ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಸ್ಮಾರಕವನ್ನು ಬೆಂಗಳೂರಿನಲ್ಲಿ ನಿರ್ಮಾಣ ಮಾಡುವ ಜತೆಗೆ ಅವರ ಹೋರಾಟದ ವಿಚಾರವನ್ನು ಪಠ್ಯದಲ್ಲಿ ಸೇರ್ಪಡೆಗೊಳಿಸುವ ಕಾರ್ಯವನ್ನು ಸರ್ಕಾರ ಮಾಡಲಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ.
ಮಂಗಳೂರು (ನ.22): ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಸ್ಮಾರಕವನ್ನು ಬೆಂಗಳೂರಿನಲ್ಲಿ ನಿರ್ಮಾಣ ಮಾಡುವ ಜತೆಗೆ ಅವರ ಹೋರಾಟದ ವಿಚಾರವನ್ನು ಪಠ್ಯದಲ್ಲಿ ಸೇರ್ಪಡೆಗೊಳಿಸುವ ಕಾರ್ಯವನ್ನು ಸರ್ಕಾರ ಮಾಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ನಗರದ ಬಾವುಟಗುಡ್ಡೆಯಲ್ಲಿ ಶನಿವಾರ ಸ್ವಾತಂತ್ರ್ಯ ಹೋರಾಟಗಾರ, ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಶೌರ್ಯದ ಕಂಚಿನ ಪ್ರತಿಮೆ ಅನಾವರಣಗೊಳಿಸಿದ ಬಳಿಕ ಕರಾವಳಿ ಉತ್ಸದ ಮೈದಾನದಲ್ಲಿ ನಡೆದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಅನಾಮಧೇಯ ಸ್ವಾತಂತ್ರ್ಯ ಹೋರಾಟಗಾರರ ಸಂಖ್ಯೆ ದೊಡ್ಡದು. ಆದರೆ ಯಾರೂ ಅವರ ಬಗ್ಗೆ ಬರೆಯಲಿಲ್ಲ, ಇತಿಹಾಸದಲ್ಲಿ ಇಲ್ಲದಿರುವ ಅಂಥವರಲ್ಲಿ ನಮ್ಮ ರಾಮಯ್ಯ ಗೌಡರು ಕೂಡ ಒಬ್ಬರು. ಇಂಥಹ ನೂರಾರು ಜನ ನಮ್ಮ ರಾಜ್ಯದಲ್ಲಿ ಇದ್ದಾರೆ. ಅವರ ಹೋರಾಟ ನಮಗೆ ಪ್ರೇರಣೆಯಾಗಬೇಕು. ಅಂತಹವರಿಗೆ ಬೆಂಗಳೂರಿನಲ್ಲಿ ಸ್ಮಾರಕ ನಿರ್ಮಿಸಲಾಗುವುದು ಎಂದರು.
ದೇಶಕ್ಕಾಗಿ ಪ್ರಾಣ ಕೊಡುವ ಕಾಲ ಇಲ್ಲ. ಈಗ ದೇಶಕ್ಕಾಗಿ ಬದುಕಬೇಕಿದೆ. ಪ್ರಸ್ತುತ ಪ್ರಪಂಚದ ಬಹುತೇಕ ರಾಷ್ಟ್ರಗಳು ಹಣದುಬ್ಬರವನ್ನು ಎದುರಿಸುತ್ತಿವೆ. ಆದರೆ ನಮ್ಮ ಸಂಸ್ಕೃತಿ, ಪರಂಪರೆಯಿಂದಾಗಿ ನಮಗೆ ಆ ಸಮಸ್ಯೆ ಕಾಡಿಲ್ಲ. ಹೊರ ರಾಷ್ಟ್ರಗಳಲ್ಲಿ ಖರ್ಚು ಮಾಡುವ ಸಂಸ್ಕೃತಿಯಾದರೆ, ನಮ್ಮದು ಉಳಿತಾಯದ ಸಂಸ್ಕೃತಿ. ಹಾಗಾಗಿ ನಮ್ಮ ದೇಶದ ಆರ್ಥಿಕತೆ ಉತ್ತಮವಾಗಿದೆ ಎಂದು ಅವರು ಹೇಳಿದರು.
