ಕಲಬುರಗಿ: ಶಕ್ತಿ ದೇವತೆ ಭಾಗ್ಯವಂತಿ ತಾಣ ಘತ್ತರಗಿಯಲ್ಲಿ ಸರ್ಕಾರಿ ಶಾಲೆಗಿಲ್ಲ ಜಾಗ..!

By Kannadaprabha News  |  First Published Oct 27, 2022, 7:30 AM IST

ಪುರಾಣ ನಡೆಸಿ, ಚಂದಾ ಎತ್ತಿ ಸರ್ಕಾರಿ ಹೈಸ್ಕೂಲ್‌ ಕಟ್ಟಡಕ್ಕೆ ನಿವೇಶನ ಖರೀದಿಸಲು ಮುಂದಾದ ಘತ್ತರ್ಗಾ ಮಂದಿ


ರಾಹುಲ್‌ ದೊಡ್ಮನಿ

ಚವಡಾಪುರ(ಅ.27):  ಜಿಲ್ಲೆಯ ಭೀಮಾ ತೀರ ಅಫಜಲ್ಪುರ ತಾಲೂಕಿನ ಪುಣ್ಯಕ್ಷೇತ್ರ ಘತ್ತರಗಾದಲ್ಲಿರುವ ಸರ್ಕಾರಿ ಶಾಲೆಗೆ ಕಾಯಂ ಸೂರು ಕಲ್ಪಿಸಲು ಇಲ್ಲಿನ ಜನ ಚಂದಾ ಪ ಟ್ಟಿಎತ್ತಲು ಮುಂದಾಗಿದ್ದಾರೆ. ಇದರೊಂದಿಗೆ ಊರ ಶಾಲೆಗೆ ಸ್ವಂತ ಸೂರಿಗಾಗಿ ಘತ್ತರಗಾ ಗ್ರಾಮಸ್ಥರ ಹರಸಾಹಸ ಸಾಗಿದೆ. ಇದು ಅಫಜಲ್ಪು ತಾಲೂಕಿನ ಭೀಮಾ ತೀರದಲ್ಲಿರುವ ಸುಕ್ಷೇತ್ರ ಘತ್ತರಗಾ ಗ್ರಾಮದಲ್ಲಿನ ಸರ್ಕಾರಿ ಶಾಲೆಯ ಸುತ್ತಲಿನ ಕಥೆ. ಭಾಗ್ಯವಂತಿ ದೇವಿ ತಾಣವಾಗಿರುವ ಈ ಊರಲ್ಲಿನ ಶಾಲೆಗೆ ಸ್ವಂತ ಕಟ್ಟಡ ಇಲ್ಲ, ಇಲ್ಲಿನ ಹಳ್ಳಿ ಮಕ್ಕಳಿಗೆ ಶಿಕ್ಷಣ ಮರೀಚಿಕೆಯಾಗಿದೆ. ತಮ್ಮೂರ ಶಾಲೆಗೆ ಸ್ವಂತ ಕಟ್ಟಡ ಹೊಂದಲು ಸಾಹಸಕ್ಕಿಳಿದಿರುವ ಊರವರು ಜಮೀನು ಖರೀದಿಗಾಗಿ ಸಾರ್ವಜನಿಕ ದೇಣಿಗೆ ಸಂಗ್ರಹಕ್ಕೆ ಮುಂದಾಗಿದ್ದಾರೆ.

Tap to resize

Latest Videos

ಘತ್ತರಗಾ ಗ್ರಾಮದಲ್ಲಿ ಸರ್ಕಾರಿ ಪ್ರೌಢ ಶಾಲೆ, ಗ್ರಾ.ಪಂ. ಕಚೇರಿ ಸೇರಿದಂತೆ ಅನೇಕ ಸರ್ಕಾರಿ ಕಚೇರಿಗಳು, ಕಟ್ಟಡಗಳು ಮುಜರಾಯಿ ಇಲಾಖೆ ಜಾಗದಲ್ಲಿವೆ. ಭಾಗ್ಯವಂತಿ ದೇವಸ್ಥಾನಕ್ಕೆ ನಾನಾ ರಾಜ್ಯಗಳ ಭಕ್ತರು ಬರುತ್ತಾರೆ, ಹೀಗಾಗಿ ಅವರಿಗೆಲ್ಲ ಜಾಗದ ಸಮಸ್ಯೆ ಕಾಡುತ್ತಿದೆ ಆದ್ದರಿಂದ ಶಾಲಾ ಕಟ್ಟಡವನ್ನು ಬೇರೆಡೆ ಸ್ಥಳಾಂತರಿಸಿಕೊಳ್ಳಿ ಎನ್ನುವ ಮುಜರಾಯಿ ಇಲಾಖೆಯ ಸೂಚನೆಯಿಂದಾಗಿ ಶಾಲಾ ಕಟ್ಟಡವನ್ನು ಬೇರೆ ಕಡೆ ಕಟ್ಟಿಸಿಕೊಳ್ಳಬೇಕಾಗಿದೆ.

