- ಈ ಬಾರಿ ದಾಖಲೆ ಫಲಿತಾಂಶ ಸಾಧ್ಯತೆ
- ಫಲಿತಾಂಶ ಏರಿಕೆಗೆ ಸರಳ ಪ್ರಶ್ನೆ, ಸಡಿಲ ಮೌಲ್ಯಮಾಪನ ಕಾರಣ?
- ವೆಬ್, ಎಸ್ಸೆಮ್ಮೆಸ್‌ನಲ್ಲಿ ಫಲಿತಾಂಶ ಲಭ್ಯ
ಬೆಂಗಳೂರು(ಮೇ.19): ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವು ಗುರುವಾರ (ಮೇ 19) ಮಧ್ಯಾಹ್ನ 12.30ಕ್ಕೆ ಪ್ರಕಟವಾಗಲಿದೆ. ಈ ಬಾರಿ ಸರಳವಾಗಿ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದ್ದ ಕಾರಣ ಹಾಗೂ ಮೌಲ್ಯಮಾಪನವನ್ನೂ ಕಟ್ಟು ನಿಟ್ಟಾಗಿ ನಡೆಸದ ಕಾರಣ ಈ ಬಾರಿ ದಾಖಲೆ ಫಲಿತಾಂಶ ನಿರೀಕ್ಷಿಸಲಾಗಿದೆ.
ಮಧ್ಯಾಹ್ನ 1 ಗಂಟೆ ನಂತರ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ವೆಬ್‌ಸೈಟ್‌ನಲ್ಲಿ ವಿದ್ಯಾರ್ಥಿಗಳು ಪರೀಕ್ಷಾ ನೋಂದಣಿ ಸಂಖ್ಯೆ ದಾಖಲಿಸಿ ತಮ್ಮ ಫಲಿತಾಂಶ ವೀಕ್ಷಿಸಬಹುದು.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಮಲ್ಲೇಶ್ವರದ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಲ್ಲಿ ಫಲಿತಾಂಶ ಬಿಡುಗಡೆ ಮಾಡಲಿದ್ದಾರೆ. ನಂತರ ಮಧ್ಯಾಹ್ನ 1 ಗಂಟೆಯ ನಂತರ ವೆಬ್‌ಸೈಟ್‌ನಲ್ಲಿ ಫಲಿತಾಂಶವನ್ನು ಅಪ್‌ಲೋಡ್ ಮಾಡಲಾಗುತ್ತದೆ. ಶುಕ್ರವಾರ ಎಲ್ಲಾ ಶಾಲೆಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಅಲ್ಲದೆ, ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿರುವ ಫೋನ್ ನಂಬರ್‌ಗಳಿಗೆ ಎಸ್‌ಎಂಎಸ್ ಮೂಲಕವೂ ಫಲಿತಾಂಶ ದೊರೆಯಲಿದೆ.
ಮೇ 19 ರಂದು SSLC ಫಲಿತಾಂಶ ಪ್ರಕಟ, ಮಾರ್ಕ್ಸ್ ವಿಚಾರದಲ್ಲಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್!
ದಾಖಲೆ ಫಲಿತಾಂಶ ಸಾಧ್ಯತೆ ಏಕೆ?:
ಕೋವಿಡ್ ಹಿನ್ನೆಲೆಯಲ್ಲಿ 2021-22ನೇ ಸಾಲಿನ ಆರಂಭದಲ್ಲೂ ತರಗತಿ ಚಟುವಟಿಕೆ ಆರಂಭವಾಗುವುದು ತಡವಾಗಿತ್ತು. ಈ ಹಿನ್ನೆಲೆಯಲ್ಲಿ ಸರಳವಾಗಿ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿರುವುದಾಗಿ ಹಾಗೂ ಬಹು ಆಯ್ಕೆ ಉತ್ತರಗಳಲ್ಲಿ ಯಾವುದೇ ಗೊಂದಲ ಇಲ್ಲದೆ ವಿದ್ಯಾರ್ಥಿಗಳು ಸರಳವಾಗಿ ಉತ್ತರ ಗುರುತಿಸುವ ಮಟ್ಟಿಗೆ ಪ್ರಶ್ನೆ ಸಿದ್ಧಪಡಿಸಲಾಗಿದೆ ಎಂದು ಮಂಡಳಿಯ ಅಧಿಕಾರಿಗಳೇ ಹೇಳಿದ್ದರು. ಅಲ್ಲದೆ, ಈ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಮಕ್ಕಳು ಕಳೆದ ಎರಡು ವರ್ಷ ಕೋವಿಡ್‌ನಿಂದ 8 ಮತ್ತು 9ನೇ ತರಗತಿಯಲ್ಲಿ ಪರೀಕ್ಷೆ ಎದುರಿಸಿರಲಿಲ್ಲ. ಸಾಮೂಹಿಕವಾಗಿ ಪಾಸು ಮಾಡಲಾಗಿತ್ತು. ಕಲಿಕೆಯಲ್ಲಿ ಹಿಂದುಳಿದಿದ್ದ ವಿದ್ಯಾರ್ಥಿಗಳು ಎರಡು ವರ್ಷದ ಬಳಿಕ ನೇರ ಮಂಡಳಿ ಪರೀಕ್ಷೆ ಎದುರಿಸಿದ್ದರು. ಹಾಗಾಗಿ ಮೌಲ್ಯಮಾಪನವನ್ನೂ ಅಷ್ಟುಬಿಗಿಗೊಳಿಸದಿರಲು ಮಂಡಳಿ ಮೌಲ್ಯಮಾಪಕರಿಗೆ ಅನಧಿಕೃತ ಸೂಚನೆ ನೀಡಿತ್ತು. ಈ ಎಲ್ಲಾ ಕಾರಣಗಳಿಂದ ಈ ಬಾರಿ ದಾಖಲೆ ಫಲಿತಾಂಶದ ಬರುವ ಸಾಧ್ಯತೆ ಹೆಚ್ಚಾಗಿದೆ.
ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಒಟ್ಟು 15,387 ಶಾಲೆಗಳ 8.73ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ರಾಜ್ಯಾದ್ಯಂತ 3,446 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಸುಮಾರು 234 ಕೇಂದ್ರಗಳಲ್ಲಿ ನಡೆದ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ 63,796 ಶಿಕ್ಷಕರು ಭಾಗಿಯಾಗಿದ್ದರು.
SSLC ಪತ್ರಿಕೆ ಕಂಡು ಮೌಲ್ಯಮಾಪಕರೇ ಶಾಕ್, ವಿಚಿತ್ರ ಬೇಡಿಕೆ ಇಟ್ಟ ಪರೀಕ್ಷಾರ್ಥಿ..!
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಮಧ್ಯಾಹ್ನ 12.30ಕ್ಕೆ ಮಲ್ಲೇಶ್ವರದಲ್ಲಿರುವ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಕಚೇರಿಯಲ್ಲಿ ಫಲಿತಾಂಶ ಪ್ರಕಟಿಸಲಿದ್ದಾರೆ. ಇದಾದ ನಂತರ ಮಕ್ಕಳ ಫಲಿತಾಂಶವಿವಿಧ ವೆಬ್‌ಸೈಟ್‌ಗಳಲ್ಲಿ ಪ್ರಕಟವಾಗಲಿದೆ.
ಅದರಂತೆ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾದ ಮರು ದಿನದಿಂದಲೇ (ಮೇ 20) ಪ್ರಥಮ ಪಿಯುಸಿ ದಾಖಲಾತಿ ಹಾಗೂ ಜೂ.1ರಿಂದ ದ್ವಿತೀಯ ಪಿಯುಸಿ ದಾಖಲಾತಿ ಪ್ರಕ್ರಿಯೆ ಆರಂಭಿಸಲು ಅವಕಾಶ ಕಲ್ಪಿಸಿದೆ. ಎರಡೂ ತರಗತಿ ಮಕ್ಕಳಿಗೆ ಜೂ.9ರಿಂದ ಪಠ್ಯಕ್ರಮ ಬೋಧನಾ ಪ್ರಕ್ರಿಯೆ ಶುರುವಾಗಲಿದೆ.
ಕಳೆದ ವರ್ಷ ರಾಜ್ಯದ ವಿವಿಧ ಪಿಯು ಕಾಲೇಜುಗಳಲ್ಲಿ ಉದ್ಭವಿಸಿದ್ದ ಹಿಜಾಬ್, ಕೇಸರಿ ಶಾಲು ವಿವಾದದ ಹಿನ್ನೆಲೆಯಲ್ಲಿ ಎಚ್ಚೆತ್ತ ಇಲಾಖೆಯು ಈ ಬಾರಿ ಹೈಕೋರ್ಚ್ ಆದೇಶದಂತೆ ಕಾಲೇಜು ಅಭಿವೃದ್ಧಿ ಸಮಿತಿಗಳು ನಿಗದಿಪಡಿಸಿರುವ ಸಮವಸ್ತ್ರ ತೊಟ್ಟು ತರಗತಿಗೆ ಬರಬೇಕು. ಸಮವಸ್ತ್ರ ನಿಗದಿಯಾಗದ ಕಾಲೇಜುಗಳಲ್ಲಿ ಸಮಾನತೆ ಮತ್ತು ಐಕ್ಯತೆಯನ್ನು ಕಾಪಾಡಿಕೊಂಡು ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ಬಾರದಂತಹ ಉಡುಪುಗಳನ್ನು ಧರಿಸಿ ವಿದ್ಯಾರ್ಥಿಗಳು ಕಾಲೇಜಿಗೆ ಹಾಜರಾಗಬೇಕೆಂದು ಸ್ಪಷ್ಟಸೂಚನೆ ನೀಡಿದೆ.