NIRF Rankings 2022: ಶಿವಮೊಗ್ಗದ ಕುವೆಂಪು ವಿವಿಗೆ 86ನೇ ರ‍್ಯಾಂಕ್

By Anusha Kb  |  First Published Jul 15, 2022, 10:24 PM IST

2022ರ ಪ್ರತಿಷ್ಠಿತ ರಾಷ್ಟ್ರೀಯ ಶೈಕ್ಷಣಿಕ ಸಂಸ್ಥೆಗಳ ರ‍್ಯಾಂಕಿಂಗ್ (NIRF) ನಲ್ಲಿ ಶಿವಮೊಗ್ಗ ಜಿಲ್ಲೆಯ ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯವು 86ನೇ ರ‍್ಯಾಂಕ್ ಗಳಿಸುವುದರೊಂದಿಗೆ ಸತತ ಐದನೇ ವರ್ಷ ದೇಶದ ಟಾಪ್ 100ರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.


ಶಿವಮೊಗ್ಗ: ನವದೆಹಲಿಯಲ್ಲಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಧರ್ಮೇಂದ್ರ ಪ್ರಧಾನ್ ಅಂತರ್ಜಾಲದಲ್ಲಿ ಬಿಡುಗಡೆಗೊಳಿಸಿರುವ 2022ರ ಪ್ರತಿಷ್ಠಿತ ರಾಷ್ಟ್ರೀಯ ಶೈಕ್ಷಣಿಕ ಸಂಸ್ಥೆಗಳ ರ‍್ಯಾಂಕಿಂಗ್ (NIRF) ನಲ್ಲಿ ಶಿವಮೊಗ್ಗ ಜಿಲ್ಲೆಯ ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯವು 86ನೇ ರ‍್ಯಾಂಕ್ ಗಳಿಸುವುದರೊಂದಿಗೆ ಸತತ ಐದನೇ ವರ್ಷ ದೇಶದ ಟಾಪ್ 100ರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ರಾಜ್ಯಗಳ ಸಾಂಪ್ರದಾಯಿಕ ವಿ.ವಿ.ಗಳ ಪೈಕಿ ಕಳೆದ ಬಾರಿಯಂತೆಯೇ ಮೂರನೇ ಸ್ಥಾನದಲ್ಲಿ ಮುಂದುವರೆದಿದೆ. 

ದೇಶದ 4100ಕ್ಕೂ ಹೆಚ್ಚು ಶೈಕ್ಷಣಿಕ ಸಂಸ್ಥೆಗಳು ಭಾಗವಹಿಸಿದ್ದ ಈ ರ‍್ಯಾಂಕಿಂಗ್ ಪಟ್ಟಿಯಲ್ಲಿ ಕುವೆಂಪು ವಿ.ವಿ. 42.44 ಅಂಕಗಳನ್ನು ಪಡೆಯುವ ಮೂಲಕ ಇಡೀ ದೇಶದ ವಿಶ್ವವಿದ್ಯಾಲಯಗಳ ಪೈಕಿ 86ನೇ ಸ್ಥಾನ ಪಡೆದಿದೆ. 2017ರಲ್ಲಿ 150ರಿಂದ 200ರ ವರ್ಗದಲ್ಲಿ ಸ್ಥಾನ ಪಡೆದಿದ್ದ ವಿಶ್ವವಿದ್ಯಾಲಯ, 2018ರಲ್ಲಿ ಭಾರಿ ಜಿಗಿತ ಕಂಡಿದ್ದು 78ನೇ ಸ್ಥಾನಕ್ಕೇರಿತ್ತು. ಪ್ರಸಕ್ತ ಸಾಲಿನಲ್ಲಿ 86ನೇ ರ‍್ಯಾಂಕ್ ಪಡೆಯುವುದರೊಂದಿಗೆ, ಕೋವಿಡ್-19 ಮತ್ತು ವಿವಿಯ ಸುಮಾರು 10 ಪ್ರಾಧ್ಯಾಪಕರು ನಿವೃತ್ತರಾದ ಕಾರಣದಿಂದ ಉನ್ನತ ಶಿಕ್ಷಣದ ಚಟುವಟಿಕೆಗಳಿಗೆ ಹಿನ್ನೆಡೆಯಾಗಿದ್ದರೂ, ಟಾಪ್ 100ರೊಳಗೆ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

