* ಕರ್ನಾಟಕದಲ್ಲಿ ಹಿಜಾಬ್ ವಿವಾದದ ಕಿಚ್ಚು
* ವಿಚಾರಣೆಯನ್ನು ಮತ್ತೆ ಮುಂದೂಡಿದ ಕರ್ನಾಟಕ ಹೈಕೋರ್ಟ್
* ಈ ಹಿಂದೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿ ವಿಚಾರಣೆಯನ್ನು ಫೆಬ್ರವರಿ 14ಕ್ಕೆ ಮುಂದೂಡಿತ್ತು.
ಬೆಂಗಳೂರು, (ಫೆ,14): ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ (Hijab Row) ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ (Karnataka High Court ) ಪೂರ್ಣ ಪೀಠ ನಾಳೆಗೆ (ಮಂಗಳವಾರ) ಮುಂದೂಡಿದೆ.
ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಮತ್ತು ನ್ಯಾಯಮೂರ್ತಿ ಜೆಎಂ ಖಾಜಿ ಅವರನ್ನೊಳಗೊಂಡ ಪೀಠದ ಮುಂದೆ ವಿದ್ಯಾರ್ಥಿಗಳ ಪರ ಹಿರಿಯ ವಕೀಲ ದೇವದತ್ ಕಾಮತ್ ವಾದ ಮಂಡಿಸಿದ್ದು, ಇನ್ನಷ್ಟು ವಿಚಾರಣೆಯನ್ನು ನಾಳೆ ಅಂದ್ರೆ ಫೆ.15 ಮಧ್ಯಾಹ್ನ 2.30ಕ್ಕೆ ಮುಂದೂಡಿ ಕೋರ್ಟ್ ಸೂಚಿಸಿದೆ.
Shivamogga : ಶಾಲೆ ಬಿಡುತ್ತೇವೆ ಆದ್ರೆ ಹಿಜಾಬ್ ತೆಗೆಯೊಲ್ಲ ಎಂದು ಪರೀಕ್ಷೆ ಬರೆಯದೆ ಹಿಂತಿರುಗಿದ ವಿದ್ಯಾರ್ಥಿನಿಯರು
ಇಂದು(ಸೋಮವಾರ) ನಡೆದ ಅರ್ಜಿ ವಿಚಾರಣೆಯಲ್ಲಿ ಆರ್ಟಿಕಲ್ 25(1) ಅಡಿಯಲ್ಲಿ ಸಾಕಷ್ಟು ಚರ್ಚೆ ಆಯ್ತು. ಅಲ್ಲದೇ ಅಜ್ಮಲ್ ಖಾನ್ ಪ್ರಕರಣದಲ್ಲಿ ಮದ್ರಾಸ್ ಹೈಕೋರ್ಟ್ ಪ್ರಕಟಿಸಿರುವ ತೀರ್ಪಿನಲ್ಲಿ ಪರ್ಧಾ ಅಗತ್ಯವಲ್ಲ, ಆದರೆ ಹಿಜಾಬ್ ಧಾರ್ಮಿಕ ಆಚರಣೆಯ ಅಗತ್ಯ ಎಂದು ಹೇಳಲಾಗಿದೆ. ಈ ತೀರ್ಪಿನಲ್ಲಿ ಮಲೇಷ್ಯಾ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ತೀಪುಗಳನ್ನು ಉಲ್ಲೇಖಿಸಲಾಗಿದೆ ಎಂದು ಕಾಮತ್ ವಿವರಿಸಿದರು.
ಸರ್ಕಾರಿ ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ಮಾಡಿರುವ ವಿಚಾರವನ್ನು ನಿರ್ಧರಿಸುವವರೆಗೆ ಹಿಜಾಬ್, ಕೇಸರಿ ಶಾಲು ಅಥವಾ ಬೇರಾವುದೇ ಧಾರ್ಮಿಕ ಬಾವುಟಗಳನ್ನು ಇಟ್ಟುಕೊಂಡು ಕಾಲೇಜಿಗೆ ತೆರಳದಂತೆ ವಿದ್ಯಾರ್ಥಿಗಳಿಗೆ ಆದೇಶಿಸಿ ಕರ್ನಾಟಕ ಹೈಕೋರ್ಟ್ ಗುರುವಾರ ಮಧ್ಯಂತರ ಆದೇಶ ನೀಡಿತ್ತು. ಬಳಿಕ ಮುಂದಿನ ವಿಚಾರಣೆಯನ್ನು ಫೆಬ್ರವರಿ 14ಕ್ಕೆ ಮುಂದೂಡಿತ್ತು.
