ಭಾರತದ IIT ಅಥವಾ ಅಮೆರಿಕದ MIT: ಎಲ್ಲಿ ಸೀಟು ಪಡೆಯುವುದು ಅತ್ಯಂತ ಕಷ್ಟ

Published : Nov 16, 2026, 05:33 PM ISTUpdated : Nov 16, 2026, 05:39 PM IST
IIT vs MIT

ಸಾರಾಂಶ

ಭಾರತದ ಐಐಟಿ ಮತ್ತು ಅಮೆರಿಕದ ಎಂಐಟಿ ಇವೆರಡರಲ್ಲಿ ಎಲ್ಲಿ ಪ್ರವೇಶ ಪಡೆಯುವುದು ಕಷ್ಟ ಎಂಬುದನ್ನು ಈ ಲೇಖನ ವಿಶ್ಲೇಷಿಸುತ್ತದೆ. ಐಐಟಿ ಕೇವಲ ಪ್ರವೇಶ ಪರೀಕ್ಷೆಯ ಅಂಕಗಳನ್ನು ಪರಿಗಣಿಸಿದರೆ, ಎಂಐಟಿ ವಿದ್ಯಾರ್ಥಿಯ ಸಮಗ್ರ ಸಾಧನೆಯನ್ನು ಗಮನಿಸುತ್ತದೆ.

ಬೆಂಗಳೂರು (ನ.16): ಉನ್ನತ ಶಿಕ್ಷಣಕ್ಕಾಗಿ ಜಗತ್ತಿನ ಅತ್ಯುತ್ತಮ ವಿಶ್ವವಿದ್ಯಾಲಯಗಳು ಅಮೆರಿಕದಲ್ಲಿದ್ದು, ಅವುಗಳಲ್ಲಿ 'ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ' (MIT) ಅಗ್ರಸ್ಥಾನದಲ್ಲಿದೆ. ಹಾಗೆಯೇ, ಭಾರತದಲ್ಲಿ ಎಂಜಿನಿಯರಿಂಗ್ ಶಿಕ್ಷಣದ ಹೆಸರು ಕೇಳಿದ ತಕ್ಷಣ ನೆನಪಾಗುವುದೇ 'ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ' (IIT). ದೇಶದ ಒಟ್ಟು 23 ಐಐಟಿಗಳಲ್ಲಿ ಒಂದರಲ್ಲಾದರೂ ಸೀಟು ಪಡೆಯುವುದು ಲಕ್ಷಾಂತರ ವಿದ್ಯಾರ್ಥಿಗಳ ಕನಸಾಗಿರುತ್ತದೆ. ಆದರೆ, ಭಾರತದ ಐಐಟಿ ಮತ್ತು ಅಮೆರಿಕದ ಎಂಐಟಿ, ಇವೆರಡರಲ್ಲಿ ಎಲ್ಲಿ ಪ್ರವೇಶ ಪಡೆಯುವುದು ಹೆಚ್ಚು ಕಷ್ಟಕರ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ವಾಸ್ತವವಾಗಿ, ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವ ವಿಚಾರದಲ್ಲಿ MIT ಮತ್ತು IIT ಸಂಪೂರ್ಣವಾಗಿ ವಿಭಿನ್ನ ಮಾರ್ಗಗಳನ್ನು ಅನುಸರಿಸುತ್ತವೆ.

MIT ಆಯ್ಕೆ ವಿಧಾನ: ವಿದ್ಯಾರ್ಥಿಯ ಸಂಶೋಧನಾ ಕಾರ್ಯ (Research work), ಪ್ರಬಂಧಗಳು (Essays), ಶೈಕ್ಷಣಿಕ ಅಂಕಗಳ ಜೊತೆಗೆ ಅವರ ಸಮಗ್ರ ವ್ಯಕ್ತಿತ್ವವನ್ನು (Overall character) ಪರಿಗಣಿಸಿ ಪ್ರವೇಶ ನೀಡುತ್ತದೆ.