Tap to resize

Latest Videos

ಕುವೆಂಪು ವಿವಿ ಘಟಿಕೋತ್ಸವ: ಸಮಸ್ಯೆ ಪರಿಹಾರಕ್ಕೆ ಬದ್ಧತೆಯ ವಿದ್ಯಾವಂತರು ಅವಶ್ಯ: ಡಾ.ಶ್ರೀದೇವಿ. ಸಿಂಗ್‌

ಕೇಂದ್ರೀಯ ವಿಶ್ವವಿದ್ಯಾಲಯಗಳು, ಕೇಂದ್ರ ಸರ್ಕಾರದ ಉನ್ನತ ಶೈಕ್ಷಣಿಕ ಸಂಸ್ಥೆಗಳು, ಎಂಜಿನಿಯರಿಂಗ್‌ನಂತಹ ವೃತ್ತಿಪರ ಕೋರ್ಸ್‌ಗಳನ್ನು ನಡೆಸುವ ಖಾಸಗಿ ವಿಶ್ವವಿದ್ಯಾಲಯಗಳು, ಡೀಮ್ಡ್ ವಿಶ್ವವಿದ್ಯಾಲಯಗಳು ಸೇರಿದಂತೆ ದೇಶಾದ್ಯಂತ (4100) ಶಿಕ್ಷಣ ಸಂಸ್ಥೆಗಳು ಈ ಶ್ರೇಣೀಕರಣಕ್ಕೆ ಒಳಪಟ್ಟಿವೆ. ಕರ್ನಾಟಕದ ವಿಶ್ವವಿದ್ಯಾಲಯಗಳ ಪೈಕಿ ಮೈಸೂರು ವಿಶ್ವವಿದ್ಯಾಲಯ ಮತ್ತು ಬೆಂಗಳೂರು ವಿಶ್ವವಿದ್ಯಾಲಯ ಕ್ರಮವಾಗಿ 33 ಮತ್ತು 64ನೇ ರ‍್ಯಾಂಕ್ ಪಡೆಯುವುದರೊಂದಿಗೆ ರಾಜ್ಯಮಟ್ಟದಲ್ಲಿ ಮೊದಲೆರಡು ಸ್ಥಾನ ಪಡೆದಿವೆ. 

ಒಂದೇ ದಿನ ಕುವೆಂವು ವಿವಿ 2 ಘಟಿಕೋತ್ಸವ: ಇತಿಹಾಸದಲ್ಲೇ ಇದೇ ಮೊದಲು..!

ದೇಶದ ಶೈಕ್ಷಣಿಕ ಸಂಸ್ಥೆಗಳ ಗುಣಮಟ್ಟವನ್ನು ಉತ್ತಮಪಡಿಸಲು ಮತ್ತು ಒಟ್ಟಾರೆ ಉನ್ನತ ಶಿಕ್ಷಣಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ 2015ರಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಎನ್‌ಐಆರ್‌ಎಫ್ ರ‍್ಯಾಂಕಿಂಗ್ ಪ್ರಾರಂಭಿಸಿದ್ದು, ಈಗ ಏಳನೇ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ. ಎಂಜಿನಿಯರಿಂಗ್, ಮ್ಯಾನೇಜ್‌ಮೆಂಟ್, ವೈದ್ಯಕೀಯ, ವಾಸ್ತುಶಿಲ್ಪ, ಕಾನೂನು ವಿಷಯಗಳ ಶಿಕ್ಷಣ ಸಂಸ್ಥೆಗಳ ಜೊತೆಗೆ ವಿಶ್ವವಿದ್ಯಾಲಯಗಳ ಶ್ರೇಣೀಕರಣವನ್ನು ಎನ್‌ಐಆರ್‌ಎಫ್ ಅಡಿಯಲ್ಲಿ ಮಾನವ ಸಂಪನ್ಮೂಲ ಇಲಾಖೆ ಪ್ರತಿ ವರ್ಷ ಕೈಗೊಳ್ಳುತ್ತದೆ.

