
ಬೆಂಗಳೂರು(ಅ.14): ಒಂದನೇ ತರಗತಿಗೆ ಮಕ್ಕಳನ್ನು ದಾಖಲಿಸಲು ಕಡ್ಡಾಯವಾಗಿ 6 ವರ್ಷ ವಯಸ್ಸು ಪೂರ್ಣಗೊಂಡಿರಬೇಕೆಂಬ ನಿಯಮದಿಂದ ಪ್ರಸ್ತುತ ಎಲ್‌ಕೆಜಿ ಮತ್ತು ಯುಕೆಜಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ (ಅಂದರೆ 2 ವರ್ಷ) ವಿನಾಯಿತಿ ನೀಡಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಷಣ ಹಕ್ಕು ಕಾಯ್ದೆಯ ಅನುಸಾರ ಹಾಗೂ ಶಿಕ್ಷಣ ತಜ್ಞರ ಅಭಿಪ್ರಾಯದ ಮೇಲೆ 1ನೇ ತರಗತಿಗೆ 6 ವರ್ಷ ವಯೋಮಿತಿ ಕಡ್ಡಾಯಗೊಳಿಸಲಾಗುತ್ತಿದೆ. ಈಗಾಗಲೇ ದೇಶದ 23 ರಾಜ್ಯಗಳಲ್ಲಿ ಬರುವ ವರ್ಷದಿಂದ ಕಡ್ಡಾಯ ಮಾಡಲಾಗುತ್ತಿದೆ. ಕೆಲವು ರಾಜ್ಯಗಳು ಈ ವರ್ಷವೇ ಜಾರಿಗೊಳಿಸಿವೆ. ನಮ್ಮ ರಾಜ್ಯದಲ್ಲೂ ಮುಂದಿನ ವರ್ಷದಿಂದಲೇ ಜಾರಿಗೆ ಆದೇಶ ಮಾಡಲಾಗಿದೆ. ಆದರೆ, ಪ್ರಸ್ತುತ ಎಲ್‌ಕೆಜಿ ಮತ್ತು ಯುಕೆಜಿಯಲ್ಲಿರುವ ಮಕ್ಕಳು ಮುಂದೆ 1ನೇ ತರಗತಿಗೆ ಪ್ರವೇಶ ಪಡೆಯುವಾಗ 6 ವರ್ಷ ಪೂರ್ಣಗೊಂಡಿಲ್ಲದಿದ್ದರೆ ಸಮಸ್ಯೆಯಾಗುತ್ತದೆ ಎಂಬ ಕಾರಣಕ್ಕೆ ಅವರಿಗೆ ಮಾತ್ರ ವಿನಾಯಿತಿ ನೀಡಲು ನಿರ್ಧರಿಸಲಾಗಿದೆ. ಈ ಸಂಬಂಧ ಅಧಿಕಾರಿಗಳು ಪರಿಷ್ಕೃತ ಆದೇಶ ಹೊರಡಿಸಲಿದ್ದಾರೆ ಎಂದರು.
Hijab Case: ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಬ್ಯಾನ್ ಮುಂದುವರಿಯುತ್ತೆ!
ಈಗ ಯುಕೆಜಿಯಲ್ಲಿರುವ ಮಕ್ಕಳು 2023-24ನೇ ಸಾಲಿನಲ್ಲಿ ಹಾಗೂ ಎಲ್‌ಕೆಜಿಯಲ್ಲಿರುವ ಮಕ್ಕಳು 2024-25ನೇ ಸಾಲಿನಲ್ಲಿ 1ನೇ ತರಗತಿಗೆ ಪ್ರವೇಶ ಪಡೆಯುತ್ತಾರೆ. ಇದುವರೆಗೆ 1ನೇ ತರಗತಿ ಪ್ರವೇಶಕ್ಕೆ 6 ವರ್ಷದ ವಯೋಮಿತಿ ಇಲ್ಲದ ಕಾರಣ ಎಲ್‌ಕೆಜಿ-ಯುಕೆಜಿಗೆ ಸೇರಿಸುವಾಗ ಪೋಷಕರು ಈ ವಯೋಮಿತಿ ಬಗ್ಗೆ ಗಮನಹರಿಸಿರುವುದಿಲ್ಲ. ಇದರಿಂದಾಗಿ ಮಕ್ಕಳಿಗೆ 1ನೇ ತರಗತಿ ಪ್ರವೇಶಕ್ಕೆ ವಯೋಮಿತಿ ಸಮಸ್ಯೆಯಾಗಬಹುದು ಎಂದು ಆತಂಕ ಪೋಷಕರಲ್ಲಿದೆ. ಆದರೆ, ಇಂತಹ ಮಕ್ಕಳು ಶೇ.1ರಷ್ಟುಇರಬಹುದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಇಂತಹ ಮಕ್ಕಳ ಪೋಷಕರು ಆತಂಕ ಪಡುವ ಅಗತ್ಯವಿಲ್ಲ. ಮುಂದಿನ ಎರಡು ವರ್ಷ ವಯೋಮಿತಿ ಕಡ್ಡಾಯಕ್ಕೆ ವಿನಾಯಿತಿ ನೀಡಲಾಗುವುದು. ಆದರೆ, ನೇರ 1ನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳಿಗೆ 6 ವರ್ಷ ತುಂಬಿರಬೇಕಾಗುತ್ತದೆ. ಅವರಿಗೂ ವಿನಾಯಿತಿ ನೀಡುವುದಾದರೆ ಹೇಗೆ ಎಂದು ಅಧಿಕಾರಿಗಳು ಪರಿಶೀಲಿಸಲಿದ್ದಾರೆ. 2025-26ನೇ ಸಾಲಿನಿಂದ ಎಲ್ಲ ಮಕ್ಕಳಿಗೂ 1ನೇ ತರಗತಿ ಪ್ರವೇಶಕ್ಕೆ 6 ವರ್ಷ ವಯೋಮಿತಿ ಕಡ್ಡಾಯವಾಗಿರುತ್ತದೆ ಎಂದರು.
2025ರಿಂದ ಜಾರಿ
ಈಗ ಯುಕೆಜಿಯಲ್ಲಿರುವ ಮಕ್ಕಳು 2023ರಲ್ಲಿ ಹಾಗೂ ಈಗ ಎಲ್‌ಕೆಜಿಯಲ್ಲಿರುವ ಮಕ್ಕಳು 2024ರಲ್ಲಿ 1ನೇ ತರಗತಿಗೆ ಪ್ರವೇಶ ಪಡೆಯುತ್ತಾರೆ. ಅವರಿಗೆ ಆಗ 6 ವರ್ಷ ಪೂರ್ಣಗೊಂಡಿರಬೇಕು ಎಂಬ ನಿಯಮ ವಿಧಿಸುವುದಿಲ್ಲ. 2025ರಿಂದ ಕಡ್ಡಾಯವಾಗಿ 6 ವರ್ಷದ ನಿಯಮ ಬರಲಿದೆ ಅಂತ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.