ನಾಳೆಯಿಂದ 2nd PUC Exam, ಹಿಜಾಬ್ ಹೋರಾಟಗಾರ್ತಿಯರು ಪರೀಕ್ಷೆ ಬರೆಯುತ್ತಾರಾ?

Published : Apr 21, 2022, 04:40 PM IST
ನಾಳೆಯಿಂದ  2nd PUC Exam, ಹಿಜಾಬ್ ಹೋರಾಟಗಾರ್ತಿಯರು ಪರೀಕ್ಷೆ ಬರೆಯುತ್ತಾರಾ?

ಸಾರಾಂಶ

ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭವಾಗಲಿದೆ. ರಾಜ್ಯದಲ್ಲಿ ಒಟ್ಟು 6,84,255 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಈ ನಡುವೆ  ಹಿಜಾಬ್ ಹೋರಾಟಗಾರ್ತಿಯರು ಪರೀಕ್ಷೆ ಬರೆಯುತ್ತಾರಾ ಎಂಬ ಪ್ರಶ್ನೆ ಎದ್ದಿದೆ.

ವರದಿ : ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್

ಬೆಂಗಳೂರು(ಏ.21): ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭವಾಗಲಿದೆ.  ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಇಲ್ಲ ಎಂದು ಶಿಕ್ಷಣ ಇಲಾಖೆ ಹೇಳಿದೆ. ಹಿಜಾಬ್ ಗಾಗಿ ಹೋರಾಟ ನಡೆಸಿದ ಉಡುಪಿಯ ಮಹಿಳಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗ್ತಾರಾ? ಅನ್ನುವ ಕುತೂಹಲ ಹೆಚ್ಚಿದೆ.

ಶುಕ್ರವಾರದಿಂದ ಆರಂಭವಾಗಲಿರುವ ದ್ವಿತೀಯ ಪಿಯುಸಿ ಪರೀಕ್ಷೆ (2nd PUC Exam) ಎಲ್ಲರ ಗಮನ ಸೆಳೆದಿದೆ. ಉಡುಪಿ (Udupi) ಜಿಲ್ಲೆಯ ಸರ್ಕಾರಿ ಪದವಿಪೂರ್ವ ಹೆಮ್ಮಕ್ಕಳ ಕಾಲೇಜಿನ 6 ಮಂದಿ ವಿದ್ಯಾರ್ಥಿನಿಯರು, 2021ರ ವರ್ಷದ ಅಂತ್ಯದಲ್ಲಿ ಹಿಜಾಬ್ (HIjab) ಗಾಗಿ ಹೋರಾಟ ಆರಂಭಿಸಿರುವುದ್ದು, ನಂತರ ಈ ವಿವಾದ ರಾಜ್ಯಾದ್ಯಂತ ಪಸರಿಸಿತು. ಅವತ್ತಿನಿಂದಲೂ ತರಗತಿಗಳಿಗೆ ಗೈರು ಹಾಜರಾಗಿರುವ ವಿದ್ಯಾರ್ಥಿನಿಯರು, ಶೈಕ್ಷಣಿಕ ವರ್ಷಾಂತ್ಯದಲ್ಲಿ ಬಂದಿರುವ ಪರೀಕ್ಷೆಯನ್ನಾದರೂ ಬರೆಯುತ್ತಾರಾ ಕಾದುನೋಡಬೇಕು.

ಹಿಜಾಬ್ ಹೋರಾಟ ಆರಂಭವಾದ ಮೇಲೆ ಈ ಆರು ಮಂದಿ ವಿದ್ಯಾರ್ಥಿನಿಯರು ಒಂದು ದಿನವೂ ತರಗತಿಗೆ ಹಾಜರಾಗಿಲ್ಲ. ಇವರ ಪೈಕಿ ಇಬ್ಬರು ಪ್ರಥಮ ಪಿಯುಸಿ ವಿದ್ಯಾರ್ಥಿನಿಯರಾಗಿದ್ದು ಇತ್ತೀಚೆಗಷ್ಟೇ ಮುಗಿದ ಅಂತಿಮ ಪರೀಕ್ಷೆಯಲ್ಲಿ ಇಬ್ಬರು ವಿದ್ಯಾರ್ಥಿನಿಯರು ಭಾಗವಹಿಸಿಲ್ಲ. ಹಾಗಾಗಿ ಬಾಕಿ ಉಳಿದ ನಾಲ್ವರು ವಿದ್ಯಾರ್ಥಿನಿಯರು ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವ ಸಾಧ್ಯತೆ ಕಡಿಮೆ ಎಂದೇ ಹೇಳಲಾಗುತ್ತಿದೆ.