ವಿಶ್ವವಿದ್ಯಾಲಯದ ರ‍್ಯಾಂಕಿಂಗ್ ಬಗ್ಗೆ ಪ್ರತಿಕ್ರಿಯಿಸಿರುವ ಕುಲಪತಿ ಪ್ರೊ. ಬಿ.ಪಿ ವೀರಭದ್ರಪ್ಪ (BPV), ಎನ್ ಐ ಆರ್ ಎಫ್ ಮೌಲ್ಯಮಾಪನದ ಅವಧಿಯಲ್ಲಿ ಕೋವಿಡ್-19ನಂತಹ ಮಹಾಮಾರಿ ಶೈಕ್ಷಣಿಕ ಸಂಸ್ಥೆಗಳನ್ನು ಕಳೆಗುಂದಿಸಿತ್ತು. ಜೊತೆಗೆ ವಿವಿಯ ಕಲಾ, ವಿಜ್ಞಾನ ವಿಭಾಗಗಳಲ್ಲಿ ಸುಮಾರು 10 ಮಂದಿ ಹಿರಿಯ ಪ್ರಾಧ್ಯಾಪಕರು ಸೇವೆಯಿಂದ ನಿವೃತ್ತರಾಗಿದ್ದು, ಅವರ ಸಂಶೋಧನಾ ಉತ್ಪಾದಕತೆ ಮತ್ತು ಕೊಡುಗೆಗಳು ರ‍್ಯಾಂಕಿಂಗ್ ನಿರ್ಣಯದಲ್ಲಿ ಪರಿಗಣನೆಯಾಗಿಲ್ಲ. ಆದಾಗ್ಯೂ ವಿವಿಯು ಅಗ್ರ 100 ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನಪಡೆದಿದ್ದು ಸಂತಸ ತಂದಿದೆ ಎಂದು ತಿಳಿಸಿದರು.

ಕುಲಸಚಿವರಾದ ಜಿ. ಅನುರಾಧ ಪ್ರತಿಕ್ರಿಯಿಸಿ, ದೇಶದ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳೊಂದಿಗೆ ಸ್ಪರ್ಧಿಸಿ ಗ್ರಾಮೀಣ ಭಾಗದ ಸರ್ಕಾರಿ ಸಂಯೋಜಿತ ವಿಶ್ವವಿದ್ಯಾಲಯ ಹಾಗೂ ಕೇವಲ  ಮೂರು ದಶಕಗಳ ಹಿನ್ನಲೆಯುಳ್ಳ ಸಂಸ್ಥೆಯೊಂದು ಸತತ ನಾಲ್ಕು ವರ್ಷಗಳಿಂದ ನೂರರ ಪಟ್ಟಿಯೊಳಗೆ ಸ್ಥಾನ ಪಡೆಯುತ್ತಾ ಬಂದಿರುವುದು ಸಂತಸದ ವಿಚಾರ. ಶೈಕ್ಷಣಿಕ, ಆಡಳಿತಾತ್ಮಕ ವಿಚಾರಗಳಲ್ಲಿ ಇನ್ನಷ್ಟು ಸುಧಾರಣೆ ತಂದು ರ‍್ಯಾಂಕಿಂಗ್ ಉತ್ತಮಪಡಿಸಲಾಗುವುದು ಎಂದಿದ್ದಾರೆ. 

