Bengaluru Rain: ನಾಳೆಯೂ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

Published : Sep 06, 2022, 10:14 PM ISTUpdated : Sep 06, 2022, 10:16 PM IST
Bengaluru Rain: ನಾಳೆಯೂ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಸಾರಾಂಶ

ಬೆಂಗಳೂರು ನಗರದ ವಿವಿದೆಡೆ ಧಾರಾಕಾರವಾಗಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಬೆಂಗಳೂರು ಪೂರ್ವ ತಾಲೂಕಿನಲ್ಲಿ ಮಳೆ ಅವಾಂತರ ಹಿನ್ನೆಲೆ ನಾಳೆಯೂ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಬೆಂಗಳೂರು (ಸೆ.6): ಬೆಂಗಳೂರು ನಗರದ ವಿವಿದೆಡೆ ಧಾರಾಕಾರವಾಗಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಬೆಂಗಳೂರು ಪೂರ್ವ ತಾಲೂಕಿನಲ್ಲಿ ಮಳೆ ಅವಾಂತರ ಹಿನ್ನೆಲೆ ನಾಳೆಯೂ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಕೆ.ಆರ್ ಪುರಂ ವ್ಯಾಪ್ತಿಯ ಸರ್ಕಾರಿ, ಸರ್ಕಾರಿ ಅನುದಾನಿತ ಶಾಲಾ ಕಾಲೇಜು ಹಾಗೂ ದಕ್ಷಿಣ ವಲಯ 4ಕ್ಕೆ ಒಳಪಡುವ ಸರ್ಕಾರಿ, ಅನುದಾನಿತ ಶಾಲಾ‌ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ರಸ್ತೆಗಳಲ್ಲಿ ಮಳೆ ನೀರು ನಿಂತಿರುವ ಕಾರಣ ವಾಹನಗಳ ಓಡಾಟಕ್ಕೆ ತೊಂದರೆ ಹಿನ್ನಲೆ ರಜೆ ನೀಡಿ ಆದೇಶ ಹೊರಡಿಸಲಾಗಿದೆ. ರಜೆ ನೀಡಿರುವ ಕಾರಣ  ಮುಂದಿನ ಎರಡು‌ ಶನಿವಾರ ಪೂರ್ಣ ದಿನ ಕಾರ್ಯ ನಿರ್ವಹಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೂಚನೆ ಹೊರಡಿಸಿದ್ದಾರೆ.  

ಅರ್ಧ ಶತಮಾನದ ಮಳೆ:
ಈ ಬಾರಿಯ ಮುಂಗಾರು ಅವಧಿಯಲ್ಲಿ ಈವರೆಗೆ ಬೆಂಗಳೂರು ನಗರವು ಅರ್ಧ ಶತಮಾನದಲ್ಲೇ ಎರಡನೇ ಅತಿ ಹೆಚ್ಚು ದಾಖಲೆಯ ಮಳೆಯನ್ನು ಕಂಡಿದೆ. ಇನ್ನೊಂದು ಕಡೆ ಭಾನುವಾರ ತಡರಾತ್ರಿಯ ಮಳೆ ಸಹ ಏಕ ದಿನದ (24 ಗಂಟೆಗಳ) ಅವಧಿಯಲ್ಲಿ ಸುರಿದ ‘8 ವರ್ಷಗಳ ಅತಿ ದೊಡ್ಡ ಮಳೆ’ ಎಂಬ ದಾಖಲೆಯನ್ನು ಬರೆದಿದೆ.

ಈ ಮಹಾಮಳೆಯ ಆರ್ಭಟಕ್ಕೆ ಇಡೀ ನಗರ ನಲುಗಿಹೋಗಿ ಜನಜೀವನ ಅಸ್ತವ್ಯಸ್ತಗೊಂಡರೆ, ಐಟಿ ಹಬ್‌ ಎನಿಸಿಕೊಂಡಿರುವ ಪ್ರದೇಶಗಳು ಜಲಾವೃತಗೊಂಡು ಕೋಟ್ಯಂತರ ರು. ನಷ್ಟಉಂಟಾಗಿದೆ. ಇದೇ ವೇಳೆ ಮಳೆ ನೀರಿನ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ.

