4 ಲಕ್ಷ ದ್ವಿತೀಯ ಪಿಯು ವಿದ್ಯಾರ್ಥಿಗಳು ‘ನಾಪತ್ತೆ’!

By Kannadaprabha NewsFirst Published Oct 11, 2021, 7:11 AM IST
Highlights

*  ಆನ್‌ಲೈನ್‌, ಆಫ್‌ಲೈನ್‌, ಭೌತಿಕ ಯಾವ ತರಗತಿಗೂ ಬರುತ್ತಿಲ್ಲ
*  ಹೀಗೇ ಆದರೆ ಅಂತಿಮ ಪರೀಕ್ಷೆಗೆ ಅರ್ಹತೆ ಸಿಗಲ್ಲ
*  ದಸರಾ ರಜೆ ಬಳಿಕ ಹಾಜರಾತಿ ಕಡ್ಡಾಯ
 

ಲಿಂಗರಾಜು ಕೋರಾ

ಬೆಂಗಳೂರು(ಅ.11): ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿಯ(PUC) ಶೇ.65ರಷ್ಟುವಿದ್ಯಾರ್ಥಿಗಳು(Students) ಶೈಕ್ಷಣಿಕ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಲೇ ಇಲ್ಲ! ಹೌದು, ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ 6.27 ಲಕ್ಷ ವಿದ್ಯಾರ್ಥಿಗಳ ಪೈಕಿ ಶೇ.65ರಷ್ಟು ಅಂದರೆ ಸುಮಾರು 4 ಲಕ್ಷ ವಿದ್ಯಾರ್ಥಿಗಳು ಆನ್‌ಲೈನ್‌(Online), ಆಫ್‌ಲೈನ್‌(offline) ಅಥವಾ ಭೌತಿಕ ಸೇರಿದಂತೆ ಯಾವುದೇ ರೂಪದಲ್ಲೂ ಶಿಕ್ಷಣ(Education) ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿಲ್ಲ!

ಪದವಿ ಪೂರ್ವ ಶಿಕ್ಷಣ ಇಲಾಖೆಯೇ ನೀಡಿರುವ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಅಧಿಕೃತ ಹಾಜರಾತಿ(Attendance) ಅಂಕಿ- ಅಂಶಗಳ ಪ್ರಕಾರ, 2021ನೇ ಸಾಲಿನಲ್ಲಿ ದ್ವಿತೀಯ ಪಿಯುಸಿಗೆ 6.27 ಲಕ್ಷ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಈ ಪೈಕಿ 4 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಗತಿ ಚಟುವಟಿಕೆಗೆ ಪಾಲ್ಗೊಂಡಿಲ್ಲ. ನಿಯಮಗಳ ಪ್ರಕಾರ, ದ್ವಿತೀಯ ಪಿಯುಸಿ ಪರೀಕ್ಷೆಗೆ(Exam) ಹಾಜರಾಗುವ ಅರ್ಹತೆ ಪಡೆಯಲು ವಿದ್ಯಾರ್ಥಿಯು ತರಗತಿಗೆ ಶೇ.75ರಷ್ಟು ಹಾಜರಾತಿ ಹೊದಿರಬೇಕು. ಆದರೆ, 4 ಲಕ್ಷದಷ್ಟು ವಿದ್ಯಾರ್ಥಿಗಳು ಈ ಅರ್ಹತೆ ಪಡೆದಿಲ್ಲ.

ಇದೇ ಪರಿಸ್ಥಿತಿ ಮುಂದುವರೆದರೆ ಮುಂದಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಬಹಳ ಕಡಿಮೆ ವಿದ್ಯಾರ್ಥಿಗಳು ಮಾತ್ರ ಪರೀಕ್ಷೆಗೆ ಹಾಜರಾಗುವಂತಾಗುತ್ತದೆ. ಇದು ರಾಜ್ಯದ ಉನ್ನತ ಶಿಕ್ಷಣ ವ್ಯವಸ್ಥೆಗೆ ಪೆಟ್ಟುಕೊಡುವ ಸಾಧ್ಯತೆಯಿದೆ. ಹೀಗಾಗಿ ಇಲಾಖೆ ಚಿಂತೆಗೆ ಸಿಲುಕಿದೆ.

