Karnataka PUC Exam ಪಿಯು ಮಧ್ಯವಾರ್ಷಿಕ ಪ್ರಶ್ನೆಪತ್ರಿಕೆಯಲ್ಲಿ ತಪ್ಪುಗಳ ಸರಮಾಲೆ

By Kannadaprabha News  |  First Published Dec 27, 2021, 9:27 AM IST
  • ಪಿಯು ಮಧ್ಯವಾರ್ಷಿಕ ಪ್ರಶ್ನೆಪತ್ರಿಕೆಯಲ್ಲಿ ತಪ್ಪುಗಳ ಸರಮಾಲೆ
  •   4 ವಿಷಯಗಳ ಪ್ರಶ್ನೆಪತ್ರಿಕೆಯಲ್ಲಿ ಸಾಕಷ್ಟುಮುದ್ರಣದೋಷ, ತಪ್ಪು
  • ಪಿಯು ಮಂಡಳಿ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ, ಉಪನ್ಯಾಸಕರ ಆಕ್ರೋಶ

ವರದಿ:  ಲಿಂಗರಾಜು ಕೋರಾ

 ಬೆಳಗಾವಿ(ಡಿ.27): ಇತ್ತೀಚೆಗೆ ಮುಕ್ತಾಯಗೊಂಡ ದ್ವಿತೀಯ ಪಿಯುಸಿ (Second PUC) ಮಧ್ಯ ವಾರ್ಷಿಕ ಪರೀಕ್ಷೆಯ ವಿವಿಧ ಪ್ರಶ್ನೆ ಪತ್ರಿಕೆಗಳಲ್ಲಿ ಅನೇಕ ಪ್ರಶ್ನೆಗಳನ್ನು ತಪ್ಪಾಗಿ ಕೇಳಿರುವುದಲ್ಲದೆ, ಪುರಾವರ್ತನೆ, ಸಾಕಷ್ಟು ಮುದ್ರಣದ ದೋಷದ ಸರಮಾಲೆಯೇ ಕಂಡುಬಂದಿದೆ.

Tap to resize

Latest Videos

ಈ ಬಾರಿ ಪದವಿ ಪೂರ್ವ ಶಿಕ್ಷಣ ಇಲಾಖೆಯೇ (PU Board) ಸಿದ್ಧಪಡಿಸಿ ನೀಡಿರುವ ಪ್ರಶ್ನೆ ಪತ್ರಿಕೆಗಳಲ್ಲಿ ಲೋಪಗಳ ಬಗ್ಗೆ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಿಂದಲೇ ಆರೋಪಗಳು ಕೇಳಿಬರುತ್ತಿವೆ. ಲೆಕ್ಕಶಾಸ್ತ್ರ, ಇಂಗ್ಲಿಷ್‌ (english) , ಗಣಿತ, ರಸಾಯನಶಾಸ್ತ್ರ ಸೇರಿದಂತೆ ವಿವಿಧ ವಿಷಯಗಳ ಪ್ರಶ್ನೆ ಪತ್ರಿಕೆಗಳಲ್ಲಿ ಈ ರೀತಿಯ ಹಲವು ಲೋಪಗಳು ಕಂಡು ಬಂದಿವೆ. ಪ್ರಶ್ನೆ ಪತ್ರಿಕೆ ( Question Paper ) ಸಿದ್ಧಪಡಿಸುವಲ್ಲಿ ಪಿಯು ಇಲಾಖೆ ನಿರ್ಲಕ್ಷ್ಯದಿಂದ ಈ ರೀತಿ ಆಗಿದೆ ಎಂದು ವಿದ್ಯಾರ್ಥಿ (Students) , ಉಪನ್ಯಾಸಕರು ಕಿಡಿಕಾರಿದ್ದಾರೆ.

