ಕರ್ನಾಟಕ ರಾಜ್ಯವು ಗುಣಮಟ್ಟದ, ತಾಂತ್ರಿಕ, ಉದ್ಯೋಗ ಆಧಾರಿತ ಶಿಕ್ಷಣವನ್ನು ನೀಡುವಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವ ರಾಜ್ಯಗಳಲ್ಲಿ ಒಂದಾಗಿದೆ ಎಂದು ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಜುಲೈ 24): ಕರ್ನಾಟಕ ರಾಜ್ಯವು ಗುಣಮಟ್ಟದ, ತಾಂತ್ರಿಕ, ಉದ್ಯೋಗ ಆಧಾರಿತ ಶಿಕ್ಷಣವನ್ನು ನೀಡುವಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವ ರಾಜ್ಯಗಳಲ್ಲಿ ಒಂದಾಗಿದೆ ಮತ್ತು ಬೆಂಗಳೂರು ಪ್ರಸ್ತುತ ಶಿಕ್ಷಣದ ಕೇಂದ್ರವಾಗಿದೆ ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು. ಬೆಂಗಳೂರಿನ ತಾವರೆಕೆರೆ ಯೆಲ್ಲಾಚಗುಪ್ಪೆ ಗ್ರಾಮದಲ್ಲಿ ಬಂಟ್ಸ್ ಸಂಘ ಬೆಂಗಳೂರು ವತಿಯಿಂದ ಹೊಸದಾಗಿ ನಿರ್ಮಿಸಲಾದ ಆರ್‌ಎನ್‌ಎಸ್ ವಿದ್ಯಾನಿಕೇತನ ಕ್ಯಾಂಪಸ್-2 ಎರಡನೆಯ ಲಾಂಛನ ಹಾಗೂ ಫಲಕವನ್ನು ಅನಾವರಣಗೊಳಿಸಿ ಅವರು ಮಾತನಾಡಿದರು. ಉತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಆರ್ ಎನ್ ಎಸ್ ಶಿಕ್ಷಣ ಸಂಸ್ಥೆ, ಸುಮಾರು 9 ಎಕರೆ ಪ್ರದೇಶದಲ್ಲಿ ಮಾಲಿನ್ಯ ಮುಕ್ತ ಪರಿಸರದಲ್ಲಿ ಅತ್ಯಾಧುನಿಕ ಸಂಪೂರ್ಣ ಸುಸಜ್ಜಿತ ಕ್ಯಾಂಪಸ್ ಅನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿದು ಬಂದಿದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸ, ಕ್ರೀಡೆಗಳ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಭಾಗವಹಿಸಿ ಇದರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿಯೂ ಸದೃಢರಾಗುತ್ತೀರಿ. ನೀವು ದೇಶದ ಭವಿಷ್ಯ ಹಾಗೂ ದೇಶದ ಅಭಿವೃದ್ಧಿಯ ಪ್ರಮುಖ ಭಾಗವಾಗಿದ್ದೀರಿ ಎಂದು ಕರೆ ನೀಡಿದರು.
ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ಟಾರ್ಟಪ್ ಮತ್ತು ಸ್ಟ್ಯಾಂಡ್ ಅಪ್, ವೆಂಚರ್ ಕ್ಯಾಪಿಟಲ್ ಫಂಡ್ ಯೋಜನೆಗಳನ್ನು ಬಳಸಿಕೊಂಡು ನೀವು ಶ್ರೇಷ್ಠ ಭಾರತ, ನವ ಭಾರತ- ನವ ಕರ್ನಾಟಕ ಮತ್ತು ಸ್ವಾವಲಂಬಿ ಭಾರತವನ್ನು ನಿರ್ಮಿಸಬಹುದು ಮತ್ತು ಇವುಗಳ ಮೂಲಕ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಬಹುದು. ಸ್ವಾತಂತ್ರ್ಯ ಚಳವಳಿಯ ಇತಿಹಾಸದಂತೆ, 75 ವರ್ಷಗಳ ಸ್ವಾತಂತ್ರ್ಯದ ಪಯಣವು ಭಾರತೀಯರ ಕಠಿಣ ಪರಿಶ್ರಮ, ನಾವೀನ್ಯತೆ, ಉದ್ಯಮಶೀಲತೆಯ ಪ್ರತಿಬಿಂಬವಾಗಿದೆ ಎಂದರು.
