
ಕನ್ನಡ ಪ್ರಭ ವರದಿ ಫಲಶೃತಿ
‘7ನೇ ಕ್ಲಾಸ್ ವರೆಗೆ ಇಂಗ್ಲಿಷ್, 8ನೇ ತರಗತಿಯಿಂದ ಕನ್ನಡ ಮಾಧ್ಯಮ‘, ‘ಸರ್ಕಾರಿ ಶಾಲೇಲಿ ಕಲಿತ 30 ಸಾವಿರ ಮಕ್ಕಳು ಅತಂತ್ರ’ ಎಂಬ ಸರಣಿ ವರದಿಗಳನ್ನು ‘ಕನ್ನಡಪ್ರಭ’ ಜೂ,14 ಹಾಗೂ ಜು.17ರಂದು ಪ್ರಕಟಿಸಿ ಗಮನ ಸೆಳೆದಿತ್ತು,
ಚಂದ್ರು ಕೊಂಚಿಗೇರಿ
ಹೂವಿನಹಡಗಲಿ (ಆ.9)
ಸರ್ಕಾರಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ವರೆಗೆ ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಮಕ್ಕಳಿಗೆ ರಾಜ್ಯ ಸರ್ಕಾರ, ಕೊನೆಗೂ ಇದೇ ಶೈಕ್ಷಣಿಕ ವರ್ಷದಿಂದ ಅನ್ವಯ ಆಗುವಂತೆ ಸರ್ಕಾರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಆರಂಭಿಸಿದೆ. ಅರ್ಥಾತ್, ಅವರಿಗೆ 8ನೇ ಕ್ಲಾಸ್‌ನಲ್ಲೂ ಆಂಗ್ಲ ಮಾಧ್ಯಮದಲ್ಲೇ ಮುಂದುವರಿಯಲು ಮೊದಲ ಬಾರಿ ಅವಕಾಶ ನೀಡಿದೆ.
2019-20ನೇ ಸಾಲಿನಿಂದ ರಾಜ್ಯದ ಒಂದು ಸಾವಿರ ಶಾಲೆಗಳಲ್ಲಿ ಕನ್ನಡ ಮಾಧ್ಯಮದೊಂದಿಗೆ 1ನೇ ತರಗತಿಯಿಂದಲೇ, ಆಂಗ್ಲ ಮಾಧ್ಯಮ (ದ್ವಿಭಾಷಾ ಮಾಧ್ಯಮ) ತರಗತಿಗಳನ್ನು ಪ್ರಾರಂಭಿಸಲಾಗಿತ್ತು. ಹೀಗಾಗಿ, ಆಂಗ್ಲ ಮಾಧ್ಯಮದಲ್ಲಿ 7ನೇ ತರಗತಿ ಪಾಸ್ ಮಾಡಿರುವ 30 ಸಾವಿರ ಮಕ್ಕಳು, 8ನೇ ತರಗತಿಯಿಂದ ಆಂಗ್ಲ ಮಾಧ್ಯಮ ಇಲ್ಲದೆ ಅತಂತ್ರವಾಗಿದ್ದರು. ಈಗ ಆಗಸ್ಟ್ 1ರಂದು ಸರ್ಕಾರ ಈ ಸಂಬಂಧ ಆದೇಶ ಹೊರಡಿಸಿದ್ದು, ರಾಜ್ಯದ 278 ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಉನ್ನತೀಕರಿಸಿ, ಆಂಗ್ಲ ಮಾಧ್ಯಮದಲ್ಲಿ 8ನೇ ತರಗತಿ ಆರಂಭಿಸಿದೆ.
ಈ ಕುರಿತು ‘ಕನ್ನಡಪ್ರಭ’ವು ‘ಸರ್ಕಾರಿ ಶಾಲೇಲಿ ಕಲಿತ 30 ಸಾವಿರ ಮಕ್ಕಳು ಅತಂತ್ರ’, ‘ಖಾಸಗಿ ಶಾಲೆಗಳತ್ತ ಸರ್ಕಾರಿ ಶಾಲೆಯ 30 ಸಾವಿರ ಮಕ್ಕಳು.!’, ‘7ನೇ ಕ್ಲಾಸ್ ವರೆಗೆ ಇಂಗ್ಲಿಷ್, 8ನೇ ತರಗತಿಯಿಂದ ಕನ್ನಡ ಮಾಧ್ಯಮ.!’ ಹೀಗೆ ಸರಣಿ ವರದಿಗಳನ್ನು ಪ್ರಕಟಿಸಿ ಸರ್ಕಾರದ ಗಮನ ಸೆಳೆದಿತ್ತು.
ರಾಜ್ಯದ ಒಟ್ಟು 1 ಸಾವಿರ ಆಂಗ್ಲ ಮಾಧ್ಯಮ ಶಾಲೆಗಳ ಪೈಕಿ, 278 ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 8ನೇ ತರಗತಿಗೆ ಉನ್ನತೀಕರಿಸಿ ಆಂಗ್ಲ ಮಾಧ್ಯಮ ಶಾಲೆಗೆ ಮಂಜೂರಾತಿ ನೀಡಲಾಗಿದೆ. ತರಗತಿವಾರು, ಮಕ್ಕಳ ದಾಖಲಾತಿ ಮತ್ತು ಕರ್ತವ್ಯದಲ್ಲಿ ಇರುವ ಶಿಕ್ಷಕರ ಸಂಖ್ಯೆ ಹಾಗೂ ಮಕ್ಕಳ ಅನುಪಾತಕ್ಕೆ ಅನುಗುಣವಾಗಿ ಈ ಶಾಲೆಗಳನ್ನು ಉನ್ನತೀಕರಿಸಲಾಗಿದ್ದು, 2026-27ನೇ ಶೈಕ್ಷಣಿಕ ಸಾಲಿನಿಂದಲೇ ಇದು ಜಾರಿಗೆ ಬರಲಿದೆ.
ಕನ್ನಡ ಮಾಧ್ಯಮ ಶಾಲೆಯಲ್ಲೇ 8ನೇ ತರಗತಿ ಆಂಗ್ಲ ಮಾಧ್ಯಮ ಶಾಲೆ ಆರಂಭಿಸಲು ಸರ್ಕಾರ ಆದೇಶ ನೀಡಿದೆ. ಅದರಂತೆ ಕ್ರಮಕ್ಕೆ ಮುಂದಾಗುತ್ತೇವೆ.
- ಕೆ.ಮಂಗಳಾ, ಕ್ಷೇತ್ರ ಶಿಕ್ಷಣಾಧಿಕಾರಿ, ಹೂವಿನಹಡಗಲಿ