Latest Videos

ಸಮವಸ್ತ್ರ ವಿತರಣೆಗೆ ಸರ್ಕಾರದ ನಿರ್ಲಕ್ಷ್ಯ: ಅಧಿಕಾರಿಯನ್ನ ಜೈಲಿಗೆ ಕಳಿಸ್ತೇವೆ; ಹೈಕೋರ್ಟ್ ಎಚ್ಚರಿಕೆ

By Kannadaprabha NewsFirst Published Feb 15, 2023, 12:53 AM IST
Highlights

ಅಧಿಕಾರಿಯನ್ನು ಜೈಲಿಗೆ ಕಳುಸುತ್ತೇವೆ. ಆಗ ಮಕ್ಕಳಿಗೆ ಸಮವಸ್ತ್ರ ಹೇಗೆ ಬರುವುದಿಲ್ಲ ಎನ್ನುವುದನ್ನು ನೋಡುತ್ತೇವೆ. ಸರ್ಕಾರದ ಉನ್ನತ ಅಧಿಕಾರಿಯೊಬ್ಬರನ್ನು ಜೈಲಿಗೆ ಕಳುಹಿಸಿದರೆ, ನಮ್ಮನ್ನು ಕಾಪಾಡಲು ನ್ಯಾಯಾಲಯವಿದೆ ಎಂಬುದು ಜನರಿಗೂ ಗೊತ್ತಾಗುತ್ತದೆ.

 ಬೆಂಗಳೂರು (ಫೆ.15) : ರಾಜ್ಯದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಸಮವಸ್ತ್ರ, ಶೂ ಮತ್ತು ಕಾಲು ಚೀಲ ವಿತರಿಸಿರುವ ಬಗ್ಗೆ ಅಗತ್ಯ ದಾಖಲೆಗಳೊಂದಿಗೆ ಮಾಹಿತಿ ನೀಡದ ರಾಜ್ಯ ಸರ್ಕಾರದ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಉನ್ನತ ಅಧಿಕಾರಿಯೊಬ್ಬರನ್ನು ಜೈಲಿಗೆ ಕಳುಹಿಸಿದರೆ ಸರಿಹೋಗುತ್ತದೆ ಎಂದು ಕಟುವಾಗಿ ನುಡಿದಿದೆ.

ಸರ್ಕಾರಿ ಶಾಲೆ(Govt School)ಗಳಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಎರಡು ಜೊತೆ ಸಮವಸ್ತ್ರ(Uniform), ಒಂದು ಜೊತೆ ಶೂ ಮತ್ತು ಎರಡು ಜೊತೆ ಕಾಲು ಚೀಲ ನೀಡಬೇಕು ಎಂದು 2019ರ ಆ.28ರಂದು ಹೈಕೋರ್ಟ್(Karnataka Highcourt) ಹೊರಡಿಸಿರುವ ಆದೇಶ ಪಾಲನೆಯಾಗಿಲ್ಲ ಎಂದು ಆರೋಪಿಸಿ ಕೊಪ್ಪಳ ಜಿಲ್ಲೆಯ ಮಾಸ್ಟರ್‌ ಮಂಜುನಾಥ್‌(Master Manjunath) ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಬಿ.ವೀರಪ್ಪ(B Veerappa) ಅವರ ನೇತೃತ್ವದ ವಿಭಾಗೀಯ ಪೀಠ ಸರ್ಕಾರ ಮತ್ತು ಅಧಿಕಾರಿಗಳ ಕಾರ್ಯವೈಖರಿಗೆ ಅತೃಪ್ತಿ ವ್ಯಕ್ತಪಡಿಸಿತು.

ಕೊಪ್ಪಳ: ಸಮವಸ್ತ್ರ ಬಟ್ಟೆ ಮರಳಿಸುತ್ತಿರುವ ವಿದ್ಯಾರ್ಥಿಗಳು!

