ಮಳೆ ಬಂದರೆ ಸಾಕು ವಿದ್ಯಾರ್ಥಿಗಳು ಕುಳಿತುಕೊಳ್ಳಲು ಜಾಗವಿಲ್ಲದೆ ಬ್ಯಾಗ್‌ಗಳನ್ನು ತೆಗೆದುಕೊಂಡು ಅತ್ತಿಂದಿತ್ತ ಓಡಾಡುವುದು ಸಾಮಾನ್ಯ. ಇದೀಗ ಮಳೆಯಿಂದ ಮಕ್ಕಳಿಗಾಗಿರುವ ಸಮಸ್ಯೆಯೂ ಅದೆ.
ಶಶಿಕುಮಾರ ಪತಂಗೆ
ಅಳ್ನಾವರ(ಜು.15): ಸರ್ ರೀ.. ನಮ್ಮ ಪುಸ್ತಕ ಮ್ಯಾಲ ನೀರ ಸೋರಾಕತೈತ್ರಿ.. ಪಾಠಿ ಚೀಲಾದಾಗ ನೀರ ಹೋಗಾತವರೀ.. ಕುಂಡ್ರಾಕ ಜಾಗಾ ಇಲ್ರಿ.. ಶಾಲಿವೊಳಗೆ ಮಳಿ ನೀರ ಸೋರಾಕತೈತ್ರಿ...! ಮೈ ನಡಗುತ್ತಲೇ ಈ ಮಾತುಗಳು ತಾಲೂಕಿನ ಹುಲಿಕೇರಿಯ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಂದ ಕೇಳಿ ಬರುತ್ತಿದೆ. 1ರಿಂದ 8ನೇ ತರಗತಿ ವರೆಗೆ ಓದಲು ಅವಕಾಶವಿರುವ ಈ ಶಾಲೆಯಲ್ಲಿ 160 ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದಾರೆ. ಶಾಲೆಯಲ್ಲಿ 9 ಕೊಠಡಿಗಳಿದ್ದು, ಈ ಪೈಕಿ ಏಳು ಕೊಠಡಿಗಳು ಮಳೆ ಬಂದಾಗೊಮ್ಮೆ ಬಹುಪಾಲು ನೀರಿನಿಂದ ಆವರಿಸಿಕೊಂಡಿರುತ್ತವೆ. ಮಳೆ ಬಂದರೆ ಸಾಕು ವಿದ್ಯಾರ್ಥಿಗಳು ಕುಳಿತುಕೊಳ್ಳಲು ಜಾಗವಿಲ್ಲದೆ ಬ್ಯಾಗ್‌ಗಳನ್ನು ತೆಗೆದುಕೊಂಡು ಅತ್ತಿಂದಿತ್ತ ಓಡಾಡುವುದು ಸಾಮಾನ್ಯ. ಇದೀಗ ಮಳೆಯಿಂದ ಮಕ್ಕಳಿಗಾಗಿರುವ ಸಮಸ್ಯೆಯೂ ಅದೆ.
undefined
ಕಳೆದ 5 ತಿಂಗಳ ಹಿಂದೆಯಷ್ಟೆ ಎರಡು ಶಾಲಾ ಕೊಠಡಿಗಳ ಉದ್ಘಾಟನೆಯಾಗಿವೆ. ಆದರೆ ಇದೀಗ ಅವುಗಳಲ್ಲಿಯೂ ಕೂಡ ಮೇಲ್ಚಾವಣಿಯಿಂದ ನೀರು ಸೋರುತ್ತಿವೆ. ತಾಲೂಕು ಪಂಚಾಯಿತಿಯಿಂದ 1.5 ಲಕ್ಷ ವೆಚ್ಚದಲ್ಲಿ ಮೇಲ್ಚಾವಣಿಗೆ ಶೀಟ್‌ಗಳನ್ನು ಹಾಕಲಾಗಿದ್ದು ಅವು ಕೂಡ ಹಾಕಿದ ಎರಡು ತಿಂಗಳಿಗೆ ಹಾರಿ ಹೋಗಿವೆ. ಅಷ್ಟೊಂದು ಕಳಪೆ ಮಟ್ಟದ ಕೆಲಸ ಮಾಡಿರುವುದು ಕಣ್ಣಾರೆ ಕಾಣತ್ತಿದೆ. 2 ಲಕ್ಷ ವೆಚ್ಚದಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣವಾಗಿದ್ದರೂ ಆ ಕಾಮಗಾರಿಯೂ ಸರಿಯಾಗಿಯಾಗಿಲ್ಲ. ಆಟದ ಮೈದಾನವಂತೂ ಗುಂಡಿಗಳಿಂದ ಕೂಡಿದೆ ಎಂದು ಮಕ್ಕಳು ಹಾಗೂ ಅವರ ಪಾಲಕರು ದೂರುತ್ತಾರೆ.
