ಕಲ್ಯಾಣ ಕರ್ನಾಟಕ ಶಿಕ್ಷಣ ‌ಇಲಾಖೆಯ ಸಭೆ, ‌ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ‌ಕೊಟ್ಟ ನಾಗೇಶ್

By Suvarna News  |  First Published Jul 6, 2022, 11:26 AM IST

* ರಾಯಚೂರು, ಕೊಪ್ಪಳ, ಬಳ್ಳಾರಿ ‌ಹಾಗೂ ವಿಜಯನಗರದ ಅಧಿಕಾರಿಗಳ ಸಭೆ
* ಸಭೆಯಲ್ಲಿ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ‌ನೀಡಿದ ಸಚಿವ ಸಚಿವ ಬಿ.ಸಿ. ನಾಗೇಶ್
* ಕೆಲಸ ಮಾಡಿ ಇಲ್ಲ ಬಿಟ್ಟು ಹೋಗಿ ಎಂದು ವಾರ್ನಿಂಗ್


ವರದಿ : ಜಗನ್ನಾಥ ‌ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್ , ರಾಯಚೂರು

ರಾಯಚೂರು, (ಜುಲೈ.06):
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್ ರಾಯಚೂರು ಜಿಲ್ಲಾ ಪ್ರವಾಸದಲ್ಲಿದ್ದು, ಈ ವೇಳೆ ರಾಯಚೂರು, ಕೊಪ್ಪಳ, ಬಳ್ಳಾರಿ ‌ಹಾಗೂ ವಿಜಯನಗರದ ಶಿಕ್ಷಣ ಅಧಿಕಾರಿಗಳ ಸಭೆ ನಡೆಸಿದರು. ಸಭೆಯಲ್ಲಿ ಶಿಕ್ಷಣ ಅಧಿಕಾರಿಗಳ ಚಳಿ ಬಿಡಿಸಿದ್ರು.

ರಾಯಚೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪ್ರಾಥಮಿಕ ‌ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಡಿಡಿಪಿಐ ಮತ್ತು ಬಿಇಒಗಳು ಶಾಲೆಗಳಿಗೆ ಭೇಟಿ ನೀಡಿ ಮಕ್ಕಳ ಕಲಿಕೆಯ ಗುಣಮಟ್ಟವನ್ನು ನಿರಂತರವಾಗಿ ಗಮನಿಸಬೇಕು. ತರಗತಿಯಲ್ಲಿ ಕುಳಿತುಕೊಂಡು ಶಿಕ್ಷಕರ ಬೋಧನಾ ಮಟ್ಟವನ್ನು ಗಮನಿಸಿ ಅವರಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕು ಹೇಳಿದರು.

Tap to resize

Latest Videos

undefined

ಸಚಿವರು ಕೇಳುವುದು ಒಂದು ಅಧಿಕಾರಿಗಳು ಹೇಳುವುದು ‌ಮತ್ತೊಂದು

ಇಡೀ ರಾಜ್ಯದ ಭವಿಷ್ಯ ರೂಪಿಸುವಲ್ಲಿ ಶಿಕ್ಷಣ ಇಲಾಖೆ ಪಾತ್ರ ಬಹುಮುಖ್ಯವಾಗಿದೆ. ಇಂತಹ ಇಲಾಖೆಯಲ್ಲಿ ಕೆಲಸ ಮಾಡುವ ಅಧಿಕಾರಿಗಳ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಆದ್ರೆ ರಾಯಚೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ನಾಲ್ಕು ಜಿಲ್ಲೆಯ ಡಿಡಿಪಿಐಗಳಿಗೆ ಕೇಳಿದ ಪ್ರಶ್ನೆಗೆ ‌ಅಧಿಕಾರಿಗಳು ಉತ್ತರ ‌ನೀಡಲು ಕೆಲಕಾಲ ತಡವರಿಸಿದರು. ಅಷ್ಟೇ ಅಲ್ಲದೆ ಸಚಿವರು ಕೇಳಿದ ಮಾಹಿತಿ ‌ಒಂದು ಆಗಿದ್ರೆ, ಅಧಿಕಾರಿಗಳು ಹೇಳುವುದೇ ಮತ್ತೊಂದು ಆಗಿತ್ತು. ಹೀಗಾಗಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅಧಿಕಾರಿಗಳ ನಡೆ ವಿರುದ್ಧ ಗರಂ ಆಗಿದ್ರು‌. 