ಅಲ್ಲದೆ, ರಾಜ್ಯದ ಎಲ್ಲಾ ಜಿಲ್ಲೆಗಳ ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕರು (ಡಿಡಿಪಿಐ), ಸಮವಸ್ತ್ರ ಖರೀದಿಸಲು ರಾಜ್ಯ ಸರ್ಕಾರ ಎಷ್ಟುಹಣ ಬಿಡುಗಡೆ ಮಾಡಿದೆ? ಅದರಲ್ಲಿ ಎಷ್ಟುಹಣ ಸದ್ಭಳಕೆಯಾಗಿದೆ ಎಂಬ ಬಗ್ಗೆ ವೈಯಕ್ತಿಕವಾಗಿ ಪರಿಶೀಲನೆ ನಡೆಸಬೇಕು. ಹಾಗೆಯೇ, 2019-20ನೇ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ಎರಡು ಜೊತೆ ಸಮವಸ್ತ್ರ ಮತ್ತು ಶೂ, ಕಾಲು ಚೀಲ ವಿತರಣೆ ಮಾಡುವ ಮೂಲಕ ಸರ್ಕಾರವು ಹೈಕೋರ್ಚ್‌ನ 2019ರ ಆ.28ರ ತೀರ್ಪು ಪಾಲಿಸಿದೆಯೇ ಅಥವಾ ಇಲ್ಲವೇ ಎಂಬುದನ್ನು ಖಾತರಿಪಡಿಸಿ ಎರಡು ವಾರದಲ್ಲಿ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿದೆ.

ಇದಕ್ಕೂ ಮುನ್ನ ‘ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆ’ಯ ನಿರ್ದೇಶಕರು ಸಲ್ಲಿಸಿರುವ ಪ್ರಮಾಣ ಪತ್ರವನ್ನು ಸರ್ಕಾರಿ ವಕೀಲರು ನ್ಯಾಯಪೀಠಕ್ಕೆ ಒದಗಿಸಿದರು. ಸಮವಸ್ತ್ರ ಖರೀದಿಗೆ ಅನುದಾನ ಬಿಡುಗಡೆ ಮಾಡಲಾಗಿದೆ. 2019-20, 2020-21ರಿಂದ 2022-23ನೇ ಶೈಕ್ಷಣಿಕ ಸಾಲಿನವರೆಗೆ ಎಲ್ಲ 35 ಜಿಲ್ಲೆಗಳ ಸರ್ಕಾರಿ ಶಾಲೆಗಳ ಮಕ್ಕಳಿಗೆ ಶೂ ಮತ್ತು ಕಾಲುಚೀಲ ನೀಡಲಾಗಿದೆ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ.

ಆ ಪ್ರಮಾಣ ಪತ್ರ ಪರಿಶೀಲಿಸಿದ ನ್ಯಾಯಪೀಠ, ಸಮವಸ್ತ್ರ, ಶೂ ಮತ್ತು ಕಾಲುಚೀಲ ನೀಡಿರುವುದನ್ನು ಪುಷ್ಟೀಕರಿಸುವ ದಾಖಲೆ ಒದಗಿಸಿಲ್ಲ. ಸರ್ಕಾರ ಕೋರ್ಚ್‌ ಆದೇಶ ಪಾಲಿಸಿಲ್ಲ. ನ್ಯಾಯಾಂಗ ನಿಂದನೆ ಆರೋಪದಿಂದ ತಪ್ಪಿಸಿಕೊಳ್ಳಲು ಕೋರ್ಚ್‌ಗೆ ಸುಮ್ಮನೆ ಪ್ರಮಾಣಪತ್ರ ಸಲ್ಲಿಸಿದರೆ ಸಾಲದು, ಸಂಬಂಧಪಟ್ಟಅಧಿಕಾರಿಯ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ ಹೊರಿಸಲಾಗುವುದು ಎಂದು ತಿಳಿಸಿತು.

ಆಗ ಸರ್ಕಾರಿ ವಕೀಲರು, ಹಾಗೆ ಮಾಡಿದರೆ ಏನು ಬರುತ್ತದೆ ಸ್ವಾಮಿ ಎಂದು ನ್ಯಾಯಪೀಠವನ್ನು ಕೇಳಿಕೊಂಡರು.

