ಪರೀಕ್ಷೆಯಲ್ಲಿ ನಕಲು ಮಾಡುವುದು ಒಂದು ತಂತ್ರ. ಇದು ಇವತ್ತು ನಿನ್ನೆ ಹುಟ್ಟಿಕೊಂಡಿದ್ದಲ್ಲ ಪರೀಕ್ಷೆ ಎಂಬ ಪದ್ಧತಿ ಆರಂಭವಾದಾಗಿನಿಂದಲೂ ಈ ನಕಲು ಮಾಡುವವರು ಹುಟ್ಟಿಕೊಂಡಿದ್ದಾರೆ. ಕಾಲಕ್ಕೆ ತಕ್ಕ ಕೋಲ ಎಂಬಂತೆ ನಕಲು ಮಾಡುವ ವಿಧಾನಗಳು ಬದಲಾಗಿವೆ. ಕಾಲಲ್ಲಿ ಕೈಯಲ್ಲಿ ಶರ್ಟ್‌ನ ತೋಳುಗಳಲ್ಲಿ, ಶೂಗಳಲ್ಲಿ ಹೀಗೆ ಪರೀಕ್ಷೆಗೆ ಮೊದಲ ದಿನ ಪರೀಕ್ಷಾ ಕೊಠಡಿಯ ಮೇಲ್ವಿಚಾರಕಾರಿಗೆ ಕಾಣಿಸದಂತಹ ಜಾಗದಲ್ಲೆಲ್ಲಾ ಉತ್ತರ ಬರೆದು ನಕಲು ಮಾಡಲು ಯತ್ನಿಸುತ್ತಿದ್ದ ಕಾಲವಿತ್ತು. ಈ ತಂತ್ರಗಳೆಲ್ಲಾ ಈಗ ಹಳೆಯದಾಗಿವೆ. ಈಗ ಏನಿದ್ದರೂ ತಂತ್ರಜ್ಞಾನದ ಯುಗವಾಗಿರುವುದರಿಂದ ಸ್ಮಾರ್ಟ್ ಫೋನ್‌ಗಳು ಚಿಪ್‌ಗಳು, ಸ್ಮಾರ್ಟ್‌ವಾಚ್‌ಗಳು ಮುಂತಾದವುಗಳನ್ನು ಬಳಸಿ ಪರೀಕ್ಷೆಯಲ್ಲಿ ನಕಲು ಮಾಡುತ್ತಾರೆ. ಹಾಗೆಯೇ ಜೊತೆ ಜೊತೆಗೆ ಸಿಕ್ಕಿ ಬಿದ್ದು ಡಿಬಾರ್ ಕೂಡ ಆಗುತ್ತಾರೆ. ಈ ಪುರಾಣವೆಲ್ಲಾ ಈಗೇಕೆ ಅಂತೀರಾ ಇಲ್ಲೊಬ್ಬ ವಿದ್ಯಾರ್ಥಿ ವಿನೂತನವಾಗಿ ನಕಲು ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾನೆ. ಆದರೆ ನಕಲು ಮಾಡುವುದರಲ್ಲೂ ಈತ ತೋರಿದ ಸೃಜನಶೀಲತೆಗೆ ನೆಟ್ಟಿಗರು ಶಭಾಷ್ ಎಂದಿದ್ದಾರೆ. ಹಾಗಿದ್ದರೆ ನಕಲು ಮಾಡಲು ಬಳಸಿದ ವವಿನೂತನ ತಂತ್ರವೇನು? ಮುಂದೆ ಓದಿ
ಈ ಘಟನೆ ನಡೆದಿರುವುದು ಸ್ಪೇನ್‌ನಲ್ಲಿ. ನಕಲು ಮಾಡಲು ಮುಂದಾಗಿ ಸಿಕ್ಕಿಬಿದ್ದ ಈತ ಕಾನೂನು ವಿದ್ಯಾರ್ಥಿ. ಕಾನೂನು ಪದವಿಯಲ್ಲಿ ಕ್ರಿಮಿನಲ್ ಕಾರ್ಯವಿಧಾನದ ಕಾನೂನನ್ನು ಅಧ್ಯಯನ ಮಾಡುವುದು ಕಠಿಣವಾದ ಕೆಲಸ. ಈ ವಿಷಯದಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗಬೇಕಾದರೆ ಅಧ್ಯಯನಕ್ಕೆ ಸಾಕಷ್ಟು ಸಮಯವನ್ನು ಮೀಸಲಿರಿಸಬೇಕು. ಆದರೆ ಎಕ್ಸಾಂ ಮುನ್ನ ದಿನ ಪಠ್ಯ ಪುಸ್ತಕ ತಿರುವಿದ ಈತನಿಗೆ ಇದನ್ನು ನಾನು ನಿಷ್ಠೆಯಿಂದ ಅಧ್ಯಯನ ನಡೆಸಿ ಪಾಸಾಗಲು ಸಾಧ್ಯವಿಲ್ಲ ಎಂದೆನಿಸಿದೆ. ಆಗಲೇ ಆತನಿಗೆ ಹೊಳೆದಿದ್ದು, ನಕಲು ಮಾಡುವ ತಂತ್ರ. ಇದಕ್ಕಾಗಿ ಈತ 11 ಪೆನ್‌ಗಳನ್ನು ತೆಗೆದುಕೊಂಡಿದ್ದಾನೆ. ನಂತರ ಪೆನ್‌ನ ಮೇಲ್ಭಾಗದಲ್ಲಿ ಸಣ್ಣ ಸಣ್ಣ ಅಕ್ಷರದಲ್ಲಿ ತನ್ನ ಇಡೀ ಪಠ್ಯವನ್ನು ಬರೆದಿದ್ದಾನೆ. ಇದು ಒಂದು ಕ್ಷಣ ನೋಡುವುದಕ್ಕೆ ಪೆನ್‌ನ ಮೇಲ್ಭಾಗದಲ್ಲಿ ಪೆನ್ ತಯಾರಕರು ಹಾಕಿರುವ ಏನೋ ಬರಹದಂತೆ ಕಾಣುತ್ತದೆ. ಇದನ್ನು ಜೂಮ್ ಮಾಡಿ ನೋಡಿದರಷ್ಟೇ ಇದು ಪಠ್ಯ ಎಂದು ಕಾಣಿಸುತ್ತದೆ. ಇಷ್ಟೆಲ್ಲಾ ತಂತ್ರ ಬಳಸಿದರು ಆತ ಮಾತ್ರ ಪರೀಕ್ಷಾ ಕೊಠಡಿ ಮೇಲ್ವಿಚಾರಕರಿಗೆ ಸಿಕ್ಕಿ ಬಿದ್ದಿದ್ದು, ಆತನ ಬಳಿ ಇದ್ದ ಪೆನ್ನುಗಳನ್ನು ಜಪ್ತಿ ಮಾಡಿ ಆತನನ್ನು ಡಿಬಾರ್ ಮಾಡಲಾಗಿದೆ.
