ಪದವೀಧರ ಶಿಕ್ಷಕರ ಬಡ್ತಿಗೆ ಇನ್ನೊಂದೇ ಹೆಜ್ಜೆ..!

By Kannadaprabha NewsFirst Published Oct 25, 2022, 9:30 AM IST
Highlights

ಶಿಕ್ಷಣ ಇಲಾಖೆ ಪ್ರಸ್ತಾವನೆಗೆ ಒಪ್ಪಿಗೆ ನೀಡಿದ ಆರ್ಥಿಕ ಇಲಾಖೆ, ಈಗ ನೇಮಕ ನಿಯಮಕ್ಕೆ ತಿದ್ದುಪಡಿ ಮಾತ್ರ ಬಾಕಿ

ಬೆಂಗಳೂರು(ಅ.25):  ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿನ (1ರಿಂದ 5ನೇ ತರಗತಿ) ಪದವೀಧರ ಶಿಕ್ಷಕರಿಗೆ ಸ್ಪರ್ಧಾತ್ಮಕ ಪರೀಕ್ಷೆಯಿಲ್ಲದೆ ಪ್ರತೀ ವರ್ಷ ಶೇ.40ರಷ್ಟು ಪ್ರಮಾಣದ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಹುದ್ದೆಗಳಿಗೆ (6ರಿಂದ 8ನೇ ತರಗತಿ) ಬಡ್ತಿ ದೊರೆಯಲು ಇನ್ನೊಂದೇ ಮೆಟ್ಟಿಲು ಬಾಕಿ! ಈ ಸಂಬಂಧ ಶೇ.40ರಷ್ಟು ಹುದ್ದೆಗಳಿಗೆ ಬಡ್ತಿ ನೀಡಲು ಒಪ್ಪಿಗೆ ಕೋರಿ ಶಿಕ್ಷಣ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆಗೆ ಕಾನೂನು ಇಲಾಖೆ ಬಳಿಕ ಆರ್ಥಿಕ ಇಲಾಖೆಯ ಒಪ್ಪಿಗೆಯೂ ದೊರೆತಿದ್ದು ಇನ್ನು ಶಿಕ್ಷಣ ಇಲಾಖೆಯು ನೇಮಕಾತಿ ನಿಯಮಾವಳಿಗಳಿಗೆ ತಿದ್ದುಪಡಿ ತಂದು ಬಡ್ತಿ ಪ್ರಕ್ರಿಯೆ ಆರಂಭಿಸುವುದಷ್ಟೆ ಬಾಕಿ. ತನ್ಮೂಲಕ ಆ ಎಲ್ಲಾ ಶಿಕ್ಷಕರಿಗೆ ಬಡ್ತಿ ಭಾಗ್ಯ ಮತ್ತಷ್ಟು ಸನಿಹವಾದಂತಾಗಿದೆ.

ರಾಜ್ಯದ ಸರ್ಕಾರಿ ಶಾಲೆಗಳಲ್ಲಿನ ಒಟ್ಟು 1,88,638 ಮಂಜೂರಾದ ಶಿಕ್ಷಕ ಹುದ್ದೆಗಳ ಪೈಕಿ 1.08 ಲಕ್ಷ ಪ್ರಾಥಮಿಕ ಶಾಲಾ ಶಿಕ್ಷಕ ಹುದ್ದೆಗಳಾಗಿವೆ. ಇದರಲ್ಲಿ 52,630 ಹುದ್ದೆಗಳು ಪದವಿಧರ ಶಿಕ್ಷಕರಿಗೆ ಮೀಸಲಾಗಿವೆ. ಈ ಪೈಕಿ ಶೇ.33ರಷ್ಟುಹುದ್ದೆಗಳನ್ನು ಬಡ್ತಿ ಮೂಲಕ, ಉಳಿದ ಶೇ.67ರಷ್ಟುಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅವಕಾಶವಿತ್ತು. ಬಳಿಕ ಇದನ್ನು ಶಿಕ್ಷಣ ಇಲಾಖೆ ಬಡ್ತಿ ಮೂಲಕ ತುಂಬುವ ಹುದ್ದೆಗಳ ಪ್ರಮಾಣವನ್ನು ಶೇ.40ಕ್ಕೆ ಹೆಚ್ಚಿಸಿ ಕಾನೂನು ಇಲಾಖೆ ಮತ್ತು ಹಣಕಾಸು ಇಲಾಖೆಯ ಒಪ್ಪಿಗೆಗೆ ಕಳುಹಿಸಿತ್ತು. ಕಾನೂನು ಇಲಾಖೆಯ ಒಪ್ಪಿಗೆ ದೊರೆತ ಬಳಿಕ ಆರ್ಥಿಕ ಇಲಾಖೆಯೂ ಸಮ್ಮತಿಸಿದೆ. ಇನ್ನು ಬಾಕಿ ಇರುವುದು ಶಿಕ್ಷಣ ಇಲಾಖೆಯು ನೇಮಕಾತಿ ನಿಯಮಾವಳಿಗೆ ತಿದ್ದುಪಡಿ ತಂದು ಬಡ್ತಿ ಪ್ರಕ್ರಿಯೆ ಆರಂಭಿಸುವುದು. ಇದರಿಂದ ಹಾಲಿ ಇರುವ 52 ಸಾವಿರಕ್ಕೂ ಹೆಚ್ಚು ಪದವಿಧರ ಶಿಕ್ಷಕರ ಹುದ್ದೆಗಳ ಪೈಕಿ 20 ಸಾವಿರಕ್ಕೂ ಹೆಚ್ಚು ಹುದ್ದೆಗಳು ಹಾಲಿ ಸೇವೆಯಲ್ಲಿರುವ ಪದವಿಧರ ಶಿಕ್ಷಕರಿಗೇ ದೊರೆಯಲಿವೆ. ಉಳಿದ ಶೇ.60ರಷ್ಟುಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುತ್ತದೆ.

