ಡಿಗ್ರಿಯಲ್ಲಿ ಕನ್ನಡ ಕಡ್ಡಾಯ : ಮತ್ತೆ ಹೈಕೋರ್ಟ್‌ ಆಕ್ಷೇಪ

By Kannadaprabha NewsFirst Published Nov 12, 2021, 6:28 AM IST
Highlights
  • ಡಿಗ್ರಿಯಲ್ಲಿ ಕನ್ನಡ ಕಡ್ಡಾಯ : ಮತ್ತೆ ಹೈಕೋರ್ಟ್‌ ಆಕ್ಷೇಪ
  • - ಶಿಕ್ಷಣ ನೀತಿಯಲ್ಲಿ ಕನ್ನಡ ಕಡ್ಡಾಯ ಎಲ್ಲಿದೆ?
  • - ಶಿಕ್ಷಣದಲ್ಲೇಕೆ ರಾಜಕೀಯ?: ತೀಕ್ಷ್ಣ  ಪ್ರಶ್ನೆ

 ಬೆಂಗಳೂರು (ನ.12):  ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ರಾಜ್ಯದ ಪದವಿ ಕಾಲೇಜುಗಳಲ್ಲಿ (College) ಕನ್ನಡ (kannada) ಕಲಿಕೆ ಕಡ್ಡಾಯಗೊಳಿಸುವ ರಾಜ್ಯ ಸರ್ಕಾರದ ನಿಲುವಿಗೆ ಮತ್ತೊಮ್ಮೆ ಆಕ್ಷೇಪಿಸಿರುವ ಹೈಕೋರ್ಟ್‌, ಶಿಕ್ಷಣದಲ್ಲಿ (Education) ರಾಜಕೀಯವನ್ನು (Politics) ಏಕೆ ಬೆರೆಸುತ್ತೀರಿ ಎಂದು ಕಟುವಾಗಿ ಪ್ರಶ್ನಿಸಿದೆ. ಜತೆಗೆ, ರಾಷ್ಟ್ರೀಯ ಶಿಕ್ಷಣ ನೀತಿಯಡಿ ಕನ್ನಡ (Kannada) ಕಲಿಸಬಹುದು ಎಂದಿದ್ದರೆ ಅದಕ್ಕೆ ದಾಖಲೆ ತೋರಿಸಿ ಎಂದೂ ನಿರ್ದೇಶಿಸಿದೆ.

ಪದವಿ ಕಾಲೇಜುಗಳಲ್ಲಿ(Degree College) ಕನ್ನಡವನ್ನು ಒಂದು ಭಾಷೆಯಾಗಿ ಕಲಿಸುವುದನ್ನು ಕಡ್ಡಾಯಗೊಳಿಸಿದ ಸರ್ಕಾರದ ಆದೇಶ ಪ್ರಶ್ನಿಸಿ ಬೆಂಗಳೂರಿನ ಸಂಸ್ಕೃತ ಭಾರತಿ ಕರ್ನಾಟಕ ಟ್ರಸ್ಟ್‌ (Sanskrith Bharthi Karnataka trust) ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ರಾಜ್ಯ ಸರ್ಕಾರಿ ವಕೀಲರು ಹಾಜರಾಗಿ, ಉನ್ನತ ಶಿಕ್ಷಣದಲ್ಲಿ (Higher education) ಕೇವಲ ಆರು ತಿಂಗಳ ಕಾಲ ಬೇಸಿಕ್‌ ಕನ್ನಡ ಕಲಿಸಲಾಗುವುದು. ರಾಷ್ಟ್ರೀಯ ಶಿಕ್ಷಣ ನೀತಿಯಡಿಯಲ್ಲಿ (national education Policy) ಕನ್ನಡ ಕಲಿಕೆಯನ್ನು ಪ್ರೋತ್ಸಾಹಿಸಬಹುದು ಎಂದು ನ್ಯಾಯಾಲಯಕ್ಕೆ ವಿವರಿಸಿದರು. ಜತೆಗೆ, ಸರ್ಕಾರದ ನೀತಿಯನ್ನು ಸಮರ್ಥಿಸಿಕೊಂಡು ಸರ್ಕಾರದ ಪರ ಅಡ್ವೋಕೇಟ್‌ ಜನರಲ್‌ ವಾದ ಮಂಡಿಸಲಿದ್ದಾರೆ. ಅದಕ್ಕಾಗಿ ಸೋಮವಾರಕ್ಕೆ ಅರ್ಜಿ ವಿಚಾರಣೆ ಮುಂದೂಡುವಂತೆ ನ್ಯಾಯಪೀಠವನ್ನು ಕೋರಿದರು.

