
ಶಿವಮೊಗ್ಗ: ಶಿವಮೊಗ್ಗದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ಮಾಡಿ ಮಾತನಾಡಿದ ಸಚಿವ ಮಧು ಬಂಗಾರಪ್ಪ ಅವರು, ಕಳೆದ ಎರಡು ವರ್ಷಗಳಲ್ಲಿ ರಾಜ್ಯ ಸರ್ಕಾರ ಕೈಗೊಂಡ ವಿವಿಧ ಯೋಜನೆಗಳು ಹಾಗೂ ಅಭಿವೃದ್ಧಿ ಕಾಮಗಾರಿಗಳ ವಿವರವನ್ನು ಮಂಡಿಸಿದರು. 2025-26ನೇ ಸಾಲಿನಲ್ಲಿ ರಾಜ್ಯದ 5000 ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳು ಆರಂಭವಾಗಲಿದ್ದು, 4000 ಶಾಲೆಗಳಲ್ಲಿ ದ್ವಿಭಾಷಾ ತರಗತಿಗಳು ಜಾರಿಗೊಳ್ಳಲಿವೆ. ರಾಜ್ಯದ 500 ಸರ್ಕಾರಿ ಶಾಲೆಗಳನ್ನು ಕೆಪಿಎಸ್ ಶಾಲೆಗಳಾಗಿ ಉನ್ನತೀಕರಿಸಲಾಗುವುದು ಎಂದಿದ್ದಾರೆ.
ಗೃಹಲಕ್ಷ್ಮೀ ಯೋಜನೆ ಅಡಿಯಲ್ಲಿ ಶಿವಮೊಗ್ಗ ಜಿಲ್ಲೆಯ 3,87,638 ಫಲಾನುಭವಿಗಳಿಗೆ ₹1,567.74 ಕೋಟಿ ರೂಪಾಯಿ ವಿತರಣೆಯಾಗಿದೆ. ಶಕ್ತಿ ಯೋಜನೆ ಮೂಲಕ ಜಿಲ್ಲೆಯ ಮಹಿಳೆಯರು 6.32 ಕೋಟಿಗೂ ಹೆಚ್ಚು ಉಚಿತ ಬಸ್ ಪ್ರಯಾಣ ಮಾಡಿದ್ದಾರೆ. ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಜಿಲ್ಲೆಯ 3,52,840 ಪಡಿತರ ಕಾರ್ಡ್‌ಧಾರಿಗಳಿಗೆ ₹359.97 ಕೋಟಿ ಮೌಲ್ಯದ ಅಕ್ಕಿ ವಿತರಣೆ ನಡೆದಿದೆ. ಈ ವರ್ಷದ ಫೆಬ್ರವರಿಯಿಂದ ಪ್ರತಿಯೊಬ್ಬ ಪಡಿತರ ಚೀಟಿದಾರರಿಗೆ ಪ್ರತಿ ತಿಂಗಳು 10 ಕೆಜಿ ಅಕ್ಕಿ ವಿತರಿಸಲಾಗುತ್ತಿದೆ.
