Karnataka School Reopening| ಇಂದಿನಿಂದ ಅಂಗನವಾಡಿ, ಎಲ್‌ಕೆಜಿ, ಯುಕೆಜಿ ಶುರು!

By Kannadaprabha News  |  First Published Nov 8, 2021, 6:50 AM IST

* 18 ತಿಂಗಳ ಬಳಿಕ ಪೂರ್ವ ಪ್ರಾಥಮಿಕ ಶಾಲೆ ಆರಂಭ]

* ಇಂದಿನಿಂದ ಅಂಗನವಾಡಿ, ಎಲ್‌ಕೆಜಿ, ಯುಕೆಜಿ ಶುರು!


ಬೆಂಗಳೂರು(ನ.08): ರಾಜ್ಯದಲ್ಲಿ ಸೋಮವಾರದಿಂದ ಎಲ್ಲ ಅಂಗನವಾಡಿ ಕೇಂದ್ರಗಳು (Anganwadi) ಹಾಗೂ ಪೂರ್ವ ಪ್ರಾಥಮಿಕ ತರಗತಿಗಳು (ಎಲ್‌ಕೆಜಿ-ಯುಕೆಜಿ) ಆರಂಭವಾಗಲಿದ್ದು, ಚಿಣ್ಣರನ್ನು ಬರಮಾಡಿಕೊಳ್ಳಲು ಶಾಲೆ, ಅಂಗನವಾಡಿ ಕೇಂದ್ರಗಳಲ್ಲಿ ಮಾರ್ಗಸೂಚಿ (Guidlines) ಅನುಸಾರ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಈಗಾಗಲೇ ಕಳೆದ ಆಗಸ್ಟ್‌ನಿಂದ ಹಂತ ಹಂತವಾಗಿ 1ರಿಂದ 12ನೇ ತರಗತಿ ಮಕ್ಕಳಿಗೆ ಭೌತಿಕ ತರಗತಿಗಳು ಆರಂಭಗೊಂಡಿವೆ. ಈಗ ಸರ್ಕಾರದ ಅನುಮತಿಯೊಂದಿಗೆ 18 ತಿಂಗಳ ಬಳಿಕ ಎಲ್‌ಕೆಜಿ, ಯುಕೆಜಿ ಅಂಗನವಾಡಿ ಕೇಂದ್ರಗಳು ಶುರುವಾಗಲಿವೆ.

Latest Videos

undefined

"

ಮೊದಲ ಹಂತದಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಬೆಳಗ್ಗೆ 10ರಿಂದ 12ರವರೆಗೆ ಕೇವಲ ಎರಡು ಗಂಟೆ ಮಾತ್ರ ಕಲಿಕಾ ಚಟುವಟಿಕೆಗಳು ನಡೆಯುತ್ತವೆ. ಎಲ್‌ಕೆಜಿ, ಯುಕೆಜಿ ಮಕ್ಕಳಿಗೆ ಬೆಳಗ್ಗೆ 9.30ರಿಂದ ಮಧ್ಯಾಹ್ನ 3.30ವರೆಗೆ ಭೌತಿಕ ತರಗತಿ ನಡೆಸಲು ಸರ್ಕಾರ ಅವಕಾಶ ಕಲ್ಪಿಸಿದೆ.

ಮಕ್ಕಳ ಸುರಕ್ಷತೆಗಾಗಿ ಅಂಗನವಾಡಿ, ಶಾಲಾ ಶಾಲಾವರಣ, ಕೊಠಡಿ, ಪೀಠೋಪಕರಣಗಳನ್ನು ಅಲ್ಲಿನ ಶಿಕ್ಷಕರು ಸಿಬ್ಬಂದಿ ಸ್ವಚ್ಛಗೊಳಿಸಿ ಸ್ಯಾನಿಟೈಸಿಂಗ್‌ (Sanitising)ಮಾಡಿ ಸಿದ್ಧತೆ ಮಾಡಿಕೊಂಡಿದ್ದಾರೆ.

ಶಿಕ್ಷಕರಿಗೆ ಲಸಿಕೆ ಕಡ್ಡಾಯ:

ಶಿಕ್ಷಕರು, ಸಿಬ್ಬಂದಿ ಹಾಗೂ ಪೋಷಕರು ಕಡ್ಡಾಯವಾಗಿ ಎರಡು ಡೋಸ್‌ ಕೋವಿಡ್‌ ಲಸಿಕೆ (Covid Vaccine) ಪಡೆದಿರಬೇಕು. ಎಲ್ಲರೂ ಮಾಸ್ಕ್‌ (mask) ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು (Social Distancing), ಮಕ್ಕಳನ್ನು ಶಾಲೆಗೆ ಕಳುಹಿಸುವ ಪೋಷಕರ ಒಪ್ಪಿಗೆ ಪತ್ರ ಪಡೆಯುವುದು ಕಡ್ಡಾಯ ಎಂದು ಸರ್ಕಾರ ಸೂಚಿಸಿದೆ.

