ಎನ್ಇಪಿ ಜಾರಿಯಿಂದ ಅಗ್ರಸ್ಥಾನಕ್ಕೆ ಭಾರತ : ಅಶ್ವತ್ಥನಾರಾಯಣ

By Suvarna News  |  First Published Nov 13, 2021, 3:05 PM IST
  • ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಫಲವಾಗಿ ಇನ್ನು 20 ವರ್ಷಗಳಲ್ಲಿ ಭಾರತವು ಜಗತ್ತಿನಲ್ಲಿ ಅಗ್ರ ಸ್ಥಾನಕ್ಕೇರಲಿದೆ
  • ದೇಶದ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳಿಗೆ ರಾಮಬಾಣವಾಗಿದೆ 

ಬೆಂಗಳೂರು (ನ.13): ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ (NEP) ಫಲವಾಗಿ ಇನ್ನು 20 ವರ್ಷಗಳಲ್ಲಿ ಭಾರತವು ಜಗತ್ತಿನಲ್ಲಿ ಅಗ್ರ ಸ್ಥಾನಕ್ಕೇರಲಿದ್ದು, ದೇಶದ ರಾಜಕೀಯ (Politics), ಆರ್ಥಿಕ ಮತ್ತು ಸಾಮಾಜಿಕ (Social) ಸಮಸ್ಯೆಗಳಿಗೆ ರಾಮಬಾಣವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ (Dr CN Ashwarth Narayan) ಪ್ರತಿಪಾದಿಸಿದ್ದಾರೆ. 

ರಾಜ್ಯ ಸರಕಾರ (Karnataka govt) ಮತ್ತು ಅಂತಾರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ (ಐಎಸ್ಡಿಸಿ) ಜಂಟಿಯಾಗಿ ಎನ್ಇಪಿ ಕುರಿತು ಇಂದು ಬೆಂಗಳೂರಿನಲ್ಲಿ (Bengaluru) ಏರ್ಪಡಿಸಿದ್ದ ಪ್ರಪ್ರಥಮ ಸಮಾವೇಶ `ಉನ್ನತ ಶಿಕ್ಷಣ: ಭವಿಷ್ಯದ ಕಾರ್ಯತಂತ್ರ’ವನ್ನು ಉದ್ದೇಶಿಸಿ  ಅವರು ಮಾತನಾಡಿದರು. 

Tap to resize

Latest Videos

undefined

ಶಿಕ್ಷಣವನ್ನು (Education) ಬದಲಿಸುವ ಮೂಲಕ ದೇಶವನ್ನು ಬದಲಿಸಬಹುದು ಎನ್ನುವುದು ಪ್ರಧಾನಿ ಮೋದಿಯವರಿಗೆ ಗೊತ್ತಾಗಿದೆ. ಆದ್ದರಿಂದಲೇ ದೇಶದಲ್ಲಿ 34 ವರ್ಷಗಳ ನಂತರ ಎನ್ಇಪಿ ಜಾರಿಗೆ ತರಲಾಗುತ್ತಿದ್ದು, ದುರ್ಬಲ ವರ್ಗಗಳ ಮಕ್ಕಳಿಗೆ ಈಗ ಶಿಕ್ಷಣವನ್ನು ಪ್ರಧಾನ ಹಕ್ಕನ್ನಾಗಿ ಮಾಡಲಾಗಿದೆ. ಎನ್ಇಪಿ ನೂರಕ್ಕೆ ನೂರರಷ್ಟು ಸಕಾರಾತ್ಮಕವಾಗಿದೆ ಎಂದು ಅವರು ವಿವರಿಸಿದರು. 

ಹಿಂದಿನ ಶಿಕ್ಷಣ ಪದ್ಧತಿಯಲ್ಲಿ ಶೇ.20ರಷ್ಟು ವಿದ್ಯಾರ್ಥಿಗಳು (Students) ಮಾತ್ರ ಉದ್ಯೋಗಕ್ಕೆ ಅರ್ಹರಾಗುತ್ತಿದ್ದರು. ಆದರೆ ಈಗ ಕೌಶಲ್ಯ ಮತ್ತು ಡಿಜಿಟಲ್ ಕಲಿಕೆಗೆ ಒತ್ತು ನೀಡಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯೂ ಉದ್ಯೋಗಕ್ಕೆ ಬೇಕಾದ ಅರ್ಹತೆ ಮತ್ತು ಸಾಮರ್ಥ್ಯಗಳನ್ನು ತನ್ನದಾಗಿಸಿಕೊಳ್ಳಲಿದ್ದಾನೆ ಎಂದು ಅವರು ನುಡಿದರು. 

