Chanakya University: ಪ್ರಾಚೀನ ಶಿಕ್ಷಣ ವ್ಯವಸ್ಥೆ ಮತ್ತೆ ಬರಲಿ: ಮಂಜುಲ್‌

By Govindaraj S  |  First Published Nov 20, 2022, 2:36 PM IST

ಭಾರತದ ಜೊತೆಗೆ ಜಗತ್ತಿನ ಉತ್ತಮ ಭವಿಷ್ಯಕ್ಕಾಗಿ ದೇಶದ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಾಚೀನ ಕಾಲದ ಬಹುಶಿಸ್ತೀಯ ಮತ್ತು ಅಂತರ್‌ ಶಿಸ್ತೀಯ ಶಿಕ್ಷಣ ವ್ಯವಸ್ಥೆಯನ್ನು ಮರು ಸ್ಥಾಪಿಸುವ ಅಗತ್ಯವಿದೆ ಎಂದು ಅಮೆರಿಕದ ಪ್ರಿನ್ಸ್‌ಟನ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕ, ಅಂತಾರಾಷ್ಟ್ರೀಯ ಗಣಿತಶಾಸ್ತ್ರಜ್ಞ ಪ್ರೊ.ಮಂಜುಲ್‌ ಭಾರ್ಗವ ಪ್ರತಿ ಪಾದಿಸಿದ್ದಾರೆ.


ಬೆಂಗಳೂರು (ನ.20): ಭಾರತದ ಜೊತೆಗೆ ಜಗತ್ತಿನ ಉತ್ತಮ ಭವಿಷ್ಯಕ್ಕಾಗಿ ದೇಶದ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಾಚೀನ ಕಾಲದ ಬಹುಶಿಸ್ತೀಯ ಮತ್ತು ಅಂತರ್‌ ಶಿಸ್ತೀಯ ಶಿಕ್ಷಣ ವ್ಯವಸ್ಥೆಯನ್ನು ಮರು ಸ್ಥಾಪಿಸುವ ಅಗತ್ಯವಿದೆ ಎಂದು ಅಮೆರಿಕದ ಪ್ರಿನ್ಸ್‌ಟನ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕ, ಅಂತಾರಾಷ್ಟ್ರೀಯ ಗಣಿತಶಾಸ್ತ್ರಜ್ಞ ಪ್ರೊ.ಮಂಜುಲ್‌ ಭಾರ್ಗವ ಪ್ರತಿ ಪಾದಿಸಿದ್ದಾರೆ.

ಶನಿವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ‘ಚಾಣಕ್ಯ ವಿಶ್ವವಿದ್ಯಾಲಯ’ದ ಅಧಿಕೃತ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದ ಪ್ರಾಚೀನ ವಿಶ್ವವಿದ್ಯಾಲಯಗಳಲ್ಲಿ ಬಹುಶಿಸ್ತೀಯ (ಒಂದು ಪದವಿ ವಿಭಾಗದಲ್ಲಿ ಆ ವಿಭಾಗದ ವಿಷಯಗಳ ಜತೆಗೆ ಬೇರೆ ವಿಭಾಗದ ವಿಷಯಗಳನ್ನೂ ಅರ್ಥಾತ್‌ ವಿಜ್ಞಾನ ವಿಭಾಗದವರು ಕಲಾ, ವಾಣಿಜ್ಯ ಕೋರ್ಸುಗಳನ್ನೂ ಓದುವಂತಹದ್ದು) ಮತ್ತು ಅಂತರ್‌ ಶಿಸ್ತೀಯ (ಒಂದಕ್ಕೊಂದು ಸಂಬಂಧ ಇರುವ ಎರಡು ವಿಷಯಗಳನ್ನು ಒಟ್ಟಿಗೆ ಓದುವುದು) ಅಧ್ಯಯನಕ್ಕೆ ಅವಕಾಶಗಳಿದ್ದವು. ಅಂತಹ ಅಧ್ಯಯನ ವ್ಯವಸ್ಥೆ ಇಂದಿನ ಉನ್ನತ ಶಿಕ್ಷಣದಲ್ಲಿ ಸಮರ್ಪಕವಾಗಿ ಜಾರಿಯಾಗಬೇಕಿದೆ. ಇದರಿಂದ ದೇಶ ಮುಂಚೂಣಿಗೆ ಸಾಗಲಿದೆ. ಜತೆಗೆ ಜಾಗತಿಕ ಭವಿಷ್ಯಕ್ಕೂ ಈ ಶಿಕ್ಷಣ ವ್ಯವಸ್ಥೆ ಅಗತ್ಯವಾಗಿದೆ ಎಂದು ಹೇಳಿದರು.

