Hijab Row: ಶಿಕ್ಷಕಿಯರೂ ಕ್ಲಾಸಲ್ಲಿ ಹಿಜಾಬ್‌ ಧರಿಸೋದು ಬೇಡ: ಸಚಿವ ನಾಗೇಶ್‌

By Govindaraj S  |  First Published Apr 5, 2022, 3:00 AM IST

ವಿದ್ಯಾರ್ಥಿನಿಯರಿಗೆ ಹಿಜಾಬ್‌ಗೆ ಅವಕಾಶ ಇಲ್ಲದ ಹಿನ್ನೆಲೆಯಲ್ಲಿ ಶಿಕ್ಷಕಿಯರೂ ತರಗತಿಯಲ್ಲಿ ಹಿಜಾಬ್‌ ಧರಿಸದಿದ್ದರೆ ಉತ್ತಮ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಹೇಳಿದ್ದಾರೆ.


ಬೆಂಗಳೂರು (ಏ.05): ರಾಜ್ಯದಲ್ಲಿ (Karnataka) ಸರ್ಕಾರಿ ನೌಕರರಿಗೆ ಸಮವಸ್ತ್ರ ಸಂಹಿತೆ ಅನ್ವಯವಾಗುವುದಿಲ್ಲ. ಹೀಗಾಗಿ ಶಿಕ್ಷಕರು ಅಥವಾ ಪರೀಕ್ಷಾ ಮೇಲ್ವಿಚಾರಕರಿಗೂ ಸಮವಸ್ತ್ರ ನಿಯಮ ಅನ್ವಯವಾಗುವುದಿಲ್ಲ. ಆದರೂ ನೈತಿಕತೆ ಆಧಾರದ ಮೇಲೆ ವಿದ್ಯಾರ್ಥಿನಿಯರಿಗೆ ಹಿಜಾಬ್‌ಗೆ (Hijab) ಅವಕಾಶ ಇಲ್ಲದ ಹಿನ್ನೆಲೆಯಲ್ಲಿ ಶಿಕ್ಷಕಿಯರೂ (Teachers) ತರಗತಿಯಲ್ಲಿ ಹಿಜಾಬ್‌ ಧರಿಸದಿದ್ದರೆ ಉತ್ತಮ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ (BC Nagesh) ಹೇಳಿದ್ದಾರೆ. 

ಪರೀಕ್ಷಾ ಪರಿವೀಕ್ಷಕರನ್ನು ಹಿಜಾಬ್‌ ಧರಿಸಿದ್ದಾರೆಂಬ ಕಾರಣಕ್ಕೆ ಪರೀಕ್ಷೆ ಜವಾಬ್ದಾರಿಯಿಂದ ಬಿಡುಗಡೆ ಮಾಡಿದ್ದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪರೀಕ್ಷೆ ಜವಾಬ್ದಾರಿಯಿಂದ ಇಲಾಖೆ ಬಿಡುಗಡೆ ಮಾಡಿಲ್ಲ. ಅವರೇ ಸ್ವಯಂಪ್ರೇರಿತವಾಗಿ ಪರೀಕ್ಷೆಯ ಪರಿವೀಕ್ಷಣೆಯ ಬದಲು ಬೇರೆ ಜವಾಬ್ದಾರಿ ನೀಡಿ ಎಂದು ಮುಖ್ಯ ಶಿಕ್ಷಕರಿಗೆ ಕೇಳಿ ಬೇರೆ ಜವಾಬ್ದಾರಿ ಪಡೆದುಕೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದರು.

