* ಕರ್ನಾಟಕದಲ್ಲಿ ಹಿಜಾಬ್-ಕೇಸರಿ ಶಾಲು ಕಿಚ್ಚು
* ಪಿಯು, ಪದವಿ ಕಾಲೇಜುಗಳನ್ನು ಪುನಾರಂಭಿಸಲು ಸರ್ಕಾರ ತೀರ್ಮಾನ
* ಸಿಎಂ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಭಯಲ್ಲಿ ನಿರ್ಧಾರ
ಬೆಂಗಳೂರು, (ಫೆ.14): ಕರ್ನಾಟಕದಲ್ಲಿ ಹಿಜಾಬ್ ವಿವಾದದ (Hijab Row) ಹಿನ್ನೆಲೆಯಲ್ಲಿ ಬಂದ್ ಆಗಿದ್ದ ಪಿಯು, ಡಿಗ್ರಿ ಕಾಲೇಜುಗಳನ್ನು ಬುಧವಾರದಿಂದ (ಫೆ.16) ಪ್ರಾರಂಭಿಸಲು ಸರ್ಕಾರ ತೀರ್ಮಾನಿಸಿದೆ.
ಈ ಬಗ್ಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್ (BC Nagesh) ಟ್ವಿಟ್ಟರ್ ಮೂಲಕ ಮಾಹಿತಿ ನೀಡಿದ್ದು, ಫೆ.16ರಿಂದ ಪಿಯು, ಪದವಿ ಕಾಲೇಜುಗಳನ್ನು (College) ಪುನಾರಂಭಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basaaraj Bommai) ಅವರ ಅಧ್ಯಕ್ಷತೆಯಲ್ಲಿ ಸಚಿವರಾದ ಅರಗ ಜ್ಞಾನೇಂದ್ರ, ಡಾ ಸಿಎನ್ ಅಶ್ವತ್ಥ್ ನಾರಾಯಣ ಹಾಗೂ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಕಾಲೇಜು ಪುನಾರಂಭದ ವೇಳೆ ಅಗತ್ಯ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲು ಮುಖ್ಯಮಂತ್ರಿಯವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಹಿಜಾಬ್ ವಿವಾದದಲ್ಲಿ ಹೈಕೋರ್ಟ್ ಹೇಳಿದ್ದೇನು? ಮಧ್ಯಂತರ ಆದೇಶ ಪ್ರತಿಯಲ್ಲಿನ ಮಾಹಿತಿ ಇಲ್ಲಿದೆ.
ಫೆ.16ರಿಂದ ಪಿಯು (1&2) ಕಾಲೇಜುಗಳನ್ನು ಪುನಾರಂಭಿಸಲು ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ಸಚಿವರಾದ ಹಾಗೂ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಕಾಲೇಜು ಪುನಾರಂಭದ ವೇಳೆ ಅಗತ್ಯ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲು ಮುಖ್ಯಮಂತ್ರಿಯವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ ಹಿಜಾಬ್, ಕೇಸರಿ ಶಾಲು ಸಂಘರ್ಷ ವಿಚಾರವಾಗಿ ಸೋಮವಾರ (ಫೆಬ್ರವರಿ 14) ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ ಪಿಯು ಹಾಗೂ ಡಿಗ್ರಿ ಕಾಲೇಜು ಆರಂಭಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ.
ಪೋಷಕರು ಮತ್ತು ಮಕ್ಕಳು ಆತಂಕಪಡುವ ಅಗತ್ಯವಿಲ್ಲ. ಶಾಲಾ ಕಾಲೇಜುಗಳ ಆರಂಭಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಪೋಲಿಸ್ ಇಲಾಖೆ ಅಗತ್ಯ ಮುನ್ನೆಚ್ಚರಿಕೆ ಕ್ರಮವಹಿಸಲಿದೆ. ಶಾಲಾ ಕಾಲೇಜುಗಳ ಜತೆಗೆ ಪೋಲಿಸ್ ಇಲಾಖೆ ಇರಲಿದೆ. ಹೈಕೋರ್ಟ್ ಮಧ್ಯಂತರ ಆದೇಶ ಯಾರು ಉಲ್ಲಂಘನೆ ಮಾಡುವಂತಿಲ್ಲ, ಸಮವಸ್ತ್ರ ಧರಿಸಿ ಶಾಲಾ ಕಾಲೇಜುಗಳಿಗೆ ಹಾಜರಾಗಬೇಕು ಎಂದು ಗೃಹಸಚಿವ ಆರಗ ಜ್ಙಾನೇಂದ್ರ ತಿಳಿಸಿದ್ದಾರೆ.
