ಗವಿಮಠಕ್ಕೆ ಹರಿದು ಬರುತ್ತಿರುವ ನೆರವು: 10 ಸಾವಿರ ವಿದ್ಯಾರ್ಥಿಗಳ ಪ್ರಸಾದ, ವಸತಿನಿಲಯ?

By Kannadaprabha News  |  First Published Jul 2, 2022, 9:51 PM IST

*   ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳ ಆಧರಿಸಿ ಯೋಜನೆ ವಿಸ್ತರಿಸಲು ಚಿಂತನೆ
*  5 ಸಾವಿರ ವಿದ್ಯಾರ್ಥಿಗಳಿಗೆ ಪ್ರಸಾದ ಮತ್ತು ವಸತಿನಿಲಯ ನಿರ್ಮಾಣಕ್ಕೆ ಗವಿ ಶ್ರೀ ಶಂಕುಸ್ಥಾಪನೆ
*  ನೌಕರರ ಒಂದು ದಿನದ ವೇತನ ?


ಸೋಮರಡ್ಡಿ ಅಳವಂಡಿ

ಕೊಪ್ಪಳ(ಜು.02):  ಗವಿಮಠ ಆವರಣದಲ್ಲಿ 5 ಸಾವಿರ ವಿದ್ಯಾರ್ಥಿಗಳಿಗೆ ಪ್ರಸಾದ ಮತ್ತು ವಸತಿನಿಲಯ ನಿರ್ಮಾಣಕ್ಕೆ ಗವಿಸಿದ್ಧೇಶ್ವರ ಸ್ವಾಮಿಗಳು ಶಂಕುಸ್ಥಾಪನೆಯನ್ನು ಇತ್ತೀಚೆಗೆ ನೆರವೇರಿಸಿದ್ದರು. ಆದರೆ, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿ ಸಮಸ್ಯೆಯಾಗುವ ಸಾಧ್ಯತೆ ಇರುವುದರಿಂದ 10 ಸಾವಿರ ವಿದ್ಯಾರ್ಥಿಗಳ ಪ್ರಸಾದ ಮತ್ತು ವಸತಿನಿಲಯ ನಿರ್ಮಾಣಕ್ಕೆ ಚಿಂತನೆ ನಡೆಸಿದ್ದಾರೆ.

Latest Videos

undefined

ಸದ್ಯದ 5 ಸಾವಿರ ವಿದ್ಯಾರ್ಥಿಗಳ ಪ್ರಸಾದ, ವಸತಿನಿಲಯಕ್ಕೆ ಸುಮಾರು .6- 9 ಕೋಟಿ ವೆಚ್ಚವಾಗುತ್ತದೆ ಎಂದು ಅಂದಾಜಿಸಲಾಗಿತ್ತು. ಆದರೆ, ರಾಜ್ಯ ಸರ್ಕಾರವೇ .10 ಕೋಟಿ ನೆರವು ಘೋಷಣೆ ಮಾಡಿದೆ ಹಾಗೂ ಖಾಸಗಿಯಾಗಿ ಸುಮಾರು .4- 5 ಕೋಟಿ ಹರಿದುಬಂದಿದೆ. ಇನ್ನೂ ಹರಿದುಬರುತ್ತಲೇ ಇರುವುದರಿಂದ ಭವಿಷ್ಯದ ದಿನಗಳನ್ನು ಗಮನದಲ್ಲಿಟ್ಟುಕೊಂಡು 10 ಸಾವಿರ ವಿದ್ಯಾರ್ಥಿಗಳ ಪ್ರಸಾದ ಮತ್ತು ವಸತಿನಿಲಯ ನಿರ್ಮಾಣಕ್ಕೆ ಶ್ರೀಗಳು ಚಿಂತನೆಯನ್ನು ಮಾಡುತ್ತಿದ್ದಾರೆ.

ಕೊಪ್ಪಳ ಗವಿಮಠಕ್ಕೆ ಅಮೆರಿಕದ 10ನೇ ತರಗತಿ ವಿದ್ಯಾರ್ಥಿ 50,000 ನೆರವು

ಸದ್ಯಕ್ಯೆ 5 ಸಾವಿರ ವಿದ್ಯಾರ್ಥಿಗಳ ವಾಸ್ತವ್ಯಕ್ಕೆ ಅನುಕೂಲವಾಗುವ ಕಟ್ಟಡವನ್ನು ವರ್ಷದೊಳಗಾಗಿಯೇ ನಿರ್ಮಾಣ ಮಾಡಿ ಮುಂದಿನ ವರ್ಷಗಳಲ್ಲಿ ಅದನ್ನು ವಿಸ್ತರಿಸಿ 10 ಸಾವಿರ ವಿದ್ಯಾರ್ಥಿಗಳ ವಸತಿಗೆ ಅನುಕೂಲವಾಗುವಂತೆ ಯೋಜನೆಯನ್ನು ರೂಪಿಸುತ್ತಿದ್ದಾರೆ.