IIT ಆಯ್ಕೆ ವಿಧಾನ: ಇವೆಲ್ಲವನ್ನೂ ಬದಿಗಿಟ್ಟು, ಸಂಪೂರ್ಣವಾಗಿ JEE ಅಡ್ವಾನ್ಸ್‌ಡ್ (JEE Advanced) ಪ್ರವೇಶ ಪರೀಕ್ಷೆಯ ಅಂಕಗಳನ್ನು ಮಾತ್ರ ಆಯ್ಕೆಯ ಆಧಾರವಾಗಿಟ್ಟುಕೊಳ್ಳುತ್ತದೆ.

ಈ ಎರಡೂ ವಿಧಾನಗಳನ್ನು ಒಂದಕ್ಕಿಂತ ಒಂದು ಸುಲಭ ಅಥವಾ ಕಷ್ಟ ಎಂದು ಅಳೆಯಲು ಸಾಧ್ಯವಿಲ್ಲ; ಏಕೆಂದರೆ ಇವು ಸಂಪೂರ್ಣವಾಗಿ ಬೇರೆ ಬೇರೆ ಸಾಮರ್ಥ್ಯಗಳನ್ನು ಮೌಲ್ಯಮಾಪನ ಮಾಡುತ್ತವೆ.

ತಮ್ಮದೇ ವ್ಯವಸ್ಥೆಯಲ್ಲಿ ಅಗ್ರಸ್ಥಾನದಲ್ಲಿರುವ ದಿಗ್ಗಜರು

ಈ ಎರಡೂ ಸಂಸ್ಥೆಗಳು ಜಾಗತಿಕ ಮಟ್ಟದಲ್ಲಿ ಅಗ್ರಸ್ಥಾನದಲ್ಲಿರಲು ಬಲವಾದ ಕಾರಣಗಳಿವೆ. ಭಾರತದಲ್ಲಿ ಎಂಜಿನಿಯರಿಂಗ್ ಶಿಕ್ಷಣಕ್ಕೆ ಐಐಟಿಗಳನ್ನು 'ಗೋಲ್ಡ್ ಸ್ಟ್ಯಾಂಡರ್ಡ್' (Gold Standard) ಎಂದು ಪರಿಗಣಿಸಲಾಗುತ್ತದೆ. ವಿಶ್ವದ ಅತ್ಯಂತ ಕಠಿಣ ಪ್ರವೇಶ ಪರೀಕ್ಷೆಗಳಲ್ಲಿ ಒಂದನ್ನು ದಾಟಿ ಇಲ್ಲಿಂದ ಹೊರಬರುವ ವಿದ್ಯಾರ್ಥಿಗಳು ಮುಂದೆ ಜಾಗತಿಕ ಕಂಪನಿಗಳ ಸಂಸ್ಥಾಪಕರು (Founders), ಸಿಇಒಗಳು (CEOs) ಮತ್ತು ನೀತಿ ನಿರೂಪಕರಾಗಿ ಹೊರಹೊಮ್ಮುತ್ತಾರೆ.

ಇತ್ತ, ಅಮೆರಿಕದ MIT ಸತತ 14 ವರ್ಷಗಳಿಂದ QS ವರ್ಲ್ಡ್ ಯೂನಿವರ್ಸಿಟಿ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ. ಕೃತಕ ಬುದ್ಧಿಮತ್ತೆ (AI), ರೊಬೊಟಿಕ್ಸ್ ಮತ್ತು ಬಯೋಟೆಕ್ ಕ್ಷೇತ್ರಗಳಲ್ಲಿ ಅತ್ಯಾಧುನಿಕ ಸಂಶೋಧನೆಗಳ ಮೂಲಕ ಹೊಸ ಮಾನದಂಡಗಳನ್ನು ಸೃಷ್ಟಿಸುತ್ತಿದೆ.

ಐಐಟಿ V/s ಎಂಐಟಿ

 ಐಐಟಿಎಂಐಟಿ
ಸ್ಥಳಭಾರತದಾದ್ಯಂತ 23 ಕ್ಯಾಂಪಸ್‌ಕೆಂಬ್ರಿಡ್ಜ್‌, ಮ್ಯಾಸಚೂಸೆಟ್ಸ್
ಪ್ರವೇಶ ಪಡೆಯುವ ರೀತಿಜೆಇಇ ಅಡ್ವಾನ್ಸ್‌ಡ್ ಪರೀಕ್ಷೆSAT /ACT ಪೂರ್ಣ ಪ್ರೊಫೈಲ್‌ ರಿವ್ಯೂ
ಸ್ವೀಕಾರ ದರJEE ಅಡ್ವಾನ್ಸ್‌ಡ್ ಪರೀಕ್ಷೆ ಬರೆದ ಶೇ.10ರಷ್ಟು ಮಂದಿ ಮಾತ್ರಕೇವಲ 4.5%
ವಾರ್ಷಿಕ ಶುಲ್ಕ2 ರಿಂದ 3.5 ಲಕ್ಷಅಂದಾಜು 60 ಲಕ್ಷ
QS ವರ್ಲ್ಡ್ ಯೂನಿವರ್ಸಿಟಿ ರ‍್ಯಾಂಕಿಂಗ್‌ಐಐಟಿ ದೆಹಲಿ (118ನೇ ಸ್ಥಾನ) ಐಐಟಿ ಬಾಂಬೆ (134ನೇ ಸ್ಥಾನ)ಮೊದಲ ಸ್ಥಾನ

ಭಾರತದ IITಯಲ್ಲಿ ಪ್ರವೇಶ ಪಡೆಯುವುದು ಎಷ್ಟು ಕಷ್ಟ?

ಐಐಟಿಯಲ್ಲಿ ಸೀಟು ಪಡೆಯಲು ಮೊದಲು ಜೆಇಇ ಮೇನ್ಸ್, ನಂತರ JEE ಅಡ್ವಾನ್ಸ್‌ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಇದರ ಆಯ್ಕೆ ಪ್ರಕ್ರಿಯೆ ಅತ್ಯಂತ ಕಠಿಣವಾಗಿದೆ. 2025ರಲ್ಲಿ ಸುಮಾರು 1.8 ಲಕ್ಷ ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್‌ಡ್ ಪರೀಕ್ಷೆ ಬರೆದಿದ್ದರು. ಅವರಲ್ಲಿ 54,378 ವಿದ್ಯಾರ್ಥಿಗಳು ಅರ್ಹತೆ (Qualify) ಪಡೆದಿದ್ದರು.

ಪರೀಕ್ಷೆಯಲ್ಲಿ ಅರ್ಹತೆ ಪಡೆದ ಮಾತ್ರಕ್ಕೆ ಸೀಟು ಖಚಿತವಾಗುವುದಿಲ್ಲ. ದೇಶದ ಎಲ್ಲಾ 23 ಐಐಟಿ ಸಂಸ್ಥೆಗಳಲ್ಲಿ ಒಟ್ಟು ಲಭ್ಯವಿರುವ ಬಿ.ಟೆಕ್ (BTech) ಸೀಟುಗಳ ಸಂಖ್ಯೆ ಕೇವಲ 18,188 ಮಾತ್ರ. ಅಂದರೆ, ವಿಶ್ವದ ಅತ್ಯಂತ ಕಠಿಣ ಪರೀಕ್ಷೆಯಲ್ಲಿ ಪಾಸಾದ ನಂತರವೂ, ಅರ್ಹತೆ ಪಡೆದ ಪ್ರತಿ ಮೂವರು ವಿದ್ಯಾರ್ಥಿಗಳಲ್ಲಿ ಒಬ್ಬರಿಗೆ ಮಾತ್ರ ಐಐಟಿಯಲ್ಲಿ ಪ್ರವೇಶ ಸಿಗುತ್ತದೆ.

ಅಮೆರಿಕದ MITಯಲ್ಲಿ ಪ್ರವೇಶ ಪಡೆಯುವುದು ಎಷ್ಟು ಕಷ್ಟ?

ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (MIT) ಪ್ರವೇಶ ಪಡೆಯುವ ರೀತಿಯೇ ಬೇರೆ. ಅಲ್ಲಿ ಯಾವುದೇ ಒಂದು ಪರೀಕ್ಷೆಯು ನಿಮ್ಮ ಪ್ರವೇಶವನ್ನು ನಿರ್ಧರಿಸುವುದಿಲ್ಲ. ವಿದ್ಯಾರ್ಥಿಗಳು ತಮ್ಮ SAT ಅಥವಾ ACT ಸ್ಕೋರ್‌ಗಳು, ಪ್ರಬಂಧಗಳು, ಶಿಫಾರಸು ಪತ್ರಗಳು (Letters of Recommendation) ಮತ್ತು ತಾವು ಹೊಸದಾಗಿ ಏನನ್ನು ಆವಿಷ್ಕರಿಸಿದ್ದೇವೆ ಅಥವಾ ಯಾವ ವಿಷಯದ ಮೇಲೆ ಸಂಶೋಧನೆ ನಡೆಸಿದ್ದೇವೆ ಎಂಬ ದಾಖಲೆಗಳನ್ನು ಸಲ್ಲಿಸಬೇಕು. MITಯ 'ಕ್ಲಾಸ್ ಆಫ್ 2029' (Class of 2029) ಬ್ಯಾಚ್‌ಗಾಗಿ ಒಟ್ಟು 29,281 ಅರ್ಜಿಗಳು ಬಂದಿದ್ದವು. ಆದರೆ ಅವುಗಳಲ್ಲಿ ಕೇವಲ 1,334 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ನೀಡಲಾಗಿದೆ.

ಅಂದರೆ ಇಲ್ಲಿನ ಒಟ್ಟಾರೆ ಪ್ರವೇಶ ಸ್ವೀಕಾರ ದರ (Acceptance Rate) ಕೇವಲ ಶೇ. 4.5 ರಿಂದ ಶೇ. 4.6 ರಷ್ಟಿದೆ. ವಿಶೇಷವಾಗಿ 'ರೆಗ್ಯುಲರ್ ಡಿಸಿಷನ್' (Regular Decision) ಸುತ್ತಿನಲ್ಲಿ ಈ ದರ ಕೇವಲ ಶೇ. 3.5 ರ ಆಸುಪಾಸಿನಲ್ಲಿರುತ್ತದೆ, ಇದು 'ಅರ್ಲಿ ಆಕ್ಷನ್' (Early Action) ಸುತ್ತಿಗಿಂತಲೂ ಹೆಚ್ಚು ಕಠಿಣವಾಗಿದೆ.

ನೇರ ಹೋಲಿಕೆ ಅಸಾಧ್ಯ!

ಒಟ್ಟಾರೆಯಾಗಿ, IIT ಮತ್ತು MIT ನಡುವೆ ನೇರ ಹೋಲಿಕೆ ಮಾಡಲು ಸಾಧ್ಯವಿಲ್ಲ. ತೀವ್ರ ಒತ್ತಡದ ನಡುವೆಯೂ ನೀವು ಭೌತಶಾಸ್ತ್ರ (Physics), ರಸಾಯನಶಾಸ್ತ್ರ (Chemistry) ಮತ್ತು ಗಣಿತದ (Maths) ಸಮಸ್ಯೆಗಳನ್ನು ಎಷ್ಟು ನಿಖರವಾಗಿ ಮತ್ತು ವೇಗವಾಗಿ ಬಿಡಿಸಬಲ್ಲಿರಿ ಎಂಬುದನ್ನು IIT ಪರೀಕ್ಷಿಸುತ್ತದೆ. ಮತ್ತೊಂದೆಡೆ, ನೀವು ಹೊಸದಾಗಿ ಮತ್ತು ಕುತೂಹಲಕಾರಿಯಾಗಿ ಏನನ್ನಾದರೂ ನಿರ್ಮಿಸಿದ್ದೀರಾ ಮತ್ತು ಆ ಕೆಲಸ ಏಕೆ ಮಹತ್ವದ್ದಾಗಿದೆ ಎಂಬುದನ್ನು ವಿವರಿಸಲು ನಿಮಗೆ ಸಾಧ್ಯವೇ ಎಂಬುದನ್ನು MIT ಗಮನಿಸುತ್ತದೆ.

PREV
Read more Articles on
click me!

Recommended Stories

'ಸ್ವಲ್ಪನಾದ್ರೂ ನಾಚಿಕೆ ಇರಲಿ' ಪುಸ್ತಕಗಳ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ತೀವ್ರ ತರಾಟೆ
ಮಗನ ಟಿವಿ ನೋಡುವ ಚಟಕ್ಕೆ ತಂದೆಯ ಸ್ಮಾರ್ಟ್ ಐಡಿಯಾ, ನಮಗೂ ಹೇಳಿಕೊಡಿ ಎಂದ ಹಲವು ಪೋಷಕರು