3 ತಿಂಗಳಿಂದ ಸಂಬಳ ಇಲ್ಲ; ಕುಟುಂಬ ನಿರ್ವಹಣೆಗೆ ಪರದಾಡುತ್ತಿರುವ ಅತಿಥಿ ಶಿಕ್ಷಕರು!

By Kannadaprabha NewsFirst Published Sep 9, 2022, 2:39 PM IST
Highlights

ತಾಲೂಕಿನ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಕಾಯಂ ಶಿಕ್ಷಕರ ಕೊರತೆಯಿಂದಾಗಿ ಅತಿಥಿ ಶಿಕ್ಷಕರನ್ನೆ ಹೆಚ್ಚಿನ ಸಂಖ್ಯೆಯಲ್ಲಿ ನೇಮಕಗೊಳಿಸಲಾಗಿದೆ. ಆದರೆ ಅವರಿಗೆ ಕಳೆದ 3 ತಿಂಗಳಿನಿಂದ (ಜೂನ್‌, ಜುಲೈ, ಆಗಸ್ಟ್‌) ವೇತನ ಪಾವತಿಸಿಲ್ಲ. ಇದರಿಂದ ಕುಟುಂಬ ನಿರ್ವಹಣೆಗೆ ಸಂಕಟಪಡುತ್ತಿದ್ದಾರೆ

ಪರಶಿವಮೂರ್ತಿ ಮಾಟಲದಿನ್ನಿ

ಕುಷ್ಟಗಿ (ಸೆ.9) : ತಾಲೂಕಿನ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಕಾಯಂ ಶಿಕ್ಷಕರ ಕೊರತೆಯಿಂದಾಗಿ ಅತಿಥಿ ಶಿಕ್ಷಕರನ್ನೆ ಹೆಚ್ಚಿನ ಸಂಖ್ಯೆಯಲ್ಲಿ ನೇಮಕಗೊಳಿಸಲಾಗಿದೆ. ಆದರೆ ಅವರಿಗೆ ಕಳೆದ 3 ತಿಂಗಳಿನಿಂದ (ಜೂನ್‌, ಜುಲೈ, ಆಗಸ್ಟ್‌) ವೇತನ ಪಾವತಿಸಿಲ್ಲ. ಇದರಿಂದ ಕುಟುಂಬ ನಿರ್ವಹಣೆಗೆ ಸಂಕಟಪಡುತ್ತಿದ್ದಾರೆ. ತಾಲೂಕಿನಲ್ಲಿ 220 ಪ್ರಾಥಮಿಕ ಹಾಗೂ 36 ಪ್ರೌಢಶಾಲೆಗಳಿವೆ. ಬಹುತೇಕ ಶಾಲೆಗಳಲ್ಲಿ ಕಾಯಂ ಶಿಕ್ಷಕರ ಹುದ್ದೆಗಳು ಖಾಲಿ ಉಳಿದಿವೆ. ಈ ಹುದ್ದೆಗಳ ಪೈಕಿ 336 ಪ್ರಾಥಮಿಕ, 67 ಪ್ರೌಢಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ.

ಅತಿಥಿ ಶಿಕ್ಷಕರ ಕಾಯಂ: ಸಚಿವ ಕೋಟ ಹೇಳಿದ್ದಿಷ್ಟು

ತಾಲೂಕಿನ ಪ್ರಾಥಮಿಕ ಶಾಲೆಗಳಿಗೆ 1552 ಶಿಕ್ಷಕರ ಹುದ್ದೆಗಳು ಮಂಜೂರಾಗಿದ್ದು, 933 ಹುದ್ದೆಗಳು ಭರ್ತಿಯಾಗಿದ್ದು, 618 ಖಾಲಿ ಉಳಿದಿವೆ. ಖಾಲಿ ಉಳಿದ ಹುದ್ದೆಗಳ ಪೈಕಿ 336 ಸ್ಥಾನಕ್ಕೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಪ್ರೌಢಶಾಲೆಗಳಿಗೆ 334 ಹುದ್ದೆಗಳು ಮಂಜೂರಾಗಿದ್ದು, ಅವುಗಳಲ್ಲಿ 251 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಖಾಲಿ ಉಳಿದಿರುವ 91 ಹುದ್ದೆಗಳಿಗೆ ಪೈಕಿ 67 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ.