ಮೂರೂವರೆ ಸಾವಿರ ವಿದ್ಯಾರ್ಥಿಗಳು:

ಈಗಾಗಲೇ ಗವಿಮಠದ ಉಚಿತ ಪ್ರಸಾದ ಮತ್ತು ವಸತಿನಿಲಯದಲ್ಲಿ ಸುಮಾರು ಮೂರುವರೆ ಸಾವಿರ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಇನ್ನು ಪ್ರವೇಶಕ್ಕಾಗಿ ಕ್ಯೂನಲ್ಲಿ ಅನೇಕ ವಿದ್ಯಾರ್ಥಿಗಳು ಇದ್ದಾರೆ. ಪ್ರಸಕ್ತ ವರ್ಷವೇ ಬರೋಬ್ಬರಿ ಒಂದೂವರೆ ಸಾವಿರ ವಿದ್ಯಾರ್ಥಿಗಳು ನೂತನವಾಗಿ ಪ್ರವೇಶ ಪಡೆದಿದ್ದಾರೆ. ಮುಂದಿನ ವರ್ಷ ಹೀಗೆ ಪ್ರವೇಶ ಪಡೆಯುವ ಮಕ್ಕಳ ಸಂಖ್ಯೆ 2-3 ಸಾವಿರ ಆಗುವ ನಿರೀಕ್ಷೆಯಿದೆ. ವಿವಿಧೆಡೆಯಿಂದಲೂ ಇಲ್ಲಿಗೆ ವಿದ್ಯಾರ್ಥಿಗಳನ್ನು ಸೇರ್ಪಡೆ ಮಾಡುವ ಕುರಿತು ವಿಚಾರಣೆ ಮಾಡುತ್ತಿದ್ದಾರೆ. ಇದೆಲ್ಲವನ್ನು ಗಮನಿಸಿ ಈಗಿರುವ 2 ಸಾವಿರ ವಿದ್ಯಾರ್ಥಿಗಳ ವಸತಿ ಮತ್ತು ಪ್ರಸಾದ ನಿಲಯದ ಜತೆಗೆ 5 ಸಾವಿರ ವಿದ್ಯಾರ್ಥಿಗಳ ಪ್ರತ್ಯೇಕ ವಸತಿನಿಲಯ ನಿರ್ಮಾಣ ಮಾಡಬೇಕು ಎನ್ನುವ ಚಿಂತನೆಯನ್ನು ಮಾರ್ಪಾಡು ಮಾಡಿ 10 ಸಾವಿರ ವಿದ್ಯಾರ್ಥಿಗಳ ವಸತಿ ಮತ್ತು ಪ್ರಸಾದನಿಲಯದ ಯೋಜನೆ ರೂಪಿಸಲಾಗುತ್ತಿದೆ.

ಬಡ ಮಕ್ಕಳನ್ನ ಓದಿಸಲು ಗವಿಸಿದ್ಧ ನನ್ನ ಜೋಳಿಗೆಗೆ ಶಕ್ತಿ ಕೊಡಲಿ: ಕಣ್ಣೀರು ಹಾಕಿದ ಗವಿಮಠ ಶ್ರೀ

ಜಾಗದ್ದೆ ದೊಡ್ಡ ಸಮಸ್ಯೆ:

ಈಗಿರುವ ಮಠದ ಆವರಣದಲ್ಲಿ 5 ಸಾವಿರ ವಿದ್ಯಾರ್ಥಿಗಳ ವಸತಿನಿಲಯ ನಿರ್ಮಾಣ ಮಾಡಲು ಮಾತ್ರ ಜಾಗ ಸರಿದೂಗಿಸಬಹುದು. ಆದರೆ, 10 ಸಾವಿರ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಕಟ್ಟಡ ನಿರ್ಮಾಣಕ್ಕೆ ಗವಿಮಠದ ಆವರಣದಲ್ಲಿ ಜಾಗದ ಸಮಸ್ಯೆಯಾಗುತ್ತದೆ. ಹೀಗಾಗಿ ಕೋಳೂರು ಅಥವಾ ಹಲಿಗೇರಿ ಬಳಿ ಸುಮಾರು 10 ಸಾವಿರ ವಿದ್ಯಾರ್ಥಿಗಳ ವಸತಿ ಮತ್ತು ಪ್ರಸಾದ ನಿಲಯ ನಿರ್ಮಾಣದ ಚಿಂತನೆ ನಡೆದಿದ್ದು, ಇನ್ನು ನಾಲ್ಕಾರು ದಿನಗಳಲ್ಲಿ ಈ ಕುರಿತು ಶ್ರೀಗಳು ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.

ನೌಕರರ ಒಂದು ದಿನದ ವೇತನ ?

ಜಿಲ್ಲೆಯಲ್ಲಿರುವ ರಾಜ್ಯ ಸರ್ಕಾರಿ ನೌಕರರು ತಮ್ಮ ಒಂದು ದಿನದ ವೇತನವನ್ನು ಗವಿಮಠದ ಪ್ರಸಾದನಿಲಯ ನಿರ್ಮಾಣಕ್ಕೆ ನೀಡಲು ಚಿಂತನೆ ನಡೆಸಿದ್ದಾರೆ. ಈ ಕುರಿತು ನೌಕರರ ವಲಯದ ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಚರ್ಚೆಯಾಗುತ್ತಿದ್ದು, ಬಹುತೇಕರು ಸಮ್ಮತಿ ಸೂಚಿಸಿದ್ದಾರೆ. ಈ ನಡುವೆ ರಾಜ್ಯ ಸರ್ಕಾರ ನೌಕರರ ಸಂಘದಲ್ಲಿಯೂ ರಾಜ್ಯಾದ್ಯಂತ ಸರ್ಕಾರಿ ನೌಕರರ ಒಂದು ದಿನದ ವೇತನ ನೀಡುವ ಕುರಿತು ಚಿಂತನೆ ನಡೆದಿದೆ. ಇಡೀ ಪ್ರಸಾದ ನಿಲಯದ ನಿರ್ಮಾಣದ ಹೊಣೆ ಹೊರುವ ಸಾಧ್ಯತೆ ಇದೆ ಎನ್ನಲಾಗಿದೆ.
 

click me!