Raichur: ಸಿಂಗಾಪುರ ಕಾಮುಕ ಶಿಕ್ಷಕನ ಬಗ್ಗೆ ಸಚಿವ ನಾಗೇಶ್ ಗರಂ!

ಕಳೆದ ವರ್ಷ ಎರಡನೇ‌ ತರಗತಿ ನೋಂದಣಿಗೂ ಈ‌ ವರ್ಷದ ಮೂರನೇ ತರಗತಿಗೆ ಹೋಲಿಸಿದರೆ ಏಕೆ‌ ವ್ಯತ್ಯಾಸವಿದೆ. ಮಕ್ಕಳು ಏಕೆ‌ ಶಾಲೆಗಳಿಗೆ ಬಂದಿಲ್ಲ ಎಂಬುದನ್ನು ಪರಿಶೀಲಿಸುವುದಿಲ್ಲವೆ.‌ ಊಟ ಮಾಡುವ ಮಕ್ಕಳ ಸಂಖ್ಯೆಗೆ ಹೋಲಿಸಿದರೆ ತುಂಬಾ ವ್ಯತ್ಯಾಸವಿದೆ. ಮಕ್ಕಳು ಏಕೆ ಶಾಲೆಗೆ ಬರುತ್ತಿಲ್ಲ .‌ ಇದಕ್ಕೆ ಕಾರಣ ಕಂಡು ಹಿಡಿಯಬೇಕು.‌ ಅಧಿಕಾರಿಗಳು ಈ‌ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ನಿಮ್ಮ ಮುಖ ನೋಡಿ ಹೋಗುವುದಕ್ಕೆ‌ ನಾನು ಈ ಸಭೆಗೆ ಬಂದಿಲ್ಲ.‌ ವಾಸ್ತವ ಅಂಕಿ-ಅಂಶ‌ ಕೊಡಬೇಕು. ಮಕ್ಕಳ ಸಂಖ್ಯೆಯಲ್ಲಿ ವ್ಯತ್ಯಾಸ‌ ಏಕೆ ಆಗಿದೆ. ನಾಲ್ಕು ಜಿಲ್ಲೆಯ ಅಧಿಕಾರಿಗಳು ಯಾರು  ಒಬ್ಬರು ತಲೆಕೆಡಿಸಿಕೊಂಡಿಲ್ಲ.‌ ಕನಿಷ್ಠ ಡಿಡಿಪಿಐ ಕೂಡಾ ಈ ವ್ಯತ್ಯಾಸ‌ ಗಮನಿಸಿಲ್ಲ. 

ಬಿಇಒ, ಸಿಆರ್ ಪಿ, ಬಿಆರ್ ಪಿಗಳು ನಾಳೆಯೇ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ಅಂಕಿ-ಅಂಶ ಸಂಗ್ರಹಿಸಬೇಕು. ಬುಧವಾರ ಸಂಜೆಯೊಳಗೆ ಎಲ್ಲಾ ಮಾಹಿತಿ ಕೊಡಬೇಕು.ಮಕ್ಕಳ ನೋಂದಣಿ ಸಂಖ್ಯೆ ಅಪ್ ಡೆಟ್ ಆಗಿಲ್ಲ. 31,592 ಒಟ್ಟು ಮಕ್ಕಳು ಬಿಸಿಯೂಟ ಮಾಡುತ್ತಿದ್ದಾರೆ. ದಾಖಲಾತಿ 38,881 ಮಕ್ಕಳು ಇದ್ದಾರೆ. ಡಿಡಿಪಿಐಗಳು ಕಡ್ಡಾಯವಾಗಿ ಬಿಇಒ ಕಚೇರಿಗಳಿಗೆ ಏಕೆ‌ ಭೇಟಿ ನೀಡಬೇಕು.  ಬಿಇಒ‌ ಕಚೇರಿಗಳನ್ನು ಪರಿಶೀಲನೆ ಮಾಡಬೇಕು. ಬಿಆರ್ ಸಿಗಳನ್ನೆಲ್ಲ‌ ಪರಿಚಯ ಮಾಡಿಕೊಳ್ಳಬೇಕು. ಜೊತೆಗೆ ಎಲ್ಲಾ ಶಾಲೆಗಳ ಮುಖ್ಯಗುರುಗಳ ಸಭೆ ಮಾಡಬೇಕೆಂದು ತಿಳಿಸಿದರು.