ಗೃಹಜ್ಯೋತಿ ಯೋಜನೆ ಅಡಿಯಲ್ಲಿ 4.69 ಲಕ್ಷ ಕುಟುಂಬಗಳು ಉಚಿತ ವಿದ್ಯುತ್ ಸೌಲಭ್ಯ ಪಡೆದುಕೊಂಡಿದ್ದು, ಸರ್ಕಾರ ವಿದ್ಯುತ್ ಸಬ್ಸಿಡಿಗೆ ₹481.04 ಕೋಟಿ ವೆಚ್ಚ ಮಾಡಿದೆ. ಯುವ ನಿಧಿ ಯೋಜನೆ ಅಡಿಯಲ್ಲಿ ಜಿಲ್ಲೆಯ 6,894 ವಿದ್ಯಾರ್ಥಿಗಳಿಗೆ ₹17.88 ಕೋಟಿ ವಿತರಿಸಲಾಗಿದೆ. ಜಿಲ್ಲೆಗೆ 5 ನೂತನ ಪಶು ಚಿಕಿತ್ಸಾಲಯ ಕಟ್ಟಡಗಳು ಮಂಜೂರಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ. ಪ್ರತಿ ವಿಧಾನಸಭಾ ಕ್ಷೇತ್ರದ ಮೀನುಗಾರರ ಕುಟುಂಬಗಳಿಗೆ 25 ಮನೆಗಳು ಮಂಜೂರಾಗಿವೆ. ಸೊರಬ ಹಾಗೂ ಭದ್ರಾವತಿ ಕ್ಷೇತ್ರಗಳಿಗೆ ₹307.80 ಕೋಟಿ ಅನುದಾನದಲ್ಲಿ ನೀರಾವರಿ ಯೋಜನೆ ಕೈಗೊಳ್ಳಲಾಗಿದೆ. ಕುಂಸಿ-ಗಾಜನೂರು ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗೆ ₹125 ಕೋಟಿ ಅನುಮೋದನೆ ದೊರಕಿದೆ.
ದೇಶದಲ್ಲೇ ಮೊದಲ ಬಾರಿಗೆ "ಅಂಧತ್ವ ಮುಕ್ತ ಶಿವಮೊಗ್ಗ" ಅಭಿಯಾನವನ್ನು ಜಿಲ್ಲಾ ಮಟ್ಟದಲ್ಲಿ ಜಾರಿಗೊಳಿಸಲಾಗುತ್ತಿದೆ. ಕಿದ್ವಾಯಿ ಮಾದರಿಯ ಕ್ಯಾನ್ಸರ್ ಆಸ್ಪತ್ರೆ ಕಾಮಗಾರಿ ಪ್ರಗತಿಯಲ್ಲಿದ್ದು, 50 ಹಾಸಿಗೆಗಳ ಕ್ರಿಟಿಕಲ್ ಕೇರ್ ಯುನಿಟ್ ಹಾಗೂ ಸಮಗ್ರ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ (IPHL) ಕಟ್ಟಡ ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದೆ.
ಶರಾವತಿ ಮುಳುಗಡೆ ಸಂತ್ರಸ್ತರು ಮತ್ತು ಬಗರ್‌ಹುಕುಂ ಸಾಗುವಳಿದಾರರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಭದ್ರಾವತಿಯಲ್ಲಿ ನೂತನ ಕಾರ್ಮಿಕರ ಸಮುದಾಯ ಭವನ, ಶಿವಮೊಗ್ಗ ಹೊರವಲಯದ ಸಿದ್ವೀಪುರದಲ್ಲಿ ವಸತಿ ಕಟ್ಟಡ, ಹಾಗೂ ಸೊರಬ ತಾಲ್ಲೂಕಿನಲ್ಲಿ ಕಟ್ಟಡ ಕಾರ್ಮಿಕರ ಮಕ್ಕಳಿಗಾಗಿ ವಸತಿ ಶಾಲೆ ನಿರ್ಮಾಣಕ್ಕೆ ಅನುಮೋದನೆ ದೊರಕಿದೆ.
ಇದಲ್ಲದೆ, ನೂತನ ಜಿಲ್ಲಾಡಳಿತ ಭವನ ನಿರ್ಮಾಣ, ಚಂದ್ರಗುತ್ತಿ ಅಭಿವೃದ್ಧಿ ಪ್ರಾಧಿಕಾರ ರಚನೆ, ಮತ್ತು ಜೋಗ ಜಲಪಾತದಲ್ಲಿ ಕೋಟ್ಯಾಂತರ ರೂ. ವೆಚ್ಚದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಕಾಮಗಾರಿಗಳು ಕೈಗೊಳ್ಳಲಾಗುತ್ತಿವೆ ಎಂದು ಸಚಿವರು ತಿಳಿಸಿದ್ದಾರೆ.