ಪ್ರಸ್ತುತ ದಿನಗಳಲ್ಲಿ ಜಾಗತಿಕ ತಾಪಮಾನ ಏರಿಕೆ, ಹವಾಮಾನ ಬದಲಾವಣೆ ಮತ್ತು ಗಾಳಿಯ ಗುಣಮಟ್ಟದಲ್ಲಿನ ಅಸಮಾನ ಕುಸಿತದಿಂದಾಗಿ ಇಂದು ನಾವು ಪರಿಸರ ಸಂಬಂಧಿತ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಮಾಲಿನ್ಯದ ಬಗ್ಗೆ ಹೆಚ್ಚುತ್ತಿರುವ ಕಾಳಜಿಯು ಪರಿಸರ ಸಂರಕ್ಷಣೆಯ ಬಗ್ಗೆ ಯೋಚಿಸುವಂತೆ ಒತ್ತಾಯಿಸಿದೆ. ಪ್ರಕೃತಿಯ ಬಗ್ಗೆ ಪ್ರೀತಿ ಗೌರವ, ಸರಳ ಜೀವನ ವಿಧಾನ ಮತ್ತು ಅರಣ್ಯದ ಬಗ್ಗೆ ಹೊಸ ಪ್ರಜ್ಞೆಯನ್ನು ಜಾಗೃತಗೊಳಿಸಬೇಕು ಎಂದು ಹೇಳಿದರು.
ರಾಷ್ಟ್ರದ ಹೊಸ ಶಿಕ್ಷಣ ನೀತಿಯು ಆಧುನಿಕ ಜ್ಞಾನವನ್ನು ಮೌಲ್ಯಗಳೊಂದಿಗೆ ಸಂಯೋಜಿಸುತ್ತದೆ ಮತ್ತು ಅಂತಹ ಶಿಕ್ಷಣ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತದೆ, ಇದು ಜಗತ್ತಿಗೆ ಹೊಸ ದಿಕ್ಕನ್ನು ನೀಡುವುದಲ್ಲದೆ ಇಡೀ ಮಾನವಕುಲಕ್ಕೆ ಪ್ರಯೋಜನವನ್ನು ನೀಡುತ್ತದೆ, ಹೊಸ ಶಿಕ್ಷಣ ನೀತಿಯಲ್ಲಿ ಸ್ಥಳೀಯ ಭಾಷೆ ಮತ್ತು ಕ್ರೀಡೆಗೆ ಆದ್ಯತೆ ನೀಡಲು ಅವಕಾಶವಿದೆ. ಈ ನಿಟ್ಟಿನಲ್ಲಿ ಸಕ್ರಿಯ ಪ್ರಯತ್ನಗಳನ್ನು ಮಾಡಬೇಕು ಎಂದು ಮನವಿ ಮಾಡಿದರು.
ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪರಮ ಪೂಜ್ಯ, ಶ್ರೀ ಶ್ರೀ ಶ್ರೀ ಸುಭುದೇಂದ್ರ ಸ್ವಾಮೀಜಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ, ಜಿತೇಂದ್ರ ಗೆಹ್ಲೋಟ್, ಬಂಟ್ಸ್ ಸಂಘದ ಆರ್ ಎನ್ ಎಸ್ ವಿದ್ಯಾನಿಕೇತನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಕೆ. ಪ್ರಕಾಶ್ ಶೆಟ್ಟಿ, ಕರ್ನಾಟಕದ ಮಾಜಿ ಲೋಕಾಯುಕ್ತ, ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ, ಮಿಸ್ ಇಂಡಿಯಾ 2022 ಸಿನಿ ಶೆಟ್ಟಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.