ಫಲಿತಾಂಶ ವಿಳಂಬ, ಬಿಎಡ್ ಪ್ರವೇಶಾತಿ ವಂಚಿತ, 40ಕ್ಕೂ ಹೆಚ್ಚು ವಿದ್ಯಾರ್ಥಿಗಳ ಕನಸು ನುಚ್ಚು ನೂರು
ಯಾದಗಿರಿ(ಜ.21): ಪರೀಕ್ಷಾ ಮೌಲ್ಯಮಾಪನ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆಯ ಮುಂತಾದ ಎಡವಟ್ಟುಗಳಿಂದಾಗಿ (ಕು)ಖ್ಯಾತಿ ಪಡೆದಿದ್ದ ಗುಲ್ಬರ್ಗ ವಿವಿ, ಇದೀಗ ಮತ್ತೊಂದು ಪ್ರಮಾದದಿಂದಾಗಿ ನೂರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಳ್ಳಿ ಇಡುವಂತಾಗಿದೆ. ಪದವಿ ಶಿಕ್ಷಣದ 6ನೇ ಸೆಮಿಸ್ಟರ್‌ನ ಪರೀಕ್ಷೆ ಹಾಗೂ ಫಲಿತಾಂಶ ವಿಳಂಬದಿಂದಾಗಿ ನೂರಾರು ವಿದ್ಯಾರ್ಥಿಗಳ ಬಿಎಡ್ ಓದುವ ಅಭಿಲಾಷೆಗೆ ತಣ್ಣೀರೆರಚಿದಂತಾಗಿದೆ. ಫಲಿತಾಂಶ ಪ್ರಕಟವಾಗುವಲ್ಲಿ ಆದ ವಿಳಂಬ ಈಗ ಬಿಎಡ್ ಪ್ರವೇಶಾತಿಗೆ ಕ್ಕೊಕ್ಕೆ ಬಿದ್ದಿದೆ.
ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯ ಹೊರತುಪಡಿಸಿ, ಎಲ್ಲಾ ವಿಶ್ವವಿದ್ಯಾಲಗಳು 6 ನೇ ಸೆಮಿಸ್ಟರ್ ಫಲಿತಾಂಶ ಪ್ರಕಟ ಮಾಡಿದ್ದವು. ಆದರೆ, ಗುಲಬರ್ಗಾ ವಿವಿ ಡಿಸೆಂಬರ್ 3 ರ ವರಗೆ ಬಿಎ 6 ನೇ ಸೆಮಿಸ್ಟರ್ ಪರೀಕ್ಷೆ ನಡೆಸಿತ್ತಾದರೂ, ಬಿಎಡ್ ಪ್ರವೇಶಾತಿ ಅರ್ಜಿ ಕರೆಯುವ ವೇಳೆ ಫಲಿತಾಂಶ ಪ್ರಕಟಿಸಿರಲಿಲ್ಲ.
undefined
ಗುಲ್ಬರ್ಗ ವಿವಿ: ಹಳಿ ತಪ್ಪಿದ ಜ್ಞಾನಗಂಗೆ ಶೈಕ್ಷಣಿಕ ಶಿಸ್ತು ಪದವಿ ವಿದ್ಯಾರ್ಥಿಗಳಿಗೆ ಸುಸ್ತೋ ಸುಸ್ತು..!
ಏನು ಕಾರಣ?:
ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯು, ರಾಜ್ಯದಲ್ಲಿ ಬಿಎಡ್ ಪ್ರವೇಶಾತಿಗೆ ಅರ್ಜಿ ಕರೆದಿತ್ತು. ನವೆಂಬರ್ 30 ರವರೆಗೆ ಅರ್ಜಿ ಸಲ್ಲಿಸಲು ಕೊನೆ ಅವಧಿಯಿತ್ತು. ಬಿಎಡ್ ಪ್ರವೇಶಾತಿಗೆ ಬಿಎ 6ನೇ ಸೆಮಿಸ್ಟರ್ ಸಮಗ್ರ ಅಂಕ ಸಮೂದಿಸಿ ಅರ್ಜಿ ಹಾಕಿದವರಿಗೆ ಮಾತ್ರ ಬಿಎಡ್ ಪ್ರವೇಶಾತಿಗೆ ಅರ್ಜಿ ಕರೆಯಲಾಗಿತ್ತು.
ಗುಲಬರ್ಗಾ ವಿಶ್ವವಿದ್ಯಾಲಯದ ವ್ಯಾಪ್ತಿಯ ಕಾಲೇಜಿನ ಬಿಎ 5 ಸೆಮಿಸ್ಟರ್ ವರಗೆ ಮಾತ್ರ ಅಂಕ ಪಟ್ಟಿಹೊಂದಿದ್ದ ವಿದ್ಯಾರ್ಥಿಗಳು ಕೂಡ ಬಿಎಡ್ ಪ್ರವೇಶ ಬಯಸಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸಲ್ಲಿಸಿದವರಿಗೆ ವಿವಿಧ ಬಿಎಡ್ ಕಾಲೇಜ್ ಗಳಲ್ಲಿ ಮೆರಿಟ್ ಆಧರಿಸಿ, ಸೀಟ್‌ಗಳೂ ಸಹ ಸಿಕ್ಕಿದವು. ಸೀಟುಗಳ ಹಂಚಿಕೆಯಿಂದ ಬಿಎಡ್ ಅಡ್ಮಿಷನ್ ಆಗುತ್ತದೆಂದು ತಿಳಿದು ಹಲವು ಕನಸು ಹೊತ್ತಿದ್ದರು. ಆದರೆ, ಇಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ 5ನೇ ಸೆಮಿಸ್ಟರ್‌ವರಗೆ ಅಂಕ ನಮೂದಿಸಿ ಅರ್ಜಿ ಹಾಕಿದವರ ಬಿಎಡ್ ಪ್ರವೇಶಾತಿ ತಿರಸ್ಕಾರ ಮಾಡಲಾಗಿದೆ. ಮೂರು ದಿನದ ಹಿಂದೆ ವಿಶ್ವವಿದ್ಯಾಲಯು 6 ಸೇ ಸೆಮಿಸ್ಟರ್ ಫಲಿತಾಂಶ ಪ್ರಕಟ ಮಾಡಿದ, ಮುದ್ರಿತ ದಾಖಲೆ ತೆಗೆದುಕೊಂಡು ಬಂದರೂ, ನಿಯಮಗಳ ಪ್ರಕಾರ ಪ್ರವೇಶಾತಿ ಪಡೆಯಲು ಸಾಧ್ಯವಾಗದೆ, ತಿರಸ್ಕರಿಸಲಾಗಿದೆ.