ಇದರಿಂದ ಕೋಪಗೊಂಡ ನ್ಯಾಯಮೂರ್ತಿ ಬಿ.ವೀರಪ್ಪ ಅವರು, ಏನು ಬರುತ್ತದೆ ಎಂದರೆ, ಅಧಿಕಾರಿಯನ್ನು ಜೈಲಿಗೆ ಕಳುಸುತ್ತೇವೆ. ಆಗ ಮಕ್ಕಳಿಗೆ ಸಮವಸ್ತ್ರ ಹೇಗೆ ಬರುವುದಿಲ್ಲ ಎನ್ನುವುದು ನೋಡುತ್ತೇವೆ. ಸರ್ಕಾರದ ಉನ್ನತ ಅಧಿಕಾರಿಯೊಬ್ಬರನ್ನು ಜೈಲಿಗೆ ಕಳುಹಿಸಿದರೆ, ನಮ್ಮನ್ನು ಕಾಪಾಡಲು ನ್ಯಾಯಾಲಯವಿದೆ ಎಂಬುದು ಜನರಿಗೆ ಗೊತ್ತಾಗುತ್ತದೆ. ಆದರೆ, ಮಾನ ಮಾರ್ಯದೆ ಇಲ್ಲದಿದ್ದರೆ ಅಧಿಕಾರಿಗಳಿಗೆ ಆರು ತಿಂಗಳು ಜೈಲಿಗೆ ಹೋಗಿಬರುತ್ತಾರೆ. ಕೋರ್ಚ್‌ಗೂ ಸಹ ಎಲ್ಲೋ ಒಂದು ಕಡೆ ಸರ್ಕಾರದ ಮೇಲೆ ನಂಬಿಕೆ ಹೊರಟು ಹೋಗಿದೆ ಎಂದು ತೀಕ್ಷ$್ಣವಾಗಿ ನುಡಿದರು.

ಸರ್ಕಾರದ ಪ್ರಮಾಣ ಪತ್ರವು ನ್ಯಾಯಾಲಯಕ್ಕೆ ತೃಪ್ತಿ ತಂದಿಲ್ಲ. ರಾಜ್ಯದ ಎಲ್ಲ 35 ಜಿಲ್ಲೆಗಳಲ್ಲಿ ಸಮವಸ್ತ್ರ ವಿತರಣೆಗೆ ಹಣ ಸರ್ಕಾರ ಬಿಡುಗಡೆ ಮಾಡಿದೆಯೇ? ಅದರಲ್ಲಿ ಎಷ್ಟುಬಳಕೆಯಾಗಿದೆ ಎಂಬ ಬಗ್ಗೆ ಡಿಡಿಪಿಐಗಳು ದಾಖಲೆಗಳನ್ನು ಪಡೆದು ಪರಿಶೀಲಿಸಿ ಪ್ರಮಾಣ ಪತ್ರ ಸಲ್ಲಿಸಬೇಕು. ಅದನ್ನು ಕಾನೂನು ಸೇವಾ ಪ್ರಾಧಿಕಾರದ ಮೂಲಕ ನ್ಯಾಯಾಲಯ ಮರು ಪರಿಶೀಲನೆ ನಡೆಸಲಿದೆ ಎಂದು ನ್ಯಾಯಪೀಠ ಹೇಳಿತು.

ಉತ್ಸವಕ್ಕೆ ಕೋಟಿ ಖರ್ಚು ಮಾಡುವಿರಿ: ಶಾಲಾ ಸಮವಸ್ತ್ರ ಕೊಡದ ಸರ್ಕಾರಕ್ಕೆ ಹೈಕೋರ್ಟ್‌ ಚಾಟಿ

ಜೈಲಿಗೆ ಕಳಿಸಿದರೆ ಸಮವಸ್ತ್ರ ಬರುತ್ತೆ

ಅಧಿಕಾರಿಯನ್ನು ಜೈಲಿಗೆ ಕಳುಸುತ್ತೇವೆ. ಆಗ ಮಕ್ಕಳಿಗೆ ಸಮವಸ್ತ್ರ ಹೇಗೆ ಬರುವುದಿಲ್ಲ ಎನ್ನುವುದನ್ನು ನೋಡುತ್ತೇವೆ. ಸರ್ಕಾರದ ಉನ್ನತ ಅಧಿಕಾರಿಯೊಬ್ಬರನ್ನು ಜೈಲಿಗೆ ಕಳುಹಿಸಿದರೆ, ನಮ್ಮನ್ನು ಕಾಪಾಡಲು ನ್ಯಾಯಾಲಯವಿದೆ ಎಂಬುದು ಜನರಿಗೂ ಗೊತ್ತಾಗುತ್ತದೆ.

- ಹೈಕೋರ್ಟ್

click me!