ವರ್ಗಾವಣೆ ಏಕಿಲ್ಲ? ಸಿಡಿದೆದ್ದ ಪಿಯು ಶಿಕ್ಷಕರು

By Kannadaprabha News  |  First Published Jul 24, 2022, 12:30 AM IST

2022-23ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿ ತಿಂಗಳು ಕಳೆದರೂ ಉಪನ್ಯಾಸಕರಿಗೆ ಇನ್ನೂ ವರ್ಗಾವಣೆ ಭಾಗ್ಯ ಸಿಕ್ಕಿಲ್ಲ.


ಲಿಂಗರಾಜು ಕೋರಾ

ಬೆಂಗಳೂರು(ಜು.24):  ಕಳೆದ ನಾಲ್ಕು ವರ್ಷಗಳಿಂದ ವರ್ಗಾವಣೆ ಅವಕಾಶದಿಂದ ವಂಚಿತರಾಗಿರುವ ರಾಜ್ಯ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರು ಮತ್ತು ಪ್ರಾಂಶುಪಾಲರು ಸರ್ಕಾರ ಈಗಲಾದರೂ ವರ್ಗಾವಣೆ ಪ್ರಕ್ರಿಯೆ ನಡೆಸದಿದ್ದರೆ ಆಗಸ್ಟ್‌ನಲ್ಲಿ ನಡೆಯಲಿರುವ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಬಹಿಷ್ಕರಿಸಲು ಚಿಂತನೆ ನಡೆಸಿದ್ದಾರೆ. ಮೇ 30ಕ್ಕೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡರೂ ಇನ್ನೂ ಕೂಡ ವರ್ಗಾವಣೆ ಪ್ರಕ್ರಿಯೆ ಆರಂಭಿಸದೆ ವಿಳಂಬ ಮಾಡುತ್ತಿರುವುದಕ್ಕೆ ಬೇಸತ್ತು ಜು.22ಕ್ಕೆ ಇಲಾಖೆಯ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸುವುದಾಗಿ ಈಗಾಗಲೇ ಶಿಕ್ಷಣ ಸಚಿವರಿಗೆ ಪತ್ರ ಬರೆದಿರುವ ಪಿಯು ಉಪನ್ಯಾಸಕರು ಸರ್ಕಾರ ತಮ್ಮ ಆಗ್ರಹಕ್ಕೆ ಮಣಿಯದೆ ಹೋದರೆ ಇದೀಗ ಪೂರಕ ಪರೀಕ್ಷಾ ಕಾರ್ಯದಿಂದ ದೂರ ಉಳಿಯುವ ಆಲೋಚನೆ ನಡೆಸಿದ್ದಾರೆ.

Tap to resize

Latest Videos

ಪಿಯು ಉಪನ್ಯಾಸಕರ ವರ್ಗಾವಣೆಗೆ ಕಳೆದ ಡಿಸೆಂಬರ್‌ನಲ್ಲಿ ನಡೆದ ಬೆಳಗಾವಿ ಅಧಿವೇಶನದಲ್ಲೇ ಶಿಕ್ಷಕರ ವರ್ಗಾವಣೆ ಕಾಯ್ದೆಗೆ ತಿದ್ದುಪಡಿ ತಂದು ಪ್ರತೀ ವರ್ಷ ಶೇ.10 ರಷ್ಟು ಪ್ರಮಾಣದ ಪಿಯು ಉಪನ್ಯಾಸಕರ ವರ್ಗಾವಣೆಗೂ ಅವಕಾಶ ಕಲ್ಪಿಸಲಾಗಿತ್ತು. ಕಾಯ್ದೆಯ ಅನುಸಾರ ಪ್ರತಿ ವರ್ಷ ಏಪ್ರಿಲ್‌-ಮೇನಲ್ಲಿ ವರ್ಗಾವಣೆ ಪ್ರಕ್ರಿಯೆ ನಡೆಯಬೇಕು. ಆದರೆ, 2022-23ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿ ತಿಂಗಳು ಕಳೆದರೂ ಉಪನ್ಯಾಸಕರಿಗೆ ಇನ್ನೂ ವರ್ಗಾವಣೆ ಭಾಗ್ಯ ಸಿಕ್ಕಿಲ್ಲ.

PUC Supplementary Exam 2022; ಆ.12ರಿಂದ ದ್ವಿತೀಯ ಪಿಯು ಪೂರಕ ಪರೀಕ್ಷೆ

ಡಿಸೆಂಬರ್‌ನಲ್ಲಿ ರಾಜ್ಯ ವಿಧಾನ ಮಂಡಲದ ಉಭಯ ಸದನಗಳಲ್ಲಿ ಒಪ್ಪಿಗೆ ಪಡೆದ ‘ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳು (ಪ್ರಾಂಶುಪಾಲರು ಮತ್ತು ಉಪನ್ಯಾಸಕರ ವರ್ಗಾವಣೆ ನಿಯಂತ್ರಣ) ಅಧಿ ನಿಯಮ 2022’ಕ್ಕೆ ಜನವರಿಯಲ್ಲಿ ರಾಜ್ಯಪಾಲರ ಅಂಕಿತ ಬಿದ್ದಿತ್ತು. ಬಳಿಕ ಪಿಯು ಇಲಾಖೆ ವರ್ಗಾವಣೆ ನಿಯಮಗಳನ್ನು ರೂಪಿಸಿ ಅರ್ಜಿ ಆಹ್ವಾನಿಸಿತ್ತು. ಮೇ 30ರ ವರೆಗೆ ಇದ್ದ ಕಾಲಾವಕಾಶದಲ್ಲಿ ರಾಜ್ಯದ 1220ಕ್ಕೂ ಹೆಚ್ಚು ಸರ್ಕಾರಿ ಪಿಯು ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಉಪನ್ಯಾಸಕರ ಪೈಕಿ 3500ಕ್ಕೂ ಹೆಚ್ಚು ಉಪನ್ಯಾಸಕರು ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ವರ್ಗಾವಣೆ ಪ್ರಕ್ರಿಯೆ ಆಮೆ ಗತಿ ಹಿಡಿದಿದೆ.