ಶಾಲೆ ಬಿಟ್ಟ ಮಕ್ಕಳ ಕಡೆ ನಿಗಾವಹಿಸಲು ಅಧಿಕಾರಿಗಳಿಗೆ ಸೂಚನೆ
ಕಲ್ಯಾಣ ‌ಕರ್ನಾಟಕ ಜಿಲ್ಲೆಯಲ್ಲಿ  ಪ್ರಾಥಮಿಕ ಮತ್ತು ಪ್ರೌಢ ಶಾಲಾ ಹಂತದಲ್ಲಿ ‌ಮಕ್ಕಳು ಶಾಲೆಗಳಿಗೆ ದಾಖಲಾದರೂ ಶಾಲೆಗಳಿಗೆ ಬರುವುದಿಲ್ಲ.  ಮಕ್ಕಳು ಅರ್ಧದಲ್ಲಿಯೇ ವಿದ್ಯಾಭ್ಯಾಸ ಮೊಟಕುಗೊಳಿಸುವ ಪ್ರಕರಣಗಳು ಹೆಚ್ಚಾಗಿವೆ. ಹೀಗಾಗಿ ಬಿಇಒ ಮತ್ತು ‌ಡಿಡಿಪಿಐಗಳು ಇಂತಹ 
ಪ್ರಕರಣಗಳ ಮೇಲೆ ನಿಗಾ ವಹಿಸಬೇಕು. ಮಕ್ಕಳು ವಿದ್ಯಾಭ್ಯಾಸ ಮುಂದುವರೆಸದೇ ಇರುವ ಬಗ್ಗೆ ಪರಿಶೀಲಿಸಬೇಕು. ಅಂತಹ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರಲು ವಿಶೇಷ ದಾಖಲಾತಿ ಅಭಿಯಾನ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಲಿತಾ ಚೇತರಿಕೆ ‌ಕಾರ್ಯಕ್ರಮ ಮತ್ತಷ್ಟು ಉತ್ತಮಗೊಳಿಸಬೇಕು
ಕೊರೊನಾ ಸಾಂಕ್ರಾಮಿಕದಿಂದ ಉಂಟಾಗಿರುವ ಕಲಿಕಾ ಹಿನ್ನಡೆಯನ್ನು ಸರಿದೂಗಿಸಲು ಮತ್ತು ಮಕ್ಕಳ ಕಲಿಕಾ ಗುಣಮಟ್ಟವನ್ನು ಸುಧಾರಿಸಲು ಕಲಿಕಾ ಚೇತರಿಕೆ ಕಾರ್ಯಕ್ರಮ ನೆರವಾಗಿದೆ. ಇಂತಹ ‌ ಕಾರ್ಯಕ್ರಮವನ್ನು ಮತ್ತಷ್ಟು ಉತ್ತಮ ರೀತಿಯಲ್ಲಿ ಅನುಷ್ಠಾನಗೊಳಿಸಬೇಕು. ಕಲಿಕಾ ಚೇತರಿಕೆ ಕಾರ್ಯಕ್ರಮದ ಅನುಷ್ಠಾನ ಮಾಡುವ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಶಾಲೆಗಳನ್ನು ದತ್ತು ನೀಡಬೇಕು. ಅಲ್ಲದೆ ಮೇಲ್ವಿಚಾರಣೆ ತಂಡವು ಪ್ರತಿ 15 ದಿನಕ್ಕೆ ಒಂದು ಬಾರಿ ಶಾಲೆಗಳಿಗೆ ಭೇಟಿ ನೀಡಿ ಕಲಿಕಾ ಚೇತರಿಕೆಯ ಅನುಷ್ಠಾನ ಹಾಗೂ ಪ್ರಗತಿ ಪರಿಶೀಲನೆ ನಡೆಸಬೇಕೆಂದರು.

