ರಾಜ್ಯದಲ್ಲಿ 5ನೇ ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ರದ್ದುಗೊಳಿಸಿದ್ದ ಹೈಕೋರ್ಟ್ ಏಕಸದಸ್ಯ ಪೀಠದ ಆದೇಶವನ್ನು, ಇಂದು ದ್ವಿಸದಸ್ಯ ಪೀಠವೂ ಎತ್ತಿಹಿಡಿದಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ನ್ಯಾಯಾಲಯ ಗುಡ್‌ನ್ಯೂಸ್ ನೀಡಿದೆ.
ಬೆಂಗಳೂರು (ಮಾ.11): ರಾಜ್ಯ ಶಿಕ್ಷಣ ಇಲಾಖೆಯಿಂದ 5ನೇ ತರಗತಿ ಮತ್ತು 8ನೇ ತರಗತಿಗೆ ಬೋರ್ಡ್ ಪರೀಕ್ಷೆಯನ್ನು ನಡೆಸಲು ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಏಕಸದಸ್ಯ ಪೀಠ ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ದ್ವಿಸದಸ್ಯ ಪೀಠಕ್ಕೆ ಸರ್ಕಾರ ಮೇಲ್ಮನವಿ ಹೋಗಿದ್ದು, ಏಕಸದಸ್ಯ ಪೀಠದ ಆದೇಶವನ್ನು ಎತ್ತಿಹಿಡಿದಿದೆ. ಜೊತೆಗೆ, ವಿಚಾರಣೆಯನ್ನು ಮಾ.14ಕ್ಕೆ ಮುಂದೂಡಿದ್ದು, ಅಲ್ಲಿಯವರೆಗೂ ಪರೀಕ್ಷೆ ನಡೆಸದಂತೆ ನಿರ್ದೇಶನ ನೀಡಿದೆ.
ದೇಶದಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಳವಡಿಸಿಕೊಂಡ ಮೊದಲ ರಾಜ್ಯವಾಗಿರುವ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ 5ನೇ ತರಗತಿ ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆಯನ್ನು ನಡೆಸಲು ಸರ್ಕಾರ ಆದೇಶ ಹೊರಡಿಸಿತ್ತು. ಇದರಿಂದ ವಿದ್ಯಾರ್ಥಿಗಳಿಗೆ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಇಷ್ಟು ವರ್ಷ 9ನೇ ತರಗತಿವರೆಗೆ ಫೇಲ್ ಎಂಬ ಪದವನ್ನೇ ಕೇಳದವರಿಗೆ ಪಬ್ಲಿಕ್ ಪರೀಕ್ಷೆ ಹಾಗೂ ಫೇಲ್ ಆಗುವ ಭಯ ಶುರುವಾಗಿತ್ತು. ಆದರೆ, ಈ ಕುರಿತು ಸರ್ಕಾರದ ವಿರುದ್ಧ ಹೈಕೋರ್ಟ್ ಮೊರೆ ಹೋಗಲಾಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠವು ಸರ್ಕಾರದ ಆದೇಶ ಹಾಗೂ ಪಬ್ಲಿಕ್ ಪರೀಕ್ಷೆ ರದ್ದುಗೊಳಿಸಿತ್ತು.
ಹೈಕೋರ್ಟ್ ಮಹತ್ವದ ತೀರ್ಪು, 5 ಮತ್ತು 8ನೇ ತರಗತಿ ಬೋರ್ಡ್ ಪರೀಕ್ಷೆ ರದ್ದು!
ಮೇಲ್ಮನವಿಯಲ್ಲೂ ಸೋಲು: ರಾಜ್ಯ ಸರ್ಕಾರದ ಆದೇಶವನ್ನು ಹೈಕೋರ್ಟ್ ಏಕಸದಸ್ಯ ಪೀಠವು ರದ್ದುಗೊಳಿಸಿದ್ದರಿಂದ ಸರ್ಕಾರ ಹೈಕೋರ್ಟ್‌ನ ದ್ವಿಸದಸ್ಯ ಪೀಠದ ಮೊರೆ ಹೋಗಿ, ಪಬ್ಲಿಕ್ ಪರೀಕ್ಷೆ ನಡೆಸಲು ಅನುಮತಿಯನ್ನು ಕೇಳಿತ್ತು. ಆದರೆ, ಈ ಕುರಿತು ಮೇಲ್ಮನವಿ ಅರ್ಜಿ ವಿಚಾರಣೆ ಮಾಡಿದ ನ್ಯಾಯಮೂರ್ತಿ ನರೇಂದರ್ ಮತ್ತು ನ್ಯಾಯಮೂರ್ತಿ ಅಶೋಕ್ ಕಿಣಗಿ ಅವರ ವಿಭಾಗೀಯ ಪೀಠವು, ಈ ಹಿಂದೆ ಏಕಸದಸ್ಯ ಪೀಠವು ನೀಡಿದ್ದ ತೀರ್ಪನ್ನು ಎತ್ತಿಹಿಡಿದಿದೆ. ಈ ಮೂಲಕ ಸರ್ಕಾರದ ಪಬ್ಲಿಕ್ ಪರೀಕ್ಷೆ ಆದೇಶವನ್ನು ಜಾರಿಗೊಳಿಸದಂತೆ ಸೂಚನೆ ನೀಡಿದೆ.
