* ಉತ್ತರ ಕನ್ನಡ ಜಿಲ್ಲೆಯಲ್ಲಿದೆ 800ಕ್ಕೂ ಮಿಕ್ಕಿ ಶಿಥಿಲಾವಸ್ಥೆಯಲ್ಲಿರುವ ಶಾಲಾ ಕೊಠಡಿಗಳು
* ಮೇ. 15ಕ್ಕೆ ಶಾಲೆಗಳನ್ನು ತೆರೆಯಲು ಹೊರಟಿರುವ ಸರಕಾರಕ್ಕೆ ಶಾಲೆಗಳಸ್ಥಿತಿಗಳ ಬಗ್ಗೆ ಮಾಹಿತಿಯೇ ಇಲ್ವಾ?
* ಮಳೆಗಾಲ ಪ್ರಾರಂಭವಾದ ಬಳಿಕ ಶಿಥಿಲಾವಸ್ಥೆಯ ಶಾಲೆಗಳು ಕುಸಿಯುವ ಸಾಧ್ಯತೆ
ವರದಿ: ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ
ಬೆಂಗಳೂರು(ಮೇ.10): ರಾಜ್ಯ ಸರ್ಕಾರ(Government of Karnataka) ಮೇ. 15ರಂದು ಮತ್ತೆ ಶಾಲೆ-ಕಾಲೇಜುಗಳನ್ನು ತೆರೆಯಲು ಹೊರಟಿದೆ. ಆದರೆ, ಶಾಲೆಗಳ ಸ್ಥಿತಿಯ ಬಗ್ಗೆ ಹೇಳೋರಿಲ್ಲ, ಕೇಳೋರಿಲ್ಲ. ಉತ್ತರಕನ್ನಡ ಜಿಲ್ಲೆಯಲ್ಲಿ ಸುಮಾರು 800ಕ್ಕೂ ಹೆಚ್ಚು ಸರ್ಕಾರಿ ಶಾಲಾ(Government Schools) ಕೊಠಡಿಗಳು ಶಿಥಿಲಾವ್ಯವಸ್ಥೆ ತಲುಪಿದ್ದು, 600 ಶಾಲೆಗಳು ಮಣ್ಣಿನ ಗೋಡೆಗಳನ್ನು ಹೊಂದಿವೆ. ಮುಂದಿನ ತಿಂಗಳಿಂದ ಮಳೆಗಾಲ ಕೂಡಾ ಪ್ರಾರಂಭವಾಗೋದ್ರಿಂದ ಮಕ್ಕಳನ್ನು ಶಾಲೆಗೆ ಕಳುಹಿಸೋದು ಹೇಗೆ..? ಅನ್ನೋದು ಪೋಷಕರ ಮುಂದಿರುವ ಆತಂಕವಾಗಿದೆ.
ರಾಜ್ಯ ಸರ್ಕಾರ ಮೇ 15ರಿಂದ ರಾಜ್ಯದಾದ್ಯಂತ(Karnataka) ಶಾಲಾ ಕಾಲೇಜುಗಳನ್ನು ತೆರೆಯಲು ಹೊರಟಿದೆ. ವಿದ್ಯಾರ್ಥಿಗಳ ಶಿಕ್ಷಣದ ಉದ್ದೇಶದಿಂದ ಈ ನಿರ್ಧಾರ ಉತ್ತಮವಾಗಿದ್ರೂ, ಮುಂದಿನ ತಿಂಗಳಿಂದ ಮಳೆಗಾಲ ಪ್ರಾರಂಭವಾಗೋದ್ರಿಂದ ಸರಕಾರ ಶಾಲೆಗಳ ಸ್ಥಿತಿಯನ್ನು ಪರಿಶೀಲನೆ ಮಾಡಿಸಬೇಕಿತ್ತು.ಆದರೆ, ಈ ವಿಚಾರದ ಬಗ್ಗೆ ಗಮನ ಹರಿಸದೇ ಮತ್ತೆ ಶಾಲೆಗಳನ್ನು ಪ್ರಾರಂಭಿಸೋದು ಸರ್ಕಾರ ಎಲ್ಲೋ ವಿದ್ಯಾರ್ಥಿಗಳ(Students) ಬಗ್ಗೆ ನಿರ್ಲಕ್ಷ್ಯ ಮಾಡ್ತಿದ್ಯೋ ಅನ್ನೋ ಪ್ರಶ್ನೆ ಎದುರಾಗಿದೆ.
ರಾಜ್ಯದ ಎರಡನೇ ದೊಡ್ಡ ಜಿಲ್ಲೆಯಾಗಿರುವ ಉತ್ತರ ಕನ್ನಡ(Uttara Kannada) ಜಿಲ್ಲೆಯ ಶಿರಸಿ ಹಾಗೂ ಕಾರವಾರ ಶೈಕ್ಷಣಿಕ ಕ್ಷೇತ್ರದಲ್ಲಿ 2169 ಶಾಲಾ ಕಟ್ಟಡಗಳಿದ್ದು, 696 ಮಣ್ಣಿನ ಗೋಡೆಗಳ ಶಾಲೆಗಳಿವೆ. 898 ಶಾಲೆಗಳ ಕೊಠಡಿಗಳು ಶಿಥಿಲಾವ್ಯವಸ್ಥೆ ತಲುಪಿವೆ. ಇನ್ನೇನು ಮುಂದಿನ ತಿಂಗಳಿಂದ ಮಳೆಗಾಲ ಕೂಡಾ ಪ್ರಾರಂಭವಾಗೋದ್ರಿಂದ ಮೊದಲೇ ಶಿಥಿಲಾವಸ್ಥೆಯಲ್ಲಿರುವ ಶಾಲೆಯ ಕೊಠಡಿಗಳು ಕುಸಿಯುವ ಸಾಧ್ಯತೆಗಳಿವೆ. ಈ ಕಾರಣದಿಂದ ಇಂತಹ ಶಾಲೆಗಳಿಗೆ ಮಕ್ಕಳನ್ನು ಹೇಗೆ ಕಳುಹಿಸೋದು ಅಂತಾ ಪೋಷಕರು ಆತಂಕದಲ್ಲಿದ್ದು, ಶೀಘ್ರದಲ್ಲಿ ಸರಕಾರ ಎಚ್ಚೆತ್ತು ಶಾಲಾ ಕಟ್ಟಡಗಳ ದುರಸ್ತಿಗೆ ಮುಂದಾಗಬೇಕಿದೆ.
