ಸರ್ಕಾರ ಹೊರಡಿಸಿದ್ದ ಸುತ್ತೋಲೆ ಎತ್ತಿ ಹಿಡಿದ ಹೈಕೋರ್ಟ್, 5,8,9,11ನೇ ತರಗತಿ ಬೋರ್ಡ್ ಪರೀಕ್ಷೆಗೆ ಅನುಮತಿ!

By Suvarna NewsFirst Published Mar 7, 2024, 7:30 PM IST
Highlights

ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ಹೈಕೋರ್ಟ್ ವಿಭಾಗೀಯ ಪೀಠ ತಡೆ ನೀಡಿದೆ. ಇದೀಗ 5,8,9,11 ನೇ ತರಗತಿಗಳ ಬೋರ್ಡ್ ಪರೀಕ್ಷೆಗೆ ನಡೆಸಲು ಅನುಮತಿ ನೀಡಲಾಗಿದೆ
 

ಬೆಂಗಳೂರು(ಮಾ.07) ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ 5, 8, 9ನೇ ತರಗತಿ ಹಾಗೂ ಪ್ರಥಮ ಪಿಯುಸಿಗೆ ರಾಜ್ಯಮಟ್ಟದ ಬೋರ್ಡ್ ಪರೀಕ್ಷೆಗೆ ರಾಜ್ಯ ಸರ್ಕಾರ ಹೊರಡಿಸಿದ್ದ ಸುತ್ತೂಲೆಯನ್ನು ಹೈಕೋರ್ಟ್ ವಿಭಾಗೀಯ ಪೀಠ ಎತ್ತಿ ಹಿಡಿದಿದೆ. ನಿನ್ನೆಯಷ್ಟೇ  5,8,9,11 ತರಗತಿಗಳ ಬೋರ್ಡ್ ಪರೀಕ್ಷೆಯನ್ನು ಹೈಕೋರ್ಟ್ ಏಕಸದಸ್ಯ ಪೀಠ ರದ್ದು ಮಾಡಿ ಆದೇಶ ನೀಡಿತ್ತು. ಆದರೆ ಈ ಕುರಿತು ಮೇಲ್ಮನವಿ ಸಲ್ಲಿಕೆಯಾಗಿದ್ದ ಕಾರಣ ಇಂದು ವಿಚಾರಣೆ ನಡೆಸಿದ ವಿಭಾಗೀಯ ಪೀಠ ನಿನ್ನೆ ಏಕದಸದಸ್ಯ ಪೀಠ ನೀಡಿದ್ದ ಆದೇಶಕ್ಕೆ ತಡೆ ನೀಡಿದ ಬೋರ್ಡ್ ಪರೀಕ್ಷೆಗೆ ಅನುಮತಿ ನೀಡಿದೆ. 

ಬೋರ್ಡ್ ಪರೀಕ್ಷೆ ನಡೆಸುವ ಸಂಬಂಧ 2023ರ ಅ.6 ಮತ್ತು 9ರಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸುತ್ತೋಲೆ ಹೊರಡಿಸಿತ್ತು. ಆದರೆ ಈ ಸುತ್ತೋಲೆಯನ್ನು ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಸಂಘ’ (ರುಪ್ಸಾ) ಹಾಗೂ ‘ಅನುದಾನ ರಹಿತ ಮಾನ್ಯತೆ ಪಡೆದ ಶಾಲೆಗಳ ಸಂಘಟನೆ’ (ಅವರ್‌ ಸ್ಕೂಲ್ಸ್‌) ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ರವಿ ವಿ ಹೊಸಮಿ ಅವರ ಏಕಸದಸ್ಯ ಪೀಠ ಬೋರ್ಡ್ ಪರೀಕ್ಷೆ ಸುತ್ತೋಲೆಯನ್ನು ರದ್ದು ಮಾಡಿ ಮಹತ್ವದ ತೀರ್ಪು ನೀಡಿತ್ತು.