Tap to resize

Latest Videos

Chanakya University: ಚಾಣಕ್ಯ ವಿವಿಯಲ್ಲಿ ಉನ್ನತ ಶಿಕ್ಷಣದ ಹೊಸ ಪ್ರಯೋಗ

ಜಗತ್ತಿನ ಎಲ್ಲ ಶ್ರೇಷ್ಠ ಆವಿಷ್ಕಾರಗಳು ಬಹುಶಿಸ್ತೀಯ ವ್ಯವಸ್ಥೆಯಲ್ಲೇ ಹೊರಬಂದವು. ಜಾಗತಿಕ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲೂ ಈ ಶಿಕ್ಷಣ ವ್ಯವಸ್ಥೆಗಳು ಯಶಸ್ವಿಯಾಗಿವೆ. ಪ್ರತಿ ಅಧ್ಯಯನವೂ ಒಂದಕ್ಕೊಂದು ಸಂಪರ್ಕ ಸೃಷ್ಟಿಸುವಂತಿರಬೇಕು. ಆಗ ನಮ್ಮ ವಿದ್ಯಾರ್ಥಿಗಳು ಒಂದು ವಿಷಯ ಅಥವಾ ಕ್ಷೇತ್ರಕ್ಕೆ ಸೀಮಿತವಾಗದೆ ಎಲ್ಲವನ್ನೂ ಒಳಗೊಂಡು ಹೊಸ ಆವಿಷ್ಕಾರಗಳನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ ಎಂದರು.

undefined

ಶೂನ್ಯ ಅಥವಾ ಸೊನ್ನೆಯನ್ನು ಕಂಡು ಹಿಡಿದಿದ್ದು ಭಾರತೀಯರು. ಇದೇ ಮುಂದೆ 1ರಿಂದ 9ರ ವರೆಗಿನ ಅಂಕಿಗಳನ್ನು ಶೋಧಿಸುವ ಮೂಲಕ ಗಣಿತದ ಬೆಳವಣಿಗೆಗೆ ನಾಂದಿ ಆಯಿತು. ಅದೇ ರೀತಿ ಪ್ರತಿ ಕ್ಷೇತ್ರವೂ ಆರಂಭವಾಗುವುದು ಶೂನ್ಯದಿಂದಲೇ. ಶೂನ್ಯವೇ ಎಲ್ಲ ಸಾಧನೆಗೂ ಬುನಾದಿ. ಹೀಗೆ ಯಾವುದೇ ಹೊಸ ವಿಚಾರ ಜಗತ್ತಿನ ಯಾವುದೇ ಮೂಲೆಯಲ್ಲಿ ಹುಟ್ಟಿದರೂ ಅದನ್ನು ಬಳಸಿಕೊಂಡು ಮುಂದಕ್ಕೆ ಬೆಳೆಸುವ ಅಥವಾ ಒಳ್ಳೆಯ ರೂಪ ಕೊಡುವ ಕಾರ್ಯವನ್ನು ಎಲ್ಲರೂ ಸೇರಿ ಮಾಡಬೇಕಾಗುತ್ತದೆ. ಸ್ಟೀವ್‌ ಜಾಬ್ಸ್‌ ಕಂಪನಿ ಮಾಡಿದ್ದು ಇದನ್ನೆ. ಇಂದಿಗೂ ಆ ಕಂಪನಿ ಬಹುಶಿಸ್ತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಕಲಿತವರನ್ನೇ ಆಯ್ಕೆ ಮಾಡಿಕೊಳ್ಳುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಕರಡು ರಚನಾ ಸಮಿತಿ ಅಧ್ಯಕ್ಷ ಪದ್ಮವಿಭೂಷಣ ಡಾ.ಕೆ.ಕಸ್ತೂರಿರಂಗನ್‌, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ, ಇಸ್ಫೋಸಿಸ್‌ ಫೌಂಡೇಷ್‌ನ ಸಂಸ್ಥಾಪಕರಾದ ಡಾ.ಸುಧಾಮೂರ್ತಿ, ಜಿಂದಾಲ್‌ ಅಲ್ಯೂಮಿನಿಯಂ ಲಿ. ವ್ಯವಸ್ಥಾಪಕ ನಿರ್ದೇಶಕ ಡಾ.ಸೀತಾರಾಮ್‌ ಜಿಂದಾಲ್‌, ಚಾಣಕ್ಯ ವಿವಿ ಕುಲಾಧಿಪತಿ ಪ್ರೊ.ಎಂ.ಕೆ.ಶ್ರೀಧರ್‌, ಕುಲಪತಿ ಪ್ರೊ.ಯಶವಂತ ಡೋಂಗ್ರೆ, ವಿವಿಯ ಆಡಳಿತ ಮಂಡಳಿ ಸದಸ್ಯರುಗಳಾದ ಉದ್ಯಮಿಗಳಾದ ಮೋಹನ್‌ ದಾಸ್‌ ಪೈ, ಕಿರಣ್‌ ಮಜುಂದಾರ್‌ ಶಾ, ಕ್ರಿಸ್‌ ಗೋಪಾಲಕೃಷ್ಣ ಸೇರಿದಂತೆ ಸಾಕಷ್ಟುಉದ್ಯಮಿಗಳು, ಶಿಕ್ಷಣ ತಜ್ಞರು ಭಾಗವಹಿಸಿದ್ದರು.

