ಅ.21ರಿಂದ ಶಾಲೆಗಳಲ್ಲಿ ಮಧ್ಯಾಹ್ನ ಬಿಸಿಯೂಟ

By Kannadaprabha NewsFirst Published Oct 12, 2021, 1:59 PM IST
Highlights
  • ಕೊರೋನಾ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಒಂದೂವರೆ ವರ್ಷದಿಂದ ಸ್ಥಗಿತವಾಗಿದ್ದ ಮಧ್ಯಾಹ್ನದ ಬಿಸಿಯೂಟ
  • ಅ.20ರವರೆಗೆ ದಸರಾ ರಜೆ ಇರುವುದರಿಂದ ರಜೆ ಮುಗಿದ ಬಳಿಕ ಬಿಸಿಯೂಟ ನೀಡಲು ಸರ್ಕಾರ ತೀರ್ಮಾನ 

 ಬೆಂಗಳೂರು (ಅ.12):  ಕೊರೋನಾ (Corona) ಹಿನ್ನೆಲೆಯಲ್ಲಿ ಶಾಲೆಗಳಲ್ಲಿ (School) ಒಂದೂವರೆ ವರ್ಷದಿಂದ ಸ್ಥಗಿತವಾಗಿದ್ದ ಮಧ್ಯಾಹ್ನದ ಬಿಸಿಯೂಟ (Mid Day Meal) ಯೋಜನೆ ಅ.21ರಿಂದ ಪುನಃ ಪ್ರಾರಂಭವಾಗಲಿದೆ. ಅ.20ರವರೆಗೆ ದಸರಾ ರಜೆ ಇರುವುದರಿಂದ ರಜೆ ಮುಗಿದ ಬಳಿಕ ಬಿಸಿಯೂಟ ನೀಡಲು ಸರ್ಕಾರ ತೀರ್ಮಾನ ಕೈಗೊಂಡಿದೆ.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ (BC Nagesh) ಅವರು, ಕೊರೋನಾದಿಂದಾಗಿ ಕಳೆದ ಮಾರ್ಚಿಂದ ಶಾಲೆಗಳಲ್ಲಿ ಬಿಸಿಯೂಟ ನೀಡುತ್ತಿರಲಿಲ್ಲ. ಇದೀಗ ಕೊರೋನಾ ತಹಬದಿಗೆ ಬಂದ ಹಿನ್ನೆಲೆಯಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ, ಶಾಲೆಗಳಿಗೆ ಸೂಚನೆ ನೀಡಲಾಗಿದೆ. ಅ.21ರಿಂದ ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.

ದಸರಾ ರಜೆ ಬಳಿಕ ಶಾಲೆಗಳಲ್ಲಿ ಬಿಸಿಯೂಟ

ಅನುಮತಿ ನೀಡಿದರೆ ಪ್ರಾಥಮಿಕ ತರಗತಿ:  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರ ಅಧ್ಯಕ್ಷತೆಯ ತಾಂತ್ರಿಕ ಸಲಹಾ ಸಮಿತಿ ಒಪ್ಪಿಗೆ ನೀಡಿದರೆ 1 ರಿಂದ 5ನೇ ತರಗತಿಗಳನ್ನು ಭೌತಿಕವಾಗಿ ಪ್ರಾರಂಭಿಸಲಾಗುವುದು. ದಸರಾ (Dasara) ಹಬ್ಬದ ಬಳಿಕ ಸಮಿತಿ ಸಭೆ ನಡೆಯಲಿದ್ದು, ಶಾಲೆಗಳ ಆರಂಭದ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ. ಸಮಿತಿ ಅನುಮತಿ ನೀಡಿದರೆ ಪ್ರಾಥಮಿಕ ಶಾಲೆಗಳನ್ನು (School) ಆರಂಭಿಸಲು ನಾವು ಸಿದ್ಧವಾಗುತ್ತೇವೆ ಎಂದು ತಿಳಿಸಿದರು.