ಗುಲ್ಬರ್ಗಾ ವಿವಿಯಲ್ಲಿ ದುಡ್ಡು ಕೊಟ್ರೆ ಸಾಕು ಫೇಲಾಗಿದ್ರೂ ಪಾಸಾಗಿರುವ ಮಾರ್ಕ್ಸ್ ಕಾರ್ಡ್ ಸಿಗುತ್ತೆ!
ಶುಕ್ರವಾರ ಪ್ರವೇಶಾತಿ ಬಯಸಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ದಾಖಲಾತಿ ಪರಿಶೀಲನೆ ಹಮ್ಮಿಕೊಂಡಿತ್ತು. ಯಾದಗಿರಿ ನಗರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ (ಡಯಟ್) ನಲ್ಲಿ ದಾಖಲಾತಿಗಳ ಪರಿಶೀಲನೆ ವೇಳೆ ಆಗಮಿಸಿದ್ದ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಆಘಾತ ಮೂಡಿಸಿದೆ. ಬಿಎ 6ನೇ ಸೆಮಿಸ್ಟರ್ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಈಗ ಅತಂತ್ರರಾಗಿದ್ದಾರೆ. ಫಲಿತಾಂಶ ವಿಳಂಬದಿಂದಾಗಿ ವಿದ್ಯಾರ್ಥಿಗಳ ಕನಸಿಗೆ ಕತ್ತರಿ ಬಿದ್ದಿದೆ. ವಿಶ್ವವಿದ್ಯಾಲಯದ ಎಡವಟ್ಟಿಗೆ ವಿದ್ಯಾರ್ಥಿಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಗುಇವಿ ವಿಳಂಬ ಧೋರಣೆಯಿಂದ ಬಿಎಡ್ ವ್ಯಾಸಾಂಗ ಮಾಡಬೇಕೆನ್ನುವ ವಿದ್ಯಾರ್ಥಿಗಳು ಈಗ ಅತಂತ್ರರಾಗಿದ್ದಾರೆ.
ಬೇರೆ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ಬಿಎಡ್ ಪ್ರವೇಶಾತಿ ಕುರಿತ ದಾಖಲಾತಿ ಪರಿಶೀಲನೆಗೆ ಭಾಗವಹಿಸಿದ್ದರೂ, ಗುವಿವಿ ತಪ್ಪಿನಿಂದ ವಿದ್ಯಾರ್ಥಿಗಳ ಪ್ರವೇಶಾತಿ ಪಡೆಯುವದು ಅತಂತ್ರವಾಗಿದೆ. ಆಕ್ರೋಶಗೊಂಡ ವಿದ್ಯಾರ್ಥಿಗಳು ಡಯಟ್ ಅಧಿಕಾರಿಗಳ ಮುಂದೆ ನೋವು ತೊಡಿಕೊಂಡರು. ಪ್ರವೇಶಾತಿ ಮಾಡಿಕೊಳ್ಳಬೇಕೆಂದು ಅಲವತ್ತುಗೊಂಡರು. ಆದರೆ, ಸರ್ಕಾರದ ಸೂಚನೆ ಪ್ರಕಾರ, 6ನೇ ಸೆಮಿಸ್ಟರ್ ಸಮಗ್ರ ಅಂಕ ಸಲ್ಲಿಸಿದವರಿಗೆ ಮಾತ್ರ ಬಿಎಡ್ ಪ್ರವೇಶಾತಿಗೆ ಅವಕಾಶವಿದೆ. ಮೇಲಾಧಿಕಾರಿಗಳ ಆದೇಶದಂತೆ ಮುಂದಿನ ಕ್ರಮವಹಿಸಲಾಗುತ್ತದೆಂದು ಡಯಟ್ ಪ್ರಭಾರಿ ಪ್ರಾಂಶುಪಾಲ ದೊಡ್ಡಪ್ಪ ಹೊಸಮನಿ ವಿದ್ಯಾರ್ಥಿಗಳಿಗೆ ಸಮಜಾಯಿಷಿ ನೀಡುವ ಪ್ರಯತ್ನ ನಡೆಸಿದರು. ಗುಲಬರ್ಗಾ ವಿಶ್ವವಿದ್ಯಾಲಯ ಪರೀಕ್ಷೆ ಹಾಗೂ ಫಲಿತಾಂಶ ವಿಳಂಬದಿಂದ ಬಿಎಡ್ ಓದುವ ಕನಸು ಹೊತ್ತಿದ್ದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕತ್ತರಿ ಬಿದ್ದಿದೆ. ಸರ್ಕಾರ ಈ ವಿದ್ಯಾರ್ಥಿಗಳ ಸೂಕ್ತ ಕ್ರಮ ವಹಿಸಬೇಕಿದೆ.