2022-23ನೇ ಸಾಲಿನ ಶೈಕ್ಷಣಿಕ ವರ್ಷದ ವೇಳಾಪಟ್ಟಿ ಬಿಡುಗಡೆ

ಈ ನಾಲ್ವರ ಪೈಕಿ ಇಬ್ಬರು ವಿಜ್ಞಾನ ವಿಭಾಗ ಮತ್ತಿಬ್ಬರು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾಗಿದ್ದು, ಶುಕ್ರವಾರ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರಿಗೆ ಬಿಸಿನೆಸ್ ಸ್ಟಡೀಸ್ ಪರೀಕ್ಷೆ ನಡೆಯಬೇಕಾಗಿದೆ. ಕಳೆದ ಶನಿವಾರ ಹಾಲ್ ಟಿಕೆಟ್ ಪಡೆದು ಹೋಗುವಂತೆ ಕಾಲೇಜು ಆಡಳಿತ ಮಂಡಳಿ ಸೂಚಿಸಿದ್ದು, ಈ ನಾಲ್ವರು ವಿದ್ಯಾರ್ಥಿನಿಯರು ಹಾಲ್ ಟಿಕೆಟ್ ನ್ನೇ ಪಡೆದಿಲ್ಲ.

ಹೈಕೋರ್ಟ್ ಆದೇಶ ಬಂದ ನಂತರವೂ ಈ ವಿದ್ಯಾರ್ಥಿನಿಯರು ಹೋರಾಟ ಮುಂದುವರಿಸಿದ್ದಾರೆ. ಶಿಕ್ಷಣಕ್ಕಿಂತ ನಮಗೆ ಧರ್ಮ ಮುಖ್ಯ ಎಂದು ಹೇಳುತ್ತಾ ಬಂದಿದ್ದಾರೆ. ಹಿಜಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಕೊಡಿ ಎಂದು ಮುಖ್ಯಮಂತ್ರಿಗಳಿಗೆ ಇತ್ತೀಚಿಗೆ ಟ್ವೀಟ್ ಕೂಡ ಮಾಡಿದ್ದರು. ಹೈಕೋರ್ಟು ತೀರ್ಪು ಬಂದ ನಂತರ ಬಹಿರಂಗವಾಗಿ ಯಾವುದೇ ಹೇಳಿಕೆಯನ್ನು ನೀಡಿದ ವಿದ್ಯಾರ್ಥಿನಿಯರು, ಮುಂದಿನ ತಮ್ಮ ಕಾನೂನು ಸಮರ ಏನು ಎಂಬುದನ್ನು ಸ್ಪಷ್ಟಪಡಿಸಿಲ್ಲ.

Hubballi Violence Case ಬಂಧಿತ ವಿದ್ಯಾರ್ಥಿಗೆ || PUC ಪರೀಕ್ಷೆ ಬರೆಯಲು ಅನುಮತಿ

ಈವರೆಗೂ ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿಲ್ಲ. ಎಲ್ಲಾ ಗೊಂದಲಗಳ ನಡುವೆ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ಬಂದಿದೆ. ಎಲ್ಲವನ್ನು ಮರೆತು ಹಿಜಾಬ್ ತೆಗೆದಿಟ್ಟು ಪರೀಕ್ಷೆಗೆ ಹಾಜರಾಗುತ್ತರಾ ಅನ್ನುವ ಕುತೂಹಲ ಇದೆ. ನಾಳೆ ಪರೀಕ್ಷೆ ಬರೆಯಲು ಬಂದರೆ ಹಾಲ್ ಟಿಕೆಟ್ ನೀಡುವುದಾಗಿ ಶಾಲಾ ಆಡಳಿತ ಮಂಡಳಿ ತಿಳಿಸಿದೆ. ಇಷ್ಟಕ್ಕೂ ಪಟ್ಟು ಸಡಿಲಿಸಿ ಪರೀಕ್ಷೆ ಬರೆದು ತಮ್ಮ ಎರಡು ವರ್ಷಗಳ ಅಮೂಲ್ಯ ಪಿಯುಸಿ ಶಿಕ್ಷಣವನ್ನು ಪೂರ್ಣಗೊಳಿಸುತ್ತಾರಾ ಕಾದುನೋಡಬೇಕು.

ಗೊಂದಲಗಳ ನಡುವೆ ಎಸ್ಎಸ್ಎಲ್ಸಿ ಪರೀಕ್ಷೆ ಸುಸೂತ್ರವಾಗಿ ಮುಗಿದಿದೆ. ಅದೇ ವಿಶ್ವಾಸದಲ್ಲಿರುವ ಪಿಯು ಬೋರ್ಡ್,  ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಕೂಡ ಯಶಸ್ವಿಯಾಗಿ ಪೂರ್ಣಗೊಳಿಸುವ ವಿಶ್ವಾಸ ಪ್ರಕಟಿಸಿದೆ.

PREV
Read more Articles on
click me!

Recommended Stories

ದೇಶದ ನಂಬರ್ 1 ಶಿಕ್ಷಣ ಸಂಸ್ಥೆ IISc ನಲ್ಲಿ ಭದ್ರತಾ ಹುದ್ದೆ, SSLC ಪಾಸಾದವರಿಗೆ ಸುವರ್ಣಾವಕಾಶ!
ಒಳ್ಳೆ ರಿಸಲ್ಟ್‌ಗಾಗಿ ಶಿಕ್ಷಕರಿಂದ್ಲೇ ಎಸ್ಸೆಸ್ಸೆಲ್ಸಿ ಪ್ರಶ್ನೆಪತ್ರಿಕೆ ಲೀಕ್