ಇದಕ್ಕೆ ಆಕ್ಷೇಪಿಸಿದ ನ್ಯಾಯಾಲಯ, ಕಡ್ಡಾಯ ಕಲಿಕೆ ನಿಲುವಿನ ಕುರಿತು ಸರ್ಕಾರಕ್ಕೆ ಸಲಹೆ ನೀಡುವುದಾಗಿ ಅಡ್ವೋಕೇಟ್‌ ಜನರಲ್‌ ಕಳೆದ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಭರವಸೆ ನೀಡಿದ್ದರು. ಆದರೆ ಈಗ ನಿಮ್ಮ ನೀತಿಯನ್ನು ಸಮರ್ಥಿಸಿಕೊಳ್ಳುತ್ತೀದ್ದೀರಿ. ಹಾಗಾದರೆ ಈ ವಿಚಾರದಲ್ಲಿ ರಾಜ್ಯ ಸರ್ಕಾರದ ನಿಲುವು ಏನು ಎಂಬುದನ್ನು ಮೊದಲು ಸ್ಪಷ್ಟಪಡಿಸಬೇಕು ಎಂದು ತಾಕೀತು ಮಾಡಿತು.

ಈ ವೇಳೆ ವಾದ ನಡೆಸಿದ ಅರ್ಜಿದಾರರ ಪರ ಹಿರಿಯ ವಕೀಲ ನಾಗಾನಂದ್‌, ಉನ್ನತ ಶಿಕ್ಷಣ ವ್ಯಾಸಂಗದಲ್ಲಿ ಕಡ್ಡಾಯವಾಗಿ ಕನ್ನಡ ಕಲಿಯಬೇಕೆಂಬ ಅಂಶ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಇಲ್ಲ. ತನಗೆ ಇಷ್ಟಬಂದ ಯಾವುದೇ ವಿಷಯ ಅಥವಾ ಕೋರ್ಸ್‌ ಅಧ್ಯಯನ ಮಾಡುವ ಸಂಪೂರ್ಣ ಸ್ವಾತಂತ್ರ್ಯವನ್ನು ವಿದ್ಯಾರ್ಥಿಗೆ ನೀಡಲಾಗಿದೆ ಎಂದರು.

ಇದಕ್ಕೆ ಸರ್ಕಾರಿ ವಕೀಲರು, ಕನ್ನಡ ಕಲಿಕೆಯನ್ನು ಪ್ರೋತ್ಸಾಹಿಸುವುದನ್ನು ಸುಪ್ರೀಂಕೋರ್ಟ್‌ ಪುರಸ್ಕರಿಸಿದೆ ಎಂದು ಸಮರ್ಥಿಸಿಕೊಂಡಾಗ ಈ ಬಗೆಗಿನ ದಾಖಲೆಗಳನ್ನು ನೀಡಿ ಎಂದು ನ್ಯಾಯಪೀಠ ಹೇಳಿತು. ಜತೆಗೆ, ಉನ್ನತ ಶಿಕ್ಷಣ ಪಡೆಯಲು ಕರ್ನಾಟಕಕ್ಕೆ ಬಂದ ಹೊರರಾಜ್ಯದ ವಿದ್ಯಾರ್ಥಿಗಳ ಪೈಕಿ ಕನ್ನಡ ಕಲಿಯಬೇಕೆಂಬ ಕಾರಣಕ್ಕೆ ಹಿಂದಿರುಗಿರುವವರ ಸಂಖ್ಯೆ ಎಷ್ಟುಎಂಬುದು ನಿಮಗೆ ಗೊತ್ತಿದೆಯೇ? ಶಿಕ್ಷಣದಲ್ಲಿ ರಾಜಕೀಯವನ್ನು ಏಕೆ ಬೆರೆಸುತ್ತೀರಿ ಎಂದು ಖಾರವಾಗಿ ಪ್ರಶ್ನಿಸಿತು.