ಅಲ್ಲದೆ, ತಪ್ಪಾಗಿ ಕೇಳಿರುವ ಪ್ರಶ್ನೆಗಳು ಹಾಗೂ ಮುದ್ರಣ ದೋಷಗಳನ್ನು ಗುರುತಿಸಿರುವ ಪ್ರಶ್ನೆ ಪತ್ರಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ (Social Media) ಹರಿದಾಡುತ್ತಿವೆ.

ತಪ್ಪುಗಳೇನು?  ರಾಜ್ಯದ ವಿವಿಧ ಕಾಲೇಜುಗಳ ಉಪನ್ಯಾಸಕರು ನೀಡಿದ ಮಾಹಿತಿ ಪ್ರಕಾರ, ಇಂಗ್ಲಿಷ್‌ ಪ್ರಶ್ನೆ ಪತ್ರಿಕೆಯ ಪ್ರಶ್ನೆ 8ರಲ್ಲಿ ಪದ್ಯದ ಹೆಸರನ್ನೇ ಬದಲಿಸಲಾಗಿದೆ. ‘ವೆನ್‌ ಯು ಆರ್‌ ಓಲ್ಡ್‌’ ಎನ್ನುವ ಹೆಸರಿನ ಬದಲು ‘ಆನ್‌ ಚಿಲ್ಡ್ರನ್‌’ ಎಂದು ನೀಡಲಾಗಿದೆ.

ಅಲ್ಲದೆ ಈ ಬಾರಿಯ ಮಧ್ಯವಾರ್ಷಿಕ ಪರೀಕ್ಷೆಗೆ ನಿಗದಿಪಡಿಸಿರುವ ಪಠ್ಯದಲ್ಲಿ ಡೈಲಾಗ್‌ ಡೆಲಿವರಿಯೇ ಇರಲಿಲ್ಲ. ಆದರೆ, ಪ್ರಶ್ನೆ ಪತ್ರಿಕೆಯಲ್ಲಿ ಅದನ್ನೂ ಕೇಳಲಾಗಿದೆ ಎಂದು ಆರೋಪಿಸಲಾಗಿದೆ.

ಇನ್ನು, ಗಣಿತ ಪ್ರಶ್ನೆ ಪತ್ರಿಕೆಯ ಮೂರು ಅಂಕದ ಪ್ರಶ್ನೆ ಸಂಖ್ಯೆ 26ರಲ್ಲಿ ತಪ್ಪಾಗಿದೆ. ಇನ್ನು, ಲೆಕ್ಕಶಾಸ್ತ್ರ ಪ್ರಶ್ನೆ ಪತ್ರಿಕೆಯಲ್ಲಿ 12 ಮತ್ತು 13ನೇ ಪ್ರಶ್ನೆಗಳು ಪುನರಾವರ್ತನೆಯಾಗುವೆ. 19 ಮತ್ತು 20ನೇ ಪ್ರಶ್ನೆಗಳನ್ನು ತಪ್ಪಾಗಿ ಕೇಳಲಾಗಿದೆ. 32ನೇ ಪ್ರಶ್ನೆ ಸಂಪೂರ್ಣ ತಪ್ಪಾಗಿದೆ. ಅರ್ಥಶಾಸ್ತ್ರ ಪ್ರಶ್ನೆ ಪತ್ರಿಕೆಯಲ್ಲಿ ಎಲ್ಲ ಪಠ್ಯಗಳನ್ನೂ ಸಮತೋಲನ ಮಾಡಿ ಪ್ರಶ್ನೆಗಳನ್ನು ಕೇಳದೆ ಕೆಲವೇ ಪಠ್ಯಗಳಿಂದ ಹೆಚ್ಚು ಪ್ರಶ್ನೆ ಕೇಳಲಾಗಿದೆ. ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆಯಲ್ಲೂ ಇಂತಹ ಹಲವು ಲೋಪಗಳು ಕಾಣಸಿಗುತ್ತವೆ ಎಂದು ವಿವಿಧ ಕಾಲೇಜುಗಳ ಸಂಬಂಧಪಟ್ಟವಿಷಯಗಳ ಉಪನ್ಯಾಸಕರೇ ಆರೋಪಿಸುತ್ತಿದ್ದಾರೆ.