Tap to resize

Latest Videos

ನಮ್ಮ ರಾಜ್ಯದಲ್ಲಿ ಶಿಕ್ಷಕರಿಗೆ ವಸ್ತ್ರ ಸಂಹಿತೆ ಇಲ್ಲ. ಹೀಗಾಗಿ ಅವರು ಹಿಜಾಬ್‌ ಧರಿಸಲು ಅಡ್ಡಿಯಿಲ್ಲ. ಆದರೆ ವಿದ್ಯಾರ್ಥಿನಿಯರು ನಮಗೆ ಅವಕಾಶವಿಲ್ಲದಿರುವಾಗ ಶಿಕ್ಷಕರಿಗೆ ಏಕೆ ಎಂದು ಪ್ರಶ್ನಿಸುತ್ತಾರೆ. ಹೀಗಾಗಿ ನೈತಿಕತೆಯ ಹಿನ್ನೆಲೆಯಲ್ಲಿ ಶಿಕ್ಷಕರೂ ಧರಿಸದಿದ್ದರೆ ಉತ್ತಮ. ಏಕೆಂದರೆ, ತರಗತಿ ಕೊಠಡಿಯಲ್ಲಿ ಅವರ ವಿದ್ಯಾರ್ಥಿ ಹಾಗೂ ಮಕ್ಕಳನ್ನು ಹೊರತುಪಡಿಸಿ ಬೇರೆ ಯಾರೂ ಇರುವುದಿಲ್ಲ. ಮಕ್ಕಳ ಮುಂದೆ ಹಿಜಾಬ್‌ ಧರಿಸುವ ಅವಶ್ಯಕತೆ ಇರುವುದಿಲ್ಲ. ಹಿಜಾಬ್‌ ಇಲ್ಲದೆ ಬಂದರೆ ಏನೂ ಆಗುವುದಿಲ್ಲ. ಈ ಬಗ್ಗೆ ಆಯಾ ಶಾಲೆಯ ಆಡಳಿತ ಮಂಡಳಿಗಳು ಮನವೊಲಿಸಿ ಸಮಸ್ಯೆ ಇದ್ದರೆ ಪರಿಹರಿಸಿಕೊಳ್ಳಬಹುದು ಎಂಬುದು ನನ್ನ ಅಭಿಪ್ರಾಯ ಎಂದರು.

ಪಠ್ಯದಿಂದ ಟಿಪ್ಪು ಮಾಹಿತಿ ಕೈ ಬಿಡುವ ಬಗ್ಗೆ ಸಮಿತಿ ಪರಿಶೀಲನೆ: ಸಚಿವ ನಾಗೇಶ್‌

ಶಾಲಾ ಮಕ್ಕಳಿಗೆ ಶೀಘ್ರವೇ ದೊರೆಯಲಿದೆ ಸಾರಿಗೆ ಸೌಲಭ್ಯ: ರಾಜ್ಯದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಸಾರಿಗೆ ಸೌಲಭ್ಯ ಒದಗಿಸಲು ಹಲವು ಖಾಸಗಿ ಕಂಪನಿಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಬುಧವಾರ ಹೇಳಿದ್ದಾರೆ. ಕೆನರಾ ಬ್ಯಾಂಕ್ ವತಿಯಿಂದ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ಅಡಿ ಒದಗಿಸಲಾಗಿರುವ 2 ಮಾರುತಿ ಇಕೋ ವಾಹನಗಳನ್ನು ಗೃಹ ಕಚೇರಿ ಕೃಷ್ಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಮಂಗಳವಾರ (ಮಾ.29) ಕೆನರಾ ಬ್ಯಾಂಕ್ ಅಧಿಕಾರಿಗಳು ಶಿಕ್ಷಣ ಇಲಾಖೆಗೆ ಹಸ್ತಾಂತರಿಸಿದರು.