ಮೂರು ತಿಂಗಳಿಂದ ವೇತನ ಇಲ್ಲ:

ತಾಲೂಕಿನ ಅತಿಥಿ ಶಿಕ್ಷಕರು ಕಳೆದ 3 ತಿಂಗಳಿಂದ ವೇತನ ಬಾರದ್ದರಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ತಾಲೂಕಿನ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಅತಿಥಿ ಶಿಕ್ಷಕರು ಜೂನ್‌ದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೆಲಸಕ್ಕೆ ಸೇರಿ 3 ತಿಂಗಳು ಗತಿಸುತ್ತ ಬಂದರೂ ಈವರೆಗೆ ವೇತನ ಬಂದಿಲ್ಲ. ಇದರಿಂದ ಜೀವನ ನಿರ್ವಹಣೆಗೆ ಪರದಾಡುವಂತಾಗಿದೆ. ಅನೇಕರು ಸಾಲದ ಮೊರೆ ಹೋಗಿ ಕುಟುಂಬ ನಿರ್ವಹಣೆಗೆ ಪರಿತಪಿಸುತ್ತಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಅತಿಥಿ ಶಿಕ್ಷಕರೊಬ್ಬರು ನೋವು ತೋಡಿಕೊಂಡರು.

ಸರ್ಕಾರಿ ಶಾಲೆಗಳಲ್ಲಿ ಕಾಯಂ ಶಿಕ್ಷಕರಷ್ಟೇ ಕೆಲಸ ಮಾಡುವ ಅತಿಥಿ ಶಿಕ್ಷಕರಿಗೆ ನೀಡುವ ಗೌರವಧನ ದಿನಕ್ಕೆ .310. ಉದ್ಯೋಗ ಖಾತರಿಯಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ಇಷ್ಟೇ ಕೂಲಿ ಇದೆ ಎಂಬ ನೋವು ಅತಿಥಿ ಶಿಕ್ಷಕರಲ್ಲಿ ಮನೆ ಮಾಡಿದೆ. ಕಾಯಂ ಶಿಕ್ಷಕರಂತೆ ನಾವು ಕೆಲಸ ನಿರ್ವಹಿಸುತ್ತಿದ್ದೇವೆ. ಅವರಿಗೆ ನೀಡಲಾಗುವ ವೇತನದಷ್ಟೇ ನಮಗೂ ವೇತನ, ರಜೆಯ ಸೌಲಭ್ಯ ನೀಡಬೇಕು. ನೇಮಕಾತಿ ಸಂದರ್ಭದಲ್ಲಿ ನಮಗೆ ಆದ್ಯತೆ ನೀಡಿ ಕಾಯಂ ಮಾಡಿಕೊಳ್ಳಬೇಕು ಎಂದು ಅತಿಥಿ ಶಿಕ್ಷಕರ ಒತ್ತಾಯವಾಗಿದೆ. ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡಿ; ಸರ್ಕಾರಕ್ಕೆ ಒತ್ತಾಯ

ಮೂರು ತಿಂಗಳು ಗತಿಸಿದರೂ ಅತಿಥಿ ಶಿಕ್ಷಕರಿಗೆ ಗೌರವಧನ ಬಿಡುಗಡೆಯಾಗಿಲ್ಲ. ವರ್ಷಕ್ಕೊಮ್ಮೆ ನೀಡುವ ಬದಲು ಪ್ರತಿ ತಿಂಗಳು ನೀಡಬೇಕು. ಪ್ರತಿವರ್ಷ ಹೊಸದಾಗಿ ಅತಿಥಿ ಶಿಕ್ಷಕ ನೇಮಕಾತಿ ಕೈಬಿಟ್ಟು ಹಿಂದಿನ ವರ್ಷ ಕೆಲಸ ಮಾಡಿದವರಿಗೆ ಆದ್ಯತೆ ನೀಡಬೇಕು. ಕಾಯಂ ಶಿಕ್ಷಕ ನೇಮಕಾತಿಯಲ್ಲಿ ನಮಗೆ ವರ್ಷವಾರು ಕೃಪಾಂಕ ನೀಡಬೇಕು.

ಶ್ರೀಕಾಂತ ಕಿರಗಿ ಅಧ್ಯಕ್ಷರು, ಕುಷ್ಟಗಿ ತಾಲೂಕು ಅತಿಥಿ ಶಿಕ್ಷಕರ ಸಂಘ

ಸರ್ಕಾರ ಅತಿಥಿ ಶಿಕ್ಷಕರಿಗೆ ನಿಗದಿಪಡಿಸಿರುವ ಗೌರವಧನ ಈಗಿನ ಬೆಲೆ ಏರಿಕೆಯ ದಿನಗಳಲ್ಲಿ ಯಾವುದಕ್ಕೂ ಸಾಕಾಗುವುದಿಲ್ಲ. ಕಾಯಂ ಶಿಕ್ಷಕರಿಗೆ ನೀಡುವ ಮೂಲ ವೇತನ ನಮಗೂ ನೀಡಿದರೆ ಅನುಕೂಲವಾಗುತ್ತದೆ ಹಾಗೂ ಮುಂದಿನ ವರ್ಷದಲ್ಲಿ ನಮ್ಮನ್ನು ಮುಂದುವರಿಸಬೇಕು.

ಮಾನಪ್ಪ ಮದಲಗಟ್ಟಿ, ಅತಿಥಿ ಶಿಕ್ಷಕರು

click me!