ಮೊರಾರ್ಜಿ ವಸತಿ ಶಾಲೆ ಪಿಯುವರೆಗೆ ವಿಸ್ತರಣೆಗೆ ತೀರ್ಮಾನ: ಸಚಿವ ಕೋಟ

ಕಾಯ್ದೆಯಲ್ಲಿ ಕಲ್ಪಿಸಿರುವ ಆದ್ಯತೆಯಂತೆ ಮೊದಲು 2018ರಲ್ಲಿ ಕಡ್ಡಾಯ ವರ್ಗಾವಣೆಗೊಂಡ ಉಪನ್ಯಾಸಕರಿಗೆ ಕೌನ್ಸೆಲಿಂಗ್‌ ನಡೆಸಿರುವ ಇಲಾಖೆಯು ಇನ್ನು ಕೂಡ ಆದೇಶ ಪತ್ರ ನೀಡಿಲ್ಲ. ಉಳಿದ ಉಪನ್ಯಾಸಕರಿಗೆ ಕೋರಿಕೆ ವರ್ಗಾವಣೆಗೆ ಇನ್ನೂ ತಾತ್ಕಾಲಿಕ ಪಟ್ಟಿಯನ್ನೂ ಬಿಡುಗಡೆ ಮಾಡಿಲ್ಲ. ಹೀಗೆ ಇನ್ನಷ್ಟುವಿಳಂಬ ಮಾಡಿದರೆ ಆಗಸ್ಟ್‌ನಲ್ಲಿ ಪೂರಕ ಪರೀಕ್ಷೆ ಬರಲಿದೆ, ನಂತರ ಮೌಲ್ಯಮಾಪನ ಫಲಿತಾಂಶ ನಂತರ ಪ್ರಸಕ್ತ ಸಾಲಿನ ಮಧ್ಯ ವಾರ್ಷಿಕ ಪರೀಕ್ಷೆ ಎಂದು ಕಾಲ ದೂಡುತ್ತದೆ. ವರ್ಗಾವಣೆ ಪೂರ್ಣಗೊಳ್ಳುವಷ್ಟರಲ್ಲಿ ವರ್ಷವೇ ಕಳೆಯುತ್ತದೆ. ಹೆಸರಿಗೆ ಮಾತ್ರ ಪ್ರತೀ ವರ್ಷ ವರ್ಗಾವಣೆಗೆ ಕಾಯ್ದೆ ತರಲಾಗಿದೆ ಎಂದು ಉಪನ್ಯಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪರೀಕ್ಷೆ ಬಹಿಷ್ಕಾರ ಅನಿವಾರ‍್ಯ: ನಿಂಗೇಗೌಡ

ಈ ಸಂಬಂಧ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಸರ್ಕಾರಿ ಪಿಯು ಉಪನ್ಯಾಸಕರ ಸಂಘದ ಅಧ್ಯಕ್ಷ ನಿಂಗೇಗೌಡ ಅವರು, ಸರ್ಕಾರ ಜಾರಿಗೆ ತಂದಿರುವ ವರ್ಗಾವಣೆ ಕಾಯ್ದೆ ಬಗ್ಗೆ ಸಾಕಷ್ಟುಆಕ್ಷೇಪಗಳಿವೆ. ಸರ್ಕಾರ ನಮ್ಮ ಆಕ್ಷೇಪಗಳನ್ನು ಪರಿಗಣಿಸಿಲ್ಲ. ಕೊನೆಯ ಪಕ್ಷ ಸಮಯಕ್ಕೆ ಸರಿಯಾಗಿ ವರ್ಗಾವಣೆಯನ್ನಾದರೂ ನಡೆಸಲಿ ಎಂದು ಸುಮ್ಮನಾದರೆ ಅದನ್ನೂ ಮಾಡುತ್ತಿಲ್ಲ. ನಾಲ್ಕು ವರ್ಷಗಳಿಂದ ವರ್ಗಾವಣೆ ಅವಕಾಶವಿಲ್ಲದೆ ಪೋಷಕರ ಆರೋಗ್ಯ ಸಮಸ್ಯೆ, ಮಕ್ಕಳ ಆರೋಗ್ಯ ಸಮಸ್ಯೆ, ಪತಿ ಪತ್ನಿ ವರ್ಗಾವಣೆ ಸೇರಿದಂತೆ ಅನೇಕ ಕಾರಣಗಳಿಂದ ಸಾವಿರಾರು ಉಪನ್ಯಾಸಕರು ಪರಿತಪಿಸುತ್ತಿದ್ದಾರೆ. ಸರ್ಕಾರಕ್ಕೆ ಇದ್ಯಾವುದೂ ಕಣ್ಣಿಗೇ ಕಾಣುತ್ತಿಲ್ಲ. ಅಧಿಕಾರಿಗಳು ಮಾಡುವ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮಾಡದೆ ಉಪನ್ಯಾಸಕರ ತಾಳ್ಮೆ ಪರೀಕ್ಷಿಸುತ್ತಿದ್ದಾರೆ. ಈ ನಿರ್ಲಕ್ಷ್ಯ ಹೀಗೇ ಮುಂದುವರೆದರೆ ಅನಿವಾರ್ಯವಾಗಿ ಪೂರಕ ಪರೀಕ್ಷೆಯಿಂದ ದೂರು ಉಳಿಯುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
 

click me!