ಮುಂಗಾರು ಅವಧಿಯ ದಾಖಲೆಯ ಮಳೆಯ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿನಾಥ್‌, ‘ನಗರದಲ್ಲಿ ಮಳೆಗಾಲದಲ್ಲಿ (ಜೂನ್‌ನಿಂದ ಸೆಪ್ಟೆಂಬರ್‌ವರೆಗೆ) 330 ಮಿ.ಮೀ. ವಾಡಿಕೆ ಮಳೆಯಾಗುತ್ತದೆ. 1971ರಿಂದ ಇಲ್ಲಿವರೆಗೂ (51 ವರ್ಷಗಳಲ್ಲಿ) ಮುಂಗಾರು ಅವಧಿಯಲ್ಲಿ ಎರಡು ಬಾರಿ 700 ಮಿ.ಮೀ.ಗಿಂತ ಹೆಚ್ಚು ಮಳೆಯಾಗಿದೆ. ಈ ಹಿಂದೆ 1998ರಲ್ಲಿ 725 ಮಿ.ಮೀ ಮಳೆ ಸುರಿದಿತ್ತು. ಆ ಬಳಿಕ ಎರಡನೇ ಅತಿ ಹೆಚ್ಚು ಪ್ರಸಕ್ತ ವರ್ಷ ಜೂನ್‌ 1ರಿಂದ ಸೆ.5ವರೆಗೂ 709 ಮಿ.ಮೀ. ಮಳೆಯಾಗಿದೆ. ವಾಡಿಕೆಗೆ ಹೋಲಿಸಿದರೆ ಈ ವರ್ಷ ದುಪ್ಪಟ್ಟು ಮಳೆಯಾಗಿದೆ’ ಎಂದು ಮಾಹಿತಿ ನೀಡಿದರು.

BENGALURU RAIN UPDATES: ಮಹಾಮಳೆಗೆ ಕಳಚಿತು ಮಹಾನಗರದ ಅಸಲಿ ಮುಖ!

8 ವರ್ಷದಲ್ಲಿಯೇ ಹೆಚ್ಚು ಮಳೆ:
ಭಾನುವಾರ 24 ಗಂಟೆಯ ಅವಧಿಯಲ್ಲಿ ಬೆಂಗಳೂರು ನಗರದಲ್ಲಿ 131 ಮಿ.ಮೀ (13 ಸೆ.ಮೀ) ಮಳೆ ಸುರಿದಿದೆ. ಈ ಹಿಂದೆ 2014ರ ಜುಲೈನಲ್ಲಿ ಒಂದು ದಿನ 132 ಮಿ.ಮೀ ಮಳೆಯಾಗಿತ್ತು. ಆ ಬಳಿಕ ಎಂಟು ವರ್ಷಗಳಲ್ಲಿಯೇ ಒಂದು ದಿನದಲ್ಲಿ ಸುರಿದ ಅತಿ ಹೆಚ್ಚು ಮಳೆ ಇದಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯು (ಐಎಂಡಿ) ತಿಳಿಸಿದೆ. ಬೆಂಗಳೂರು ನಗರ ಭಾಗ ಹೊರತು ಪಡಿಸಿ ಎಎಚ್‌ಎ ಮಳೆ ಮಾಪನ ಕೇಂದ್ರದಲ್ಲಿ 123.8 ಮಿ.ಮೀ, ಕೆಂಪೇಗೌಡ ವಿಮಾನ ನಿಲ್ದಾಣ ಮಾಪನ ಕೇಂದ್ರದಲ್ಲಿ 109.6 ಮಿ.ಮೀ.ನಷ್ಟು, ಬೆಂಗಳೂರು ಗ್ರಾಮಾಂತರ ಭಾಗದಲ್ಲಿ 130 ಮಿ.ಮೀ. ಮಳೆಯಾಗಿದೆ.

Bengaluru Rains: ಭಾರತದ ವೆನೀಸ್ ನಗರಕ್ಕೆ ಸ್ವಾಗತ ಸುಸ್ವಾಗತ!

ಎಲ್ಲಿ ಹೆಚ್ಚು ಮಳೆ ದಾಖಲು?:
ಬೆಂಗಳೂರು ನಗರದಲ್ಲಿ ತಾವರೆಕೆರೆ, ಚೋಳನಾಯಕನಹಳ್ಳಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಮಳೆಯಾಗಿದೆ. ವಲಯವಾರು ತಾವರೆಕೆರೆಯಲ್ಲಿ 135.5 ಮಿ.ಮೀ, ಚೋಳನಾಯಕನಹಳ್ಳಿ 135 ಮಿ.ಮೀ, ಸೊಂಡೆಕೊಪ್ಪ 79.5 ಮಿ.ಮೀ, ಯಲಹಂಕ, ಜಿಕೆವಿಕೆ, ಎಲೆಕ್ಟ್ರಾನಿಕ್‌ ಸಿಟಿ, ಹುಸ್ಕೂರು ತಲಾ 70 ಮಿ.ಮೀ, ದಾಸನಾಪುರ 67.5 ಮಿ.ಮೀ, ಹಂಪಿನಗರ 66, ಗಂಟಿಗಾನಹಳ್ಳಿ 65.5 ಮಿ.ಮೀ, ಸಿಂಗನಾಯಕನಹಳ್ಳಿ 68 ಮಿ.ಮೀ, ಕಾಚೋಹಳ್ಳಿ, ಶಿವಕೋಟೆಯಲ್ಲಿ 70 ಮಿ.ಮೀ ಮಳೆ ದಾಖಲಾಗಿದೆ.

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