ಜಿಲ್ಲೆಯಲ್ಲಿ ಕಲಿಕಾ ಚೇತರಿಕಾ ಕಾರ್ಯಕ್ರಮವನ್ನು ಉತ್ತಮವಾಗಿ ಅನುಷ್ಠಾನ ಮಾಡಿದ ಶಿಕ್ಷಕರಿಗೆ ಪ್ರಶಂಶಿಸುವುದು ಹಾಗೂ ಆ ಶಾಲೆಗಳಲ್ಲಿ ಕೈಗೊಂಡ ಉತ್ತಮ ಅಂಶಗಳ ಕುರಿತು ಉಳಿದ ಶಾಲೆಗಳಿಗೆ ಪ್ರಚಾರಕ್ಕೆ ಅಗತ್ಯ ಕ್ರಮ ವಹಿಸಲಾಗುತ್ತದೆ ಎಂದು ಅಧಿಕಾರಿಗಳಿಗೆ ಸಭೆಯಲ್ಲಿ ತಿಳಿಸಿದರು.

ಯಾವ ಶಾಲೆಗಳಲ್ಲಿ ಪಠ್ಯ ಪುಸ್ತಕ ವಿತರಣೆಯಾಗಿಲ್ಲ
ಕಲ್ಯಾಣ ‌ಕರ್ನಾಟಕದ ಶಾಲೆಗಳಿಗೆ ‌ಪಠ್ಯ ಪುಸ್ತಕ ಸರಭರಾಜು ‌ಆಗಿಲ್ಲ ಎಂಬ ದೂರುಗಳು ಇವೆ. ಈ ಬಗ್ಗೆ ಸಭೆಯಲ್ಲಿ ಅಧಿಕಾರಿಗಳಿಂದ ‌ಮಾಹಿತಿ ಪಡೆದರು. ಪುಸ್ತಕಗಳು ಎಲ್ಲಾ ಶಾಲೆಗಳಿಗೆ ತಲುಪಿಸಬೇಕು. ಒಂದು ವೇಳೆ ಪುಸ್ತಕ ತಲುಪದ ಶಾಲೆಗಳಿಗೆ ಮಕ್ಕಳ ಕಲಿಕೆಗಾಗಿ ಕಲಿಕಾ ಹಾಳೆಗಳನ್ನು ನೀಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದ ಹಾಗೆ ನೋಡಿಕೊಳ್ಳಬೇಕು. ಶಾಲೆಗಳಿಗೆ ತೆರಳಿ ಮಕ್ಕಳ ಕಲಿಕೆಯ ಕುರಿತು ಪರಿಶೀಲಿಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಇನ್ನೂ ರಾಯಚೂರು ಜಿಲ್ಲೆ  ಮಹಾತ್ವಕಾಂಕ್ಷೆ ಜಿಲ್ಲೆಯಾಗಿರುವುದರಿಂದ ಯಾವುದೇ ಕಾರಣಕ್ಕೂ ಶಿಕ್ಷಣಕ್ಕೆ ತೊಂದರೆಯಾಗದ ಹಾಗೆ ಶಿಕ್ಷಕರು, ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಜೊತೆಗೆ ಅಧಿಕಾರಿಗಳು ಕಚೇರಿಯಲ್ಲೇ ಕೂಡದೇ ಪ್ರವಾಸ ಕೈಗೊಂಡು ಯಾವ ಶಾಲೆಯಲ್ಲಿ ಸಮಸ್ಯೆ ಇದೆ, ಶಿಕ್ಷಕರ ಕೊರತೆ, ಕಟ್ಟಡಗಳ ಸ್ಥಿತಿಗತಿಗಳ ಕುರಿತು ಗಮನ ಹರಿಸಬೇಕು ಎಂದು ಸೂಚನೆ ನೀಡಿದರು. 

