- ಶಾಲಾ ಶಿಕ್ಷಕರಿಗೆ ಸರ್ಕಾರದಿಂದ ಐಡಿ
- ಗುರುತಿನ ಚೀಟಿ ವಿತರಿಸಲು ಶಿಕ್ಷಣ ಇಲಾಖೆ ಆದೇಶ
- ಕಾಯಂ, ಗುತ್ತಿಗೆ, ಪಾರ್ಟ್ ಟೈಂ ಶಿಕ್ಷಕರಿಗೂ ಐಡಿ
- ಶಿಕ್ಷಕರ ದಶಕದ ಬೇಡಿಕೆ ಈಡೇರಿಸಿದ ಸಚಿವ ನಾಗೇಶ್
ಬೆಂಗಳೂರು (ನ. 03): ರಾಜ್ಯದ ಎಲ್ಲ ಸರ್ಕಾರಿ ಶಾಲಾ ಶಿಕ್ಷಕರಿಗೆ ಇದೇ ಮೊದಲ ಬಾರಿಗೆ ಸರ್ಕಾರದ ಚಿಹ್ನೆಯನ್ನೊಳಗೊಂಡ ಗುರುತಿನ ಚೀಟಿ ವಿತರಿಸಲು ಸರ್ಕಾರ ಆದೇಶಿಸಿದ್ದು, ಶಿಕ್ಷಕರ ದಶಕಗಳ ಬೇಡಿಕೆ ಈಡೇರಿದಂತಾಗಿದೆ.
2020-21ನೇ ಸಾಲಿನ ಸಮಗ್ರ ಶಿಕ್ಷಣ ಕರ್ನಾಟಕ ಕಾರ್ಯಕ್ರಮದ ಪಿಎಬಿ ಅನುಮೋದಿತ ಚಟುವಟಿಕೆ ‘ಶಿಕ್ಷಕರ ಗುರುತಿನ ಚೀಟಿ’ ಅಡಿ ರಾಜ್ಯದ ಎಲ್ಲ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ (ರೆಗ್ಯುಲರ್, ಗುತ್ತಿಗೆ/ ಪಾರ್ಟ್ ಟೈಂ) ಗುರುತಿನ ಚೀಟಿ ವಿತರಣೆಗೆ ಕ್ರಮ ವಹಿಸುವಂತೆ ಶಿಕ್ಷಣ ಇಲಾಖೆಯ ಎಲ್ಲ ಜಿಲ್ಲಾ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ರಾಜ್ಯ ಯೋಜನಾ ನಿರ್ದೇಶಕರಾದ ಎಂ.ದೀಪಾ ಆದೇಶಿಸಿದ್ದಾರೆ.
undefined
ಪ್ರತಿ ಶಿಕ್ಷಕರ ಗುರುತಿನ ಚೀಟಿಗೆ 50 ರು.ನಂತೆ ಒಟ್ಟು ಶಿಕ್ಷಕರ ಸಂಖ್ಯೆಗೆ ಅನುಗುಣವಾಗಿ 99.09 ಲಕ್ಷ ರು. ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಉಪನಿರ್ದೇಶಕರು ಆಯಾ ಬ್ಲಾಕ್‌ಗೆ ನಿಗದಿಪಡಿಸಿರುವ ಅನುದಾನವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಬಿಡುಗಡೆ ಮಾಡಿ ತಮ್ಮ ವ್ಯಾಪ್ತಿಯ ಎಲ್ಲ ಶಿಕ್ಷಕರಿಗೂ ಏಕರೂಪದ ಗುರುತಿನ ಚೀಟಿ ವಿತರಿಸಲು ಕ್ರಮ ಕೈಗೊಳ್ಳಬೇಕು. ಕರ್ನಾಟಕ ಸರ್ಕಾರದ ಚಿಹ್ನೆಯನ್ನು ಐಡಿ ಒಳಗೊಂಡಿರಬೇಕು. ಶಿಕ್ಷಕರ ಹೆಸರು, ಕರ್ತವ್ಯ ನಿರ್ವಹಿಸುವ ಶಾಲೆ ಸೇರಿದಂತೆ ಗುರುತಿನ ಚೀಟಿಯಲ್ಲಿ ಅಗತ್ಯ ಮಾಹಿತಿಯನ್ನು ದಾಖಲಿಸಬೇಕೆಂದು ಅವರು ಸೂಚಿಸಿದ್ದಾರೆ.
ಸರ್ಕಾರ ಶಿಕ್ಷಕರಿಗೆ ಗುರುತಿನ ಚೀಟಿ ನೀಡಲು ನಿರ್ಧರಿಸಿ ಅನುದಾನ ಬಿಡುಗಡೆ ಮಾಡಿರುವುದನ್ನು ರಾಜ್ಯ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರ ಸಂಘಟನೆಗಳು ಸ್ವಾಗತಿಸಿವೆ. ಖಾಸಗಿ ಶಾಲಾ ಶಿಕ್ಷಕರಂತೆ ಸರ್ಕಾರಿ ಶಾಲಾ ಶಿಕ್ಷಕರಿಗೂ ಗುರುತಿನ ಚೀಟಿ ನೀಡಬೇಕೆಂದು ಅನೇಕ ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಮನವಿ ಪುರಸ್ಕರಿಸಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಸಂಘಟನೆಗಳ ಅಧ್ಯಕ್ಷರಾದ ಶಂಭುಲಿಂಗನಗೌಡ ಪಾಟೀಲ ಮತ್ತು ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.