ಪದವೀಧರ ಶಿಕ್ಷಕರ ಬಡ್ತಿಗೆ ಇನ್ನೊಂದೇ ಹೆಜ್ಜೆ..!

ಆದರೆ ಶಾಲಾ ಕಟ್ಟಡ ಕಟ್ಟಲು ಘತ್ತರಗಾ ಗ್ರಾಮದಲ್ಲಿ ಸರ್ಕಾರಿ ನಿವೇಶನವಿಲ್ಲ. ಹೀಗಾಗಿ ಖಾಸಗಿಯಾಗಿ ಭೂಮಿ ಖರೀದಿ ಮಾಡಬೇಕಾಗಿದೆ. ಭೂಮಿ ಖರೀದಿ ಮಾಡುವುದಕ್ಕಾಗಿ ಗ್ರಾಮದಲ್ಲಿ ಕಡಕೋಳ ಮಡಿವಾಳಪ್ಪನವರ ಪುರಾಣ ಕಾರ್ಯಕ್ರಮ ಮೂಲಕ ಪುರಾಣದಿಂದ ಬರುವ ದೇಣಿಗೆ ಹಣದಲ್ಲಿ ಭೂಮಿ ಖರೀದಿಸಿ ಸರ್ಕಾರಕ್ಕೆ ದಾನವಾಗಿ ನೀಡುವ ಮಹತ್ಕಾರ್ಯಕ್ಕೆ ಗ್ರಾಮಸ್ಥರು ಮುಂದಾಗಿದ್ದು ಅಫಜಲ್ಪುರ ಮಳೇಂದ್ರ ಸಂಸ್ಥಾನ ಮಠದ ವಿಶ್ವರಾಧ್ಯ ಶಿವಾಚಾರ್ಯರ ಸಾನಿಧ್ಯದಲ್ಲಿ ಅ.31ರಿಂದ ನ.20ರ ವರೆಗೆ ಪುರಾಣ ಕಾರ್ಯಕ್ರಮ ಜರುಗಲಿದೆ.

ಶಕ್ತಿ ದೇವತೆ ಭಾಗ್ಯವಂತಿ ತಾಣದಲ್ಲೇ ಇರುವ ಸರ್ಕಾರಿ ಪ್ರೌಢ ಶಾಲೆ ಸ್ವಂತ ಸೂರಿಲ್ಲದೆ ಅನಾಥವಾಗಿದೆ. ಆದಾಗ್ಯೂ ಇಲ್ಲಿನ ಮಕ್ಕಳು ಪರಿಕ್ಷೆಗಳಲ್ಲಿ ಉತ್ತಮ ಫಲಿತಾಂಶ ಪಡೆಯುತ್ತಿದ್ದಾರೆ. 9 ಮತ್ತು 10ನೇ ತರಗತಿಯಲ್ಲಿ ಓದುವ 220 ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗುವ ನಿಟ್ಟಿನಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಕೂಡ ಕಾಳಜಿ ತೋರಿಸುತ್ತಿಲ್ಲ ಎನ್ನುವುದೇ ಖೇದಕರ.

