ಮಕ್ಕಳಿಗೆ ಸ್ವಾವಲಂಬಿ ಜೀವನ ಕಟ್ಟಿಕೊಡುವ ಶಿಕ್ಷಣ ಒದಗಿಸಬೇಕು ಎಂಬ ಚಿಂತನೆ ಪ್ರಧಾನಿ ನರೇಂದ್ರ ಮೋದಿಯವರದ್ದಾಗಿತ್ತು. ಆದ್ದರಿಂದ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡಲು ತಯಾರಿ ಮಾಡಿದ್ದಾರೆ. ಅದು ಜಾರಿಗೆ ಬರುತ್ತದೆ. ಆನಂತರದಲ್ಲಿ ಮಕ್ಕಳ ಶಿಕ್ಷಣಮಟ್ಟಕೂಡ ಹೆಚ್ಚಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ ಹೇಳಿದರು.
ರಾಣಿಬೆನ್ನೂರು (ಅ.29) : ಮಕ್ಕಳಿಗೆ ಸ್ವಾವಲಂಬಿ ಜೀವನ ಕಟ್ಟಿಕೊಡುವ ಶಿಕ್ಷಣ ಒದಗಿಸಬೇಕು ಎಂಬ ಚಿಂತನೆ ಪ್ರಧಾನಿ ನರೇಂದ್ರ ಮೋದಿಯವರದ್ದಾಗಿತ್ತು. ಆದ್ದರಿಂದ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡಲು ತಯಾರಿ ಮಾಡಿದ್ದಾರೆ. ಅದು ಜಾರಿಗೆ ಬರುತ್ತದೆ. ಆನಂತರದಲ್ಲಿ ಮಕ್ಕಳ ಶಿಕ್ಷಣಮಟ್ಟಕೂಡ ಹೆಚ್ಚಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ ಹೇಳಿದರು.
ಶಾಲಾ ಮಕ್ಕಳ ಪೋಷಕರಿಂದ 100 ರೂ ದೇಣಿಗೆ ಸಂಗ್ರಹ ರದ್ದು: ಶಿಕ್ಷಣ ಸಚಿವ ಸೂಚನೆ
ತಾಲೂಕಿನ ಕಮದೋಡ ಗ್ರಾಮದ ರೇನ್‌ಬೋ ರೆಸಿಡೆನ್ಸಿಯಲ್ ಪಬ್ಲಿಕ್ ಶಾಲೆಯಲ್ಲಿ ಗುರುವಾರ ಸಂಜೆ ಪರಿವರ್ತನ ರಾಣಿಬೆನ್ನೂರು ಸಂಸ್ಥೆ ವತಿಯಿಂದ ಕರ್ನಾಟಕ ವೈಭವ-2022ರ ಅಂಗವಾಗಿ ಏರ್ಪಡಿಸಿದ್ದ ಜ್ಞಾನ ವೈಭವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳಿಗೆ ಯಾವ ಶಿಕ್ಷಣವೂ ಪರಿಪೂರ್ಣವಲ್ಲ. ಇಂದಿನವರೆಗೆ ಯಾವ ಶಿಕ್ಷಣವೂ ನಮ್ಮ ನೆಲ, ಜಲದ ಕುರಿತು ಅರಿವು ಮೂಡಿಸುವ ಶಿಕ್ಷಣ ಒದಗಿಸಲಿಲ್ಲ. ಅಲ್ಲದೆ ನೇರವಾಗಿ ಉದ್ಯೋಗ ಒದಗಿಸಿಕೊಡುವ ಶಿಕ್ಷಣ ಕೂಡ ವಿರಳವಾಗಿವೆ. ಬ್ರಿಟಿಷರ ಗುಲಾಮಗಿರಿ ಶಿಕ್ಷಣ ಪದ್ಧತಿ ಬದಲಾಗಿ ಸ್ವಾವಲಂಬಿ ಬದುಕು ಕಲ್ಪಿಸಿಕೊಡುವ ರಾಷ್ಟ್ರೀಯ ಶಿಕ್ಷಣ ನೀತಿ ಇಂದಿನ ಮಕ್ಕಳಿಗೆ ಅವಶ್ಯವಿದೆ ಎಂದು ಹೇಳಿದರು.
ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರ್ಕಾರ ಮಕ್ಕಳಿಗೆ ಶಿಕ್ಷಣ ನೀಡುವ ವಿಚಾರದಲ್ಲಿ ಮಹತ್ವದ ಹೆಜ್ಜೆ ಇಡುತ್ತಿವೆ. ಅದಕ್ಕೆ ಎಲ್ಲರೂ ತಮ್ಮ ಮಕ್ಕಳಿಗೆ ಸರ್ಕಾರ ನೀಡುವ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ಮುಂದಾಗಬೇಕು ಎಂದರು. ಪ್ರಜ್ಞಾಪ್ರವಾಹ ದಕ್ಷಿಣ ಮಧ್ಯ ಕ್ಷೇತ್ರದ ಸಂಯೋಜಕ ರಘುನಂದನಜೀ, ರೇನ್‌ಬೋ ರೆಸಿಡೆನ್ಸಿಯಲ್ ಪಬ್ಲಿಕ್ ಶಾಲೆ ಅಧ್ಯಕ್ಷ ಡಾ. ಸುರೇಶ ಸಿ.ಟಿ. ಮಾತನಾಡಿದರು. ಸ್ಥಳೀಯ ಪರಿವರ್ತನ ಸಂಸ್ಥೆಯ ಅಧ್ಯಕ್ಷ ಡಾ. ಎಸ್.ಜಿ. ವೈದ್ಯ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳಿಗೆ ರಸಪ್ರಶ್ನೆ ನಡೆಯಿತು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ನರಸಗೊಂಡರ, ಲಲಿತಾ ಸುರೇಶ, ಸುಮಾ ಉಪ್ಪಿನ, ಭಾರತಿ ಜಂಬಗಿ, ಕೆ. ಶಿವಲಿಂಗಪ್ಪ, ಪುಷ್ಪಾ ಬದಾಮಿ, ರುಕ್ಮಿಣಿ ಸಾವಕಾರ, ಡಾ. ನಾರಾಯಣ ಪವಾರ, ಭಾರತಿ ಅಳವಂಡಿ, ಡಾ. ಗಣೇಶ ದೇವಗಿರಿಮಠ, ಡಿಡಿಪಿಐ ಜಗದೀಶ್ವರಯ್ಯ, ಬಿಇಒ ಎಂ.ಎಚ್. ಪಾಟೀಲ, ಟಿ.ಸಿ. ವೀರಣ್ಣ ಮತ್ತಿತರರಿದ್ದರು.
ರಾಜ್ಯದಲ್ಲೂ ಶೀಘ್ರ ಎನ್‌ಇಪಿ ಜಾರಿ
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡುವ ಕುರಿತು ನ. 2ರಂದು ದೆಹಲಿಯಲ್ಲಿ ಸಭೆ ನಡೆಯಲಿದೆ. ಇದರ ನಂತರದ 15ರಿಂದ 20 ದಿನದೊಳಗೆ ರಾಜ್ಯದಲ್ಲಿಯೂ ಸಭೆ ಮಾಡಿ ಶಿಕ್ಷಣ ನೀತಿ ಜಾರಿಗೊಳಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ ತಿಳಿಸಿದರು. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ಸಭೆ ಬಳಿಕ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳ್ಳಲಿದೆ. ಆನಂತರದಲ್ಲಿ ರಾಜ್ಯದಲ್ಲಿ ಯಾವುದಾದರೂ ಶಾಲೆಯವರು ರಾಷ್ಟ್ರೀಯ ಶಿಕ್ಷಣ ನೀತಿ ಪಠ್ಯದ ಪ್ರಕಾರ ಮಕ್ಕಳಿಗೆ ಶಿಕ್ಷಣ ನೀಡಲು ಮುಂದೆ ಬಂದರೆ ಅವರಿಗೆ ಅವಕಾಶ ಮಾಡಿಕೊಡುತ್ತೇವೆ ಎಂದರು.