ನ್ಯಾಯಾಲಯಲ್ಲಿ ನಡೆದ ವಾದ ಮಂಡನೆಗಳು ಆರಂಭಕ್ಕೂ ಮುನ್ನ, ಮುಖ್ಯ ನ್ಯಾಯಮೂರ್ತಿಗಳು, ನಾವು ವಿಚಾರಣೆಯನ್ನು ಲೈವ್ ಸ್ಟ್ರೀಮಿಂಗ್ ಮಾಡುತ್ತಿದ್ದೇವೆ. ನಮ್ಮ ಮನವಿ ಒಂದೇ ಮಾಧ್ಯಮಗಳು ಹೆಚ್ಚು ಜವಾಬ್ದಾರಿಯುತವಾಗಿರಬೇಕು. ಮಾಧ್ಯಮ ಸಂವಿಧಾನದ ನಾಲ್ಕನೇ ಅಂಗ. ರಾಜ್ಯದಲ್ಲಿ ಶಾಂತಿ ನೆಮ್ಮದಿ ತರಲು ಪ್ರಯತ್ನಿಸಬೇಕು. ನಾವೆಲ್ಲರೂ ಜವಾಬ್ಧಾರಿಯುತ ನಾಗರಿಕರರಾಗಿ ವರ್ತಿಸಬೇಕು ಎಂದು ಮನವಿ ಮಾಡಿದ್ದಾರೆ.
ಉಡುಪಿಯ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನ ಮುಸ್ಲಿಮ್ ಸಮುದಾಯದ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಹಾಜರಾಗುವುದಕ್ಕೆ ಅಡ್ಡಿಪಡಿಸುತ್ತಿದ್ದಾರೆ ಅಂತ ಆರೋಪಿಸಿ ವಿದ್ಯಾರ್ಥಿನಿಯರಾದ ಆಯೇಷಾ ಹಜೀರಾ ಅಲ್ಮಾಸ್ ಮತ್ತಿತರರು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆಯನ್ನು ಪ್ರಾರಂಭದಲ್ಲಿ ಹೈಕೋರ್ಟ್‌ನ ಏಕಸದ್ಯಸ ಪೀಠ ನಡೆಸಿದ ಬಳಿಕ ಹೆಚ್ಚಿನ ವಿಚಾರಣೆಗಾಗಿ ಮುಖ್ಯ ನ್ಯಾಯಾಮೂರ್ತಿಗಳಿಗೆ ವಿಚಾರಣೆಯನ್ನು ವರ್ಗಾವಣೆ ಮಾಡಿದ್ದರು.
ಹಿಜಾಬ್ (Hijab), ಕೇಸರಿ ಶಾಲು ವಿವಾದದಿಂದ ಬಂದ್ ಆಗಿದ್ದ ಶಾಲೆ (School) ಇಂದಿನಿಂದ ಮತ್ತೆ ಆರಂಭವಾಗಿದೆ. ಆತಂಕದಲ್ಲಿಯೇ ಶಿಕ್ಷಣ ಇಲಾಖೆ ಫ್ರೌಢ ಶಾಲೆಗಳ ಆರಂಭಕ್ಕೆ ಮುಂದಾಗಿದೆ. ಬಿಗಿ ಭದ್ರತೆಯಲ್ಲಿ ಇಂದಿನಿಂದ 9 ಮತ್ತು 10 ನೇ ತರಗತಿ ಆರಂಭವಾಗಿದೆ.
ಹಿಜಾಬ್ ಸಂಘರ್ಷದಿಂದ ಸರ್ಕಾರ ಸುಮಾರು ನಾಲ್ಕು ದಿನ ರಜೆ ನೀಡಿತ್ತು. ಶಾಲಾ ಆವರಣದಲ್ಲಿ ಸಮವಸ್ತ್ರ ಕಡ್ಡಾಯ ಮಾಡಿಯೇ ಶಾಲೆ ಆರಂಭಿಸಬೇಕು. ಯಾವುದೇ ಕಾರಣಕ್ಕೂ ಶಾಲೆಗಳಲ್ಲಿ ಶಾಂತಿ ಹದಗೆಡದ್ದಂತೆ ನೋಡಿಕೊಳ್ಳಿ. ಕೆಲವು ದಿನಗಳ ಮಟ್ಟಿಗೆ ಯಾವುದೇ ವಿದ್ಯಾರ್ಥಿಗಳ ಕಾರ್ಯಕ್ರಮ ಅವಕಾಶ ಬೇಡ. ಸಾಂಸ್ಕೃತಿಕ ಕಾರ್ಯಕ್ರಮ ಬ್ರೇಕ್ ಹಾಕಿ ಕೇವಲ ತರಗತಿ ಮಾತ್ರ ಮಾಡಬೇಕು. ಶಾಲೆಯ ಆವರಣದಲ್ಲಿ ಯಾವುದೇ ಕಾರಣಕ್ಕೂ ಕೋಮು ಸೌರ್ಹದತೆಗೆ ಅಡ್ಡಿಯಾಗದಂತೆ ಎಚ್ಚರಿಕೆ ವಹಿಸಿ. ಒಂದೊಮ್ಮೆ ಸಮವಸ್ತ್ರ ಕಿರಿಕ್ ಅಥವಾ ಗಲಾಟೆ ಎದುರಾದರೆ ತಕ್ಷಣಕ್ಕೆ ಡಿಡಿಪಿಐ ಗಮನಕ್ಕೆ ತರುವಂತೆ ಶಿಕ್ಷಣ ಇಲಾಖೆ ರಾಜ್ಯದಲ್ಲಿ ಶಾಲೆಗಳ ಆರಂಭಕ್ಕೆ ಕೆಲವು ಸೂಚನೆ ನೀಡಿದೆ.