ರಾಜ್ಯ ಶಿಕ್ಷಣ ನೀತಿಯ ಅಂತಿಮ ವರದಿಯಲ್ಲಿ ಮಾತೃಭಾಷೆ ಪದಕ್ಕೆ ಕೊಕ್? ಕನ್ನಡಕ್ಕೆ ಕಂಟಕ?

Published : Aug 10, 2025, 01:54 PM IST
Karnataka education policy

ಸಾರಾಂಶ

ರಾಜ್ಯ ಶಿಕ್ಷಣ ನೀತಿ ಆಯೋಗದ ದ್ವಿಭಾಷಾ ನೀತಿ ಶಿಫಾರಸಿನಿಂದ ಕನ್ನಡಕ್ಕೆ ಆತಂಕ ಎದುರಾಗಿದೆಯೇ? ಕನ್ನಡ ಭಾಷಾ ಬೋಧನೆ ಮತ್ತು ಕಲಿಕೆಗೆ ಹಿನ್ನಡೆಯಾಗುವ ಸಾಧ್ಯತೆ ಇದೆಯೇ? ಈ ಕುರಿತು ತಜ್ಞರ ಅಭಿಪ್ರಾಯಗಳನ್ನು ತಿಳಿಯಿರಿ.

ಬೆಂಗಳೂರು: ರಾಜ್ಯ ಶಿಕ್ಷಣ ನೀತಿ ಆಯೋಗ ನೀಡಿರುವ ಅಂತಿಮ ವರದಿಯಲ್ಲಿ ರಾಜ್ಯದಲ್ಲಿ ದ್ವಿಭಾಷಾ ನೀತಿಯಲ್ಲಿ ಕನ್ನಡ ಅಥವಾ ಮಾತೃಭಾಷೆಯನ್ನು ಬೋಧನಾ ಮಾಧ್ಯಮವನ್ನಾಗಿ ಕಡ್ಡಾಯಗೊಳಿಸುವಂತೆ ಶಿಫಾರಸು ಮಾಡಿರುವುದು ಕನ್ನಡದ ಕತ್ತು ಹಿಸುಕುವ ಪ್ರಯತ್ನ. ಸರ್ಕಾರ ಈ ವರದಿ ವಿರೋಧಿಸಬೇಕೆಂದು ಎಂದು ಕನ್ನಡ ಗೆಳೆಯರ ಬಳಗ ಮತ್ತು ಕರ್ನಾಟಕ ವಿಕಾಸ ರಂಗ ಆಗ್ರಹಿಸಿವೆ. ಪ್ರೊ.ಸುಖದೇವ್ ಥೋರಾಟ್' ಅಧ್ಯಕ್ಷತೆಯ ರಾಜ್ಯ ಶಿಕ್ಷಣ ನೀತಿ ಆಯೋಗವು ನೀಡಿರುವ ಅಂತಿಮ ವರದಿಯಲ್ಲಿ ರಾಜ್ಯದಲ್ಲಿ ದ್ವಿಭಾಷಾ ನೀತಿ ಪ್ರತಿಪಾದಿಸಿ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದ ವರೆಗೆ ಒಟ್ಟು 97 ಶಿಫಾರಸುಗಳನ್ನು ಮಾಡಿದೆ. ಈ ಶಿಫಾರಸುಗಳಲ್ಲಿ ಕರ್ನಾಟಕದಲ್ಲಿರುವ ಎಲ್ಲ ಬೋರ್ಡ್ ಶಾಲೆಗಳಲ್ಲಿ 5ನೇ ತರಗತಿಯವರೆಗೆ ಕನ್ನಡ ಅಥವಾ ಮಾತೃಭಾಷೆಯನ್ನು ಬೋಧನಾ ಮಾಧ್ಯಮವನ್ನಾಗಿ ಕಡ್ಡಾಯಗೊಳಿಸುವಂತೆ ಸಲಹೆ ಮಾಡಿದೆ. ಇದು ಮೇಲ್ನೋಟಕ್ಕೆ ಉತ್ತಮ ಸಲಹೆಯಾಗಿ ಕಾಣುತ್ತದೆ. ಆದರೆ, ಕನ್ನಡ ಅಥವಾ ಮಾತೃಭಾಷೆ ಎಂಬ ಸಲಹೆಯಿಂದ ಕನ್ನಡ ಕಲಿಕೆ ಕಡ್ಡಾಯವಲ್ಲ ಎಂಬುದು ಸ್ಪಷ್ಟ ಎಂದು ಕನ್ನಡ ಗೆಳೆಯರ ಬಳಗದ ಸಂಚಾಲಕ ರಾ.ನಂ.ಚಂದ್ರಶೇಖರ್, ಕರ್ನಾಟಕ ವಿಕಾಸರಂಗದ ಅಧ್ಯಕ್ಷ ವ.ಚ. ಚನ್ನೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯ ಶಿಕ್ಷಣ ನೀತಿ ಆಯೋಗದ ವರದಿ ಅನುಷ್ಠಾನಕ್ಕೆ ಬಂದರೆ, ಕನ್ನಡನಾಡಿನಲ್ಲಿ ಕನ್ನಡಕಲಿಯದೆ ಶಿಕ್ಷಣಮುಗಿಸಬಹುದು. ಇದು ಕನ್ನಡದ ಕತ್ತು ಹಿಸುಕುವ ವರದಿಯಾಗಿದೆ. ಎಲ್ಲ ಕನ್ನಡಪರ ಸಂಘಟನೆಗಳು ಈ ವರದಿ ವಿರೋಧಿಸಬೇಕೆಂದು ಮನವಿ ಮಾಡಿದ್ದಾರೆ. ಮಾತೃಭಾಷೆ ಯಾವುದೆಂದು ತೀರ್ಮಾನಿಸುವವರು ಮಕ್ಕಳ ಪೋಷಕರು ಎಂದು 2014ರ ಸುಪ್ರೀಂ ಹೇಳಿರುವುದರಿಂದ ಕನ್ನಡಿಗರೇ ತಮ್ಮ ಮಾತೃಭಾಷೆ ಕನ್ನಡವಲ್ಲ ಎಂದು ಪ್ರಮಾಣ ಪತ್ರ ನೀಡುವ ಸಾಧ್ಯತೆಯಿದೆ. ಕನ್ನಡ ಕಲಿಕೆಗೆ ಸಂಚಕಾರ ತರುವ ವರದಿಯನ್ನು ಕನ್ನಡಾಭಿಮಾನಿ ರಾಜ್ಯ ಸರ್ಕಾರವು ಒಪಬಾರದೆಂದು ಒತ್ತಾಯಿಸಿದ್ದಾರೆ.

