NIRF Rankings 2022: ಮೈಸೂರು ವಿಶ್ವವಿದ್ಯಾನಿಲಯಕ್ಕೆ 33ನೇ ರ‍್ಯಾಂಕ್

By Kannadaprabha News  |  First Published Jul 16, 2022, 3:12 PM IST

ರಾಜ್ಯದ ವಿಶ್ವವಿದ್ಯಾನಿಲಯಗಳ ಪೈಕಿ ಅಗ್ರಸ್ಥಾನ ಪಡೆದ ಮೈಸೂರು ವಿವಿ
 


ಮೈಸೂರು(ಜು.16):  ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯವು ಎನ್‌ಐಆರ್‌ಎಫ್‌ ಸಮೀಕ್ಷೆ ಮುಖಾಂತರ ನಡೆಸಿದ ರಾಷ್ಟ್ರ ಮಟ್ಟದ ಮೌಲ್ಯಮಾಪನದಲ್ಲಿ ರಾಷ್ಟ್ರ ವಿಶ್ವವಿದ್ಯಾನಿಲಯಗಳಲ್ಲಿ ಶತಮಾನೋತ್ಸವ ಪೂರೈಸಿರುವ ಮೈಸೂರು ವಿಶ್ವವಿದ್ಯಾನಿಲಯಕ್ಕೆ 33ನೇ ರ‍್ಯಾಂಕ್ ದೊರೆತಿದೆ. ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳ ಶ್ರೇಯಾಂಕ ಪಟ್ಟಿಯನ್ನು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು ಶುಕ್ರವಾರ ಬಿಡುಗಡೆ ಮಾಡಿದ್ದು, ಮೈಸೂರು ವಿವಿ ರಾಜ್ಯದ ವಿಶ್ವವಿದ್ಯಾನಿಲಯಗಳ ಪೈಕಿ ಅಗ್ರಸ್ಥಾನ ಪಡೆದಿದೆ ಎಂದು ಕುಲಪತಿ ಪ್ರೊ.ಜಿ. ಹೇಮಂತಕುಮಾರ್‌ ತಿಳಿಸಿದ್ದಾರೆ.

5 ಪ್ರಧಾನ ಅಂಶಗಳನ್ನಾಧರಿಸಿ ಎನ್‌ಐಆರ್‌ಎಫ್‌ ವತಿಯಿಂದ ಪ್ರತಿ ವರ್ಷ ಭಾರತದಲ್ಲಿನ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ರಾರ‍ಯಂಕಿಂಗ್‌ ನೀಡಲಾಗುತ್ತಿದೆ. ಬೋಧನೆ, ಕಲಿಕೆ ಮತ್ತು ಸಂಪನ್ಮೂಲ, ಸಂಶೋಧನೆ ಮತ್ತು ವೃತ್ತಿಪರ ಅಭ್ಯಾಸಗಳ, ಪದವಿ ಫಲಿತಾಂಶಗಳು, ವಿಸ್ತರಣೆ ಮತ್ತು ಒಳಗೊಳ್ಳುವಿಕೆ ಹಾಗೂ ಸಹವರ್ತಿಗಳ ಅಭಿಪ್ರಾಯಗಳ ಮೌಲ್ಯಮಾಪನ ಮಾಡಲಾಗುತ್ತದೆ.

Tap to resize

Latest Videos

NIRF Ranking; ಬೆಂಗಳೂರಿನ ಐಐಎಸ್‌ಸಿ ದೇಶದ ನಂ.1 ವಿವಿ

ಈ ಐದು ಅಂಶಗಳು ಉನ್ನತ ಶಿಕ್ಷಣ ಸಂಸ್ಥೆಗಳ ಮುಖ್ಯ ಆಶಯಗಳಾದ ಬೋಧನೆ ಹಾಗೂ ಕಲಿಕೆಯಲ್ಲಿನ ಔನ್ಯತ್ಯ, ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಅಂಚಿಗೆ ತಳ್ಳಲ್ಪಟ್ಟಸಮುದಾಯಗಳ ತಲುಪುವಿಕೆ ಇತ್ಯಾದಿಗಳಿಗೆ ಸಂಬಂಧಿಸಿವೆ. ಈ ಎಲ್ಲಾ ಆಯಾಮಗಳಲ್ಲೂ ಮೈಸೂರು ವಿವಿ ಅಭೂತಪೂರ್ವ ಸಾಧನೆಗೈದಿದೆ ಎಂದು ಕುಲಪತಿ ತಿಳಿಸಿದ್ದಾರೆ.

2015ರಿಂದಲೂ ಎನ್‌ಐಆರ್‌ಎಫ್‌ ಮುಖಾಂತರ ಉನ್ನತ ಶಿಕ್ಷಣ ಸಂಸ್ಥೆಗಳ ಮೌಲ್ಯೀಕರಣವನ್ನು ಮಾಡಲಾಗುತ್ತಿದೆ. ಒಟ್ಟಾರೆ ವರ್ಗ, ವಿಶ್ವವಿದ್ಯಾನಿಲಯಗಳ ವರ್ಗ, ಎಂಜಿನಿಯರಿಂಗ್‌ ಸಂಸ್ಥೆಗಳ ವರ್ಗ ಸೇರಿದಂತೆ 10 ವರ್ಗಗಳಡಿಯಲ್ಲಿ ಮೌಲ್ಯಾಂಕವನ್ನು ನಡೆಸಲಾಗುತ್ತದೆ. ಮೈಸೂರು ವಿವಿ ಈ ಬಾರಿ ಮೊದಲೆರಡು ವರ್ಗಗಳ ರ‍್ಯಾಂಕಿಂಗ್‌ ಪ್ರಕ್ರಿಯೆಯಲ್ಲಿ ಭಾಗವಹಿಸತ್ತು. ಕಾಯಂ ಅಧ್ಯಾಪಕರ ಕೊರತೆ ಹಾಗೂ ಇನ್ನಿತರ ಮಿತಿಗಳ ನಡುವೆಯೂ 33ನೇ ಸ್ಥಾನ ಪಡೆದಿರುವುದು ಶ್ಲಾಘನಿಯ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಮೈಸೂರು ವಿವಿ ಯಶಸ್ಸಿಗೆ ಕಾರಣಕರ್ತರಾದ ಸಿಂಡಿಕೇಟ್‌ ಹಾಗೂ ಶೈಕ್ಷಣಿಕ ಮಂಡಳಿಯ ಸದಸ್ಯರು, ಅಧ್ಯಾಪಕರು ಹಾಗೂ ಅಧ್ಯಾಪಕೇತರ ವರ್ಗದವರು, ಅಧಿಕಾರಿಗಳು, ಸಂಶೋಧಕರು, ವಿದ್ಯಾರ್ಥಿಗಳು, ಪೋಷಕರನ್ನು ಅಭಿನಂದಿಸುತ್ತೇನೆ. ಮುಂದಿನ ವರ್ಷದಲ್ಲಿ ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

click me!