ಬೀದರ್: ಶಾಲಾ ಕೋಣೆ ಕುಸಿತ, ತಪ್ಪಿದ ಭಾರೀ ಅನಾಹುತ
ದುರಸ್ತಿಯಲ್ಲಿನ ಕಟ್ಟಡ:
ಶಾಲಾ ಆವರಣದಲ್ಲಿಯೇ ಎರಡು ಕಟ್ಟಡಗಳು ದುಸ್ಥಿತಿಯಲ್ಲಿದ್ದು ಬೀಳುವಂತ ಹಂತದಲ್ಲಿವೆ. ಒಂದು ಕಟ್ಟಡವಂತೂ ಅರ್ಧದಷ್ಟು ಬಿದ್ದು ಹೋಗಿದೆ. ಆದರೂ ಕಟ್ಟಡಗಳನ್ನು ಪೂರ್ಣವಾಗಿ ತೆರವುಗೊಳಿಸಲು ಪರವಾನಗಿ ಕೇಳಿದರೆ ಇಲಾಖೆಯೂ ನೀಡುತ್ತಿಲ್ಲ. ಹೀಗಾಗಿ ಮಕ್ಕಳು, ಶಿಕ್ಷಕರಿಗೆ ತಲೆನೋವಾಗಿ ಪರಿಣಮಿಸಿದೆ.
ಶಾಲೆಗಳ ಕಟ್ಟಡದ ಗುಣಮಟ್ಟ ತೀರಾ ಹದಗೆಟ್ಟಿದೆ. ಸರ್ಕಾರದ ಹಣದ ದುರುಪಯೋಗವಾಗದಂತೆ ಗುಣಮಟ್ಟದ ಕೆಲಸವಾಗಬೇಕು. ಶೈಕ್ಷಣಿಕವಾಗಿ ಶಾಲೆಯ ಅಭಿವೃದ್ಧಿಯಾಗಬೇಕು. ವಿದ್ಯಾರ್ಥಿಗಳಿಗೆ ಮೂಲಭೂತ ಸೌವಲತ್ತುಗಳು ದೊರೆಯಬೇಕು ಎಂದು ಗ್ರಾಮಸ್ಥ ಮಂಜುನಾಥ ಬೆಳಗಾವಿ ಆಗ್ರಹಿಸಿತ್ತಾರೆ.
ತಾಲೂಕಿನ ಬಹುತೇಕ ಶಾಲೆಗಳು ಅತಿಯಾದ ಮಳೆಯಿಂದಾಗಿ ಸೋರುತ್ತಿವೆ. ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲು ಶಿಕ್ಷಕರಿಗೆ ತಿಳಿಸಿದ್ದು, ಹುಲಿಕೇರಿ ಶಾಲೆಯ ಸ್ಥಿತಿಗತಿಯನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಶೀಘ್ರವಾಗಿ ಪರ್ಯಾಯ ವ್ಯವಸ್ಥೆಯನ್ನು ಮಾಡಲಾಗುವುದು ಅಂತ ಧಾರವಾಡ ಗ್ರಾಮೀಣ ಬಿಇಒ ಉಮೇಶ ಬೊಮ್ಮಕ್ಕನವರ ತಿಳಿಸಿದ್ದಾರೆ.