ಕರ್ನಾಟದಲ್ಲಿ 230ಕ್ಕೂ ಹೆಚ್ಚು ಭಾಷೆಗಳು ಇವೆ. 25 ಸಾವಿರ ಜನರು ಮಾತನಾಡುವ ಭಾಷೆ 30 ಇವೆ.ಅದನ್ನು ಶಿಕ್ಷಣ ಪದ್ಧತಿಗೆ ತರುವುದು ಹೇಗೆ ಎಂಬುದನ್ನು ಕಂಡುಕೊಳ್ಳಬೇಕು. ಆದರೆ, ಮಾತೃಭಾಷೆ ಎಂಬ ಪದದಿಂದ ಗೊಂದಲ ಸರಿಯಲ್ಲ. ಮಾತೃಭಾಷೆಯಲ್ಲಿ ಶಿಕ್ಷಣ ಎಂಬುದನ್ನು ಅತ್ಯುತ್ತಮವಾದ್ದು ಎಂದು ಒಪ್ಪಿಕೊಂಡರೂ ರಾಜ್ಯ ಭಾಷೆ ಮತ್ತು ಇಂಗ್ಲಿಷ್ ಎರಡನ್ನೇ ದ್ವಿಭಾಷೆಯಾಗಿ ಮುಂದುವರೆಯುವುದು ಒಳ್ಳೆಯದು.

ಡಾ.ಪುರುಷೋತ್ತಮ ಬಿಳಿಮಲೆ

ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ

ಕನ್ನಡ ಅಥವಾ ಮಾತೃಭಾಷೆಯಲ್ಲಿ ಶಿಕ್ಷಣ ನೀಡಬೇಕೆನ್ನುವುದು ಒಂದು ರೀತಿಯಲ್ಲಿ ಕನ್ನಡಕ್ಕೆ ಮಾಡುವ ವಂಚನೆ. ಪ್ರಥಮವಾಗಿ ರಾಜ್ಯ ಭಾಷೆ ಇರಬೇಕೇ ಹೊರತು ಮಾತೃಭಾಷೆ ಎನ್ನುವ ಹೆಸರು ತಂದರೆ ಖಾಸಗಿಯವರಿಗೆ ಅನುಕೂಲ ಮಾಡಿಕೊಟ್ಟಂತೆ. ಸರ್ಕಾರಕ್ಕೆ ಕನ್ನಡದ ಬಗ್ಗೆ ನಿಷ್ಠೆ ಇದ್ದರೆ ವರದಿಯಲ್ಲಿ ಕನ್ನಡದ ಹೆಸರನ್ನು ಮಾತ್ರ ಹೇಳಬೇಕು. ಮಾತೃ ಭಾಷೆಯೆನ್ನುವ ಹೆಸರನ್ನೇ ತರಬಾರದು.