ಮಕ್ಕಳು ಮನೆಯಿಂದಲೇ ಉಪಾಹಾರ ತರಬೇಕು, ಶಾಲೆಗಳಲ್ಲಿ ಮಕ್ಕಳ ಸಂಖ್ಯೆಗೆ ಅಗತ್ಯಕ್ಕೆ ಅನುಗುಣವಾಗಿ ಕುಡಿಯಲು ಬಿಸಿ ನೀರಿನ ವ್ಯವಸ್ಥೆ ಮಾಡಬೇಕು. ಕೈ ತೊಳೆಯಲು ಸಾಬೂನು ವ್ಯವಸ್ಥೆ ಮಾಡಬೇಕು. ಮಕ್ಕಳನ್ನು ಕನಿಷ್ಠ 1 ಮೀಟರ್‌ ಅಂತರದಲ್ಲಿ ಕೂರಿಸಬೇಕು. ಮಕ್ಕಳ ಸಂಖ್ಯೆ ಹೆಚ್ಚಿದ್ದರೆ ತಂಡಗಳನ್ನು ರಚಿಸಿ ಒಂದು ತಂಡ ಒಂದು ದಿನ, ಮತ್ತೊಂದು ತಂಡ ಮರುದಿನ ಬರಲು ಸೂಚಿಸಬೇಕು. ಮಕ್ಕಳು, ಸಿಬ್ಬಂದಿ ಪ್ರತಿ 30 ನಿಮಿಷಕ್ಕೊಮ್ಮೆ ಕೈತೊಳೆಯಬೇಕು. ಕೇಂದ್ರಗಳಿಗೆ ಸಾರ್ವಜನಿಕರ ಸಂದರ್ಶನ ನಿರ್ಬಂಧಿಸಬೇಕು ಎಂದು ಸೂಚಿಸಲಾಗಿದೆ.

ಜ್ವರ, ಕೆಮ್ಮು, ನೆಗಡಿ ಸೇರಿದಂತೆ ಕೋವಿಡ್‌ ಲಕ್ಷಣಗಳಿರುವ ಮಕ್ಕಳನ್ನು ಶಾಲೆಗೆ ಕಳುಹಿಸದಂತೆ ಪೋಷಕರಿಗೆ ಸೂಚಿಸಬೇಕು. ಸೋಂಕಿನ ಲಕ್ಷಣ ಕಂಡು ಬಂದ ಮಕ್ಕಳನ್ನು ತಕ್ಷಣ ಸಮೀಪದ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಲು ಸೂಚಿಸಬೇಕು ಎಂದು ತಿಳಿಸಲಾಗಿದೆ. ಯಾವುದೇ ಮಗು, ಶಿಕ್ಷಕರು ಇತರೆ ಸಿಬ್ಬಂದಿಗೆ ಕೋವಿಡ್‌ ಸೋಂಕು ದೃಢಪಟ್ಟರೆ, ಇತರೆ ಎಲ್ಲ ವಿದ್ಯಾರ್ಥಿಗಳ ತಪಾಸಣೆ ನಡೆಸಬೇಕು ಎಂದು ಸೂಚಿಸಲಾಗಿದೆ.

ಪೋಷಕರೆ ಗಮನಿಸಿ

- ಅಂಗನವಾಡಿಗಳಲ್ಲಿ ಬೆಳಗ್ಗೆ 10ರಿಂದ 12ರವರೆಗಷ್ಟೇ ತರಗತಿ

- ಎಲ್‌ಕೆಜಿ, ಯುಕೆಜಿಗೆ ಬೆಳಗ್ಗೆ 9.30ರಿಂದ 3.30ರವರೆಗೆ ಕ್ಲಾಸ್‌

- ಶಿಕ್ಷಕರು, ಸಿಬ್ಬಂದಿ, ಪೋಷಕರಿಗೆ 2 ಡೋಸ್‌ ಲಸಿಕೆ ಕಡ್ಡಾಯ

- ಶಾಲೆಗೆ ಬರುವ ಮಕ್ಕಳು ಪೋಷಕರ ಒಪ್ಪಿಗೆ ಪತ್ರ ತರಬೇಕು

- ಮಕ್ಕಳಿಗೆ ಪೋಷಕರು ಮನೆಯಿಂದಲೇ ಉಪಾಹಾರ ಕಳಿಸಬೇಕು

- ಜ್ವರ, ನೆಗಡಿ, ಕೆಮ್ಮು ಇದ್ದರೆ ಶಾಲೆಗೆ ಮಕ್ಕಳನ್ನು ಕಳಿಸುವಂತಿಲ್ಲ

click me!