ಜಾಗತಿಕ ಮಟ್ಟದ ವಿವಿ ಗುರಿ: ಚಾಣಕ್ಯ ವಿವಿ ಸಮ ಕುಲಾಧಿಪತಿ ಎಂ.ಪಿ.ಕುಮಾರ್‌ ಮಾತನಾಡಿ, ನಮ್ಮ ವಿಶ್ವವಿದ್ಯಾಲಯ ರಾಷ್ಟ್ರೀಯ ಶಿಕ್ಷಣ ನೀತಿಯ(ಎನ್‌ಇಪಿ) ಅನುಷ್ಠಾನದೊಂದಿಗೆ ಆರಂಭವಾಗಿದೆ. ಇದನ್ನು ಮುಂದಿನ ದಿನಗಳಲ್ಲಿ ಜಾಗತಿಕ ಮಟ್ಟದ ಸ್ಪರ್ಧಾತ್ಮಕ ಹಾಗೂ ಸಂಶೋಧನಾತ್ಮಕ ವಿವಿಯಾಗಿ ಬೆಳೆಸುವುದು ನಮ್ಮ ಗುರಿಯಾಗಿದೆ. ಭಾರತೀಯ ಸಂಸ್ಕೃತಿಯ ಜ್ಞಾನ ಪರಂಪರೆಯ ಬುನಾದಿಯ ಮೇಲೆ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ಶಿಕ್ಷಣ ನೀಡುವ ಜತೆಗೆ ಅವರಲ್ಲಿ ನಾಯಕತ್ವದ ಗುಣ ಬೆಳೆಸುವುದು ನಮ್ಮ ಉದ್ದೇಶ. ಖಾಸಗಿ ವಿವಿ ಎಂದ ಮಾತ್ರಕ್ಕೆ ಇಲ್ಲಿ ಶ್ರೀಮಂತರ ಮಕ್ಕಳು ಮಾತ್ರ ಪ್ರವೇಶ ಪಡೆಯಬಹುದು ಎಂದಲ್ಲ. ಇದು ಶಿಕ್ಷಣ ಕ್ಷೇತ್ರದ ಹಲವಾರು ಮಹನೀಯರು ಕಟ್ಟಿರುವ ಒಂದು ಸಾರ್ವಜನಿಕ ವಿವಿ. ಇಲ್ಲಿ ದಾನಿಗಳ ಸಹಕಾರದಿಂದ ಪ್ರತೀ ವರ್ಷ ಶೇ.10ರಷ್ಟುಸೀಟುಗಳಿಗೆ ಬಡತನದಿಂದ ಬಂದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು ಉಚಿತ ಶಿಕ್ಷಣ ನೀಡಲಾಗುವುದು. ಮಧ್ಯಮ ವರ್ಗದವರಿಗೂ ಶಿಕ್ಷಣ ಕೈಗೆಟುಕಲಿದೆ ಎಂದು ತಿಳಿಸಿದರು.

ಇದೇ ವೇಳೆ ಚಾಣಕ್ಯ ವಿವಿಗೆ ತಾವು ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರದಿಂದ ರಿಯಾಯಿತಿ ದರದಲ್ಲಿ ಭೂಮಿ ಮಂಜೂರು ಮಾಡಿಕೊಟ್ಟಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಧನ್ಯವಾದ ತಿಳಿಸಿದರು. ಯಡಿಯೂರಪ್ಪ ಅವರು ವೇದಿಕೆಯ ಮುಂಭಾಗ ಆಸೀನರಾಗಿದ್ದರು.