ಎಸ್.ಸಿ.ಸಿದ್ದರಾಮಯ್ಯ ಮಾಜಿ ಅಧ್ಯಕ್ಷ, ಕನ್ನಡ ಅಭಿವೃದ್ಧಿ ಪ್ರಾಧಿಕಾರ

ರಾಜ್ಯ ಶಿಕ್ಷಣ ನೀತಿ ವರದಿ ಬಹಿರಂಗಗೊಳಿಸಲು ಆಗ್ರಹ

ಪ್ರೊ.ಸುಖದೇವ್ ತೋರಟ್ ಅವರ ಆಯೋಗವು ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ರಾಜ್ಯ ಶಿಕ್ಷಣ ನೀತಿಯ ಕೆಲ ಶಿಫಾರಸುಗಳು 'ಕನ್ನಡ' ಭಾಷಾ ಬೋಧನೆ ಮತ್ತು ಕನ್ನಡ ಮಾಧ್ಯಮದಲ್ಲಿ ಬೋಧನೆ ಎರಡಕ್ಕೂ ಹಿನ್ನಡೆ ತರುವ ಆತಂಕ ಮೂಡಿಸಿದೆ. ಹಾಗಾಗಿ ಸರ್ಕಾರ ಪೂರ್ಣ ಪ್ರಮಾಣದ ವರದಿ ಬಹಿರಂಗಪಡಿಸಬೇಕು ಎಂಬ ಆಗ್ರಹ ಕೇಳಿಬಂದಿದೆ. ಶಿಫಾರಸುಗಳು ಮಾತ್ರ ಬಹಿರಂಗವಾಗಿರುವುದರಿಂದ ಸಾಕಷ್ಟು ಗೊಂದಲಗಳು ಉದ್ಭವಿಸಿವೆ. ಪೂರ್ಣ ವರದಿ ಹಿರಂಗಪಡಿಸಿದಾಗ ಮಾತ್ರ ಈ ಗೊಂದಲಗಳಿಗೆ ಸ್ಪಷ್ಟತೆ ಸಿಗಲುಸಾಧ್ಯ.ಹಾಗಾಗಿಸರ್ಕಾರಪೂರ್ಣವರದಿಯನ್ನು ಸಾರ್ವಜನಿಕ ಲಭ್ಯತೆಗೆ ಒದಗಿಸಬೇಕೆಂದು ಖಾಸಗಿ ಶಾಲಾ ಸಂಘಟನೆಗಳು, ಪೋಷಕರ ಸಂಘಟನೆಗಳು, ತಜ್ಞರು ಒತ್ತಾಯಿಸಿದ್ದಾರೆ. 

ಈ ಸಂಬಂಧ ಹೇಳಿಕೆ ನೀಡಿರುವ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾ‌ರ್, ಬೆಂಗಳೂರಿನಂಥ ನಗರದಲ್ಲಿ ಒಂದು ತರಗತಿಯಲ್ಲಿ ಐದಾರು ರಾಜ್ಯದ, ಐದಾರು ಮಾತೃಭಾಷೆ ಹೊಂದಿರುವ ಮಕ್ಕಳು ಇರುತ್ತಾರೆ. ಕನ್ನಡಿಗ ಮಕ್ಕಳಿಗೆ ಕನ್ನಡ ಮಾಧ್ಯಮ, ಉಳಿದವರಿಗೆ ಅವರವರ ಮಾತೃಭಾಷೆಯಲ್ಲಿ ಶಿಕ್ಷಣ ಒದಗಿಸಿ ಎಂದರೆ ಇದು ಎಷ್ಟರ ಮಟ್ಟಿಗೆ ಕಾರ್ಯಸಾಧು. ಅದೇ ರೀತಿ ದ್ವಿಭಾಷಾ ನೀತಿ ಅನುಷ್ಠಾನಕ್ಕೆ ಸೂಚಿಸಲಾಗಿದೆ. ಕನ್ನಡ, ಮಾತೃಭಾಷೆ ಇಂಗ್ಲಿಷ್ ಎಂದಾಗ, ಇಂಗ್ಲಿಷ್ ಕಡ್ಡಾಯ ಆಗಿರುತ್ತದೆ. ಉರ್ದು, ಮರಾಠಿ, ತೆಲುಗು, ತಮಿಳು ಮಾಧ್ಯಮದ ಶಾಲೆಗಳಲ್ಲಿನ ಮಕ್ಕಳು ಅವರ ಮಾತೃಭಾಷೆಯನ್ನು ಮೊದಲ ಅಥವಾ 2ನೇ ಭಾಷೆಯಾಗಿ ಆಯ್ಕೆಮಾಡಿದಾಗ ಕನ್ನಡ ಆಯ್ಕೆಗೆ ಅವಕಾಶವೇ ಇಲ್ಲದಂತಾಗುತ್ತದೆ. ಇದರ ತಡೆಗೆ ಯಾವ ಕಾನೂನು ರಚಿಸಲಾಗುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿಬೇಕು ಎಂದು ಆಗ್ರಹಿಸಿದ್ದಾರೆ.

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