ಫೆ.15 ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್
ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ (Hijab Row) ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ (Karnataka High Court ) ಪೂರ್ಣ ಪೀಠ ನಾಳೆಗೆ (ಮಂಗಳವಾರ) ಮುಂದೂಡಿದೆ.
ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಮತ್ತು ನ್ಯಾಯಮೂರ್ತಿ ಜೆಎಂ ಖಾಜಿ ಅವರನ್ನೊಳಗೊಂಡ ಪೀಠದ ಮುಂದೆ ವಿದ್ಯಾರ್ಥಿಗಳ ಪರ ಹಿರಿಯ ವಕೀಲ ದೇವದತ್ ಕಾಮತ್ ವಾದ ಮಂಡಿಸಿದ್ದು, ಇನ್ನಷ್ಟು ವಿಚಾರಣೆಯನ್ನು ನಾಳೆ ಅಂದ್ರೆ ಫೆ.15 ಮಧ್ಯಾಹ್ನ 2.30ಕ್ಕೆ ಮುಂದೂಡಿ ಕೋರ್ಟ್ ಸೂಚಿಸಿದೆ.
ರಾಜ್ಯಾದ್ಯಂತ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದದಿಂದ ಮುಚ್ಚಲ್ಪಟ್ಟಿದ್ದ 10ನೇ ತರಗತಿಯನ್ನು ಇಂದಿನಿಂದ (ಸೋಮವಾರ) ಪ್ರಾರಂಭಿಸಲಾಗಿದೆ. ಹಲವೆಡೆ ಹಿಜಾಬ್ ಬಿಚ್ಚಿ ಶಾಲೆಯೊಳಗೆ ಹೊದರೆ, ಇನ್ನು ಕೆಲವೆಡೆ ವಿದ್ಯಾರ್ಥಿಗಳು ಹಿಜಾಬ್ ತೆಗೆಯುವುದಿಲ್ಲ ಎಂದು ಹೇಳುತ್ತಾ ವಾಪಸ್ ಮನೆ ಹೋಗಿದ್ದಾರೆ.
ಇನ್ನು ಶಿವಮೊಗ್ಗ, ತುಮಕೂರಿನಲ್ಲಿ ಪರೀಕ್ಷೆ ಬೇಕಾದರೆ ಬರೆಯುವುದು ಬಿಡುತ್ತೇವೆ ಹಿಜಾಬ್ ತೆಗೆಯುವುದಿಲ್ಲ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ಅಲ್ಲದೇ ಪರೀಕ್ಷೆ ಬರೆಯದೇ ವಾಪಸ್ ಮನೆಗೆ ಹೋಗಿದ್ದಾರೆ.
ಅಂತಿಮ ಆದೇಶ ನೀಡುವವರೆಗೂ ಯಾವುದೇ ಧಾರ್ಮಿಕ ಗುರುತು ಉಡುಗೆಗಳಲ್ಲಿ ಶಾಲೆಗೆ ಬರುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ. ಅದರಂತೆ, ಸರ್ಕಾರ ಹೈಕೋರ್ಟ್ ಆದೇಶ ಪಾಲನೆ ಮಾಡುವಂತೆ ಎಲ್ಲಾ ಜಿಲ್ಲಾಧಿಕಾರಿ, ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾಡಳಿತ ಹಾಗೂ ಪೊಲೀಸ್ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದೆ