ಹುಡುಗ ಹುಡುಗಿ ಜೊತೆಲೆ ಕೂರೋದಕ್ಕೆ ಕೋಪ: ಬಸ್‌ ನಿಲ್ದಾಣದಲ್ಲಿದ್ದ ಬೆಂಚ್‌ ಕತ್ತರಿಸಿದ ಊರವರು

By Suvarna News  |  First Published Jul 21, 2022, 7:44 PM IST

ಬಸ್‌ ಸ್ಟ್ಯಾಂಡ್‌ನಲ್ಲಿ ಇರಿಸಿದ್ದ ಸಾಲು ಬೆಂಚಿನ ಮೇಲೆ ಹುಡುಗ ಹುಡುಗಿಯರು ಜೊತೆಯಲ್ಲಿಯೇ ಕೂರುತ್ತಾರೆ ಎಂದು ಸಿಟ್ಟಿಗೆದ್ದ ಊರವರು ಮಧ್ಯದ ಸೀಟನ್ನು ಕತ್ತರಿಸಿ ಒಂದು ಕಡೆ ಹುಡುಗರು ಮತ್ತೊಂದು ಕಡೆ ಹುಡುಗಿಯರು ಕೂರುವಂತೆ ಮಾಡಿದ ವಿಚಿತ್ರ ಘಟನೆ ಕೇರಳದಲ್ಲಿ ನಡೆದಿದೆ.


ಸಾಮಾನ್ಯವಾಗಿ ಕಾಲೇಜು ಹುಡುಗ ಹುಡುಗಿಯರು ಏನೇನೋ ಕಾರಣಕ್ಕೆ ಊರವರ ಕೆಂಗಣ್ಣಿಗೆ ಕಾರಣರಾಗುತ್ತಾರೆ. ಮೊದಲೆಲ್ಲಾ ಹುಡುಗಿ ಜೀನ್ಸ್ ಪ್ಯಾಂಟ್ ಹಾಕಿದರೆ ಸ್ಟೈಲ್‌ ಮಾಡಿದರೆ ಕೆಕ್ಕರಿಸಿ ನೋಡುವ ಮಂದಿ ಆಕೆಯ ಮೇಲೆ ಒಂದು ಕಣ್ಣು ಇಡುತ್ತಿದ್ದರು. ಜೊತೆಗೆ ಹೆಣ್ಣು ಮಕ್ಕಳ ಮೇಲೆ ಕಣ್ಣು ಹಾಕುವ ಊರ ಪಡ್ಡೆ ಹೈಕಳ ಮೇಲೂ ಊರವರು ಒಂದು ಕಣ್ಣು ಇಡುತ್ತಿದ್ದರು. ಆದರೆ ಈಗ ಕೇರಳದ ಊರ ಜನ ಒಂದು ಹೆಜ್ಜೆ ಮುಂದೆ ಹೋಗಿ ಬಸ್‌ ನಿಲ್ದಾಣದಲ್ಲಿದ್ದ ಬೆಂಚನ್ನೇ ಕತ್ತರಿಸಿದ್ದಾರೆ.

ಬಸ್‌ ಸ್ಟ್ಯಾಂಡ್‌ನಲ್ಲಿ ಇರಿಸಿದ್ದ ಸಾಲು ಬೆಂಚಿನ ಮೇಲೆ ಹುಡುಗ ಹುಡುಗಿಯರು ಜೊತೆಯಲ್ಲಿಯೇ ಕೂರುತ್ತಾರೆ ಎಂದು ಸಿಟ್ಟಿಗೆದ್ದ ಊರವರು ಮಧ್ಯದ ಸೀಟನ್ನು ಕತ್ತರಿಸಿ ಒಂದು ಕಡೆ ಹುಡುಗರು ಮತ್ತೊಂದು ಕಡೆ ಹುಡುಗಿಯರು ಕೂರುವಂತೆ ಮಾಡಿದ್ದಾರೆ. ಆದರೆ ಇದಕ್ಕೆ ತಿರುಗೇಟು ನೀಡಿರುವ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಇರುವ ಸಿಂಗಲ್ ಸೀಟಿನಲ್ಲಿ ಹುಡುಗರು ಹುಡುಗಿಯರು ಜೊತೆ ಜೊತೆಯಾಗಿಯೇ ಕುಳಿತು ಜೋಡಿ ಜೋಡಿಯಾಗಿ ಕುಳಿತು ಫೋಟೋ ತೆಗೆಸಿಕೊಂಡು ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಊರವರಿಗೆ ಮತ್ತಷ್ಟು ಹೊಟ್ಟೆ ಉರಿಸಿದ್ದಾರೆ. ವಿದ್ಯಾರ್ಥಿಗಳ ಈ ತಿರುಗೇಟಿನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Tap to resize

Latest Videos

Mangaluru: ಕಾಲೇಜು ವಿದ್ಯಾರ್ಥಿಗಳ ಲಿಪ್ ಲಾಕ್ ವೈರಲ್: ವಿಡಿಯೋ ಮಾಡಿದ ವಿದ್ಯಾರ್ಥಿ ವಶಕ್ಕೆ!

