* ಬಿಇಒಗಳು ಶಾಲೆಗೆ ತೆರಳಿ ಪಠ್ಯ ಪರಿಶೀಲಿಸಬೇಕು
* ನೀತಿಗೆ ವಿರುದ್ಧವಾಗಿದ್ದರೆ ಕ್ರಮ ಜರುಗಿಸಿ
* ಬೆಂಗಳೂರು ಶಾಲೆಯಲ್ಲಿ ಬೈಬಲ್ ಕಡ್ಡಾಯ ಮಾಡಿದ ಬೆನ್ನಲ್ಲೇ ಸಚಿವ ನಾಗೇಶ್ ನಿರ್ದೇಶನ
ಬೆಂಗಳೂರು(ಏ.27): ರಾಜ್ಯದ(Karnataka) ಕ್ರೈಸ್ತ ಶಿಕ್ಷಣ ಸಂಸ್ಥೆಗಳ(Christian Educational Institutions) ಮೇಲೆ ನಿಗಾ ವಹಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಲಾಗಿದ್ದು, ಶಿಕ್ಷಣ ಸಂಸ್ಥೆಗಳ ಪಠ್ಯ ಪರಿಶೀಲನೆ ನಡೆಸುವಂತೆ ನಿರ್ದೇಶನ ನೀಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್(BC Nagesh) ಹೇಳಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಯೊಬ್ಬ ಬಿಇಒಗಳು ಕ್ರೈಸ್ತ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಒಂದು ವೇಳೆ ಸರ್ಕಾರದ ನೀತಿ-ನಿಯಮಗಳಿಗೆ ವಿರುದ್ಧವಾಗಿ ಪಠ್ಯಕ್ರಮಗಳಿದ್ದರೆ ಖಂಡಿತವಾಗಿಯೂ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಬೆಂಗಳೂರು ನಗರದ ಕ್ಲಾರೆನ್ಸ್ ಶಾಲೆಯಲ್ಲಿ ಬೈಬಲ್(Bibal) ಕಡ್ಡಾಯ ವಿಚಾರವು ರಾಜ್ಯ ಶಿಕ್ಷಣ ಕಾಯ್ದೆಗೆ ವಿರುದ್ಧವಾಗಿದೆ. ಕಾರಣ ಕೇಳಿ ಶಾಲಾ ಆಡಳಿತ ಮಂಡಳಿಗೆ ನೋಟಿಸ್ ನೀಡಲಾಗಿದೆ. ಯಾವುದೇ ಶಿಕ್ಷಣ ಸಂಸ್ಥೆಯಾಗಲೀ ಧಾರ್ಮಿಕ ಗ್ರಂಥಗಳ ಅಳವಡಿಕೆಗೆ ಅವಕಾಶ ಇಲ್ಲ ಎಂದು ತಿಳಿಸಿದರು.
Chikkamagaluru: ಶಾಲೆ ಮುಚ್ಚುವುದಿಲ್ಲ, ವಿಲೀನ ಮಾಡ್ತೇವೆ: ಸಚಿವ ನಾಗೇಶ್
ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ ಧರ್ಮಗಳನ್ನು ಬೋಧನೆ ಮಾಡಬಾರದು ಎಂದು ಕಾಯ್ದೆಗಳಲ್ಲಿ ಸ್ಪಷ್ಟವಾಗಿ ಉಲ್ಲೇಖ ಮಾಡಲಾಗಿದೆ. ಆದರೂ ಕ್ಲಾರೆನ್ಸ್ ಶಾಲೆಯಲ್ಲಿ ಕಡ್ಡಾಯವಾಗಿ ಬೈಬಲ್ ಓದಲೇಬೇಕು ಎಂದು ಸೂಚನೆ ನೀಡಿರುವುದು ನಿಯಮಗಳಿಗೆ ವಿರುದ್ಧವಾಗಿದೆ. ಶಾಲಾ ಆಡಳಿತ ಮಂಡಳಿಯು ನೋಟಿಸ್‌ಗೆ ಉತ್ತರ ನೀಡಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಮಕ್ಕಳನ್ನು ಶಾಲೆಗೆ ದಾಖಲಾತಿ ಮಾಡಿಕೊಳ್ಳುವಾಗ ಬೈಬಲ್ ಓದಲು ಒಪ್ಪಿಗೆ ಇದೆಯೇ ಎಂದು ಕೇಳುತ್ತಾರೆ. ಒಪ್ಪಿಗೆ ಕೊಟ್ಟಬಳಿಕ ಕೆಲ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡಲಾಗುತ್ತದೆ. ಕ್ಲಾರೆನ್ಸ್ ಶಾಲೆಯು ಕೇಂದ್ರೀಯ ಪಠ್ಯಕ್ರಮ ವ್ಯಾಪ್ತಿಗೆ ಬರುತ್ತದೆ. ಯಾವುದೇ ಪಠ್ಯಕ್ರಮ ವ್ಯಾಪ್ತಿಯ ಅಲ್ಪಸಂಖ್ಯಾತರ ಶಾಲೆಯಲ್ಲಿ ಧರ್ಮದ ಬೋಧನೆ ನಿಷೇಧಿಸಲಾಗಿದೆ. ಈ ಸಂಬಂಧ ಶಿಕ್ಷಣ ಇಲಾಖೆಯು ಸೂಕ್ತ ಕ್ರಮ ಜರುಗಿಸಲಿದೆ ಎಂದು ಹೇಳಿದ ಅವರು, ಬೇರೆ ಸಂದರ್ಭದಲ್ಲಿ ಮಾತನಾಡುವ ಪ್ರತಿಪಕ್ಷಗಳು ಈಗ ಏಕೆ ಮಾತನಾಡುವುದಿಲ್ಲ? ಟಿಪ್ಪು, ಹಿಜಾಬ್ ವಿಚಾರಕ್ಕೆ ಮಾತನಾಡುವವರು ಬೈಬಲ್ ವಿಷಯದಲ್ಲಿ ಮೌನವಾಗಿರುವುದು ಏಕೆ ಎಂದು ಪ್ರಶ್ನಿಸಿದರು.
ಮೇ 16ರಿಂದ ಶೈಕ್ಷಣಿಕ ವರ್ಷ:
ಜೂನ್, ಜುಲೈ ತಿಂಗಳಲ್ಲಿ ಕೋವಿಡ್ ನಾಲ್ಕನೇ ಅಲೆ(Covid 4th Wave) ಬರಬಹುದು ಎಂದು ಹೇಳಲಾಗುತ್ತಿದೆ. ಆದರೆ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಈಗಾಗಲೇ ನಿಗದಿಯಾಗಿರುವಂತೆ ಮೇ 16ರಿಂದ ಆರಂಭವಾಗಲಿದೆ. ಇದರಲ್ಲಿ ಯಾವುದೇ ರೀತಿಯ ಬದಲಾವಣೆಗಳಿಲ್ಲ. ಮಕ್ಕಳು ಮತ್ತು ಪೋಷಕರು ವದಂತಿಗಳಿಗೆ ಕಿವಿಗೊಡಬಾರದು ಎಂದರು.
Tumakuru ತಾಯಿ ಓದಿದ ಶಾಲೆಗೆ ಉದ್ಯಮಿ ಕಟ್ಟಿಸಿದ ಕಟ್ಟಡ ಲೋಕಾರ್ಪಣೆ
ಶಾಲೆಗಳನ್ನು ತೆರೆಯುವ ಮುನ್ನ ಕೋವಿಡ್ ಕಾರ್ಯಪಡೆ, ಆರೋಗ್ಯ ಇಲಾಖೆ ಮತ್ತು ರಾಜ್ಯ ಸರ್ಕಾರದ ಯಾವೆಲ್ಲಾ ಸೂಚನೆಗಳನ್ನು ಅನುಸರಿಸಬೇಕು ಎಂದು ಹೇಳಲಾಗುತ್ತದೆಯೋ ಅವುಗಳನ್ನು ಪಾಲನೆ ಮಾಡುವಂತೆ ನಿರ್ದೇಶನ ನೀಡಲಾಗುತ್ತದೆ. ಮಕ್ಕಳ ಹಿತದೃಷ್ಟಿಯಿಂದ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಸಚಿವರು ಭರವಸೆ ನೀಡಿದರು.
ದ್ವಿತೀಯ ಪಿಯುಸಿ ಪರೀಕ್ಷೆ ಸುಸೂತ್ರವಾಗಿ ನಡೆಯುತ್ತಿದೆ. ಪ್ರತಿ ಬಾರಿಗಿಂತ ಈ ಬಾರಿ ಹೆಚ್ಚು ಹಾಜರಾತಿ ಇದೆ. ಎಸ್‌ಎಸ್‌ಎಲ್‌ಸಿ ಮೌಲ್ಯಮಾಪನ ಸಹ ನಡೆಯುತ್ತಿದ್ದು, ಮೇ ಎರಡನೇ ವಾರದಲ್ಲಿ ಫಲಿತಾಂಶ ಪ್ರಕಟಿಸುವ ಚಿಂತನೆ ಇದೆ ಎಂದು ಹೇಳಿದರು.