
ಎಂ.ಅಫ್ರೋಜ್ ಖಾನ್
ರಾಮನಗರ(ನ.19): ಒಂದೂವರೆ ದಶಕದಿಂದ ನೆನೆಗುದಿಗೆ ಬಿದ್ದಿದ್ದ ಜಿಲ್ಲಾ ಕೇಂದ್ರ ರಾಮನಗರದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ನಿರ್ಮಿಸುವ ಕನಸಿಗೆ ಮತ್ತೆ ಜೀವ ಬಂದಿದೆ. ಬೆಂಗಳೂರಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜೀವ್ ಗಾಂಧಿ ವಿವಿಯ ಕ್ಯಾಂಪಸ್ ಹಾಗೂ ಇತರ ಪೂರಕ ಕಟ್ಟಡಗಳನ್ನು 600 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಿಸಲು ಆಡಳಿತಾತ್ಮಕ ಅನುಮೊದನೆ ದೊರೆತಿದ್ದು, ವಿವಿ ನಿರ್ಮಾಣ ಕಾರ್ಯದ ನನಸಾಗುವ ಕಾಲ ಸನಿಹಗೊಂಡಿದೆ. ಕಳೆದ ಜನವರಿಯಲ್ಲಿ ರಾಮನಗರಕ್ಕೆ ಆಗಮಿಸಿದ್ದ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಗ್ಯ ವಿವಿ ನಿರ್ಮಾಣಕ್ಕೆ ಇರುವ ತೊಂದರೆಯನ್ನು ಪರಿಹರಿಸಿ ನಾನೇ ಸ್ವತಃ ಬಂದು ಶಂಕುಸ್ಥಾಪನೆ ನೆರವೇರಿಸುವುದಾಗಿ ಭರವಸೆ ನೀಡಿದ್ದರು.
ಇದಕ್ಕೆ ಪೂರಕ ಎಂಬಂತೆ 2022-23ನೇ ಆಯವ್ಯಯ ಮಂಡಿಸಿದ ಮುಖ್ಯಮಂತ್ರಿಗಳು 600 ಕೋಟಿ ರುಪಾಯಿ ಅನುದಾನ ಘೋಷಿಸಿದರು. ಇದೀಗ 10 ತಿಂಗಳ ಬಳಿಕ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದಾರೆ. ಇದು ಜಿಲ್ಲೆಯ ಪಾಲಿಗೆ ಸಂತೋಷದ ಸಂಗತಿಯೂ ಆಗಿದೆ. ಈ ಮಧ್ಯೆ ರಾಜೀವ್ ಗಾಂಧಿ ಆರೋಗ್ಯ ವಿವಿ ಕುಪಪತಿಗಳು, ರಾಜ್ಯ ಸರ್ಕಾರ ವಿವಿಗೆ ನೀಡಿರುವ ಜಾಗದ ವ್ಯಾಜ್ಯ ಮುಕ್ತಾಯಗೊಳಿಸಿ ಅಗತ್ಯ ಇರುವಷ್ಟುಜಾಗವನ್ನು ಉಚಿತವಾಗಿ ನೀಡುವವರೆಗೆ ರಾಮನಗರಕ್ಕೆ ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಹೊಸ ಕಟ್ಟಡ ನಿರ್ಮಾಣ ಹಾಗೂ ಕ್ಯಾಂಪಸ್ ಸ್ಥಳಾಂತರಿಸುವುದಿಲ್ಲ ಎಂದು ಹೇಳಿದ್ದರು. ಆದರೀಗ ವಿವಿ ನಿರ್ಮಾಣ ವಿಚಾರವನ್ನು ಸ್ವತಃ ಮುಖ್ಯಮಂತ್ರಿಗಳೇ ಮುತುವರ್ಜಿ ವಹಿಸಿದಂತೆ ಕಾಣುತ್ತಿದೆ.
Reva University; ರೇವಾ ವಿವಿಯಲ್ಲಿ ಪಂಚಭೂತಗಳ ಮಹತ್ವ, ರಕ್ಷಣೆ ಬಗ್ಗೆ ಜಾಗೃತಿ ಕಾರ್ಯಕ್ರಮ
ಬಜೆಟ್ ಗಾತ್ರವೂ ಹೆಚ್ಚಳ:
2006-07ರಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರದ ಅವಧಿಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿವಿ ಕ್ಯಾಂಪಸ್ ಅನ್ನು ರಾಮನಗರಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಯಿತು. ಇದಕ್ಕಾಗಿ ರಾಮನಗರದ ಅರ್ಚಕರಹಳ್ಳಿ ಗ್ರಾಮದ ಬಳಿ 216.16 ಎಕರೆ ವಿಸ್ತೀರ್ಣದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿವಿ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿತ್ತು. ಇದಕ್ಕಾಗಿ ಬಜೆಟ್‌ನಲ್ಲಿ 330 ಕೋಟಿ ರು. ಹಣ ಮಂಜೂರು ಮಾಡಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿದ್ದರು. ಈಗ ಯೋಜನೆಯ ಗಾತ್ರ ಸುಮಾರು 600 ಕೋಟಿ ರುಪಾಯಿಗೆ ಏರಿಕೆಯಾಗಿದೆ.