ಬಡ್ತಿ ಉಪನ್ಯಾಸಕರ ವೇತನ ತಾರತಮ್ಯ ನಿವಾರಿಸದ ಸರ್ಕಾರ

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಬಡ್ತಿ ಮೂಲಕ ತುಂಬುವ ಹುದ್ದೆಗಳ ಪ್ರಮಾಣವನ್ನು ಶೇ.50ಕ್ಕೆ ಹೆಚ್ಚಿಸಬೇಕೆಂದು ಹಲವು ವರ್ಷಗಳ ಬೇಡಿಕೆ ಇಟ್ಟಿತ್ತು. ಈ ಬೇಡಿಕೆಗೆ ಭಾಗಶಃ ಒಪ್ಪಿಗೆ ನೀಡಿದ್ದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್‌ ಅವರು 6ರಿಂದ 8ನೇ ತರಗತಿಯಲ್ಲಿ ಖಾಲಿ ಇರುವ ಹುದ್ದೆಗಳಲ್ಲಿ ಶೇ.40ರಷ್ಟು ಹುದ್ದೆಗಳಿಗೆ ಸೇವಾ ಜ್ಯೇಷ್ಠತೆ ಸೇರಿದಂತೆ ಇತರೆ ಮಾನದಂಡಗಳನ್ನು ಪರಿಗಣಿಸಿ ಪದವೀದರ ಶಿಕ್ಷಕರಿಗೆ ಬಡ್ತಿ ನೀಡಲು ನಿರ್ಧಾರ ಕೈಗೊಂಡಿದ್ದರು.

ಇಲಾಖಾ ಅಧಿಕಾರಿಗಳು ಹೇಳುವ ಪ್ರಕಾರ, ಶಿಕ್ಷಕರ ನೇಮಕಾತಿ ನಿಯಮಗಳಿಗೆ ತಿದ್ದುಪಡಿಯಾಗಬೇಕಿದೆ. ಬಳಿಕ ಇದು ಜಾರಿಯಾಗಲಿದೆ. ಸುಮಾರು 75 ಸಾವಿರ ಪದವೀಧರ ಶಿಕ್ಷಕರು ಪ್ರಾಥಮಿಕ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರೆಲ್ಲರಿಗೂ ಒಮ್ಮೆಲೇ ಬಡ್ತಿ ಸಿಗುವುದಿಲ್ಲ. ಪ್ರತಿ ವರ್ಷ ಸೇವಾ ಸೇಷ್ಠತೆ ಹಾಗೂ ಇತರೆ ಮಾನದಂಡಗಳ ಅನುಸಾರ ಬಡ್ತಿ ನೀಡಬೇಕಾಗುತ್ತದೆ.

6ರಿಂದ 8ನೇ ತರಗತಿಗಳಲ್ಲಿನ ಪದವೀಧರ ಶಿಕ್ಷಕ ಹುದ್ದೆಗಳಲ್ಲಿ ಶೇ.40 ಹುದ್ದೆಗಳನ್ನು ಹಾಲಿ ಸೇವಾ ನಿರತ ಪದವೀಧರ ಶಿಕ್ಷಕರಿಗೇ ಬಡ್ತಿ ನೀಡುವ ಇಲಾಖೆಯ ಪ್ರಸ್ತಾವನೆಗೆ ಆರ್ಥಿಕ ಇಲಾಖೆ ಒಪ್ಪಿಗೆ ನೀಡಿರುವುದು ಸಂತಸದ ಸುದ್ದಿ. ನಮ್ಮ ಸಂಘದ ನಿರಂತರ ಪ್ರಯತ್ನಕ್ಕೆ ಸಿಕ್ಕ ಜಯ. ಇದಕ್ಕಾಗಿ ಶಿಕ್ಷಣ ಸಚಿವರಿಗೆ ಸರ್ಕಾರಕ್ಕೆ ಧನ್ಯವಾದ ತಿಳಿಸುತ್ತೇನೆ. ಆದಷ್ಟುಬೇಗೆ ಇಲಾಖೆಯು ನೇಮಕಾತಿ ನಿಯಮಾವಳಿ ತಿದ್ದುಪಡಿ ಮಾಡಿ ಬಡ್ತಿ ಪ್ರಕ್ರಿಯೆ ನಡೆಸಬೇಕು ಅಂತ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ ತಿಳಿಸಿದ್ದಾರೆ. 
 

click me!