ಸರ್ಕಾರಿ ಕಾಲೇಜುಗಳಿಗೆ ಇನ್ಫೋಸಿಸ್‌ನಿಂದ 15,000 ಕಂಪ್ಯೂಟರ್‌ ದೇಣಿಗೆ

By Kannadaprabha News  |  First Published Oct 28, 2021, 7:53 AM IST

*  ಡಿಜಿಟಲ್‌ ಮೂಲಸೌಕರ್ಯ ಹೆಚ್ಚಳಕ್ಕೆ ಸರ್ಕಾರ, ಇನ್ಫಿ ಒಪ್ಪಂದ
*  3900 ಡಿಜಿಟಲ್‌ ಕೋರ್ಸ್‌, 1.6 ಲಕ್ಷ ಕಲಿಕಾ ಸಂಪನ್ಮೂಲ ಉಚಿತ ನೀಡಿಕೆ
*  ಬೋಧಕರಿಗೆ ಮೈಸೂರು ಕ್ಯಾಂಪಸ್‌ನಲ್ಲಿ ತರಬೇತಿ
 


ಬೆಂಗಳೂರು(ಅ.28): ಇನ್ಫೋಸಿಸ್‌ ಡಿಜಿಟಲ್‌ ವೇದಿಕೆಯ ಕೋರ್ಸುಗಳು, ಕಲಿಕಾ ಸಂಪನ್ಮೂಲಗಳನ್ನು ಉನ್ನತ ಶಿಕ್ಷಣದ ವಿದ್ಯಾರ್ಥಿಗಳು(Students) ಮತ್ತು ಬೋಧಕರಿಗೆ ಉಚಿತವಾಗಿ ಕಲಿಕೆಗೆ ಒದಗಿಸುವುದು, ಬೋಧಕರಿಗೆ ತರಬೇತಿ, 15 ಸಾವಿರ ಕಂಪ್ಯೂಟರ್‌(Computer) ದೇಣಿಗೆಯೊಂದಿಗೆ ಕಾಲೇಜುಗಳಲ್ಲಿ ಡಿಜಿಟಲ್‌ ಮೂಲಸೌಕರ್ಯ ಸದೃಢಗೊಳಿಸಲು ಉನ್ನತ ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯು ಇಸ್ಫೋಸಿಸ್‌(Infosys) ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ.

ವಿಧಾನಸೌಧದಲ್ಲಿ ಬುಧವಾರ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರ ಸಮ್ಮುಖದಲ್ಲಿ ಇಲಾಖೆಯ ಆಯುಕ್ತ ಪಿ.ಪ್ರದೀಪ್‌ ಮತ್ತು ಇಸ್ಫೋಸಿಸ್‌ನ ಹಿರಿಯ ಉಪಾಧ್ಯಕ್ಷ (ಶಿಕ್ಷಣ ಮತ್ತು ತರಬೇತಿ) ತಿರುಮಲ ಆರೋಹಿ ಅವರು ಈ ಒಪ್ಪಂದದ ಪತ್ರಗಳಿಗೆ ಸಹಿ ಹಾಕಿದರು.

Tap to resize

Latest Videos

undefined

ಬಡವರ ಬಗ್ಗೆ ಅತ್ಯಂತ ಕಾಳಜಿ: ಸುಧಾಮೂರ್ತಿ ಶ್ಲಾಘಿಸಿದ ಮೋದಿ!

ಬಳಿಕ ಮಾತನಾಡಿದ ಸಚಿವರು, ಇಲಾಖೆಯ ‘ಹೆಲ್ಪ್‌ ಎಜುಕೇಷನ್‌’(Help Education) ಕಾರ್ಯಕ್ರಮದಡಿಯ ಒಡಂಬಡಿಕೆಯಿಂದ ರಾಜ್ಯದ(Karnataka) ಐದು ಲಕ್ಷ ವಿದ್ಯಾರ್ಥಿಗಳು ಮತ್ತು ಬೋಧಕರಿಗೆ ಪ್ರತಿ ವರ್ಷ ಉಪಯೋಗವಾಗಲಿದೆ. ಈ ಒಪ್ಪಂದದಿಂದ(Agreement) ಇನ್ಫೋಸಿಸ್‌ ಕಂಪನಿಯು 35 ಕೋಟಿ ವೆಚ್ಚದಲ್ಲಿ ರೂಪಿಸಿರುವ ಇನ್ಫೋಸಿಸ್‌ ಸ್ಟ್ರಿಂಗ್‌ ಬೋರ್ಡ್‌ ಡಿಜಿಟಲ್‌(Digital) ವೇದಿಕೆಯಲ್ಲಿರುವ 3900ಕ್ಕೂ ಹೆಚ್ಚಿನ ಕೋರ್ಸುಗಳು(Course) ಮತ್ತು ಆಡಿಯೋ(Audio), ವಿಡಿಯೊ ಆನಿಮೇಷನ್‌(Video Animation) ಸೇರಿ 1.6 ಲಕ್ಷ ಕಲಿಕಾ ಸಂಪನ್ಮೂಲಗಳನ್ನು 5 ಲಕ್ಷ ವಿದ್ಯಾರ್ಥಿಗಳು ಹಾಗೂ ಬೋಧಕರಿಗೆ ಉಚಿತವಾಗಿ ಲಭ್ಯವಾಗಿಸಲಿದೆ.