ಈ ಯೋಜನೆಯಂತೆ ಇಲ್ಲಿ ಆಡಳಿತ ಭವನ, ವೈದ್ಯಕೀಯ, ದಂತ, ನರ್ಸಿಂಗ್ ಕಾಲೇಜುಗಳು, 750 ಹಾಸಿಗೆ ಸಾಮರ್ಥ್ಯದ ಸುಸಜ್ಜಿತ ಆಸ್ಪತ್ರೆ ಮತ್ತು 250 ಹಾಸಿಗೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ವಿದ್ಯಾರ್ಥಿನಿಲಯ, ವಸತಿ ಗೃಹಗಳು ಸೇರಿದಂತೆ 12 ಬೃಹತ್ ಕಟ್ಟಡಗಳನ್ನು ನಿರ್ಮಿಸಲಾಗುತ್ತದೆ. ಈ ಯೋಜನೆ ಉದ್ದೇಶ ಹಳೇ ಮೈಸೂರು ಭಾಗದ ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ ಸೇರಿದಂತೆ ಹಲವು ಜಿಲ್ಲೆಗಳ ಜನರಿಗೆ ಆರೋಗ್ಯ ಸೇವೆ ನೀಡುವುದಾಗಿದೆ.
ಜಮೀನು ವ್ಯಾಜ್ಯವೇ ಸಮಸ್ಯೆ:
ರಾಜೀವ್ ಗಾಂಧಿ ಆರೋಗ್ಯ ವಿವಿಗೆ ಅರ್ಚಕರಹಳ್ಳಿಯಲ್ಲಿ 274 ಎಕರೆ ಜಾಗದ ಅವಶ್ಯಕತೆ ಇತ್ತು. 2007 - 08ರಲ್ಲಿ 20 ಕೋಟಿ ರು.ಗಳನ್ನು ನೀಡಿ 41 ಎಕರೆ ಸರ್ಕಾರಿ ಗೋಮಾಳದ ಜತೆಗೆ ರೈತರ 80 ಎಕರೆ ಜಮೀನನ್ನು ಖರೀದಿ ಮಾಡಲಾಗಿತ್ತು. 2015 ರವರೆಗೆ ವಿಶ್ವವಿದ್ಯಾಲಯದ ಕ್ಯಾಂಪಸ್‌ಗಾಗಿ ಸ್ವಾಧೀನಪಡಿಸಿಕೊಂಡ ಭೂಮಿಯಲ್ಲಿ ಬಾಕಿ ಇರುವ ಎಲ್ಲಾ ದಾವೆಗಳನ್ನು ಸುಪ್ರೀಂಕೋರ್ಚ್ ತೆರವುಗೊಳಿಸಿತ್ತು. ಆದರೆ, 79 ಎಕರೆ ಜಮೀನಿನ 17 ರೈತರು ಮತ್ತೆ ಹೆಚ್ಚಿನ ಪರಿಹಾರ ಬೇಕೆಂದು ನ್ಯಾಯಾಲಯದ ಮೊರೆ ಹೋದರು. ಇದರಿಂದಾಗಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ವಿಳಂಬವಾಯಿತು.
ಇನ್ನುಳಿದ ರೈತರು ಭೂಮಿ ನೀಡಲು ಸಮ್ಮತಿಸಿದ್ದರು. ಹೀಗಾಗಿಯೇ ಸಂಸದ ಡಿ.ಕೆ.ಸುರೇಶ್, ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ ನಾರಾಯಣರವರ ಅಧ್ಯಕ್ಷತೆಯಲ್ಲಿ ಸಾಕಷ್ಟುಸಭೆ ನಡೆಸಿದರೂ, ಪ್ರಯೋಜನವಾಗಿರಲಿಲ್ಲ. ಒಂದೂವರೆ ದಶಕದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿವಿ ನಿರ್ಮಾಣಕ್ಕಾಗಿ ಮೂವರು ಮುಖ್ಯಮಂತ್ರಿಗಳು ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಅಧಿಕಾರಕ್ಕೆ ಬಂದ ಸರ್ಕಾರಗಳು ಬಜೆಟ್ ಗಾತ್ರವನ್ನು ಹೆಚ್ಚಳ ಮಾಡಿವೆ. ಆದರೆ, ವಿವಿ ಮಾತ್ರ ನಿರ್ಮಾಣಗೊಂಡಿಲ್ಲ. ಈಗ ದೊರೆತಿರುವ ಆಡಳಿತಾತ್ಮಕ ಅನುಮೊದನೆ ಸ್ಥಗಿತಗೊಳ್ಳದೆ ಕಾಮಗಾರಿ ಪ್ರಾರಂಭಗೊಳ್ಳುವುದೇ ಕಾದು ನೋಡಬೇಕಿದೆ.