ಇಲಾಖೆಯೇ ಸಿದ್ಧಪಡಿಸಿದ್ದ ಪ್ರಶ್ನೆ ಪತ್ರಿಕೆ:  ಪ್ರತಿ ವರ್ಷ ಮಧ್ಯವಾರ್ಷಿಕ ಪರೀಕ್ಷೆಗೆ ಇಲಾಖೆಯಿಂದ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸುತ್ತಿರಲಿಲ್ಲ. ಪ್ರಾಂಶುಪಾಲರ ಸಂಘದಿಂದ ಆಯಾ ಜಿಲ್ಲಾ ಮಟ್ಟದಲ್ಲೇ ಪ್ರತ್ಯೇಕ ಪ್ರಶ್ನೆ ಪತ್ರಿಕೆ ತಯಾರಿಸಿ ಕಾಲೇಜು ಮಟ್ಟದಲ್ಲೇ ಪರೀಕ್ಷೆ ನಡೆಸಲಾಗುತ್ತಿತ್ತು.

ಆದರೆ, ಕಳೆದ ವರ್ಷ ಕೋವಿಡ್‌ ಹಿನ್ನೆಲೆಯಲ್ಲಿ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ (exam) ರದ್ದುಪಡಿಸಿ ಆ ವಿದ್ಯಾರ್ಥಿಗಳ ಎಸ್ಸೆಸ್ಸೆಲ್ಸಿ, ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯು ಮಧ್ಯವಾರ್ಷಿಕ ಪರೀಕ್ಷೆ ಅಂಕಗಳನ್ನು ಆಧರಿಸಿ ಫಲಿತಾಂಶ ನೀಡಲಾಯಿತು. ಈ ವೇಳೆ, ಕೆಲ ಕಾಲೇಜುಗಳು ಮಧ್ಯವಾರ್ಷಿಕ ಪರೀಕ್ಷೆ ನಡೆಸದಿರುವುದು, ಗಂಭೀರವಾಗಿ ಪರಿಗಣಿಸದಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಈ ಬಾರಿ ಇಲಾಖೆಯೇ ವಾರ್ಷಿಕ ಪರೀಕ್ಷೆ ಮಾದರಿಯಲ್ಲಿ ತಾನೇ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ಡಿ.9ರಿಂದ 23ರವರೆಗೆ ಏಕಕಾಲದಲ್ಲಿ ಪರೀಕ್ಷೆ ನಡೆಸಿತ್ತು.

ಒಂದು ವೇಳೆ ಒಮಿಕ್ರೋನ್‌ನಿಂದ (Omicron) ಮತ್ತೆ ಪರೀಕ್ಷೆ ನಡೆಸಲು ಸಾಧ್ಯವಾಗದೆ ಹೋದರೆ ಅರ್ಧವಾರ್ಷಿಕ ಪರೀಕ್ಷೆಯನ್ನು ವಾರ್ಷಿಕ ಫಲಿತಾಂಶಕ್ಕೆ ಪರಿಗಣಿಸಲು ಇಲಾಖೆ ಚಿಂತನೆ ನಡೆಸಿ ಈ ಕ್ರಮ ಕೈಗೊಂಡಿತ್ತು.

  • ಪಿಯು ಮಧ್ಯವಾರ್ಷಿಕ ಪ್ರಶ್ನೆಪತ್ರಿಕೆಯಲ್ಲಿ ತಪ್ಪುಗಳ ಸರಮಾಲೆ
  •   4 ವಿಷಯಗಳ ಪ್ರಶ್ನೆಪತ್ರಿಕೆಯಲ್ಲಿ ಸಾಕಷ್ಟುಮುದ್ರಣದೋಷ, ತಪ್ಪು
  • ಪಿಯು ಮಂಡಳಿ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ, ಉಪನ್ಯಾಸಕರ ಆಕ್ರೋಶ
click me!