ಎನ್‌ಐಆರ್‌ಎಫ್ ರ‍್ಯಾಂಕಿಂಗ್ ಮಾನದಂಡಗಳು: 
ರಾಷ್ಟ್ರೀಯ ಶೈಕ್ಷಣಿಕ ಸಂಸ್ಥೆಗಳ ರ‍್ಯಾಂಕಿಂಗ್ ಫ್ರೇಂವರ್ಕ್ ಐದು ಪ್ರಮುಖ ಮಾನದಂಡಗಳ ಆಧಾರದ ಮೇಲೆ ಶ್ರೇಣೀಕರಣ ನೀಡುತ್ತದೆ. ರ‍್ಯಾಂಕಿಂಗ್‌ಗೆ ಒಳಪಡುವ ಶೈಕ್ಷಣಿಕ ಸಂಸ್ಥೆಗಳಲ್ಲಿನ ಬೋಧನೆ, ಕಲಿಕೆಗಾಗಿ ಅಸ್ತಿತ್ವದಲ್ಲಿರುವ ಸಂಪನ್ಮೂಲಗಳ ಸೌಲಭ್ಯ, ಸಂಸ್ಥೆಗಳಲ್ಲಿ ನಡೆಯುತ್ತಿರುವ ಸಂಶೋಧನೆ ಮತ್ತು ವೃತ್ತಿಪರ ಚಟುವಟಿಕೆಗಳು, ಕೋರ್ಸ್‌ಗಳ ಮೂಲಕ ಸಂಸ್ಥೆ ಸೃಷ್ಟಿಸುತ್ತಿರುವ ಉದ್ಯೋಗಾವಕಾಶ ಮತ್ತು ಪರೀಕ್ಷೆಯ ಉತ್ತೀರ್ಣದ ಪ್ರಮಾಣ ಸೇರಿದಂತೆ ಉನ್ನತ ಶಿಕ್ಷಣದ ಫಲಿತಾಂಶ, ಶೈಕ್ಷಣಿಕ ಸಂಸ್ಥೆಯ ಮೂಲಕ ನಡೆಯುತ್ತಿರುವ ವಿಸ್ತರಣೆ ಮತ್ತು ಸಾಮಾಜಿಕ ಒಳಗೊಳ್ಳುವಿಕೆಯ ಚಟುವಟಿಕೆಗಳು ಮತ್ತು ಸಂಸ್ಥೆಯ ಕುರಿತು ಸಿಬ್ಬಂದಿ, ಸಂಶೋಧಕರು, ಸಾರ್ವಜನಿಕರ ಗ್ರಹಿಕೆ ಮತ್ತು ಅಭಿಪ್ರಾಯ, ಈ ಐದು ಮಾನದಂಡಗಳ ಮೂಲಕ ಮೌಲ್ಯಮಾಪನ ಮಾಡಿ ಶ್ರೇಣೀಕರಣ ನೀಡಲಾಗುತ್ತದೆ. 

ರಾಜ್ಯದ ಉನ್ನತ ಶಿಕ್ಷಣದ ಶೈಕ್ಷಣಿಕ ಸಂಸ್ಥೆಗಳ ಪೈಕಿ ಕುವೆಂಪು ವಿಶ್ವವಿದ್ಯಾಲಯ 10ನೇ ಸ್ಥಾನ ಪಡೆದಿದೆ. ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (1), ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (7), ಮೈಸೂರು ವಿಶ್ವವಿದ್ಯಾಲಯ (33), ಮೈಸೂರಿನ ಜೆ.ಎಸ್.ಎಸ್. ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಅಂಡ್ ರಿಸರ್ಚ್ (34), ಬೆಂಗಳೂರು ವಿಶ್ವವಿದ್ಯಾಲಯ (64), ಬೆಂಗಳೂರಿನ ಕ್ರೆಸ್ಟ್ ವಿವಿ (71), ಮಂಗಳೂರಿನ ನಿಟ್ಟೆ ತಾಂತ್ರಿಕ ವಿಶ್ವವಿದ್ಯಾಲಯ (75) ಸ್ಥಾನ ಪಡೆದಿವೆ. ಇನ್ನುಳಿದಂತೆ ವಿಶ್ವೇಶ್ವರಾಯ ತಾಂತ್ರಿಕ ವಿಶ್ವವಿದ್ಯಾಲಯ (72), ಮತ್ತು ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯ (79), ಕೆಎಲ್‌ಯ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್ (88), ಮಂಗಳೂರಿನ ಯೆನಪೊಯ ವಿವಿಗಳು (97) ಟಾಪ್ 100ರಲ್ಲಿರುವ ಕರ್ನಾಟಕದ ಇತರೆ ಶೈಕ್ಷಣಿಕ ಸಂಸ್ಥೆಗಳಾಗಿವೆ.

click me!