ಶಿಥಿಲವಾಗಿದೆ ಈಗಿನ ಕಟ್ಟಡ:

ಮುಜರಾಯಿ ಇಲಾಖೆಗೆ ಸೇರಿದ ಜಾಗದಲ್ಲಿರುವ ಸರ್ಕಾರಿ ಪ್ರೌಢ ಶಾಲೆಯನ್ನು ಅಭಿವೃದ್ಧಿಗೊಳಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆಂದರೆ ಮುಜರಾಯಿ ಇಲಾಖೆಯವರು ಅಡ್ಡಿ ಪಡಿಸುತ್ತಿದ್ದಾರೆ. ಬೇರೆ ಕಡೆ ಸ್ವಂತ ಕಟ್ಟಡ ಕಟ್ಟಿಸಬೇಕೆಂದರೆ ನಿವೇಶನದ ಸಮಸ್ಯೆ ಕಾಡುತ್ತಿದೆ. ಪ್ರೌಢ ಶಾಲಾ ಕಟ್ಟಡ ಕುಸಿಯುವ ಹಂತದಲ್ಲಿದೆ, ಕೊಣೆಯಲ್ಲಿ ಮೇಲ್ಛಾವಣಿ ಸೋರುತ್ತಿದೆ ಎಂದು ಶಿಕ್ಷಕರು ಶಾಲೆಯ ಆವರಣದಲ್ಲಿ ಮಕ್ಕಳನ್ನು ಕೂಡಿಸಿ ಪಾಠ ಬೋಧನೆ ಮಾಡುವಂತಾಗಿದೆ. ಇನ್ನೂ ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡದ ಪರಿಸ್ಥಿತಿಯೂ ಇದರ ಹೊರತಾಗಿಲ್ಲ. ಪ್ರಾಥಮಿಕ ಶಾಲಾ ಕಟ್ಟಡವು ಕೂಡ ಶೀಥಿಲಾವಸ್ಥೆ ತಲುಪಿದೆ. ಪ್ರಾಥಮಿಕ ಶಾಲೆಯಲ್ಲಿ 342 ವಿದ್ಯಾರ್ಥಿಗಳು ಜೀವ ಕೈಯಲ್ಲಿ ಹಿಡಿದು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಪ್ರಾಥಮಿಕ ಶಾಲೆಗೆ ಸ್ವಂತ ಕಟ್ಟಡ ಇದೆ ಎನ್ನುವುದೇ ಸಮಾಧಾನದ ಸಂಗತಿ.

ಗ್ರಾಮಸ್ಥರ ಸಾಹಸಕ್ಕೆ ಮೆಚ್ಚುಗೆ:

ಸರ್ಕಾರಿ ನಿವೇಶನವೇ ಇಲ್ಲದ ಊರಲ್ಲಿ, ಯಾರು ಕೂಡ ಭೂಮಿ ನೀಡಲು ಮುಂದಾಗದಿರುವಾಗ ಗ್ರಾಮಸ್ಥರೆಲ್ಲ ಕೂಡಿಕೊಂಡು ಧಾರ್ಮಿಕ ಕಾರ್ಯಕ್ರಮ ಆಯೋಜಿಸುವ ಮೂಲಕ ಅದರಿಂದ ಬರುವ ದೇಣಿಗೆ ಹಣದಲ್ಲಿ ಭೂಮಿ ಖರೀದಿ ಮಾಡಿ ಸರ್ಕಾರಕ್ಕೆ ದಾನ ನೀಡಿ ಸ್ವಂತ ಕಟ್ಟಡ ಹೊಂದಲು ಮುಂದಾಗಿರೋದು ಗಮನ ಸೆಳೆದಿದೆ. ಮುಖಂಡರಾದ ಮಲ್ಲಯ್ಯ ಕರಭಂಟ್ನಾಳ, ಸುಭಾಷ ಹಂಚಿನಾಳ, ಸಿದ್ದಪ್ಪ ಗುಡೆದ್‌, ಘೋಷಯ್ಯ ಆಲಮೇಲ, ಬಾಬುಗೌಡ ಪಾಟೀಲ್‌, ಶ್ರೀಶೈಲ್‌ ಕುರಿ, ಭಗವಂತ ವಗ್ಗೆ, ಬಾಬ ಅಮ್ಮಣ್ಣಿ, ರಮೇಶ ಹೂಗಾರ, ಗಂಗಪ್ಪ ಬಜಂತ್ರಿ, ಶಿವಕಾಂತ ಸಿಂಗೆ, ಮಹಾದೇವ ಕುರಿ, ಸಿದ್ದು ಕಲ್ಲೂರ ಈ ಕೆಲಸಕ್ಕಾಗಿ ಮುಂಚೂಣಿಯಲ್ಲಿದ್ದಾರೆ.