ಕೇರಳದ ತಿರುವನಂತಪುರದಲ್ಲಿ ಈ ಘಟನೆ ನಡೆದಿದೆ. ಉದ್ದವಾದ ಸ್ಟೀಲ್‌ ಬೆಂಚ್‌ನ್ನು ತಿರುವನಂತಪುರದ ಇಂಜಿನಿಯರಿಂಗ್ ಕಾಲೇಜೊಂದರ ಮುಂದೆ ಬಸ್‌ಗಾಗಿ ಕಾಯುವ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಕುಳಿತುಕೊಳ್ಳುವ ಸಲುವಾಗಿ ಹಾಕಲಾಗಿತ್ತು. ಈ ಉದ್ದ ಸ್ಟೀಲ್ ಬೆಂಚನ್ನು ಈಗ ಮೂರು ಸೀಟುಗಳ ಬೆಂಚ್‌ ಆಗಿ ಊರವರು ಮಾಡಿದ್ದಾರೆ. ಹುಡುಗರು ಹಾಗೂ ಹುಡುಗಿಯರು ದೂರ ದೂರ ಕುಳಿತುಕೊಳ್ಳಬೇಕು ಎಂಬ ಉದ್ದೇಶದಿಂದ ಈ ಉದ್ದದ ಸೀಟಿನ ಮಧ್ಯದಲ್ಲಿ ಎರಡು ಕಡೆ ಸೀಟುಗಳನ್ನು ಊರವರು ಕತ್ತರಿಸಿದ್ದಾರೆ. ಇದರಿಂದಾಗಿ ಈ ಸೀಟುಗಳಲ್ಲಿ ಪಕ್ಕ ಪಕ್ಕವೇ ಇಬ್ಬರು ಕೂರಲಾಗುವುದಿಲ್ಲ. ಒಂದೊಂದು ಸೀಟಿನಲ್ಲಿ ಒಬ್ಬೊಬ್ಬರಂತೆ ದೂರ ದೂರ ಕೂರಬೇಕಾಗಿದೆ. 

Mangaluru: ಕಿಸ್ಸಿಂಗ್ ವೀಡಿಯೋ ಜಾಡು ಹಿಡಿದ ಪೊಲೀಸರಿಗೆ ವಿದ್ಯಾರ್ಥಿಗಳ ಬೆತ್ತಲು ವೀಡಿಯೋ ಲಭ್ಯ!

ಊರವರ ಈ ನೈತಿಕ ಪೊಲೀಸ್‌ಗಿರಿಗೆ ಅಚ್ಚರಿಗೊಂಡ ವಿದ್ಯಾರ್ಥಿಗಳು ಊರವರಿಗೆ ತಕ್ಕ ಪಾಠ ಕಲಿಸುವ ಸಲುವಾಗಿ ಈ ಸಿಂಗಲ್‌ ಸೀಟ್‌ನಲ್ಲೇ ಇಬ್ಬರು ಮೂವರು ಕುಳಿತುಕೊಂಡು ಒಬ್ಬರ ಮೇಲೆ ಒಬ್ಬರು ಕುಳಿತುಕೊಂಡು ಫೋಟೋ ತೆಗೆಸಿ ಊರವರಿಗೆ ಮತ್ತಷ್ಟು ಹೊಟ್ಟೆ ಉರಿಸಿದ್ದಾರೆ. ಈ ಬೆಂಚ್‌ ಇದ್ದ ಪ್ರದೇಶವನ್ನು ವಿದ್ಯಾರ್ಥಿಗಳು ಹೆಚ್ಚಾಗಿ ಹರಟೆ ಹೊಡೆಯಲು ಬಳಸುತ್ತಿದ್ದರು ಎಂದು ತಿಳಿದು ಬಂದಿದೆ. ಹುಡುಗರು ಹಾಗೂ ಹುಡುಗಿಯರು ಒಟ್ಟಿಗೆ ಕುಳಿತು ಹರಟುವುದನ್ನು ಕಂಡು ಗ್ರಾಮಸ್ಥರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದರು ಎಂದು ತಿಳಿದು ಬಂದಿದೆ. 

ಇತ್ತೀಚೆಗೆ ಕಾಲೇಜು ವಿದ್ಯಾರ್ಥಿಗಳು ಓದುವುದನ್ನು ಬಿಟ್ಟು ಬೇರೆಯದೇ ಕಿತಾಪತಿಯಲ್ಲಿ ತೊಡಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಮಂಗಳೂರಿನ ಪ್ರತಿಷ್ಠಿತ ಕಾಲೇಜೊಂದರ ವಿದ್ಯಾರ್ಥಿಯೋರ್ವ ತನ್ನ ಸ್ನೇಹಿತರ ಜೊತೆ ಸೇರಿ ಯುವತಿಗೆ ಚುಂಬಿಸುವುದಾಗಿ ಛಾಲೆಂಜ್ ಹಾಕಿ ಅದರಂತೆ ಮಾಡಿದ್ದು, ಇದರ ವಿಡಿಯೋವನ್ನು ಮತ್ತೊರ್ವ ವಿದ್ಯಾರ್ಥಿ ರೆಕಾರ್ಡ್‌ ಮಾಡಿ ವಾಟ್ಸಾಪ್‌ ಗ್ರೂಪ್‌ನಲ್ಲಿ ಹಾಕಿದ್ದಾನೆ. ಜನವರಿ ತಿಂಗಳಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಈಗ ವಿಡಿಯೋ ವೈರಲ್ ಆಗಿ ಪ್ರಕರಣ ದಾಖಲಾಗಿದೆ. ಜೊತೆಗೆ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯನ್ನು ಕಾಲೇಜಿನಿಂದ ಅಮಾನತು ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ವಿಡಿಯೋ ಹರಿಬಿಟ್ಟ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ.

click me!