ಯೋಜನೆ ಕುರಿತು ಮಾತನಾಡಿದ ಸಚಿವ ನಾಗೇಶ್ ಅವರು, ರಾಜ್ಯದ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಗತ್ಯ ಕಟ್ಟಡ ಮತ್ತು ಕೊಠಡಿ, ಆಟದ ಮೈದಾನ, ಕಂಪ್ಯೂಟರ್ ಲ್ಯಾಬ್ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಹೊಂದಿರುವ ಸರ್ಕಾರಿ ಶಾಲೆಗಳನ್ನು ಆಯ್ಕೆ ಮಾಡಲಾಗುತ್ತದೆ. ಆ ಶಾಲೆಗಳಲ್ಲಿ ತರಗತಿಗೊಬ್ಬ ಶಿಕ್ಷಕರನ್ನು ನೇಮಿಸಲಾಗುತ್ತದೆ. ಇದರಿಂದ ಆ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಳವಾಗುತ್ತದೆ. ಅಂತಹ ಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸಿ ಶಾಲೆಗೆ ಕರೆ ತರಲು ವಾಹನಗಳ ವ್ಯವಸ್ಥೆ ಮಾಡಲಾಗುತ್ತದೆ.

ಕಾರ್ಪೊರೇಟ್ ಕಂಪನಿಗಳು, ಬ್ಯಾಂಕ್‌ಗಳು, ಕಂಪನಿಗಳು, ಕೈಗಾರಿಕೆಗಳು, ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಆಸಕ್ತಿ ಹೊಂದಿರುವ ಸಂಸ್ಥೆಗಳು, ವ್ಯಕ್ತಿಗಳ ಮೂಲಕ ಮಾದರಿ ಶಾಲೆಗಳಿಗೆ ವಾಹನಗಳ ವ್ಯವಸ್ಥೆ ಮಾಡಲಾಗುತ್ತದೆ. ನಿರ್ದಿಷ್ಟ ಅವಧಿಗೆ ವಾಹನಕ್ಕೆ ಚಾಲಕರು, ಇಂಧನ ಮತ್ತು ನಿರ್ವಹಣೆಯನ್ನು ಆಯಾ ಸಂಸ್ಥೆಗಳೆ ನಿರ್ವಹಿಸುವ ಕುರಿತು ಒಪ್ಪಂದ ಮಾಡಿಕೊಳ್ಳಲಾಗುತ್ತದೆ ಎಂದು ಹೇಳಿದರು.

ಸಿಎಂಗೆ ಬುದ್ದಿಜೀವಿಗಳು ಬರೆದ ಪತ್ರಕ್ಕೆ ಸಚಿವ ನಾಗೇಶ್ ವ್ಯಂಗ್ಯ

ರಾಜ್ಯದ ಕೆಲವು ಭಾಗಗಳಲ್ಲಿರುವ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕರೆತರಲು ಖಾಸಗಿ ಸಹಭಾಗಿತ್ವದಲ್ಲಿ ವಾಹನಗಳ ವ್ಯವಸ್ಥೆ ಇದೆ. ಸಾಕಷ್ಟು ಮಕ್ಕಳು ವಾಹನಗಳ ಪ್ರಯೋಜನ ಪಡೆದು ಶಾಲೆಗೆ ಆಗಮಿಸುತ್ತಿದ್ದಾರೆ. ಶಾಲೆ ಅಭಿವೃದ್ಧಿ ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ), ಗ್ರಾಮಸ್ಥರು, ಶಿಕ್ಷಣ ಇಲಾಖೆಯ ಆಸಕ್ತಿಯಿಂದ ಇಂತಹ ಪ್ರಯತ್ನಗಳು ಯಶಸ್ವಿಯಾಗಿವೆ. ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಳ, ಎಲ್ಲ ಭಾಷೆ ಮತ್ತು ವಿಷಯಗಳಿಗೆ ಶಿಕ್ಷಕರ ಲಭ್ಯತೆ, ಮಕ್ಕಳ ನಡುವೆ ಸ್ಪರ್ಧಾತ್ಮಕ ಮನೋಭಾವ ಮೂಡಿಸುವುದು ಮತ್ತು ಮೂಲಸೌಕರ್ಯಗಳ ಸಂಪೂರ್ಣ ಸದುಪಯೋಗ ಮಾಡಿಕೊಳ್ಳುವ ಗುರಿಯನ್ನು ಹೊಂದಲಾಗಿದೆ ಎಂದು ತಿಳಿಸಿದರು.

click me!