SSLC Result: ಮೇ 15ಕ್ಕಲ್ಲ, 19ರಂದು ಎಸ್ಸೆಸ್ಸೆಲ್ಸಿ ಫಲಿತಾಂಶ?
ಅಂದಹಾಗೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಗಾಲದ(Rainy Season) ಸಂದರ್ಭ ಭಾರೀ ಪ್ರಮಾಣದಲ್ಲಿ ಮಳೆಯಾಗುವುದಲ್ಲದೇ, ನೆರೆ ಕಾಟವೂ ಹೆಚ್ಚಾಗಿರುತ್ತದೆ. ಈ ಕಾರಣದಿಂದ ಸಾಕಷ್ಟು ಗಟ್ಟಿಮುಟ್ಟಾದ ಮನೆಗಳು ಕೂಡಾ ನೆಲಸಮವಾಗಿವೆ. ಆದರೆ, ಮೊದಲೇ ಮಣ್ಣಿನ ಗೋಡೆ ಹೊಂದಿರುವ ಹಾಗೂ ಶಿಥಿಲಾವಸ್ಥೆಯಲ್ಲಿರುವ ಶಾಲೆಯ ಕೊಠಡಿಗಳ ಸ್ಥಿತಿ ಏನಾಗಬಹುದು ಅನ್ನೋದು ಜನಸಾಮಾನ್ಯರ ಪ್ರಶ್ನೆ. ಶಾಲಾ ಕೊಠಡಿಗಳ ಕಟ್ಟಡಗಳ ಸ್ಥಿತಿಗತಿಗಳನ್ನು ಅರಿತಿರುವ ಪೋಷಕರು ಈ ಕಾರಣದಿಂದ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದೇ ಅಥವಾ ಬೇಡವೇ ಅಂತಾ ಚಿಂತಿಸುವಂತಾಗಿದೆ. ಇನ್ನು ಉತ್ತರ ಕನ್ನಡ ಜಿಲ್ಲೆ ರಾಜ್ಯದ ಗಡಿಭಾಗವನ್ನು ಕೂಡಾ ಹೊಂದಿರುವುದರಿಂದ ಇಲ್ಲಿ ಬೇರೆ ರಾಜ್ಯದ ಭಾಷೆಗಳ ಪ್ರಾಬಲ್ಯ ಕೂಡಾ ಹೆಚ್ಚಿದೆ. ಈ ಕಾರಣದಿಂದ ಸರಕಾರ ಈ ಬಗ್ಗೆ ನಿರ್ಲಕ್ಷ್ಯ ಮಾಡದೆ ಕೂಡಲೇ ಈ ಸಮಸ್ಯೆಗೆ ಪರಿಹಾರ(Compensation) ಕಲ್ಪಿಸಬೇಕಿದೆ.ಇನ್ನು ಈ ಬಗ್ಗೆ ಜಿಲ್ಲಾಧಿಕಾರಿಗಳನ್ನು ಕೇಳಿದರೆ ಸಂಬಂಧಪಟ್ಟ ಅಧಿಕಾರಿಗಳನ್ನು, ಜನಪ್ರತಿನಿಧಿಗಳನ್ನು ಕರೆದು ಸಭೆ ಮಾಡಿ ನಿರ್ಣಯ ತೆಗೆದುಕೊಳ್ಳುತ್ತೇವೆ. ಶಾಲೆಗಳು ಪ್ರಾರಂಭವಾಗುವ ಮುನ್ನ ಸೂಕ್ತ ವ್ಯವಸ್ಥೆ ಕಲ್ಪಿಸುತ್ತೇವೆ ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ ರಾಜ್ಯ ಸರ್ಕಾರ ಮೇ 15 ರಿಂದ ಶಾಲಾ ಕಾಲೇಜುಗಳನ್ನು ಮತ್ತೆ ಪ್ರಾರಂಭಿಸಲು ಮುಂದಾಗಿರೋದು ಉತ್ತಮ ನಿರ್ಧಾರವಾಗಿದ್ರೂ, ಅದರ ಪೂರ್ವ ತಯಾರಿಯಲ್ಲಿ ಎಡವಿದೆ. ಹೀಗಾಗಿ ಆದಷ್ಟು ಬೇಗ ಕಟ್ಟಡಗಳ ದುರಸ್ತಿ ಮಾಡಿ ಶಾಲೆಗಳನ್ನು ತೆರೆದಲ್ಲಿ ಮುಂದೆ ಎದುರಾಗುವ ದೊಡ್ಡ ಅನಾಹುತಗಳನ್ನು ತಡೆದಂತಾಗುತ್ತದೆ.