ಪ್ರತಿಭೆ ಗುರುತಿಸಲು ಎನ್‌ಇಪಿ ಸಹಕಾರಿ: ಸಚಿವ ಬಿ.ಸಿ.ನಾಗೇಶ

By Kannadaprabha News  |  First Published Dec 28, 2022, 1:16 PM IST

ಭಗವಂತ ಮಕ್ಕಳಿಗೆ ನೀಡಿದ ಪ್ರತಿಭೆಯನ್ನು ಪ್ರೋತ್ಸಾಹಿಸಿ ಅವರನ್ನು ಪ್ರತಿಭಾನ್ವಿತರನ್ನಾಗಿ ಮಾಡುವಲ್ಲಿ, ಮಕ್ಕಳಲ್ಲಿ ಹುದುಗಿದ ಪ್ರತಿಭೆ ಹೊರಹೊಮ್ಮಲು ಹೊಸ ಶಿಕ್ಷಣ ನೀತಿ ಸಹಕಾರಿಯಾಗಲಿದೆ: ಸಚಿವ ಬಿ.ಸಿ.ನಾಗೇಶ 


ಗೋಕಾಕ(ಡಿ.28): ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಭಾರತವನ್ನು ವಿಶ್ವಗುರುವಾಗಿಸಲು ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ ಹೇಳಿದರು. ತಾಲೂಕಿನ ಸುಲಧಾಳ ಗ್ರಾಮದಲ್ಲಿ ಗ್ರಾಮಸ್ಥರು ಮತ್ತು ಹಳೆಯ ವಿದ್ಯಾರ್ಥಿಗಳ ಸಹಯೋಗದೊಂದಿಗೆ ಹಮ್ಮಿಕೊಂಡ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಶತಮಾನದ ಸಂಭ್ರಮ ಮತ್ತು ಗುರುವಂದನಾ ಸಮಾರಂಭದಲ್ಲಿ ನೂತನ ಕೊಠಡಿಗಳಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಭಗವಂತ ಮಕ್ಕಳಿಗೆ ನೀಡಿದ ಪ್ರತಿಭೆಯನ್ನು ಪ್ರೋತ್ಸಾಹಿಸಿ ಅವರನ್ನು ಪ್ರತಿಭಾನ್ವಿತರನ್ನಾಗಿ ಮಾಡುವಲ್ಲಿ, ಮಕ್ಕಳಲ್ಲಿ ಹುದುಗಿದ ಪ್ರತಿಭೆ ಹೊರಹೊಮ್ಮಲು ಹೊಸ ಶಿಕ್ಷಣ ನೀತಿ ಸಹಕಾರಿಯಾಗಲಿದೆ. ದೇಶದ ಕಟ್ಟಕಡೆಯ ಮಕ್ಕಳಿಗೂ ಶಿಕ್ಷಣ ನೀಡುವ ಪ್ರಧಾನಿ ಮೋದಿಯವರ ಕಾರ್ಯಕ್ಕೆ ನಾವೆಲ್ಲ ಸಹಕಾರ ನೀಡೋಣ ಎಂದರು.

ಆ ದೇವರು ನೀಡಿದ್ದರಲ್ಲಿ ಸಮಾಜಕ್ಕೆ ಏನಾದರೂ ಕೊಡುಗೆಯನ್ನು ನೀಡಿ ಸಮಾಜದ ಋುಣ ತೀರಿಸಬೇಕು. ಅಂತಹ ಕಾರ್ಯವನ್ನು ಈ ಗ್ರಾಮದ ಹಿರಿಯರು ಮಾಡಿದ್ದರಿಂದಲೇ ಸ್ವತಂತ್ರ ಪೂರ್ವದಿಂದಲೇ ಈ ಶಾಲೆ ಸ್ಥಾಪನೆಗೊಂಡು ಹಲವಾರು ಸಾಧಕರನ್ನು ನಾಡಿನ ಸೇವೆಗೆ ನೀಡಿದ್ದು ಹೆಮ್ಮೆಯ ಸಂಗತಿ. ಈ ಗ್ರಾಮಕ್ಕೆ ಮಹಾತ್ಮ ಗಾಂಧೀಜಿ ಸೇರಿದಂತೆ ಹಲವಾರು ಮಹಾನ್‌ ವ್ಯಕ್ತಿಗಳು ಈ ಪುಣ್ಯನೆಲದ ಪಾದ ಸ್ಪರ್ಶ ಮಾಡಿದ್ದನ್ನು ಸ್ಮರಿಸಿದ ಅವರು, ಈ ಗ್ರಾಮದಿಂದ ಇನ್ನು ಹೆಚ್ಚಿನ ಸಮಾಜಕ್ಕೆ ಕೊಡುಗೆ ಸಿಗಲಿ ಇದಕ್ಕೆ ನಮ್ಮ ಸಹಕಾರ ಸದಾ ನೀಡುವದಾಗಿ ತಿಳಿಸಿದರು.