ಪ್ರವಾಸ ಮಾಡದ ಬಿಇಒಗಳಿಗೆ ಖಡಕ್ ‌ವಾರ್ನಿಂಗ್
ರಾಯಚೂರು ಜಿಲ್ಲಾ ಪಂಚಾಯತ್ ನಲ್ಲಿ ನಡೆಸಿದ ಪ್ರಗತಿ ಪರಿಶೀಲನೆ ಬಳಿಕ ಸಚಿವ ಬಿ.ಸಿ. ನಾಗೇಶ್ ಅಧಿಕಾರಿಗಳನ್ನು ಉದ್ದೇಶಿಸಿ ‌ಮಾತನಾಡಿದ್ರು. ಸಭೆಯಲ್ಲಿ ‌ನೀವೂ ನೀಡಿರುವ ಮಾಹಿತಿ ನೋಡಿದ್ರೆ ನನಗೆ ಅರ್ಥವಾಗಿದೆ. ನೀವೂ ಈ ರೀತಿಯ ‌ಕೆಲಸ ಮಾಡಿದ್ರೆ ನಡೆಯಲ್ಲ. ಸಭೆ ನಡೆಸಿದಾಗ ನನಗೆ ಎಲ್ಲವೂ ಅರ್ಥವಾಗಿ ಹೋಗಿದೆ. ಇಂತಹ ಸ್ಥಿತಿಯನ್ನು ನಾನು ಶಿಕ್ಷಣ ಇಲಾಖೆಯಲ್ಲಿ ‌ಮುಂದುವರೆಸಲು ಬಿಡುವುದಿಲ್ಲ. ಓಪನ್ ಆಗಿ ಹೇಳುತ್ತಿದ್ದೇನೆ. ಯಾರಾದರೂ ಬಿಇಒಗಳು ನಾನು ಪ್ರವಾಸ ಮಾಡಲ್ಲ..ಶಿಕ್ಷಕರು ಮಾಡುವ ಕ್ಲಾಸ್ ನಲ್ಲಿ ಕುಳಿತುಕೊಳ್ಳಲ್ಲ.ಪಾಠ ಹೇಗೆ ನಡೆಯುತ್ತಿದೆ ಎಂದು ನೋಡಲ್ಲ.ಆಫೀಸ್ ‌ನಲ್ಲಿಯೇ ಕುಳಿತುಕೊಂಡು ‌ನಡೆಸುತ್ತೇನೆ ಎಂಬ ಆಸೆ ಇದ್ರೆ ದಯಮಾಡಿ ನಿಮ್ಮನ್ನು ‌ಬದಲಾವಣೆ ಮಾಡಲು ‌ನಾನು ರೆಡಿ ಇದ್ದೇನೆ. ನೀವೂ ಇಲ್ಲದೆ ಶಿಕ್ಷಣ ಇಲಾಖೆ ಇರಲ್ಲವೆಂದು ಯಾರು ಅಂದುಕೊಳ್ಳಲು ಹೋಗಬೇಡಿ. ನೀವೂ ಇದೇ ತರಹ ಮುಂದುವರೆಸಿದ್ರೆ ನೀವೂ ಕೆಲಸದಲ್ಲಿಯೇ ಇರುವುದಿಲ್ಲ ಎಂದರು.

