
ಮಡಿಕೇರಿ (ಅ. 28): ರಾಜ್ಯದಲ್ಲಿರುವ ಎಲ್ಲ ಅರೆಬಿಕ್ ಶಾಲೆಗಳ ಮಕ್ಕಳು ಬೇರೆ ಶಾಲೆಗಳ ಮಕ್ಕಳಂತೆ ಉತ್ತಮ ಶಿಕ್ಷಣ ಪಡೆಯಬೇಕು ಎಂಬ ಉದ್ದೇಶದಿಂದ ಅರೆಬಿಕ್ ಶಾಲೆಗಳ ಬೋಧನೆ ಕುರಿತು ವರದಿ ಕೇಳಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ. ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 106 ಅನುದಾನಿತ ಅರೆಬಿಕ್ ಶಾಲೆಗಳು ಇವೆ. 80 ಅನುದಾನ ರಹಿತ ಶಾಲೆಗಳಿವೆ. ಇಲ್ಲಿ ಶಿಕ್ಷಣ ಇಲಾಖೆಯ ಪಠ್ಯಕ್ರಮದ ಅನುಸಾರ ಬೋಧನೆ ನಡೆಯುತ್ತಿಲ್ಲ ಎಂಬ ಆರೋಪಗಳಿವೆ. ಹೀಗಾಗಿ, ಈ ಕುರಿತು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದರು. ಬೇರೆ ಅನುದಾನಿತ ಶಾಲೆಗಳ ರೀತಿಯಲ್ಲಿ ಅರೆಬಿಕ್ ಶಾಲೆಗಳು ಶಿಕ್ಷಣ ನೀಡಬೇಕು. ಆದರೆ, ಬಹಳಷ್ಟು ಶಾಲೆಗಳಲ್ಲಿ ಭಾಷೆ ಮತ್ತು ವಿಜ್ಞಾನದ ಕಲಿಕೆ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಇಂತಹ ಶಾಲೆಗಳಿಗೆ ಪ್ರತಿವರ್ಷ ಸುಮಾರು 27 ಸಾವಿರ ಸಂಖ್ಯೆ ಮಕ್ಕಳು ಸೇರುತ್ತಾರೆ. ಆದರೆ, ಎಸ್‌ಎಸ್‌ಎಲ್‌ಸಿಯಲ್ಲಿ ಕೇವಲ 2 ಸಾವಿರ ವಿದ್ಯಾರ್ಥಿಗಳು ಮಾತ್ರವೇ ಇರುತ್ತಾರೆ. ಬಹಳಷ್ಟುಶಾಲೆಗಳಲ್ಲಿ ನೋಂದಣಿಯಾದ ವಿದ್ಯಾರ್ಥಿಗಳಿಗೂ, ತರಗತಿಗಳಿಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳಿಗೂ ಭಾರಿ ವ್ಯತ್ಯಾಸ ಇದೆ. ಅಂದರೆ ಒಂದು ನಿರ್ದಿಷ್ಟಧರ್ಮದ ಮಕ್ಕಳು ಶಾಲೆಗಳಿಂದ ಹೊರಗುಳಿಯುತ್ತಿದ್ದಾರೆ. ಇದು ಆಗಬಾರದು, ಎಲ್ಲರಿಗೂ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉತ್ತಮ ಶಿಕ್ಷಣ ದೊರಕಬೇಕು ಎಂದರು.
ಈ ಹಿಂದೆ ಪಠ್ಯಪುಸ್ತಕದಲ್ಲಿ ನಮ್ಮನ್ನಾಳಿದ ರಾಜರ ಸರಿಯಾದ ಇತಿಹಾಸ ಇರಲಿಲ್ಲ. ಮೆಕಾಲೆ ಶಿಕ್ಷಣ ಪದ್ಧತಿ ಇತ್ತು. ಟಿಪ್ಪುವಿನಂತಹ ದೊರೆಗಳ ವೈಭವೀಕರಣ ಇತ್ತು. ಕೆಂಪೇಗೌಡರು ಮೈಸೂರು ರಾಜರ ಇತಿಹಾಸ ತೆಗೆಯಲಾಗಿತ್ತು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: 5, 8ನೇ ತರಗತಿ ಮಕ್ಕಳಿಗೆ ಈ ವರ್ಷ ಹೊಸ ಪರೀಕ್ಷೆ: ಬಿ.ಸಿ.ನಾಗೇಶ್
ಈ ನಾಡನ್ನು ಬ್ರಿಟಿಷರಿಗೂ ಮುನ್ನ ನಮ್ಮ ರಾಜರು ವೈಜ್ಞಾನಿಕವಾಗಿ ಆಳ್ವಿಕೆ ಮಾಡಿದ್ದರು. ಉತ್ತಮ ನಗರಗಳನ್ನು, ಕೆರೆಕಟ್ಟೆಗಳನ್ನು ಕಟ್ಟಿದ್ದರು. ಪ್ರಕೃತಿಗೆ ಪೂರಕವಾಗಿ ಕಾರ್ಯನಿರ್ವಹಿಸಿದ್ದರು ಎಂಬುದನ್ನು ತಿಳಿಸುವುದೇ ನಾಡಪ್ರಭು ಕೆಂಪೇಗೌಡ ಅವರ ರಥಯಾತ್ರೆಯ ಉದ್ದೇಶ ಎಂದರು. ಕೆಂಪೇಗೌಡರು ಎಲ್ಲರಿಗೂ ಜನಹಿತ, ಜನಪರವಾದ ಆಡಳಿತ ನೀಡಿದ್ದರು. ಇಂದಿನ ರಾಜಕಾರಣಿಗಳು, ಅಧಿಕಾರಿಗಳಿಗೆ ಮೇಲ್ಪಂಕ್ತಿಯಾಗಿದ್ದರು ಎಂದರು.
ನ.11ರಂದು ಪ್ರತಿಮೆ ಉದ್ಘಾಟನೆ: ಬೆಂಗಳೂರಿನಲ್ಲಿ ನ.11ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ ಉದ್ಘಾಟಿಸಲಿದ್ದಾರೆ. ಅದರ ನಿರ್ಮಾಣಕ್ಕೆ ರಾಜ್ಯದ ಎಲ್ಲ ಭಾಗಗಳಿಂದ ಪವಿತ್ರ ಮಣ್ಣನ್ನು ತರಲಾಗುತ್ತಿದೆ. ಕನಿಷ್ಠ ಪಕ್ಷ ಆ ಪ್ರತಿಮೆ ನೋಡಿಯಾದರೂ ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ಜನಪರ ಆಡಳಿತ ನೀಡುವ ಮಾನಸಿಕತೆ ಬರಲಿ ಎಂಬುದು ಇದರ ಉದ್ದೇಶ ಎಂದು ಹೇಳಿದರು.