1 ರಿಂದ 5ನೇ ತರಗತಿ ಆರಂಭ ಯಾವಾಗ ? : ಸಚಿವ ನಾಗೇಶ್ ರಿಂದಲೇ ಸ್ಪಷ್ಟ ಮಾಹಿತಿ

12 ಸಾವಿರ ಖಾಸಗಿ ಅಭ್ಯರ್ಥಿಗಳಿಗೆ ದ್ವಿತೀಯ ಪಿಯುಸಿ (PUC) ಪೂರಕ ಪರೀಕ್ಷೆ ನಡೆಸಬೇಕಿದೆ. ಪರೀಕ್ಷೆ ನಡೆಸಿದರೂ ಕಾಲೇಜಿಗೆ ಸೇರ್ಪಡೆಯಾಗಲು ಅವಕಾಶವಿಲ್ಲ. ಆದ್ದರಿಂದ ಪರೀಕ್ಷೆ ನಡೆಸಬೇಕೋ, ಬೇಡವೋ ಎಂಬ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. 6 ರಿಂದ 12ನೇ ತರಗತಿ ವಿದ್ಯಾರ್ಥಿಗಳ ಹಾಜರಾತಿ ಶೇ.90 ರಷ್ಟಿದೆ. ಶಿಕ್ಷಕರ ವರ್ಗಾವಣೆಗೆ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಾಗುವುದು ಎಂದು ಹೇಳಿದರು.

ಶುಲ್ಕ ನಿಯಂತ್ರಣ ಸಮಿತಿ ಚಿಂತನೆ:

ಶಾಲೆಗಳಲ್ಲಿ ಶುಲ್ಕ (School Fee) ನಿಯಂತ್ರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಸೇರಿದಂತೆ ಬೇರೆ ರಾಜ್ಯಗಳ ಮಾದರಿ ಪರಿಶೀಲಿಸಲಾಗುವುದು. ಶುಲ್ಕ ನಿಯಂತ್ರಿಸಲು ಸಮಿತಿ ರಚಿಸುವಂತೆ ಪೋಷಕರು ಮನವಿ ಮಾಡಿದ್ದಾರೆ. ಆದ್ದರಿಂದ ಸಮಿತಿ ರಚಿಸುವ ಚಿಂತನೆ ಇದ್ದು, ಬೇರೆ ರಾಜ್ಯಗಳಲ್ಲಿ ಯಾವ ಮಾದರಿಯಲ್ಲಿ ಶುಲ್ಕ ವಿಧಿಸಲಾಗುತ್ತದೆ ಎಂದು ಮಾಹಿತಿ ತರಿಸಿಕೊಂಡು ಅಧಿಕಾರಿಗಳ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಸಚಿವ ನಾಗೇಶ್‌ ಅವರು ಉತ್ತರಿಸಿದರು.

1ನೇ ತರಗತಿ ಆರಂಭ: 16ಕ್ಕೆ ನಿರ್ಧಾರ?

1 ರಿಂದ 5ನೇ ತರಗತಿಗಳನ್ನು ಭೌತಿಕವಾಗಿ ಆರಂಭಿಸಲು ಅನುಮತಿ ನೀಡುವ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯ ತಾಂತ್ರಿಕ ಸಲಹಾ ಸಮಿತಿಯು ಅ.16 ಅಥವಾ 18ಕ್ಕೆ ಸಭೆ ನಡೆಸುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ. ದಸರಾ ಹಬ್ಬದ ಬಳಿಕ ಸಭೆ ನಡೆಸಲು ನಿರ್ಧರಿಸಲಾಗಿದೆಯಾದರೂ ಅ.16 ಅಥವಾ 18 ರಂದು ನಡೆಯುವ ಸಾಧ್ಯತೆಯಿದೆ. ಅ.21ರಿಂದ ಶಾಲೆಗಳಲ್ಲಿ ಬಿಸಿಯೂಟ ಆರಂಭಿಸಲು ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ಅಂದಿನಿಂದಲೇ ಪ್ರಾಥಮಿಕ ಶಾಲಾ ತರಗತಿಯನ್ನೂ ಪ್ರಾರಂಭಿಸಲು ಸಮಿತಿ ಅನುಮತಿ ನೀಡುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

click me!