ನಾಳೆಯಿಂದಲ್ಲೇ ನೀವೂ ಪ್ರವಾಸ ಮಾಡಿ. ನಿಮ್ಮ ಡೈರಿಯನ್ನು ನಾನು ಯಾವಾಗ ಬೇಕಾದರೂ ತರಿಸಿಕೊಂಡು ‌ನೋಡುತ್ತೇನೆ. ಏನೂ ಮಿನಿಸ್ಟರ್ ಬರುತ್ತಾರೆ ಸಭೆ ಮಾಡುತ್ತಾರೆ ಹೋಗುತ್ತಾರೆ ಎಂದು ನೀವೂ ಭಾವಿಸಿದ್ರೆ ಮುಂದಿನ ತಿಂಗಳು ನಿಮಗೆ ಕಷ್ಟವಾಗಬಹುದು. ನಮ್ಮ ಇಲಾಖೆ ಅಲ್ಲದೆ ಸಿಇಒ ಮತ್ತು ‌ಡಿಸಿಯಿಂದಲ್ಲೂ‌ ನಿಮ್ಮ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ.ನೀವೂ ಯಾವುದೋ ಪುಣ್ಯ ಮಾಡಿದರಿಂದ ನಿಮಗೆ ‌ಶಿಕ್ಷಣ ಇಲಾಖೆ ಸಿಕ್ಕಿದೆ. ಬಿಇ ಮತ್ತು ಡಿಡಿಪಿಐಗಳು ಮಕ್ಕಳ ಕಡೆಗೆ ಹೆಚ್ಚು ಒತ್ತು ನೀಡಬೇಕು. ನಿಮಗೆ ಒತ್ತು ಕೊಡಲು ಆಗಲ್ಲ ಅಂದ್ರೆ ತಾವೇ ಕೆಲಸದಿಂದ ಬಿಟ್ಟು ಹೋಗುವುದು ಒಳ್ಳೆಯದ್ದು.ಮುಂದಿನ ಸಭೆಯೊಳಗಾಗಿ ಸಭೆಯಲ್ಲಿ ಆಗಿರುವ ತಪ್ಪು ಗಳನ್ನು ಸರಿಪಡಿಸಿಕೊಳ್ಳಬೇಕು. ಎಷ್ಟೋ ಬಿಇಒಗಳಿಗೆ ಶಾಲೆಗಳು ಇರುವ ಸ್ಥಳವೇ ಗೊತ್ತು ಇರಲ್ಲ. ಸೇವೆ ಅಂತ ಮಾಡಬೇಕು ಎನ್ನುವರು ಶಿಕ್ಷಣ ಇಲಾಖೆಯಲ್ಲಿ ಇರೀ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಮಕ್ಕಳ ಸೇವೆ ಮಾಡುವುದು ನಮ್ಮ ನಿಮ್ಮೆಲ್ಲರ ಪುಣ್ಯ ಇಂತಹ ಅವಕಾಶವನ್ನು ಸದುಪಯೋಗ ಪಡೆದುಕೊಂಡು ಬೇಜವಾಬ್ದಾರಿ ತೋರದೆ ಪ್ರಮಾಣಿಕವಾಗಿ ಕೆಲಸ ಮಾಡಿದ್ದಲ್ಲಿ ಆ ಶ್ರಯಸ್ಸು ಎಲ್ಲರಿಗೂ ತಲುಪುತ್ತದೆ ಎಂದು ಹೇಳಿದರು. ಮುಂದಿನ ತಿಂಗಳ ಕೆಡಿಪಿ ಸಭೆಯಯೊಳಗೆ ಎಲ್ಲ ಅಂಕಿ-ಅಂಶಗಳು ಸರಿಯಾಗಿರಬೇಕು ಇಲ್ಲದಿದ್ದರೆ ಅಂತವರ ವಿರುದ್ಧ ಕ್ರಮಕೋಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ‌ನೀಡಿದ್ರು. 

ಇನ್ನೂ ಸಭೆಯಲ್ಲಿ ರಾಯಚೂರು ನಗರ ಶಾಸಕ ಡಾ. ಶಿವರಾಜ್ ಪಾಟೀಲ್, ರಾಯಚೂರು ಗ್ರಾಮೀಣ ಶಾಸಕ ದದ್ದಲ್ ಬಸನಗೌಡ, ಮಾನವಿ ಶಾಸಕ ರಾಜಾ ವೆಂಕಟಪ್ಪ ನಾಯಕ, ವಿಧಾನ ಪರಿಷತ್ ಸದಸ್ಯ ಶಶಿಲ್ ಜಿ. ನಮೊಶಿ,ಶಿಕ್ಷಣ ಇಲಾಖೆಯ ಅಪರ ಆಯುಕ್ತೆ ಗರೀಮ್ ಪವಾರ್, ಜಿಲ್ಲಾ ಪಂಚಾಯತ್ ಸಿಇಒ ನೂರ್ ಜಹರಾ ಖಾನಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ, ಅಪರ ಜಿಲ್ಲಾಧಿಕಾರಿ ಡಾ.ಕೆ.ಆರ್ ದುರುಗೇಶ, ನಾಲ್ಕು ಜಿಲ್ಲೆಯ ಡಿಡಿಪಿಯು ಅಧಿಕಾರಿಗಳು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಹಾಗೂ ನಾಲ್ಕು ಜಿಲ್ಲೆಯ ಬಿಇಒಗಳು ಭಾಗವಹಿಸಿದ್ದರು.

click me!