5, 8,9 ಮತ್ತು 11 ನೇ ತರಗತಿ ಬೋರ್ಡ್ ಎಕ್ಸಾಂ ರದ್ದು, ಹೈಕೋರ್ಟ್ ಆದೇಶ

ಆದರೆ ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲಾಗಿತ್ತು.  ಇದೀಗ ವಿಭಾಗೀಯ ಪೀಠ ಸರ್ಕಾರದ ಸುತ್ತೋಲೆಯನ್ನು ಎತ್ತಿಹಿಡಿದಿದೆ. ಬೋರ್ಡ್ ಪರೀಕ್ಷೆಗೆ ಅನುಮತಿ ನೀಡುವ ಮೂಲಕ ಏಕಸದಸ್ಯ ನೀಡಿದ ಆದೇಶಕ್ಕೆ ತಡೆ ನೀಡಿದೆ. ಸರ್ಕಾರ ಹಾಗೂ ಶಾಲಾ ಆಡಳಿತ ಮಂಡಳಿಗಳ ಸಂಘಟನೆಗಳ ಹಗ್ಗಜಗ್ಗಾಟದಿಂದ ಈ ವರ್ಷವೂ ವಿದ್ಯಾರ್ಥಿಗಳು ಗೊಂದಲಕ್ಕೆ ಸಿಲುಕಿದ್ದರು. ಆದರೆ ಪರೀಕ್ಷೆಕೆ ಮೂರು ದಿನ ಬಾಕಿ ಇರುವಂತೆ ವಿಭಾಗೀಯ ಪೀಠ ಬೋರ್ಡ್ ಪರೀಕ್ಷೆಗೆ ಅನುಮತಿ ನೀಡುವ ಮೂಲಕ ಗೊಂದಲಕ್ಕೆ ತೆರೆ ಎಳೆದಿದೆ. ಮಾ.11ರಿಂದ 5,8,9,11 ತರಗತಿಗಳ ಪರೀಕ್ಷೆಗಳು ಆರಂಭಗೊಳ್ಳುತ್ತಿದೆ.

ಕಳೆದ ವರ್ಷವೂ 5 ಮತ್ತು 8ನೇ ತರಗತಿ ಮಕ್ಕಳಿಗೆ ಬೋರ್ಡ್ ಪರೀಕ್ಷೆಗೆ ನಿಗದಿಪಡಿಸಿ ‘ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು (ಆರ್‌ಟಿಇ) ಕಾಯ್ದೆ-2009ರಡಿ ಶಿಕ್ಷಣ ಇಲಾಖೆ ಅಧಿಸೂಚನೆ ಹೊರಡಿಸಿತ್ತು. ಆ ಅಧಿಸೂಚನೆಯನ್ನೂ ರುಪ್ಸಾ ಹಾಗೂ ಅವರ್‌ ಸ್ಕೂಲ್ಸ್‌ ಸಂಘಟನೆಗಳು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದವು. ಅಧಿಸೂಚನೆಯನ್ನು 2023ರ ಫೆಬ್ರವರಿಯಲ್ಲಿ ನ್ಯಾ. ಪ್ರದೀಪ್‌ಸಿಂಗ್ ಯೆರೂರ್ ಅವರ ನ್ಯಾಯಪೀಠ ರದ್ದುಪಡಿಸಿತ್ತು. ಅದನ್ನು ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಆಗ ಪರೀಕ್ಷೆಗೆ ಎರಡು-ಮೂರು ದಿನಗಳಷ್ಟೇ ಇದ್ದ ಕಾರಣ ಪರೀಕ್ಷೆಗಳು ನಡೆಯಲಿ. ಆದರೆ, ಫಲಿತಾಂಶ ಮೇಲ್ಮನವಿಯಲ್ಲಿನ ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ವಿಭಾಗೀಯ ನ್ಯಾಯಪೀಠ ಹೇಳಿತ್ತು. ಈ ಮಧ್ಯೆ ಮೇಲ್ಮನವಿಯನ್ನು ಸರ್ಕಾರ ವಾಪಸ್ ಪಡೆದುಕೊಂಡಿತ್ತು

ಇಂದಿನಿಂದ ಪಿಯು-2 ಪರೀಕ್ಷೆ: ಆಲ್‌ ದಿ ಬೆಸ್ಟ್‌

click me!