ವೇದಿಕೆಯು ವರ್ಚುಯಲ್‌ ಪ್ರಯೋಗಾಲಯಗಳು, ಗೇಮಿಫಿಕೇಷನ್‌ ಮತ್ತಿತರ ಅಂಶಗಳನ್ನು ಒಳಗೊಂಡು ಆಸಕ್ತಿದಾಯಕವಾಗಿದೆ. ಕಂಪನಿಯು 15,000 ಕಂಪ್ಯೂಟರುಗಳನ್ನು ದೇಣಿಗೆ ಕೊಡುವ ಮೂಲಕ ಕಾಲೇಜುಗಳ ಡಿಜಿಟಲ್‌ ಮೂಲ ಸೌಕರ್ಯವನ್ನು ಸದೃಢಗೊಳಿಸಲಿದೆ ಎಂದು ವಿವರಿಸಿದರು. ಒಪ್ಪಂದದ ಪ್ರಕಾರ ಬೋಧಕರ ನಿಯಮಿತ ತರಬೇತಿಯಲ್ಲಿ(Training) ಇನ್ಫೋಸಿಸ್‌ ಭಾಗಿಯಾಗಲಿದ್ದು, ಈಗ ಮೊದಲನೇ ತಂಡದ 200 ಬೋಧಕರಿಗೆ ಮೈಸೂರು ಕ್ಯಾಂಪಸ್‌ನಲ್ಲಿ(Mysuru) ಸದ್ಯದಲ್ಲೇ ತರಬೇತಿ ಆರಂಭವಾಗುತ್ತದೆ ಎಂದರು.

ವಿದ್ಯಾರ್ಥಿಗಳ ಕೌಶಲ ಕಲಿಕೆಗೆ ಇನ್ಫೊಸಿಸ್ ಜತೆ 3 ಒಡಂಬಡಿಕೆ: ಅಶ್ವತ್ಥನಾರಾಯಣ ಮಾಹಿತಿ

ಸರ್ಕಾರಿ ತಾಂತ್ರಿಕ ಕಾಲೇಜುಗಳಿಗೆ ಒಟ್ಟು 30,000 ಕಂಪ್ಯೂಟರುಗಳ ಅಗತ್ಯವಿತ್ತು. ಈಗ ಇನ್ಫೋಸಿಸ್‌ 15,000 ಕಂಪ್ಯೂಟರ್‌ ನೀಡುವ ಮೂಲಕ 27,000 ಕಂಪ್ಯೂಟರುಗಳ ಲಭ್ಯತೆಯೊಂದಿಗೆ ಸರ್ಕಾರಿ ಪಾಲಿಟೆಕ್ನಿಕ್‌(Government Polytechnic) ಹಾಗೂ ಎಂಜಿನಿಯರಿಂಗ್‌ ಕಾಲೇಜುಗಳ(Engineering Colleges) ಶೇ.90ರಷ್ಟು ಕಂಪ್ಯೂಟರ್‌ ಅಗತ್ಯ ಪೂರೈಕೆಯಾದಂತಾಗಲಿದೆ ಎಂದು ಸಚಿವರು ವಿವರಿಸಿದರು.

ಈ ಒಡಂಬಡಿಕೆಯ ಅನುಷ್ಠಾನದಲ್ಲಿ ಕೈಜೋಡಿಸಿರುವ ರೋಟರಿ ಸಂಸ್ಥೆಯು, ಕಂಪ್ಯೂಟರುಗಳನ್ನು ಕಾಲೇಜುಗಳಿಗೆ ತಲುಪಿಸಿ ಅವನ್ನು ಅಳವಡಿಸುವ ಕಾರ್ಯವನ್ನು ಮಾಡಲಿದೆ. ಜೊತೆಗೆ, ಕಂಪ್ಯೂಟರುಗಳಿಗೆ ಆಪರೇಟಿಂಗ್‌ ಸಿಸ್ಟಮ್‌ (ಕಾರ್ಯಾಚರಣೆ ವ್ಯವಸ್ಥೆ) ಹಾಗೂ ಅಗತ್ಯ ಸಾಫ್ಟ್‌ವೇರ್‌ಗಳನ್ನು ಒದಗಿಸಿಕೊಡಲಿದೆ ಎಂದರು.

ಇದೇ ವೇಳೆ, ದೇಣಿಗೆ ರೂಪದಲ್ಲಿ ಬಂದ 300 ಕಂಪ್ಯೂಟರ್‌ಗಳನ್ನು ನಗರದ ಕೆ.ಆರ್‌.ಸರ್ಕಲ್‌ ನಲ್ಲಿರುವ ಎಸ್‌.ಜೆ.ಪಾಲಿಟೆಕ್ನಿಕ್‌ಗೆ ಕೊಂಡೊಯ್ಯಲು ಸಿದ್ಧವಾಗಿದ್ದ ವಾಹನಕ್ಕೆ ಸಚಿವರು ಹಸಿರು ನಿಶಾನೆ ತೋರಿದರು.

ಇಸ್ಫೋಸಿಸ್‌ ಸ್ಟ್ರಿಂಗ್‌ ಬೋರ್ಡ್‌ ಪ್ರೋಗ್ರಾಮ್‌ ಮ್ಯಾನೇಜರ್‌ ಕಿರಣ್‌ ಎನ್‌.ಜಿ., ಸಂಸ್ಥೆಯ ಮುಖ್ಯ ಕಾರ್ಯಾಚರಣಾ ಅಧಿಕಾರಿ (ಸಿಒಒ) ಪ್ರವೀಣ್‌ ರಾವ್‌, ರೋಟರಿ ಇಂಡಿಯಾ ಲಿಟರರಿ ಮಿಷನ್‌ನ ರಾಜೇಂದ್ರ ರಾಯ್‌ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ.ಕುಮಾರ್‌ ನಾಯ್ಕ್, ಡಿಸಿಟಿಇ ಆಯುಕ್ತ ಪ್ರದೀಪ್‌ ಮತ್ತಿತರಿದ್ದರು.
 

click me!