1ರಿಂದ 5ನೇ ತರಗತಿ ಆರಂಭ ಯಾವಾಗ? ಈ ಬಗ್ಗೆ ಸ್ಪಷ್ಟನೆ ಕೊಟ್ಟ ಸಿಎಂ ಬೊಮ್ಮಾಯಿ

ರಾಜ್ಯದ ಪದವಿಪೂರ್ವ ಕಾಲೇಜುಗಳು ಶಿಕ್ಷಣ ಇಲಾಖೆಯ ಸ್ಟೂಡೆಂಟ್‌ ಅಚೀವ್ಮೆಂಟ್‌ ಟ್ರ್ಯಾಕಿಂಗ್‌ ಸಿಸ್ಟಮ್‌ (ಎಸ್‌ಎಟಿಎಸ್‌) ಪೋರ್ಟಲ್‌ನಲ್ಲಿ ಪ್ರತಿ ದಿನವೂ ತಮ್ಮ ವಿದ್ಯಾರ್ಥಿಗಳ ಹಾಜರಾತಿ ದಾಖಲಿಸಬೇಕು. ಅದರಂತೆ ಸದ್ಯದವರೆಗೆ ಇಲಾಖೆಗೆ ಬಂದಿರುವ ಮಾಹಿತಿ ಪ್ರಕಾರ, ದ್ವಿತೀಯ ಪಿಯುಸಿಯ ಒಟ್ಟು 6,27,331 ವಿದ್ಯಾರ್ಥಿಗಳ ಪೈಕಿ 70,478 ವಿದ್ಯಾರ್ಥಿಗಳು ಆನ್‌ಲೈನ್‌ ಶಿಕ್ಷಣಕ್ಕೆ ಹಾಜರಾಗುತ್ತಿದ್ದಾರೆ. ಇನ್ನು 1,54,540 ವಿದ್ಯಾರ್ಥಿಗಳು ಆಫ್‌ಲೈನ್‌ ಅಂದರೆ ಖುದ್ದು ಕಾಲೇಜಿಗೆ ಹಾಜರಾತಿ ಭೌತಿಕ ತರಗತಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಒಟ್ಟಾರೆ 2,25,018 (ಶೇ.35.87) ವಿದ್ಯಾರ್ಥಿಗಳು ಆನ್‌ಲೈನ್‌ ಹಾಗೂ ಆಪ್‌ಲೈನ್‌ ತರಗತಿ ಮೂಲಕ ಕಲಿಕೆಯಲ್ಲಿ ಭಾಗಿಯಾಗುತ್ತಿದ್ದಾರೆ. ಉಳಿದ 4,02,313 ವಿದ್ಯಾರ್ಥಿಗಳು ಏನು ಮಾಡುತ್ತಿದ್ದಾರೆ, ಎಲ್ಲಿ ಹೋಗಿದ್ದಾರೆ ಎಂಬ ಮಾಹಿತಿಯೇ ಇಲ್ಲ ಎನ್ನಲಾಗುತ್ತಿದೆ.

ಪರೀಕ್ಷೆಗೆ ಶೇ.75ರಷ್ಟು ಹಾಜರಾತಿ ಕಡ್ಡಾಯ

ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಜುಲೈನಿಂದಲೇ ಆನ್‌ಲೈನ್‌ ತರಗತಿಗಳಿಗೆ ಅವಕಾಶ ನೀಡಲಾಗಿತ್ತು. ಆ.23ರಿಂದ ಭೌತಿಕ ತರಗತಿ ಆರಂಭಿಸಲಾಗಿದೆ. ಅ.1ರಿಂದ ಶೇ.100ರಷ್ಟುಪ್ರಮಾಣದಲ್ಲಿ ದಿನಪೂರ್ತಿ ತರಗತಿಗಳನ್ನು ಆರಂಭಿಸಲಾಗಿದೆ. ಭೌತಿಕ ತರಗತಿಗೆ ಹಾಜರಾತಿ ಕಡ್ಡಾಯಗೊಳಿಸಿಲ್ಲವಾದರೂ ಪರೀಕ್ಷೆಗೆ ಪ್ರವೇಶ ನೀಡಲು ಆನ್‌ಲೈನ್‌ ಅಥವಾ ಆಫ್‌ಲೈನ್‌ ಯಾವುದಾದರೂ ಮಾದರಿ ತರಗತಿಗಳಿಗೆ ವಿದ್ಯಾರ್ಥಿಗಳು ಕನಿಷ್ಠ 75ರಷ್ಟು ಹಾಜರಾತಿ ಕಡ್ಡಾಯಗೊಳಿಸಲಾಗಿದೆ.

ಅಧಿಕಾರಿಗಳು ಹೇಳೋದೇನು?

ಆನ್‌ಲೈನ್‌ ಆಗಲಿ, ಆಫ್‌ಲೈನ್‌ ತರಗತಿಗಳಾಗಲಿ ಆರಂಭವಾದ ದಿನದಿಂದಲೇ ಪಿಯು ಕಾಲೇಜುಗಳು ವಿದ್ಯಾರ್ಥಿಗಳ ಪ್ರತಿ ದಿನದ ಹಾಜರಾತಿಯನ್ನು ಸ್ಟೂಡೆಂಟ್‌ ಅಚೀವ್ಮೆಂಟ್‌ ಟ್ರ್ಯಾಕಿಂಗ್‌ ಸಿಸ್ಟಮ್‌ (ಎಸ್‌ಎಟಿಎಸ್‌)ನಲ್ಲಿ ದಾಖಲಿಸಬೇಕೆಂದು ಸೂಚಿಸಲಾಗಿದೆ. ಆದರೆ, ಸಾಕಷ್ಟುಕಾಲೇಜುಗಳು ಇನ್ನೂ ಕೂಡ ಈ ಮಾಹಿತಿಯನ್ನು ದಾಖಲಿಸುತ್ತಿಲ್ಲ. ಇದರಿಂದ ಮಕ್ಕಳ ಹಾಜರಾತಿ ಪ್ರಮಾಣ ತೀವ್ರ ಕಡಿಮೆ ಕಂಡುಬರುತ್ತಿರಬಹುದು. ಎಸ್‌ಎಟಿಎಸ್‌ನಲ್ಲಿ ಹಾಜರಾತಿ ದಾಖಲಿಸಿಲ್ಲ ಎಂದ ಮಾತ್ರಕ್ಕೆ 4 ಲಕ್ಷ ಮಕ್ಕಳು ಯಾವುದೇ ತರಗತಿಗೆ ಭಾಗಿಯಾಗಿಲ್ಲ ಎಂದು ಹೇಳುವುದು ಸಾಧ್ಯವಿಲ್ಲ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ದಸರಾ ರಜೆ ಬಳಿಕ ಎಲ್ಲ ಕಾಲೇಜುಗಳಿಗೂ ಹಾಜರಾತಿ ಮಾಹಿತಿಯನ್ನು ಕಡ್ಡಾಯವಾಗಿ ದಾಖಲಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರಾದ ಸ್ನೇಹಲ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
 

click me!