ಸರ್ಕಾರಿ ವಕೀಲರು ಉತ್ತರಿಸಿ, ಈಗಾಗಲೇ ಪಠ್ಯಪುಸ್ತಕ ಪೂರೈಲಾಗಿದೆ. ಕೇವಲ ಆರು ತಿಂಗಳ ಕಾಲ ಸಣ್ಣ ಸಣ್ಣ ಕನ್ನಡದ ಪದಗಳನ್ನು ಕಲಿಯಲು ಹೇಳಿ ಕೊಡಲಾಗುತ್ತದೆಯಷ್ಟೇ. ಮೊದಲನೇ ತರಗತಿ ವಿದ್ಯಾರ್ಥಿಗಳಿಗೆ ಹೇಳಿಕೊಡುವ ಪಠ್ಯ ಬೋಧಿಸಲಾಗುತ್ತದೆ. ಇದು ಕೇವಲ ಕನ್ನಡ ಕಲಿಕೆಯನ್ನು ಪ್ರೋತ್ಸಾಹಿಸುವ ವಿಧಾನವಾಗಿದೆ. ರಾಜ್ಯದಲ್ಲಿ ನೆಲೆಸುವವರಿಗೆ ಸ್ಥಳೀಯರೊಂದಿಗೆ ಚರ್ಚಿಸಲು ಅನುಕೂಲವಾಗಷ್ಟುಕನ್ನಡ ಕಲಿಸಲಾಗುತ್ತದೆ. ಈ ಕ್ರಮವನ್ನು ಉಷಾ ಮೆಹ್ತಾ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ಸಹ ಅನುಮೋದಿಸಿದೆ. ಅಲ್ಲದೆ, ಇದೇ ಮೊದಲ ಬಾರಿಗೆ ಈ ವಿಧಾನ ಪರಿಚಯಿಸುತ್ತಿಲ್ಲ. ಕಳೆದ 10 ವರ್ಷಗಳಿಂದ ಎಂಜಿನಿಯರ್‌ ವ್ಯಾಸಂಗದಲ್ಲಿ ಕನ್ನಡ ಕಲಿಯುವ ವಿಧಾನ ಪರಿಚಯಿಸಲಾಗಿದೆ. ಇದು 10ನೇ ತರಗತಿ ನಂತರ ಕನ್ನಡ ವಿಷಯವನ್ನು ವ್ಯಾಸಂಗ ಮಾಡದವರಿಗೆ ಕನ್ನಡ ಕಲಿಯಲು ಅನುಕೂಲವಾಗಿದೆ. ಈ ವಿಧಾನ ಯಶಸ್ವಿ ಸಹ ಆಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ನಂತರ ರಾಜ್ಯ ಸರ್ಕಾರದ ಆಕ್ಷೇಪಣೆ ಹೇಳಿಕೆ ದಾಖಲಿಸಿಕೊಳ್ಳಲಾಗುವುದು ಎಂದು ತಿಳಿಸಿದ ನ್ಯಾಯಪೀಠ, ಸರ್ಕಾರದ ಪರ ಅಡ್ವೋಕೇಟ್‌ ಜನರಲ್‌ ಅವರು ವಾದ ಮಂಡಿಸಲು ಅರ್ಜಿ ವಿಚಾರಣೆಯನ್ನು ಸೋಮವಾರಕ್ಕೆ (ನ.15) ಮುಂದೂಡಿತು.

ಕೋರ್ಟ್ ಹೇಳಿದ್ದೇನು?

- ರಾಷ್ಟ್ರೀಯ ಶಿಕ್ಷಣ ನೀತಿಯಡಿ ಕನ್ನಡ ಕಲಿಸಬಹುದು ಎಂಬುದಕ್ಕೆ ದಾಖಲೆ ನೀಡಿ

- ಸರ್ಕಾರಕ್ಕೆ ಸಲಹೆ ನೀಡೋದಾಗಿ ಹೇಳಿದ್ದ ಎ.ಜಿ. ಈಗ ಸಮರ್ಥಿಸುತ್ತಿರುವುದೇಕೆ?

- ‘ಪದವಿಯಲ್ಲಿ ಕನ್ನಡ’ ಎಂಬ ಬಗ್ಗೆ ರಾಜ್ಯ ಸರ್ಕಾರದ ನಿಲುವೇನು, ಮೊದಲು ತಿಳಿಸಿ

- ಕನ್ನಡ ಕಲಿಕೆ ನೀತಿಯನ್ನು ಸುಪ್ರೀಂಕೋರ್ಟ್‌ ಪುರಸ್ಕರಿಸಿದ್ದರೆ ಅದಕ್ಕೆ ದಾಖಲೆ ಕೊಡಿ

- ಕನ್ನಡ ಕಲಿಯಬೇಕೆಂಬ ಕಾರಣಕ್ಕೆ ವಾಪಸಾದ ಅನ್ಯ ರಾಜ್ಯದವರ ಸಂಖ್ಯೆಯೆಷ್ಟುಗೊತ್ತಾ?

- ಶಿಕ್ಷಣದಲ್ಲಿ ಏಕೆ ರಾಜಕೀಯ ಬೆರೆಸುತ್ತೀರಿ?

click me!