ಸಾರ್ವರ್ಕರ್ ಕಾಲಪಾನಿಯ ಕ್ರೂರ ಶಿಕ್ಷೆಗೆ ಒಳಗಾಗಿದ್ದರು. ಅಲ್ಲೂ ಅವರನ್ನು ಕ್ರೂರವಾಗಿ ನಡೆಸಿಕೊಳ್ಳಲಾಗಿದೆ. ಅಂತಹ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನವನ್ನು ನಾವು ಯಾವತ್ತೂ ಮರೆಯಬಾರದು. ಅದನ್ನ ಮರೆತವರು ದೇಶ ಭಕ್ತರಲ್ಲ ಎಂದು ಅವರು ಹೇಳಿದರು.
ರೈತರು ಯೋಧರಾದಾಗ ಕ್ರಾಂತಿ: ನಾವು ಭಾರತ್ ಮಾತಾಕೀ ಜೈ ಎಂದು ಕೂಗಲು ಸ್ವಾತಂತ್ರ್ಯ ಹೋರಾಟಗಾರರ ಕೆಚ್ಚೇ ಕಾರಣ. ಅದರಲ್ಲಿ ಕೆದಂಬಾಡಿ ರಾಮಯ್ಯ ಗೌಡರು ಕೂಡ ಒಬ್ಬರು. ನಾವು ಸ್ವಾತಂತ್ರ್ಯ ನಂತರ ಹುಟ್ಟಿದವರು, ಪರಕೀಯರ ಆಡಳಿತದ ಬಿಸಿ ನಮಗೆ ಮುಟ್ಟಿಲ್ಲ. 1837 ಅಂದರೆ ಪೂರ್ಣ ಪ್ರಮಾಣದ ಗುಲಾಮಗಿರಿಯ ವಾತಾವರಣ. ಅಂತಹ ವಾತಾವರಣದಲ್ಲಿ ರಾಮಯ್ಯ ಗೌಡರು ಸ್ವಾತಂತ್ರ್ಯದ ಕಲ್ಪನೆ ಬಿತ್ತಿದ್ದರು. ರೈತರಾಗಿದ್ದ ರಾಮಯ್ಯ ಗೌಡರು ರೈತರನ್ನೇ ಯೋಧರನ್ನಾಗಿಸಿಕೊಂಡು ಬ್ರಿಟಿಷರ ವಿರುದ್ಧ ಸಮರ ಸಾರಿದ್ದರು. ರೈತರೇ ಯೋಧರಾಗಿ ತಿರುಗಿ ಬಿದ್ದಾಗ ಬ್ರಿಟಿಷರಿಗೆ ಆತಂಕವಾಯಿತು. ದುಡಿಯುವ ವರ್ಗ ತಿರುಗಿ ಬಿದ್ದಾಗ ಬ್ರಿಟಿಷರು ಎಚ್ಚೆತ್ತುಕೊಂಡರು. ಆಗಲೇ ಅವರು ದೇಶ ಬಿಡುವ ಚಿಂತನೆ ಮಾಡಿದರು. ರೈತರು ಯೋಧರಾದಾಗ ಕ್ರಾಂತಿಯಾಗುತ್ತದೆ ಎಂದು ಸಿಎಂ ಹೇಳಿದರು.
ರಾಮಯ್ಯಗೌಡ ಪ್ರತಿಮೆ ನಿರ್ಮಾಣ ಅನಾಮಧೇಯ ಸ್ವಾತಂತ್ರ್ಯ ಹೋರಾಟಗಾರರ ಪತ್ತೆಗೆ ಪೂರಕ: ಸಿಎಂ ಬೊಮ್ಮಾಯಿ
ಕರಾವಳಿ ಭಾಗದ ಜನರ ನಿರೀಕ್ಷೆಯಂತೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಅಬ್ಬಕ್ಕ ರಾಣಿ ಹಾಗೂ ರೈಲು ನಿಲ್ದಾಣಕ್ಕೆ ಬ್ರಹ್ಮಶ್ರೀ ನಾರಾಯಣಗುರು ನಾಮಕರಣ ಬಗ್ಗೆಯೂ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.
ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ್, ಬಂದರು, ಮೀನುಗಾರಿಕೆ ಸಚಿವ ಅಂಗಾರ, ಸಂಸದ ಡಿ.ವಿ.ಸದಾನಂದ ಗೌಡ, ಶಾಸಕರಾದ ಡಾ.ಭರತ್ ಶೆಟ್ಟಿ, ಯು.ಟಿ.ಖಾದರ್ ಮತ್ತಿತರರಿದ್ದರು. ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿದ್ದರು.
ಸ್ವಾತಂತ್ರ್ಯ ಸಂಗ್ರಾಮ ಇತಿಹಾಸದ ಪುನರ್ ರಚನೆ ಅತ್ಯಗತ್ಯ: ಸದಾನಂದ ಗೌಡ
ಏನಿದು ಶೌರ್ಯದ ಪ್ರತಿಮೆ?
1837ರಲ್ಲಿ ದ.ಕ. ಜಿಲ್ಲೆಯ ಸುಳ್ಯದ ಕೆದಂಬಾಡಿ ರಾಮಯ್ಯ ಗೌಡರು ರೈತರ ಸೈನ್ಯದೊಂದಿಗೆ ಮಂಗಳೂರಿಗೆ ಬಂದು, ಇಲ್ಲಿನ ಬಾವುಟಗುಡ್ಡೆಯಲ್ಲಿ ಬ್ರಿಟಿಷ್ ಧ್ವಜ ಇಳಿಸಿ, ನಮ್ಮದೇ ಧ್ವಜ ಅರಳಿಸಿ 13 ದಿನಗಳ ಕಾಲ ಅಧಿಕಾರ ನಡೆಸಿದರು. ಬಳಿಕ ಮತ್ತಷ್ಟು ಬ್ರಿಟಿಷ್ ಸೈನ್ಯ ಆಗಮಿಸಿ, ರಾಮಯ್ಯ ಗೌಡ ಮತ್ತಿತರರನ್ನು ಹಿಮ್ಮೆಟ್ಟಿಸಿ, ಅವರನ್ನು ಬಂಧಿಸಿ, ಸಹಚರರ ಜತೆ ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ಅವರನ್ನು ನೇಣಿಗೆ ಏರಿಸಲಾಯಿತು. ಬಳಿಕ ಶವವನ್ನು ಹಾಗೆಯೇ ಬಿಡಲಾಯಿತು. ರೈತ ಯೋಧರನ್ನು ಗಲ್ಲಿಗೇರಿಸಿದ ಸ್ಥಳವನ್ನು ಭೀಕರ ರಣಕಟ್ಟೆಎಂದು ಕರೆಯುತ್ತಿದ್ದುದು ಈಗ ಬಿಕರ್ನಕಟ್ಟೆಎಂದಾಗಿದೆ. ಜಿಲ್ಲೆಯಲ್ಲಿ ಬ್ರಿಟಿಷರನ್ನು ಓಡಿಸಿ ಕೆಲವು ದಿನಗಳ ಮಟ್ಟಿಗೆ ಅಧಿಕಾರ ನಡೆಸಿದ ಕೆದಂಬಾಡಿ ರಾಮಯ್ಯ ಗೌಡರ ನೆನಪಿನಲ್ಲಿ ಬಾವುಟಗುಡ್ಡೆಯಲ್ಲಿ ಅವರದೇ ಕಂಚಿನ ಶೌರ್ಯ ಪ್ರತಿಮೆ ಸ್ಥಾಪಿಸಲಾಗಿದೆ.