Latest Videos

undefined

ಅತಿಥಿ ಶಿಕ್ಷಕನ ಅಮಾನವೀಯ ದಾಳಿ, ಕಿಮ್ಸ್‌ನಲ್ಲಿರುವ ಗಾಯಾಳು ಅತಿಥಿ ಶಿಕ್ಷಕಿಯ ಆರೋಗ್ಯ ವಿಚಾರಿಸಿದ ಶಿಕ್ಷಣ ಸಚಿವ

ಇದೇ ಸಂದರ್ಭದಲ್ಲಿ ಅಕ್ಷರ ದೇಗುಲ ಸ್ಮರಣ ಸಂಚಿಕೆಯನ್ನು ವಿದ್ಯಾರ್ಥಿಗಳೊಂದಿಗೆ ಸಚಿವರು ಹಾಗೂ ಶಾಸಕರು ಲೋಕಾರ್ಪಣೆ ಮಾಡಿದರು. ಸಮಾರಂಭವನ್ನು ಶಾಸಕ ರಮೇಶ ಜಾರಕಿಹೊಳಿ ಉದ್ಘಾಟಿಸಿದರು. ಗದಗ ತೋಂಟದಾರ್ಯ ಮಠ ಹಾಗೂ ಬೆಳಗಾವಿಯ ರುದ್ರಾಕ್ಷಿ ಮಠದ ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಯವರು ಸಾನ್ನಿಧ್ಯ ವಹಿಸಿದ್ದರು.

ವೇದಿಕೆಯ ಮೇಲೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶಕುಮಾರ ಸಿಂಗ್‌, ತುಮಕೂರು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ, ಬೆಳಗಾವಿ ವಿಭಾಗದ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತೆ ಜಯಶ್ರೀ ಶಿಂತ್ರಿ, ಗ್ರಾಪಂ ಅಧ್ಯಕ್ಷೆ ಸುಶಿಲವ್ವಾ ಕೆಂಪನ್ನವರ, ಗ್ರಾಮದ ಹಿರಿಯರಾದ ಬಾಳಗೌಡ ಪಾಟೀಲ, ಗೋವಿಂದ ದೇಶಪಾಂಡೆ, ಭೀಮಗೌಡ ಪೊಲೀಸ್‌ಗೌಡರ, ಬಸವರಾಜ ನಂದಿ, ಭೀಮಶಿ ಬಡ್ಲಂಗೋಳ, ಎಂ.ಬಿ.ಗುತ್ತಿ, ಎ.ಎನ್‌.ಮೊದಗಿ, ಆರ್‌.ವೈ.ಸನದಿ, ಸುರೇಶ ಬೆಟಗೇರಿ, ಗುತ್ತೆಪ್ಪ ಸನದಿ, ಶಂಕರ ಬಾವಿಕಟ್ಟಿ ಇದ್ದರು.

ಶಿಕ್ಷಣ ಪ್ರೇಮಿ ಶಾಸಕರಾದ ರಮೇಶ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ತಮ್ಮ ಕ್ಷೇತ್ರಗಳಲ್ಲಿ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಮಹತ್ವ ನೀಡಿ ಶ್ರಮಿಸುತ್ತಿರುವುದು ಮಾದರಿಯಾಗಿದೆ. ಇದರಿಂದ ಆಯಾ ಕ್ಷೇತ್ರಗಳಲ್ಲಿ ಉತ್ತಮ ಶೈಕ್ಷಣಿಕ ಪ್ರಗತಿ ಸಾಧ್ಯವಾಗಿದೆ ಅಂತ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ ತಿಳಿಸಿದ್ದಾರೆ. 

click me!