* ಕೆಲ ಮಹತ್ವದ ಬದಲಾವಣೆ ತಂದ ಶಿಕ್ಷಣ ಇಲಾಖೆ
* ಮತ್ತೆ ಬದಲಾಯ್ತು ಶಾಲೆಗಳ ಬೇಸಿಗೆ ರಜೆ
* ಎಪ್ರಿಲ್ 10ರಿಂದ ಮೇ.15ರವರೆಗೆ ಬೇಸಿಗೆ ರಜೆ ನೀಡಲು ಶಿಕ್ಷಣ ಇಲಾಖೆ ತೀರ್ಮಾನ
ಬೆಂಗಳೂರು, (ಫೆ.24): ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ಶಾಲೆಗಳ (Primary and High School) ಬೇಸಿಗೆ ರಜೆಯನ್ನು ಶಿಕ್ಷಣ ಇಲಾಖೆ ಕೆಲ ಬದಲಾವಣೆ ಮಾಡಿದೆ. ಏಪ್ರಿಲ್ 9ಕ್ಕೆ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಎಪ್ರಿಲ್ 10ರಿಂದ ಮೇ.15ರವರೆಗೆ ಬೇಸಿಗೆ ರಜೆ ನೀಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಮುಂದಿನ ಅಂದ್ರೆ 2022-23 ಶೈಕ್ಷಣಿಕ ವರ್ಷ ಮೇ.16ರಿಂದ ಆರಂಭವಾಗಲಿದೆ.
ಈ ಹಿಂದೆ ಶಾಲಾ ಶೈಕ್ಷಣಿಕ ವರ್ಷವು ಮೇ.29ರಿಂದ ಆರಂಭವಾಗಿ ಎಪ್ರಿಲ್ 10ಕ್ಕೆ ಮುಕ್ತಾಯವಾಗುತ್ತಿತ್ತು. ಆದರೆ ಈ ಬಾರಿ ಬದಲಾದ ಪರಿಸ್ಥಿತಿಗೆ ಅನುಗುಣವಾಗಿ ಬೇಗವೇ ಶಾಲೆ ಆರಂಭಿಸಲು ಸರ್ಕಾರ ನಿರ್ಧರಿಸಿದೆ. ಹೀಗಾಗಿ ಮೇ.16ರಿಂದ 2022-23ರ ಶೈಕ್ಷಣಿಕ ವರ್ಷ ಆರಂಭವಾಗಲಿದೆ.
ಕರ್ನಾಟಕ ಸರ್ಕಾರದಿಂದ ಶಾಲೆ ಬೇಸಿಗೆ ರಜೆ ಪರಿಷ್ಕರಣೆ
ಕೋವಿಡ್ ಕಾರಣದಿಂದ ನಿರಂತರವಾಗಿ ಭೌತಿಕ ತರಗತಿಗಳು ನಡೆಯದೆ, ಆನ್ ಲೈನ್ ಶಿಕ್ಷಣ ಪರಿಣಾಮಕಾರಿಯಾಗಿಲ್ಲ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿದಿದ್ದಾರೆ. ಹೀಗಾಗಿ ಈ ಕಲಿಕಾ ಹಿನ್ನಡೆಯನ್ನು ಸರಿದೂಗಿಸಲು 'ಕಲಿಕಾ ಚೇತರಿಕಾ ಕಾರ್ಯಕ್ರಮ"ವನ್ನು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಆಯೋಜಿಸಲಾಗುವುದು ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಅಲ್ಲದೇ ಕೋವಿಡ್ ಕಾರಣ 2019-20, 2020-21 ಹಾಗೂ 2021-22 ಈ ಮೂರು ಶೈಕ್ಷಣಿಕ ಸಾಲಿನಲ್ಲಿ ಭೌತಿಕ ತಗತಿಗಳು ನಡೆಯದೆ ವಿದ್ಯಾರ್ಥಿಗಳಿಗೆ ಆಗಿರುವ ಕಲಿಕಾ ಕೊರತೆಯನ್ನು ನಿವಾರಿಸಲು ಮುಂದಿನ ವರ್ಷ ಶೈಕ್ಷಣಿಕ ವರ್ಷದಲ್ಲಿ ಸೇತುಬಂಧ ಕಾರ್ಯಕ್ರಮ ಆಯೋಜಿಸಲು ಕೂಡ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಈ ಕಾರ್ಯಕ್ರಮ ಮೇ16ರಿಂದ ಆರಂಭವಾಗಿಲಿದೆ.
ಪ್ರಸಕ್ತ ವರ್ಷ ಏಪ್ರಿಲ್ 9ರಂದು ಶೈಕ್ಷಣಿಕ ವರ್ಷ ಕೊನೆಗೊಳ್ಳುವುದರಿಂದ ಪ್ರಾಥಮಿಕ ಶಾಲೆಗಳಲ್ಲಿ ಮಾರ್ಚ್ 24ರಿಂದ ಏಪ್ರಿಲ್ 4ರವರೆಗೆ ವಾರ್ಷಿಕ ಪರೀಕ್ಷೆ ನಡೆಸಿ, ಏಪ್ರಿಲ್ 9ರಂದು ಫಲಿತಾಂಶ ಪ್ರಕಟಿಸಬೇಕು. 8-9 ತರಗತಿಗಳಿರುವ ಪ್ರೌಢ ಶಾಲೆಗಳಲ್ಲಿ ಮಾರ್ಚ್ 21ರಿಂದ ಮಾರ್ಚ್ 26ವರೆಗೆ ವಿಷಯವಾರು ಪರೀಕ್ಷೆ, ಮಾ.29ರಂದು ದೈಹಿಕ ಶಿಕ್ಷಣ ಹಾಗೂ ಇತರೆ ಪರೀಕ್ಷೆ ನಡೆಸಿ, ಏಪ್ರಿಲ್ 7ರಂದು ಫಲಿತಾಂಶ ಪ್ರಕಟಿಸಬೇಕೆಂದು ಇಲಾಖೆ ಸೂಚಿಸಿದೆ.
ಈಗಾಗಲೇ ಜೂ.15ರವರೆಗೆ ಪ್ರಾಥಮಿಕ ಮತ್ತು ಜು.15ರವರೆಗೆ ಪ್ರೌಢಶಾಲೆಗಳಿಗೆ ಬೇಸಿಗೆ ರಜೆ ನೀಡಿ ಆದೇಶಿಸಲಾಗಿತ್ತು.ಆದರೆ, ಜೂ.21ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯುವುದರಿಂದ ಬೇಸಿಗೆ ರಜೆ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡುವಂತೆ ಶಿಕ್ಷಕರ ಸಂಘಟನೆಗಳು ಮನವಿ ಮಾಡಿದ್ದವು. ಅಲ್ಲದೆ, ಕೊರೋನಾ ಎರಡನೇ ಅಲೆಯಲ್ಲಿ ಸೋಂಕು ಪ್ರಮಾಣ ತೀವ್ರಗತಿಯಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಬೇಸಿಗೆ ರಜಾ ಅವಧಿಯನ್ನು ಪರಿಷ್ಕರಣೆ ಮಾಡಲಾಗಿದೆ.