ಆದರೆ ಆತನ ಈ ಕೃತ್ಯಕ್ಕೆ ಬಳಸಿದ ಪೆನ್ನುಗಳ ಫೋಟೋವನ್ನು ಪ್ರಾಧ್ಯಾಪಕ ಯೊಲಂಡಾ ಡಿ ಲುಚಿ ಎಂಬುವವರು ಇತ್ತೀಚೆಗೆ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಈ ವಿಚಾರ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ. ಆತನ ಈ ಕ್ರಿಯೇಟಿವಿಟಿಗೆ ನೆಟ್ಟಿಗರು ಭೇಷ್ ಅಂತಿದ್ದಾರೆ. ಈ ಪೆನ್ನುಗಳು ನೋಡುವುದಕ್ಕೆ ಸಾಮಾನ್ಯ ಎನಿಸಿದರು ಇದರೊಳಗೆ ಇರುವ ಚೀಟಿಗಳಲ್ಲಿ ತುಂಬಾ ಸಣ್ಣದಾದ ಅಕ್ಷರಗಳಲ್ಲಿ ಬರೆದು ಕಾಪಿ ಚೀಟಿ ಇಡಲಾಗಿತ್ತು.
ಪರೀಕ್ಷೆಯಲ್ಲಿ ಪಠ್ಯವಿಟ್ಟು ನಕಲು ಮಾಡಿದ ಕಾಲೇಜು ವಿದ್ಯಾರ್ಥಿಗಳು, ವಿಡಿಯೋ ವೈರಲ್!
ನನ್ನ ಕೊಠಡಿಯನ್ನು ಸ್ವಚ್ಛಗೊಳಿಸುವಾಗ ಈ ಪೆನ್ನುಗಳು ಸಿಕ್ಕಿದವು. ಇವು ಕೆಲವು ವರ್ಷಗಳ ಹಿಂದೆ ವಿದ್ಯಾರ್ಥಿಯಿಂದ ವಶಪಡಿಸಿಕೊಂಡ ಪೆನ್ನುಗಳಾಗಿವೆ. ಪೆನ್ನುಗಳ ಒಳಗೆ ಕ್ರಿಮಿನಲ್ ಕಾರ್ಯವಿಧಾನದ ಕಾನೂನು. ಎಂಥಹಾ ಕಲೆ ಇದು ಎಂದು ಬರೆದು ಅವರು ಈ ಪೆನ್ನುಗಳನ್ನು ಪೋಸ್ಟ್ ಮಾಡಿದ್ದಾರೆ. ಈ ಪೆನ್ನುಗಳ ಪೋಟೋ ಪೋಸ್ಟ್ ಆದಾಗಿನಿಂದ ಇದುವರೆಗೆ ಮೂರು ಲಕ್ಷಕ್ಕೂ ಅಧಿಕ ಮಂದಿ ಈ ಪೋಸ್ಟ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, 24 ಸಾವಿರಕ್ಕೂ ಹೆಚ್ಚು ಜನ ಪೋಸ್ಟ್ ರಿಟ್ವಿಟ್ ಮಾಡಿದ್ದಾರೆ. ಆದರೆ ಈ ಪೆನ್ನುಗಳ ಫೋಟೋವನ್ನು ಜೂಮ್ ಮಾಡಿದರೆ ಮಾತ್ರ ಇದರಲ್ಲಿ ಪಠ್ಯವಿದೆ ಎಂಬುದು ತಿಳಿಯುತ್ತದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
Kalaburagi SSLC Exam ವಿದ್ಯಾರ್ಥಿಗಳಿಗೆ ಚೀಟಿ ಕೊಡಲು ಗೋಡೆ ಹತ್ತಿ ಸರ್ಕಸ್!
ಒಟ್ಟಿನಲ್ಲಿ ಈತ ಪೆನ್‌ನಲ್ಲಿ ಕೆತ್ತನೆ ಮಾಡೋ ಬದಲು ಆ ಸಮಯದಲ್ಲಿ ಸ್ವಲ್ಪ ಓದಿದ್ದರೆ ಕನಿಷ್ಟ ಪಾಸಾದ್ರೂ ಆಗ್ತಿದ್ನೇನೋ ಅಲ್ವಾ..!