ಮಾ.14ರಂದು ವಿಚಾರಣೆ ಮುಂದೂಡಿಕೆ: ಹೈಕೋರ್ಟ್ ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನೆ ಮಾಡಿ ದ್ವಿಸದಸ್ಯ ಪೀಠದ ಮೊರೆ ಹೋಗಲಾಗಿದ್ದು, ಸರ್ಕಾರದ ಆದೇಶವನ್ನು ಅಲ್ಲಿಯೂ ವಜಾಗೊಳಿಸಿದೆ. ಇನ್ನು ಮಾರ್ಚ್.13ಕ್ಕೆ ನಿಗದಿ ಮಾಡಲಾಗಿದ್ದ 5ನೇ ಮತ್ತು 8ನೇ ತರಗತಿ ಪಬ್ಲಿಕ್ ಪರೀಕ್ಷೆ ಆರಂಭಿಸದಂತೆ ಸರ್ಕಾರಕ್ಕೆ ಸೂಚನೆ ನೀಡಿದೆ. ಇನ್ನು ಮಾರ್ಚ್ 14ಕ್ಕೆ ಈ ಮೇಲ್ಮನವಿ ಅರ್ಜಿ ಕುರಿತ ವಿಚಾರಣೆಯನ್ನು ಮುಂದೂಡಲಾಗಿದೆ. ಮಾ, 14ರಂದು 5 ಮತ್ತು 8ನೇ ತರಗತಿ ಬೋರ್ಡ್ ಪರೀಕ್ಷೆಯ ಬಗ್ಗೆ ಹೈಕೋರ್ಟ್ ದ್ವಿಸದಸ್ಯ ಪೀಠವು ನಿರ್ಧಾರ ಮಾಡಲಿದೆ.
5, 8ನೇ ಕ್ಲಾಸ್ ಬೋರ್ಡ್ ಪರೀಕ್ಷೆಯಲ್ಲಿ ಎಲ್ರೂ ಪಾಸ್: ಹೈಕೋರ್ಟ್‌ನಲ್ಲಿ ಸರ್ಕಾರ ವಾದ
ಮಕ್ಕಳ ಪರೀಕ್ಷೆಯಲ್ಲಿ ಗೊಂದಲ: ಈಗಾಗಲೇ ರಾಜ್ಯದಾದ್ಯಂತ 1 ರಿಂದ 9ನೇ ತರಗತಿವರೆಗೆ ಮಾ.13 ರಿಂದ (ಸೋಮವಾರ) ಪರೀಕ್ಷೆಯನ್ನು ನಡೆಸಲು ದಿನಾಂಕ ನಿಗದಿ ಮಾಡಲಾಗಿತ್ತು. ಆದರೆ, ಪಬ್ಲಿಕ್ ಪರೀಕ್ಷೆಯನ್ನು ಹೈಕೋರ್ಟ್ ರದ್ದುಗೊಳಿಸಿದ ಬೆನ್ನಲ್ಲೇ 5 ನೇ ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ದಿನಾಂಕ ಇನ್ನೂ ನಿಗದಿಯಾಗಿಲ್ಲ. ವಸತಿ ಶಾಲೆಗಳು, ಸರ್ಕಾರಿ ಶಾಲೆಗಳು, ವಿದ್ಯಾರ್ಥಿ ವಸತಿ ನಿಲಯಗಳು ಹಾಗೂ ಇತರೆಡೆ ರಜಾ ನೀಡುವ ದಿನಾಂಕವನ್ನು ಘೋಷಣೆ ಮಾಡಲಾಗಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ರಾಜ್ಯ ಪಠ್ಯಕ್ರಮ ಶಾಲೆಗಳ 5 ಮತ್ತು 8ನೇ ತರಗತಿಗಳ ವಿದ್ಯಾರ್ಥಿಗಳಿಗೆ ಶಾಲಾ ಮಟ್ಟದ ಮೌಲ್ಯಮಾಪನದ ಬದಲಾಗಿ ರಾಜ್ಯ ಮಟ್ಟದ ಬೋರ್ಡ್ ಪರೀಕ್ಷೆ ನಡೆಸಲು ತೀರ್ಮಾನಿಸಿ ಸರ್ಕಾರವು 2022ರ ಡಿ.12, 13 ಮತ್ತು 2023ರ ಜ.4ರಂದು ಸುತ್ತೋಲೆ ಹೊರಡಿಸಿತ್ತು.