ಪ್ರಸ್ತುತ ದೇವನಹಳ್ಳಿಯ ಬ್ರಿಗೇಡ್‌ ಗ್ರೂಪ್‌ ಜಾಗದಲ್ಲಿ ಚಾಣಕ್ಯ ವಿವಿ 2022-23ನೇ ಸಾಲಿನ ಶೈಕ್ಷಣಿಕ ಚಟುವಟಿಕೆ ನಡೆಸುತ್ತಿದೆ. ಆರಂಭಿಕ ವರ್ಷದಲ್ಲೇ 16 ರಾಜ್ಯಗಳ 101 ವಿದ್ಯಾರ್ಥಿಗಳು ಪದವಿ ವ್ಯಾಸಂಗಕ್ಕೆ ಪ್ರವೇಶ ಪಡೆದಿದ್ದಾರೆ. ಸ್ನಾತಕೋತ್ತರ ಪದವಿ ಪ್ರವೇಶ ಪ್ರಕ್ರಿಯೆ ನಡೆಯುತ್ತಿದೆ. ಜನವರಿಯಿಂದ ಪಿಎಚ್‌ಡಿ ಅಧ್ಯಯನಕ್ಕೂ ಪ್ರವೇಶ ಆರಂಭವಾಗಲಿದೆ. 2023-24ನೇ ಶೈಕ್ಷಣಿಕ ಸಾಲಿನ ವೇಳೆಗೆ ದೇವನಹಳ್ಳಿಯ ಹರಳೂರು ಗ್ರಾಮದಲ್ಲಿನ 116 ಎಕರೆ ಕ್ಯಾಂಪಸ್‌ನಲ್ಲಿ 1300 ವಿದ್ಯಾರ್ಥಿಗಳಿಗೆ ಬೇಕಾದ ಸೌಲಭ್ಯಗಳೊಂದಿಗೆ ವಿವಿ ಆರಂಭವಾಗಲಿದೆ.
-ಪ್ರೊ.ಎಂ.ಕೆ.ಶ್ರೀಧರ್‌, ಚಾಣಕ್ಯ ವಿವಿ ಕುಲಾಧಿಪತಿ

ಭವಿಷ್ಯದ ನಾಯಕರನ್ನು ಸೃಷ್ಟಿಸುವ ಉದ್ದೇಶ ಇಟ್ಟುಕೊಂಡು ಅತ್ಯಂತ ವಿಭಿನ್ನ ಮಾದರಿಯಲ್ಲಿ ಚಾಣಕ್ಯ ವಿವಿ ಆರಂಭವಾಗುತ್ತಿದೆ. ಅಂದುಕೊಂಡ ಎಲ್ಲ ಯಶಸ್ಸುಗಳು ಸಿಗಲಿ. ಆ ಮೂಲಕ ಉತ್ತಮ ನಾಯಕರು ರಾಜ್ಯಕ್ಕೆ ಬರಲಿ. ವಿವಿಯ ಬೆಳವಣಿಗೆಗೆ ಎಲ್ಲರೂ ಕೈಜೋಡಿಸುವಂತಾಗಲಿ.
-ಕ್ರಿಸ್‌ ಗೋಪಾಲನ್‌, ಸಹ ಸಂಸ್ಥಾಪಕ, ಇಸ್ಫೋಸಿಸ್‌

Chanakya University: ಬೆಂಗಳೂರು ಬಳಿ ನಾಳೆ ಚಾಣಕ್ಯ ವಿಶ್ವವಿದ್ಯಾಲಯ ಉದ್ಘಾಟನೆ

ಜ್ಞಾನಕ್ಕಿಂತ ದೊಡ್ಡದು ಯಾವುದೂ ಇಲ್ಲ. ಜ್ಞಾನಸಂಪತ್ತು ಉಳ್ಳವರೇ ನಿಜವಾದ ಬಿಲಿಯನೇರ್‌ಗಳು. ಮನುಷ್ಯ ಯಾವಾಗ ಹೊಸದನ್ನು ಕಲಿಯುವ, ಅಧ್ಯಯನ ಮಾಡುವುದನ್ನು ನಿಲ್ಲಿಸುತ್ತಾನೋ ಆಗ ಅವನಿಗೆ ವಯಸ್ಸಾಯಿತು ಎಂದರ್ಥ. ಕರ್ನಾಟಕ ಸಮೃದ್ಧಿಯ ಹೆಬ್ಬಾಗಿಲು. ಇಲ್ಲಿ ಚಾಣಕ್ಯ ಹೆಸರಲ್ಲಿ ವಿವಿ ಸ್ಥಾಪಿಸುತ್ತಿರುವುದರಿಂದ ಯಶಸ್ಸು ಖಂಡಿತವಾಗಿ ಸಿಗಲಿದೆ.
-ಸುಧಾ ಮೂರ್ತಿ, ಸಂಸ್ಥಾಪಕಿ, ಇನೋಸಿಸ್‌ ಫೌಂಡೇಷನ್‌

click me!