ಎನ್ಇಪಿಯಿಂದ ಸರಕಾರಿ ಶಿಕ್ಷಣ (Govt Education) ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಮೊದಲು ಲಾಭವಾಗಲಿದೆ. ಇಲ್ಲಿರುವ ಮಕ್ಕಳಲ್ಲಿ ಶೇ.95ರಷ್ಟು ವಿದ್ಯಾರ್ಥಿಗಳು ದುರ್ಬಲ ವರ್ಗಗಳಿಗೆ ಸೇರಿದವರೇ ಆಗಿದ್ದಾರೆ. ಆದ್ದರಿಂದ ಎನ್ಇಪಿಯಿಂದ ಶಿಕ್ಷಣದ ವಾಣಿಜ್ಯೀಕರಣ ನಡೆಯುತ್ತಿದೆ ಎನ್ನುವ ಮಾತುಗಳನ್ನು ನಂಬಿ ದಿಕ್ಕು ತಪ್ಪಬಾರದು. ಅಲ್ಪಸಂಖ್ಯಾತರೂ ಸೇರಿದಂತೆ ಯಾರೂ ಅನಗತ್ಯ ಭಯ, ಸಂಶಯಗಳನ್ನು ಇಟ್ಟುಕೊಳ್ಳಬಾರದು ಎಂದು ಅಶ್ವತ್ಥನಾರಾಯಣ ಹೇಳಿದರು. 

ಹಳೆಯ ವ್ಯವಸ್ಥೆಯಲ್ಲಿ ಜ್ಞಾನದ ಒಂದು ತುಣುಕಷ್ಟೇ ಸಿಕ್ಕುತ್ತಿತ್ತು. ಈಗ ದೇಶೀಯವಾದ ಮತ್ತು ಪರಿಪೂರ್ಣವಾದ ಬೋಧನೆ ಸಾಧ್ಯವಾಗಲಿದೆ. ಜಾಗತೀಕರಣದ ಯುಗದಲ್ಲಿ ಶಿಕ್ಷಣ ಸಂಸ್ಥೆಗಳ ಸುಧಾರಣೆ ಮತ್ತು ಹೊಸ ಸಂಸ್ಥೆಗಳ ಅಗತ್ಯ ಎರಡೂ ಇದೆ. ಗುಣಮಟ್ಟದ ವಿಚಾರದಲ್ಲಿ ಸಬೂಬುಗಳನ್ನು ಇನ್ನು ಮುಂದೆ ಸಹಿಸಿಕೊಳ್ಳುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು. 

ಎನ್ಇಪಿ ಶಿಕ್ಷಣ ಸಂಸ್ಥೆಗಳಿಗೆ ಸ್ವಾತಂತ್ರ್ಯ ಮತ್ತು ಸ್ವಾಯತ್ತೆ ನೀಡಲಿದೆ. ಇದು ಸಮಕಾಲೀನ ಅಗತ್ಯಗಳನ್ನು ಗಮನಕ್ಕೆ ತೆಗೆದುಕೊಂಡಿದ್ದು, ಎಲ್ಲರನ್ನೂ ಒಳಗೊಳ್ಳಲಿದೆ. ವಿಶ್ವ ಗುಣಮಟ್ಟದ ಸಂಸ್ಥೆಗಳೊಂದಿಗೆ ಸಹಭಾಗಿತ್ವ ಹೊಂದುವ ಮೂಲಕ ಜಾಗತಿಕ ಮಟ್ಟದ ಶಿಕ್ಷಣವು ಮಕ್ಕಳಿಗೆ ದೊರೆಯುವಂತೆ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು. 

ಕಾರ್ಯಕ್ರಮದಲ್ಲಿ ಐಎಸ್ ಡಿಸಿ (ISDC) ಕಾರ್ಯನಿರ್ವಾಹಕ ನಿರ್ದೇಶಕ ಟಾಮ್ ಜೋಸೆಫ್, ನಿರ್ದೇಶಕಿ ತೆರೇಸಾ ಜಾಕೋಬ್ಸ್, ಕಾಲೇಜು ಶಿಕ್ಷಣ ಆಯುಕ್ತ ಪಿ.ಪ್ರದೀಪ, ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ.ಗೋಪಾಲಕೃಷ್ಣ ಜೋಶಿ ಮುಂತಾದವರು ಉಪಸ್ಥಿತರಿದ್ದರು.

