ಚಿಕ್ಕಮಗಳೂರು, ಶಿರಸಿ, ಕೋಲಾರ ವಿವಿ ಸ್ಥಾಪಿಸಲು ಸಿಎಂ ಬಳಿ ಲಾಬಿ

By Kannadaprabha News  |  First Published Nov 22, 2022, 10:30 AM IST

ಮುಖ್ಯಮಂತ್ರಿಗಳಿಂದ ಅಂಗೀಕೃತ ರೂಪದಲ್ಲಿ ಬಂದ ಶಾಸಕರ ಮನವಿ ಪತ್ರಗಳನ್ನು ಉನ್ನತ ಶಿಕ್ಷಣ ಇಲಾಖೆಗೆ ಕಳುಹಿಸಲಾಗಿದೆ.


ಬೆಂಗಳೂರು(ನ.22): ಸರ್ಕಾರ ಇತ್ತೀಚೆಗಷ್ಟೆ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಪ್ರತ್ಯೇಕ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಆದೇಶ ಹೊರಡಿಸಿದ ಬೆನ್ನಲ್ಲೇ ಇದೀಗ ಇನ್ನೂ ಕೆಲ ಜಿಲ್ಲೆಗಳ ಜನಪ್ರತಿನಿಧಿಗಳು ತಮ್ಮ ಜಿಲ್ಲೆಗಳಿಗೂ ಪ್ರತ್ಯೇಕ ವಿಶ್ವವಿದ್ಯಾಲಯಗಳನ್ನು ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.

ಪ್ರಮುಖವಾಗಿ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಸೇರಿದಂತೆ ಕೆಲ ಶಾಸಕರು ಮಾಡಿರುವ ಮನವಿಯನ್ನು ಅನುಮೋದಿಸಿರುವ ಮುಖ್ಯಮಂತ್ರಿ ಅವರು ಅಗತ್ಯ ಕ್ರಮಕ್ಕಾಗಿ ಅದನ್ನು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿಗೆ (ಕೆಎಸ್‌ಸಿಎಚ್‌ಸಿ) ರವಾನಿಸಿದ್ದಾರೆ ಎಂದು ಪರಿಷತ್ತಿನ ಉನ್ನತ ಮೂಲಗಳು ಖಚಿತಪಡಿಸಿವೆ.

Tap to resize

Latest Videos

ವಿವಿ ಕಾಯ್ದೆ ತಿದ್ದುಪಡಿಗೆ ಸಂಪುಟ ಅಸ್ತು, 8 ನೂತನ ವಿವಿಗಳ ಸ್ಥಾಪನೆ ಇನ್ನು ಸುಲಭ

ಕೆಎಸ್‌ಸಿಎಚ್‌ಸಿ ಅಧಿಕಾರಿಯೊಬ್ಬರು ಹೇಳುವ ಪ್ರಕಾರ, ಸ್ಪೀಕರ್‌ ಅವರು ಶಿರಸಿ ಅಥವಾ ಕಾರವಾರದಲ್ಲಿ ವಿಶ್ವವಿದ್ಯಾಲಯ ಸ್ಥಾಪನೆಗೆ ಕೋರಿದ್ದಾರೆ. ಸಿ.ಟಿ.ರವಿ ಅವರು ಚಿಕ್ಕಮಗಳೂರಿನ ಐಡಿಎಸ್‌ಜೆ ಕಾಲೇಜನ್ನು ವಿವಿಯನ್ನಾಗಿ ಪರಿವರ್ತಿಸಲು ಪ್ರಸ್ತಾವನೆ ಸಲ್ಲಿಸಿದ್ದಾರೆ. ಮತ್ತೊಂದಡೆ ಕೋಲಾರಕ್ಕೂ ಪ್ರತ್ಯೇಕ ವಿವಿ ನೀಡುವಂತೆ ಆ ಜಿಲ್ಲೆಯ ಜನಪ್ರತಿನಿಧಿಯೊಬ್ಬರು ಮನವಿ ಮಾಡಿದ್ದಾರೆ. ಮುಖ್ಯಮಂತ್ರಿಗಳಿಂದ ಅಂಗೀಕೃತ ರೂಪದಲ್ಲಿ ಬಂದ ಶಾಸಕರ ಮನವಿ ಪತ್ರಗಳನ್ನು ಉನ್ನತ ಶಿಕ್ಷಣ ಇಲಾಖೆಗೆ ಕಳುಹಿಸಲಾಗಿದೆ.

8 ವಿವಿಗೆ ಅನುಮೋದನೆ:

ಚಾಮರಾಜನಗರ, ಹಾಸನ, ಮಂಡ್ಯ, ಬೀದರ್‌, ಕೊಡಗು, ಕೊಪ್ಪಳ, ಬಾಗಲಕೋಟೆ ಮತ್ತು ಹಾವೇರಿಯಲ್ಲಿ ಎಂಟು ಹೊಸ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಇತ್ತೀಚೆಗೆ ಅಧಿಕೃತ ಆದೇಶ ಹೊರಡಿಸಿದೆ. ಆದೇಶದಲ್ಲಿ ವಿವರಿಸಿದಂತೆ ಈ ಜಿಲ್ಲೆಗಳಲ್ಲಿ ಆಯಾ ವಿಶ್ವವಿದ್ಯಾಲಯಗಳ ಅಸ್ತಿತ್ವದಲ್ಲಿರುವ ಸ್ನಾತಕೋತ್ತರ ಕೇಂದ್ರಗಳನ್ನು ಯಾವುದೇ ಹೆಚ್ಚುವರಿ ಭೂಮಿ, ಹಣಕಾಸು ಸೌಲಭ್ಯ ಹಾಗೂ ಮೂಲ ಸೌಕರ್ಯ ಕೇಳದೆ ಇರುವ ಕಟ್ಟಡ, ಬೋಧಕ, ಬೋಧಕೇತರ ಸಿಬ್ಬಂದಿ, ಸೌಲಭ್ಯಗಳನ್ನೇ ಬಳಸಿಕೊಂಡು ವಿಶ್ವವಿದ್ಯಾಲಯಗಳಾಗಿ ಮೇಲ್ದರ್ಜೆಗೇರಿಸಲು ಸೂಚಿಸಲಾಗಿದೆ. ಪ್ರತ್ಯೇಕ ವಿವಿಗಳಿಗೆ ಇಂತಹ ಸೀಮಿತ ಅನುದಾನವಿದ್ದರೂ ಚುನಾಯಿತ ಪ್ರತಿನಿಧಿಗಳು ತಮ್ಮ ಜಿಲ್ಲೆ, ಕ್ಷೇತ್ರಗಳಿಗೂ ಪ್ರತ್ಯೇಕ ವಿವಿ ಪಡೆಯಲು ಉತ್ಸುಕರಾಗಿದ್ದಾರೆ.
 

click me!