5, 8ನೇ ತರಗತಿ ಮಕ್ಕಳಿಗೆ ಈ ವರ್ಷ ಹೊಸ ಪರೀಕ್ಷೆ: ಬಿ.ಸಿ.ನಾಗೇಶ್
ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸುವವರು ಇದರ ಬಗ್ಗೆ ಸರಿಯಾಗಿ ತಿಳಿದುಕೊಳ್ಳಬೇಕು. ಇದು ನಾಲ್ಕು ಗೋಡೆ ಮಧ್ಯೆ ಕುಳಿತು ಯಾರೋ ನಾಲ್ಕು ಜನ ಮಾಡಿರುವ ಶಿಕ್ಷಣ ನೀತಿ ಅಲ್ಲ. ಕಸ್ತೂರಿ ರಂಗನ್ ಸೇರಿ ಅನೇಕರು ದೇಶಾದ್ಯಂತ ಹಲವಾರು ಚರ್ಚೆ, ವಿಚಾರ ವಿನಿಮಯ ಮಾಡಿ ಮಕ್ಕಳಿಗೆ ಈ ರೀತಿ ಶಿಕ್ಷಣ ನೀಡಬೇಕು, ಈ ರೀತಿ ನೀಡಿದರೆ ಅನುಕೂಲವಾಗಲಿದೆ ಎಂಬ ವಿಚಾರ ಇಟ್ಟುಕೊಂಡು ಸಿದ್ಧಪಡಿಸಿದ ಶಿಕ್ಷಣ ನೀತಿಯಾಗಿದೆ. ಅಲ್ಲದೆ ಇದರಲ್ಲಿ ಗ್ರಾಪಂ ಮಟ್ಟದ ಗ್ರಾಮಸಭೆಯಲ್ಲೂ ಚರ್ಚಿಸಲಾಗಿದೆ. ಮಕ್ಕಳಿಗೆ ಅಕ್ಷರ ಜ್ಞಾನ ಹಾಗೂ ಸಂಖ್ಯಾ ಜ್ಞಾನದ ಮೂಲಕ ವಿದ್ಯೆ ನೀಡಬೇಕು ಎಂಬ ಉದ್ದೇಶ ಹೊಂದಲಾಗಿದೆ. ಆದ್ದರಿಂದ ಇದನ್ನು ವಿರೋಧಿಸುವವರು ಈ ಎಲ್ಲ ವಿಚಾರಗಳನ್ನು ತಿಳಿದುಕೊಳ್ಳಬೇಕು ಎಂದರು. ರಾಜ್ಯದಲ್ಲೂ ಶಿಕ್ಷಣ ನೀತಿ ಜಾರಿಗೆ ಯಾವುದೇ ಅಡೆತಡೆ ಇಲ್ಲ. ಈಗಾಗಲೇ ನಲಿ-ಕಲಿ, ಚಿಲಿ-ಪಿಲಿ ಜಾರಿಯಲ್ಲಿವೆ. ಆದ್ದರಿಂದ ರಾಷ್ಟ್ರೀಯ ಶಿಕ್ಷಣ ನೀತಿ ತರಲು ತೊಂದರೆ ಆಗುವುದಿಲ್ಲ. ಈಗಾಗಲೇ ನಾವು ಎಲ್ಲ ರೀತಿಯ ಸಿದ್ಧತೆ ನಡೆಸಿದ್ದೇವೆ. ಅಗತ್ಯ ಪಠ್ಯದ ವ್ಯವಸ್ಥೆ ಮಾಡಲಾಗುತ್ತಿದೆ. ಸಮಯಕ್ಕೆ ಸರಿಯಾಗಿ ಜಾರಿ ಮಾಡಲಾಗುವುದು ಎಂದರು.