ಎನ್ಇಪಿಯಲ್ಲಿ ಪಠ್ಯೇತರ ಚಟುವಟಿಕೆ ಕಡ್ಡಾಯ: ಅಶ್ವತ್ಥನಾರಾಯಣ

 ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸಾಂಸ್ಕೃತಿಕ, ದೈಹಿಕ ಶಿಕ್ಷಣ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಒತ್ತು ಕೊಡಲಾಗಿದ್ದು, ಇವೆಲ್ಲವನ್ನೂ ಕಡ್ಡಾಯಗೊಳಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.

ಮಲ್ಲೇಶ್ವರಂ 18ನೇ ಅಡ್ಡರಸ್ತೆಯಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು, ಕನ್ನಡ ರಾಜ್ಯೋತ್ಸವ ಮತ್ತು 2021-22ನೇ ಸಾಲಿನ ಪಠ್ಯೇತರ ಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡಿದರು.

ಎನ್ಇಪಿಯಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ವಿಕಸನದ ಗುರಿ ಇಟ್ಟುಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರವು ಸರಕಾರಿ ಕಾಲೇಜುಗಳ ಸಂಪೂರ್ಣ ಡಿಜಿಟಲೀಕರಣವನ್ನು ಮಾಡಿದ್ದು, ಈ ವಿಚಾರದಲ್ಲಿ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ. ಬೋಧನಾ ವ್ಯವಸ್ಥೆಯ ಡಿಜಿಟಲೀಕರಣದಿಂದ ಶಿಕ್ಷಣದ ಗುಣಮಟ್ಟ ಸಾಕಷ್ಟು ಸುಧಾರಿಸಲಿದೆ ಎಂದು ಅವರು ನುಡಿದರು.

ಸರಕಾರಿ ಕಾಲೇಜುಗಳಲ್ಲಿ ಇರುವಂತಹ ಆಧುನಿಕ ವ್ಯವಸ್ಥೆಗಳು ರಾಜ್ಯದ ಖಾಸಗಿ ವಿ.ವಿ.ಗಳಲ್ಲೂ ಇಲ್ಲ. ಇವತ್ತು ಇಡೀ ಭಾರತವೇ ಬೆಂಗಳೂರಿನತ್ತ ನೋಡುತ್ತಿದ್ದು, ತಂತ್ರಜ್ಞಾನ ಮತ್ತು ಆವಿಷ್ಕಾರ ಕ್ಷೇತ್ರಗಳಲ್ಲಿ ರಾಜ್ಯದ ರಾಜಧಾನಿಯು 23ನೇ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಭಾರತದ ಬೇರೆ ಯಾವ ನಗರಗಳೂ ಇಲ್ಲ ಎಂದು ಅವರು ಉಲ್ಲೇಖಿಸಿದರು.

ಬೆಂಗಳೂರು ಇವತ್ತು ಸುವರ್ಣಾವಕಾಶಗಳ ನಗರವಾಗಿದೆ. ವಿದ್ಯಾರ್ಥಿಗಳು ಕೇವಲ ಅದೃಷ್ಟವನ್ನು ನಂಬಿ ಕೂರದೆ, ಶ್ರಮ ವಹಿಸಿ ಸಾಧನೆ ಮಾಡಿ, ಇರುವ ಅವಕಾಶಗಳನ್ನು ತಮ್ಮದನ್ನಾಗಿಸಿಕೊಳ್ಳಬೇಕು ಎಂದು ಸಚಿವರು ಹಿತವಚನ ಹೇಳಿದರು.

ಕನ್ನಡಿಗರು ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಬಾರದು. ಜಗತ್ತಿನ ಮೂಲೆಮೂಲೆಗಳಲ್ಲೂ ಇಂದು ಕನ್ನಡಿಗ ಸಾಧಕರಿದ್ದಾರೆ. ವಿದ್ಯಾರ್ಥಿ ಸಮುದಾಯವು ಇಂಥವರಿಂದ ಪ್ರೇರಣೆ ಪಡೆದುಕೊಳ್ಳಬೇಕು. ನಮ್ಮ ನಾಡು-ನುಡಿ ಚೆನ್ನಾಗಿರಬೇಕೆಂದರೆ ಕನ್ನಡಿಗರು ಸದೃಢವಾಗಿ ಬೆಳೆಯಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ನಿರೂಪಕಿ ಅಪರ್ಣಾ, ಪ್ರಾಂಶುಪಾಲರಾದ ಡಾ.ಡಿ.ಎಸ್. ಪ್ರತಿಭಾ, ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರತ್ನಾಕರ ಶೆಟ್ಟಿ, ಸಾಂಸ್ಕೃತಿಕ ಸಮಿತಿಯ ಸಂಚಾಲಕಿ ಎಸ್.ಕೌಸಲ್ಯಾ ಮುಂತಾದವರು ಉಪಸ್ಥಿತರಿದ್ದರು.

click me!