತಿಯ ಅರಿವಾದಾಗ ಕನ್ನಡವನ್ನು ತ್ರಿವಿಕ್ರಮನಂತೆ ಶಕ್ತಿಯುತಗೊಳಿಸುವುದಕ್ಕೆ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಐಎಎಸ್ ಅಧಿಕಾರಿ ನಂದಿನಿ ಕೆ.ಆರ್. ಮಾತನಾಡಿ, ಕನ್ನಡವನ್ನು ಹಲವು ಮಜಲುಗಳಲ್ಲಿ ಕಟ್ಟಿದವರು ಅನೇಕರಿದ್ದಾರೆ. ಕೇವಲ ಭಾಷೆ ಮಾತ್ರವಲ್ಲದೆ ಸಂಸ್ಕೃತಿಯೂ ಬದಲಾಗುವಂತಹ ಪ್ರಮೇಯಗಳ ನಡುವೆ ಪ್ರಸ್ತುತ ಕನ್ನಡವನ್ನು ಉಳಿಸುವ ಗುರುತರವಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಕನ್ನಡವನ್ನು ವಿಶ್ವಸಂಸ್ಥೆಯಾದಿಯಾಗಿ ಉಲ್ಲೇಖಗಳನ್ನು ನೀಡಿ ಬಳಸುತ್ತಿರುವಾಗ ನಮ್ಮಲ್ಲಿ ಹಿಂಜರಿಕೆ ಬೇಡ ಎಂದು ಹೇಳಿದರು.
ಉನ್ನತ ಶಿಕ್ಷಣ ಅಕಾಡೆಮಿಯಿಂದ ಪ್ರಾಧ್ಯಾಪಕರ ಮೌಲ್ಯಮಾಪನ
ಕೇಶವ ಸ್ಮ ೃತಿ ಸಂವರ್ಧನ ಸಮಿತಿ ಅಧ್ಯಕ್ಷ ವಾಮನ್ ಶೆಣೈ, ಕನ್ನಡ ಶಾಲಾ ಮಕ್ಕಳ ಹಬ್ಬದ ಸ್ವಾಗತ ಸಮಿತಿ ಉಪಾಧ್ಯಕ್ಷ ಕೆ.ಸಿ. ನಾೖಕ್ ವೇದಿಕೆಯಲ್ಲಿದ್ದರು. ಮಂಗಳೂರು ವಿವಿಯ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಸಾಧನೆ ಮಾಡಿದ ನಾಲ್ಕು ಕನ್ನಡ ಮಾಧ್ಯಮ ಶಾಲೆಗಳಿಗೆ ಸನ್ಮಾನ ಮಾಡಲಾಯಿತು. ಸ್ವಾಗತ ಸಮಿತಿಯ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿಸ್ವಾಗತಿಸಿದರು. ಕೇಶವ ಸ್ಮ ೃತಿ ಸಂವರ್ಧನ ಸಮಿತಿಯ ಸಹ ಕಾರ್ಯದರ್ಶಿ ರಮೇಶ್ ವಂದಿಸಿದರು. ಎಸ್‌ಡಿಎಂ ಕಾನೂನು ಕಾಲೇಜಿನ ಉಪನ್ಯಾಸಕಿ ಡಾ. ಮೀನಾಕ್ಷಿ ರಾಮಚಂದ್ರ ನಿರೂಪಿಸಿದರು.