ಉನ್ನತ ಶಿಕ್ಷಣ ಅಕಾಡೆಮಿಯಿಂದ ಪ್ರಾಧ್ಯಾಪಕರ ಮೌಲ್ಯಮಾಪನ
ವಿವಿಯಲ್ಲಿ ಏನೇನು ಇರಲಿದೆ?
ರಾಜೀವಗಾಂಧಿ ಆರೋಗ್ಯ ವಿವಿ ಆವರಣದಲ್ಲಿ ಆಡಳಿತ ಭವನ, 34,35 ಕೋಟಿ ವಚ್ಚದಲ್ಲಿ 750 ಹಾಸಿಗೆಯ ಹೈಟೆಕ್ ಆಸ್ಪತ್ರೆ, 78,63 ಕೋಟಿ, 250 ಹಾಸಿಗೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ 53,27 ಕೋಟಿ, ವ್ಯೆದ್ಯಕೀಯ ಕಾಲೇಜು, 72,28 ಕೋಟಿ, ದಂತ ವ್ಯೆದ್ಯಕೀಯ ಕಾಲೇಜು, 24,56 ಕೋಟಿ, ಫಾರ್ಮಸಿ ಕಾಲೇಜು,12,95 ಕೋಟಿ, ನರ್ಸಿಂಗ್ ಕಾಲೇಜು, 8,13 ಕೋಟಿ, ಪುರುಷರ ಹಾಸ್ಟೆಲ್ 14,07 ಕೋಟಿ, ಮಹಿಳೆಯರ ಹಾಸ್ಟೆಲ್ 14,07 ಕೋಟಿ, ನರ್ಸಿಂಗ್ ಹಾಸ್ಟೆಲ್ 3,52 ಕೋಟಿ, ಸಿಬ್ಬಂದಿ ಕ್ವಾಟ್ರಸ್ 12,49 ಕೋಟಿ, ವಿಶ್ರಾಂತಿ ಕೊಠಡಿಗಳು 2,63 ಕೋಟಿ, ಕ್ಯಾಂಟೀನ್ ಬ್ಲಾಕ್ 0,96 ಲಕ್ಷ , ಅನಿಮಲ್ ಪ್ಲಾಂಟ್ 1,34 ಕೋಟಿ, ಭದ್ರತಾ ಸಿಬ್ಬಂದಿ ಕೊಠಡಿ 23ಲಕ್ಷ ಮತ್ತು ಇತರೆ ಕಟ್ಟಡ ಖರ್ಚಿಗಾಗಿ 7 ಲಕ್ಷ ರು.ಗಳ ಖರ್ಚುಗಳುಳ್ಳ ನೀಲಿ ನಕ್ಷೆ ಸಿದ್ಧವಾಗಿದೆ.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ನುಡಿದಂತೆ ನಡೆದು ತೋರಿಸಿದ್ದಾರೆ. ಆದಷ್ಟುಶೀಘ್ರದಲ್ಲಿ ಕಾಮಗಾರಿ ಪ್ರಾರಂಭಗೊಳ್ಳುವ ನಿರೀಕ್ಷೆ ಇದೆ. ಇದಕ್ಕೆ ಕಾರಣರಾದ ಜಿಲ್ಲಾ ಉಸ್ತುವಾಸಿ ಸಚಿವ ಅಶ್ವತ್ಥ ನಾರಾಯಣರವರ ಶ್ರಮ ಮರೆಯುವಂತಿಲ್ಲ. ಸಿಎಂ ಬೊಮ್ಮಾಯಿ ಮತ್ತು ಸಚಿವ ಅಶ್ವತ್ಥ ನಾರಾಯಣ ಅವರಿಗೆ ಧನ್ಯವಾದಗಳು ಅಂತ ಕರ್ನಾಟಕ ರೇಷ್ಮೆ ನಿಗಮ ಮಂಡಳಿ ಅಧ್ಯಕ್ಷ ಗೌತಮ್‌ಗೌಡ ತಿಳಿಸಿದ್ದಾರೆ.