ಘತ್ತರಗಾ ಸರ್ಕಾರಿ ಪ್ರೌಢ ಶಾಲೆಗೆ ಸ್ವಂತ ಕಟ್ಟಡಕ್ಕಾಗಿ ನಿವೇಶನ ಬೇಕಾಗಿದೆ. ನಿವೇಶನ ಖರೀದಿಗಾಗಿ ಪುರಾಣ ಹಚ್ಚಿದ್ದೇವೆ. ಆ ಹಣದಲ್ಲಿ ನಿವೇಶನ ಖರೀದಿ ಮಾಡಿ ಸರ್ಕಾರಕ್ಕೆ ದಾನವಾಗಿ ನೀಡುತ್ತೇವೆ. ನಮ್ಮೂರಿನ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಈ ಕೆಲಸಕ್ಕೆ ಮುಂದಾಗಿದ್ದೇವೆ ಅಂತ ಭಾಗ್ಯವಂತಿ ದೇವಸ್ಥಾನ ಕಮಿಟಿ ಮಾಜಿ ನಿರ್ದೇಶಕ, ವಕೀಲರು ಕೆ.ಜಿ. ಪೂಜಾರಿ ತಿಳಿಸಿದ್ದಾರೆ. 

English ಭಾಷೆ ಜ್ಞಾನದ ಮಾನದಂಡವಲ್ಲ; ಸಂವಹನ ಮಾಧ್ಯಮವಷ್ಟೇ: ಪ್ರಧಾನಿ ಮೋದಿ

ಪ್ರೌಢ ಶಾಲಾ ಕಟ್ಟಡಕ್ಕಾಗಿ ಗ್ರಾಪಂ ಕಡೆಯಿಂದ 5 ಲಕ್ಷ ಹಣ ನೀಡಲು ನಾವು ಸಿದ್ಧರಿದ್ದೇವೆ. ಆದಷ್ಟುಬೇಗ ನಮ್ಮೂರಲ್ಲೊಂದು ಸುಂದರ ಪ್ರೌಢ ಶಾಲಾ ಕಟ್ಟಡ ನಿರ್ಮಾಣವಾಗಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವಂತಾಗಲಿ. ಗ್ರಾಮಸ್ಥರು ಶಾಲಾ ಕಟ್ಟಡಕ್ಕಾಗಿ ಮಾಡುತ್ತಿರುವ ದೇಣಿಗೆ ಸಂಗ್ರಹ ಕಾರ್ಯಕ್ರಮಕ್ಕೆ ನಾವೆಲ್ಲ ತನುಮನಧನದಿಂದ ಸಹಕಾರ ಮಾಡುತ್ತೇವೆ ಅಂತ ಘತ್ತರಗಾ ಗ್ರಾ.ಪಂ ಅಧ್ಯಕ್ಷ ವಿಠ್ಠಲ್‌ ನಾಟೀಕಾರ ತಿಳಿಸಿದ್ದಾರೆ. 

ಮುಜರಾಯಿ ಇಲಾಖೆ ಜಾಗದಲ್ಲಿ ಪ್ರೌಢ ಶಾಲಾ ಕಟ್ಟಡವಿರುವುದಕ್ಕೆ ಸ್ವಲ್ಪ ಸಮಸ್ಯೆಯಾಗಿತ್ತು. ಈಗ ಸಮಸ್ಯೆ ಬಗೆ ಹರಿದಿದೆ. ಗ್ರಾಮಸ್ಥರು ಕೂಡ ಪುರಾಣ ಕಾರ್ಯಕ್ರಮ ಮಾಡುವ ಮೂಲಕ ದೇಣಿಗೆ ಸಂಗ್ರಹಿಸಿ ಭೂಮಿ ಖರೀದಿಗೆ ಸಹಕಾರ ಮಾಡಿ ಸರ್ಕಾರಕ್ಕೆ ದಾನವಾಗಿ ನೀಡುತ್ತಿದ್ದಾರೆ ಎನ್ನುವುದು ನಿಜಕ್ಕೂ ಆಶಾದಾಯಕ ಬೆಳವಣಿಗೆ ಅಂತ ಕಲಬುರಗಿ ಜಿಲ್ಲಾಧಿಕಾರಿ ಯಶವಂತ ಗುರುಕರ್‌ ಹೇಳಿದ್ದಾರೆ. 
 

click me!